ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಪಟ್ಟುಗಳ ಪಾಠ!

Published 27 ಜೂನ್ 2023, 23:30 IST
Last Updated 27 ಜೂನ್ 2023, 23:30 IST
ಅಕ್ಷರ ಗಾತ್ರ

ತುರುವೇಕೆರೆ ಪ್ರಸಾದ್

‘ನಮ್ ಒಸ ಶಾಸಕರಿಗೆ ಅಭಿನಂದನೆ ಸಲ್ಸಣ ಅಂತ ಓಗಿದ್ದೆ. ಆದ್ರೆ ಸಾಹೇಬ್ರು ಊರಲ್ಲೇ ಇಲ್ಲ, ಅದ್ಯಾವುದೋ ಟ್ರೈನಿಂಗ್ಗೆ ಓಗವ್ರಂತೆ’ ಎಂದ ಮಾದೇವ.

‘ಹೌದಾ? ಅವ್ರಿಗೂ ಟ್ರೈನಿಂಗ್ ಇರ್ತದಾ? ಕುರಿತೋದದಯಂ, ತರಬೇತಿ ಪಡೆಯದೆಯಂ ಸಿದ್ಧಿಪ ಏಕೈಕ ವಿದ್ಯೆಯೇ ರಾಜಕೀಯ. ಅವರಿಗೆಂತ ತರಬೇತಿನೋ?’ ಕೇಳಿದ ಕಲ್ಲೇಶಿ.

‘ಅಂಗಲ್ಲಲೆ, ಒಸ್ದಾಗಿ ವಿದಾನಸೌಧಕ್ಕೆ ಬಂದಿರ್ತಾರಲ್ವಾ? ಎಂಗ್ ಮಾತಾಡ್ಬೇಕು, ಎಂಗ್ ಪ್ರಶ್ನೆ ಕೇಳ್ಬೇಕು ಅದ್ನೆಲ್ಲಾ ಯೋಳ್ ಕೊಡ್ತಾರಂತೆ’.

‘ಏನ್ ಮಾತಾಡ್ಬೇಕು ಅನ್ನಾಕಿಂತ ಏನ್ ಮಾತಾಡ್ಬಾರ್ದು ಅಂತ ಯೋಳ್‌ಕೊಡ್ಬೇಕು ಕಣ್ಲಾ. ಮೆದ್ಲು ಐತಾ, ಕಿಡ್ನಿ ಐತಾ ಅಂತೆಲ್ಲಾ ಮಾತಾಡ್ದಂಗ್ ಬುದ್ದಿ ಯೋಳ್ಬೇಕು’ ಎಂದ ಗುದ್ಲಿಂಗ.

‘ಕಾಲ್ ಕೆರ್ಕಂಡು ಗುಟ್ರು ಆಕುದ್ರೇಯ ಗಮ್ಮತ್ತು ಅನ್ಸಾದು? ರಾಜಕೀಯ ಏನ್ ಸಂಗೀತ್ ಕಛೇರಿನೇನ್ಲಾ ತಲೆ ಆಡುಸ್ಕಂಡು, ತಾಳ ಆಕ್ಕಂಡು ಕುಂತಿರಾಕೆ?’

‘ಬುದ್ದಿ ಯೋಳೋದ್ರ ಜೊತ್ಗೆ ಬಾವಿಗೆ ಬೀಳೋದೂ ಯೋಳ್ ಕೊಡ್ಬೇಕು’.

‘ಬಾವಿಗೆ ಬೀಳೋದಾ? ಅಂಗಂದ್ರೆ?’

‘ಈ ಸದನದಲ್ಲಿ ಬಾವಿ ಅಂತ ಇರ್ತದೆ. ಅದ್ರೊಳಗೆ ಇಳ್ದು ಮಸೂದೆ, ಬಜೆಟ್‍ ಪ್ರತಿ ಅದೂ ಇದ್ನ ಹರ್ದಾಕಿ ಧರಣಿ ಮಾಡ್ತಾರೆ ಕಣ್ಲಾ’.

‘ಔದೌದು ಕೇಳಿವ್ನಿ, ಆಮೇಲೆ ಈ ರಾಜಕೀಯ್ದೋರು ಇನ್ನೂ ಔಟ್‍ಡೇಟೆಡ್ ಸಿ.ಡಿ.ನಲ್ಲೇ ಅವ್ರೆ. ಹಗರಣನೆಲ್ಲಾ ಪೆನ್‍ಡ್ರೈವ್, ಚಿಪ್ಪಲ್ಲಿ ರೆಕಾರ್ಡ್ ಮಾಡಿ ಅಂತ ಯೋಳಿ ಅಪ್‍ಡೇಟ್ ಮಾಡ್ಬೇಕು’.

‘ಅಮ್ಯಾಕೆ ಇವ್ರಿಗೆ ಪರ್ಸಂಟೇಜ್ ಲೆಕ್ಕ ಅಂದ್ರೆ ಪ್ರಾಣ ಕಣ್ರಲಾ... ಬಿಲ್ಗೆ ಪಾಸ್ ಪರ್ಸಂಟೇಜ್ ಮಡಿಕ್ಕಳಿ, ಫಸ್ಟ್‌ ಕ್ಲಾಸ್ಗೆ ಓಗ್ಬೇಡಿ ಅಂತ ಯೋಳ್ಬೇಕು’.

‘ಹ್ಞೂಂ ಕಣಪ್ಪ, ಅಂಗೇ ಈ ಆಪರೇಶನ್ ಮಾಡಾದು, ರೆಸ್ಟೋರೆಂಟಾಗಿ ಟೆಂಟ್ ಹೊಡೆಯೋದು, ಪಾರ್ಟಿಲಿ ಸಿಪ್ ಮಾಡೋದು, ಮೊಗಸಾಲೇಲಿ ಗಾಸಿಪ್ ಮಾಡೋದು ಎಲ್ಲಾ ಯೋಳ್ ಕೊಟ್ಟಿರ್ಬೇಕು, ಆಪತ್ತಲ್ಲಿ ಇವೇ ಕಾಪಾಡೋದು ನೋಡು’.

‘ಒಟ್ನಲ್ಲಿ ನಮ್ ಹೊಸ ಸಾಸಕರು ಸ್ಯಾಂಡಲ್‍ನಂಗೆ ಗಮ್ ಅಂತಿರ್ಬೇಕು, ಸ್ಕ್ಯಾಂಡಲ್ ಮಾಡ್ಕಬಾರದು ಅಂತ ಯೋಳ್ಕೊಡ್ಬೇಕು’.

‘ಸುಮ್ಕಿರಪ್ಪ, ಸ್ಯಾಂಡಲ್ ಎಲ್ಲಿ ಗಮ್ ಅಂತದೆ? ಅದು ಗಬ್ ನಾರೇ ಕಮಲ ದಬಾಕ್ಕಂಡಿದ್ದು. ನಮ್ ಶಾಸಕರೂ ಮುಂದೆ ಇದೇ ತರ ಹೊಸಬರಿಗೆ ಟ್ರೈನಿಂಗ್ ಕೊಡೊ ‘ಸಂಪನ್ಮೂಲ’ ವ್ಯಕ್ತಿಗಳಾಗ್ಬೇಕು’.

‘ಹೆಂಗೆ? ಈಗ ರಾಜಕೀಯ ಪಟ್ಟು ಹೇಳ್ಕೊಡೋ ಕೆಲವ್ರು ಮಾಡ್ಕಂಡವ್ರಲ್ಲ, ಸಂಪತ್ತು, ಅದರ ಮೂಲ ಎರಡೂ ಗೊತ್ತಾಗದಂಗೆ, ಅಂಗಾ?’ ಕೇಳಿದ ಗುದ್ಲಿಂಗ. ಎಲ್ಲಾ ಗೊಳ್ಳೆಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT