ಮಂಗಳವಾರ, ಮೇ 17, 2022
25 °C

ಚುರುಮುರಿ| ನಮ್ಮೂರ ಬಸ್ಸು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ರಾಜಾವುಲಿ ಡಕೋಟಾ ಎಕ್ಸ್‌ಪ್ರೆಸ್ ಸ್ಟಾರ್ಟೇ ಆಯ್ತಿಲ್ಲ ಅಂತ ಹುಲಿಯಾ ಒಗ್ಗರಣೆ ಹಾಕ್ಯದೆ!’ ತುರೇಮಣೆಗೆ ಸುದ್ದಿ ಹೇಳಿದೆ.

‘ಅಲ್ಲಾಕಯ್ಯಾ, ವೋದಸಾರಿ ಹುಲಿಯನ ಡ್ರೈವಿಂಗ್ ಲೈಸೆನ್ಸೇ ಅಮಾನತ್ತಾಗೋಗಿ ಕುಮಾರಣ್ಣ ಬದಲಿ ಡ್ರೈವರ್ ಆಗಿದ್ದನಲ್ಲವಾ?’ ಅಂತು ಯಂಟಪ್ಪಣ್ಣ.

‘ಕುಮಾರಣ್ಣ ‘ಡ್ರೈವಿಂಗೂ ನಂದೇ, ಟಿಕೆಟ್ ಕಾಸೂ ನಂದೀಯೆ’ ಅಂದುದ್ಕೆ ಅವಲಕ್ಕಿ, ಪವಲಕ್ಕಿ, ಕಾಂಚಣ, ಮಿಣಮಿಣ, ಡಾಂ, ಡೂಂ, ಡುಸ್ಸಾ, ಪುಸ್ಸಾ, ಕೊಯ್, ಕೊಟಾರುಗಳು ಸೆಟಗ್ಯಂಡು, ಸಾಂದರ್ಭಿಕ ಸಿಸುವಿಗೆ ಡ್ರೈವಿಂಗೇ ಬರಕಿಲ್ಲ ಅಂತ ಬಸ್ಸಿಳಿದು ವೊಂಟೋಗಿದ್ರು!’ ತುರೇಮಣೆ ವಿವರಿಸಿದರು.

‘ಅಮ್ಯಾಲೆ ರಾಜಾವುಲಿ ಫ್ರಂಟು ಸೀಟು ಪಾಸು ಕೊಡ್ತೀನಿ, ಹಕ್ಕಿಗಳೆಲ್ಲಾ ಬನ್ರಿ ಅಂತ ಬಲೆ ಬೀಸಿತ್ತಲ್ಲ!’ ಅಂತು ಚಂದ್ರು.

‘ಹಾಳಾದ ಟಿ.ಸಿ, ಟಿಕೇಟು ತಕಬರೋಗಿ ಅಂತ ಅವಲಕ್ಕಿ, ಪವಲಕ್ಕಿಗಳನ್ನೆಲ್ಲ ಇಳಿಸಿ ಬುಡದಾ! ತಿರಗಾ ಇವೆಲ್ಲಾ ಟಿಕೇಟ್ ತಕಂದು ವಾಪಸ್ ಬರೋತ್ಗೆ ದಿಂಡುಕುಳಗಳೆಲ್ಲಾ ಫ್ರಂಟ್‌ ಸೀಟಲ್ಲಿ ಕುತಗಂಡು ‘ನೀವೆಲ್ಲ ಈಗ ಬಂದುದರಿ ಸೀಟಿಲ್ಲ. ನಮ್ಮೆಸರು ನಮೂದಾಗ್ಯದೆ’ ಅಂತ ತಕರಾಲು ಮಾಡ್ತಾವೆ! ಬಸ್ಸು ವಂಡಂಗಿಲ್ಲ’ ಅಂದ್ರು ತುರೇಮಣೆ.

‘ಸಾ, ಈಗ ರಾಜಾವುಲಿ ಬಸ್ಸಿಗೆ ಸ್ಟಾರ್ಟಿಂಗ್ ಟ್ರಬಲ್ ಯಾಕಾಗ್ಯದೆ?’ ಅಂತ ನಾನು ಕೇಳಿದೆ.

‘ಥೋ, ರಾಜಾವುಲಿ ಬಸ್ಸು ಸ್ಟಾರ್ಟ್ ಮಾಡೊವೊತ್ಗೆ ಬುದ್ದಿಯೋರು ರೋಡಿಗೆ ಮಳೆ ಹೊಡದವ್ರೆ. ಪೋಲಿಪಕಾರುಗಳು ಡೀಜೆಲ್ ಕದ್ದುಬುಟ್ಟವೆ. ಇನ್ನೊಬ್ಬ, ಈ ಡ್ರೈವರ್ ಸರಿಲ್ಲ ಅಂತ ಕೀ ತಕ್ಕೋಗಿ ಡಿಪೋ ಮ್ಯಾನೇಜರಿಗೆ ದೂರು ಕೊಟ್ಟವನೆ! ಬಸ್ಸಲ್ಲಿ ಸೀಟು ಸಿಗದಿರೋವು, ಸೀಟಿಗೆ ಟವಲ್ ಹಾಕಿದವು, ಸ್ಟಾಂಡಿಂಗಲ್ಲಿ ನಿಂತಿದ್ದವು ಕಡದಾಡ್ತಿದ್ರೆ, ಐದು ಜನ ಕಂಡೆಕ್ಟರುಗಳು ಕಮಕ್-ಕಿಮಕ್ ಅನ್ನದೆ ದಿಮ್ಮಗೆ ನಿಂತವೆ. ಪಾಪ, ರಾಜಾವುಲಿ ಡ್ರೈವರ್ ಸೀಟು ಬುಟ್ಟೆದ್ರೆ ಕಷ್ಟ ಅಂತ ಕುತಗಂಡು ಬಾಯಲ್ಲೇ ಡುರ್ ಬುರ್ ಸೌಂಡು ಮಾಡ್ತಾದೆ. ಇದು ನಮ್ಮೂರು ಬಸ್ಸು ವಡಗತೆ ಕನಪ್ಪಾ’ ಅಂತ ಉಸುರೂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು