ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ದೀನಚಿಂತಾಮಣಿ

Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

‘ಅಲ್ಲ ಕಲಾ, ಈ ತುರೇಮಣೆ ಬಲೆ ಕೇಡಿ ನನಮಗ! ಏನೇ ಕೇಳಿದ್ರೂ ನಿಸೂರಾಗಿ ತಾರತಿಕಡಿ ಬಾರಾಬಂಕಿ ಅಂತ ಏನಾದ್ರೂ ಹೇಳಿಬುಡ್ತನೆ. ಇವನಿಗೆ ಏನಾದರು ಒಂದು ಬಿರುದು ಕೊಡಬೇಕಲ್ಲಾ!’ ಅಂತು ಯಂಟಪ್ಪಣ್ಣ.

‘ಅಣೈ, ಬಿದಿರು ಮೋಟ್ರು ಬಾ ಅನ್ನೋ ಕಾಲದೇಲಿ ಬಿರುದು ತಕ್ಕಂದೇನು ಮಾಡನೆ. ಅದೆಲ್ಲಾ ಅವಕಾಶವಾದಿ ರಾಜಕೀಯ ದೌರ್ಜನ್ಯ ಮಾಡೋರಿಗೇ ಸರಿ’ ಅಂದ್ರು ತುರೇಮಣೆ.

‘ರಾಜಕೀಯದೋರು ಕಡಿದು ಕಟ್ಟೆ ಹಾಕಿರದು ಅಷ್ಟರಗೇ ಅದೆ. ಅವರಿಗೆಂತೇ ಬಿರುದು ಕೊಟ್ಟಾರಲಾ?’ ಯಂಟಪ್ಪಣ್ಣ ಅನುಮಾನ ತೆಗೆಯಿತು.

‘ಯಾಕಾಗಲ್ಲ, ಅವರೇನು ಕಿಸಿದಿರದು ವಸಿನಾ! ಪರ್ಸೆಂಟೇಜು ತಗಂಡು ದಿಮ್ಮಗಿರೋ ರಾಜಕಾರಣಿಗೆ ಶೇಕಡಾವೀರ ಅಂತ ಕರೀಬೌದಲ್ವೇನಣೈ? ಮಕ್ಕಳು ಓದೋ ಪುಸ್ತಕವ ಉದ್ಗ್ರಂಥ ಮಾಡ್ತೀವಿ ಅಂತ ಹೊಂಟಿರೋರ್ನ ಪಠ್ಯಾವತಾರಿ ಅನ್ನದೆಲೆ ಇನ್ನೇನಂದಾರು? ಕಂಡಾಬಟ್ಟೆ ಟ್ರಾನ್ಸ್‌ಫರ್‌ ಮಾಡಿಸಿ ಕಾಸು ಗಿಬರಿರೋನು ವರ್ಗನಿಧಿನೇ ಅಲ್ಲುವೇ? ಸ್ಟೇಜು ಮ್ಯಾಲೆ ಕುತಗಂಡು ತೂಕಡಿಸೋನು ಮೂಢನಿದ್ರಾ ಪ್ರವೀಣ! ಯಾವಾಗಲೂ ಟೀಕೆ ಮಾಡಿಕ್ಯಂಡಿರೋ ವಿರೋಧಪಕ್ಸದ ನಾಯಕ ಕುಟುಕು ಕಸ್ತೂರಿ, ಲಂಚವೇ ಜೀವನ ಅಂದುಕೊಂಡಿರೋ ಅಧಿಕಾರಿ ಕಿಲಾಡಿ ಕಾಸಯ್ಯ, ಎಲ್ಲಾ ಸಿನಿಮಾ ತೋಪಾದ್ರೂ ಇನ್ನೂ ಹೀರೊ ಪಾತ್ರನೇ ಬೇಕು ಅನ್ನೋನು ಬೋರಿಂಗ್ ಸ್ಟಾರ್! ಕಳ್ಳ ವೋಟು ಹಾಕಿಸ್ಕಂಡು ಗೆದ್ದು ಶಾಸಕನಾದೋನು ಮುದ್ರಾರಾಕ್ಷಸ, ಅಧಿಕಾರ ಪಡೆಯಕ್ಕೆ ಮಾಟ-ಮಂತ್ರ ಮಾಡಿಸೋನು ಮಂತ್ರ ಪಿಶಾಚಿ! ಸಾಕಾ ಇನ್ನೂ ಬೇಕಾ?’ ಅಂತಂದರು.

‘ಆಯ್ತು ಬುಡಿ ಸಾ! ಈಗ ದುಡದುದ್ದು ಕೈಗೂ ಬಾಯಿಗೂ ಸಾಲದೇ ಕಂಗೆಟ್ಟು ಕೂತಿರೋ ಜನಸಾಮಾನ್ಯನಿಗೆ ಏನು ಬಿರುದು ಕೊಟ್ಟೀರಿ?’ ಅಂತ ಕೇಳಿದೆ.

‘ಮಧ್ಯಮವರ್ಗಕ್ಕೆ ತಾಪತ್ರಯ ಅನ್ನೋ ಮೂಲವ್ಯಾಧಿ ಅದೆ ಕನೋ! ಯಾವಾಗಲೂ ಮುಲುಕ್ತಾ ಸದಾ ದೀನವಾಗೇ ಇರೋ ಇವನಿಗೆ ದೀನಚಿಂತಾಮಣಿ ಅಂತ ಕರೆಯದೇ ಸರಿ!’ ಅಂತಂದ್ರು ತುರೇಮಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT