ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಗೂಢಚಾರಿಕೆ!

Last Updated 24 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ಯಾರೋ ನನ್ಮೇಲೆ ಗೂಢಚಾರಿಕೆ ಮಾಡ್ತಾ ಅದಾರೆ ಅನ್ಸುತ್ತಪ್ಪ...’ ಗುಡ್ಡೆ ಅನುಮಾನದಿಂದ ಗಡ್ಡ ಕೆರ್ಕಂಡಾಗ ತೆಪರೇಸಿಗೆ ನಗು ಬಂತು. ‘ಲೇಯ್, ನೀನ್ಯಾವ ಪೋತ್ಲಾಂಡಿ ಅಂತ ನಿನ್ಮೇಲೆ ಗೂಢಚಾರಿಕೆ ಮಾಡ್ತಾರಲೆ, ಗಾಂಜಾ ಗೀಂಜಾ ಸೇದ್ತೀ ಏನು?’

‘ಹುಷಾರು ಕಣಲೆ, ಡ್ರಗ್ಸ್‌ ಕೇಸು ಅಂದ್ರೆ ಮುಗೀತು, ಪೊಲೀಸ್ರು ಬೆನ್ಹತ್ತಿಬಿಡ್ತಾರೆ’ ದುಬ್ಬೀರ ಹೆದರಿಸಿದ.

‘ಗಾಂಜಾನ ಸಾಧು- ಸನ್ಯಾಸಿಗಳೆಲ್ಲ ಸೇದ್ತಾರಪ. ಅಂದ್ರೆ ಅವರ‍್ನೂ ಒಳಗಾಕಿಬಿಡ್ತಾರಾ?’ ಗುಡ್ಡೆ ವಾದಿಸಿದ.

‘ನಂಗೇನೋ ನಿನ್ಮೇಲೆ ಚೀನಾದೋರು ಗೂಢಚಾರಿಕೆ ಮಾಡ್ತಿರಬೇಕು ಅನ್ಸುತ್ತಪ್ಪ...’ ಪರ್ಮೇಶಿ ವ್ಯಂಗ್ಯವಾಗಿ ರಾಗ ಎಳೆದ.

‘ಮಾಡ್ಕಳ್ಳಿ ಬಿಡಲೆ, ಅವರು ನಮ್ಮ ಸಿದ್ದಣ್ಣನ ಮೇಲೆ, ದೊಡ್ಡಗೌಡ್ರ ಮೇಲೆಲ್ಲ ಗೂಢಚಾರಿಕಿ ಮಾಡ್ತದಾರೆ ಅಂತ ಪೇಪರ್‍ನಲ್ಲಿ ಬಂದಿತ್ತು. ಏನ್ ಸಿಕ್ತು ಅವರಿಗೆ?’

‘ಸಿಗಾಕೆ ಅವರತ್ರ ಏನೈತಿ ಬಿಡಲೆ, ಕೊಡವಿದ್ರೆ ಪಂಚೆ, ಎದ್ರೆ ಹೆಗಲ ಮೇಲೆ ಟವೆಲ್ಲು...’ ತೆಪರೇಸಿ ನಕ್ಕ.

‘ಚೀನಾದೋರು ಸಿದ್ದಣ್ಣ ಮತ್ತೆ ದೊಡ್ಡಗೌಡ್ರ ಮೇಲೆ ಗೂಢಚಾರಿಕೆ ಮಾಡ್ತಿದ್ರಲ್ಲ, ಯಾಕೋ ಹೆದರಿ ನಡುಗೋದ್ರಂತೆ...’ ಗುಡ್ಡೆ ಹೊಸ ಕತೆ ಹೊಸೆದ.

‘ಹೌದಾ? ಯಾಕಂತೆ?’ ದುಬ್ಬೀರನಿಗೆ ಕುತೂಹಲ.

‘ಇಬ್ರೂ ಯಾರನ್ನ ಭೇಟಿಯಾಗ್ತಾರೆ, ಏನು ಊಟ ಮಾಡ್ತಾರೆ ಎಲ್ಲ ಇಂಚಿಂಚು ಮಾಹಿತಿ ಚೀನಾಕ್ಕೆ ಹೋಗ್ತಿತ್ತಂತೆ. ಈ ಇಬ್ಬರ ತಂಟೆಗೆ ಹೋಗೋದು ಬ್ಯಾಡ ಅಂತ ಗೂಢಚಾರರು ಚೀನಾಕ್ಕೆ ಇನ್ಫರ್ಮೇಶನ್ ಕೊಟ್ಟಿದ್ರಂತೆ...’

‘ಹೌದಾ? ಯಾಕಂತೆ?’ ಗುಡ್ಡೆ ಏನೋ ಬುರುಡೆ ಬಿಡ್ತಾ ಅದಾನೆ ಅಂತ ತೆಪರೇಸಿಗೆ ಗೊತ್ತಾಯಿತು.

‘ಸಿದ್ದಣ್ಣ ಮತ್ತೆ ದೊಡ್ಡಗೌಡ್ರು ದಿನಾ ದಪ್ಪ ದಪ್ಪ ಕರಿ ಬಾಂಬ್‍ಗಳನ್ನ ನುಂಗ್ತಾರೆ. ಅವರ ತಂಟೆಗೆ ಹೋಗೋದ್ ಬ್ಯಾಡ, ಅಂದ್ರಂತೆ...’

‘ಕರಿಬಾಂಬಾ? ಅಂದ್ರೆ?’

‘ರಾಗಿಮುದ್ದೆ ಕಣಲೆ...!’ ಗುಡ್ಡೆ ಬುರುಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT