ಭಾನುವಾರ, ಮೇ 9, 2021
25 °C

ಚುರುಮುರಿ: ಮನುಷ್ಯರಾಗೂದು ಯಾವಾಗ?

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ನಮ್ಮದೂ ಒಂದ್ ಮಾರ್ಜಾಲ ಮಠ ಮಾಡಿಕೊಳ್ಳೂಣಂತ ಮೊನ್ನಿಯಿಂದ ನಮ್ಮ ಬೆಕ್ಕುಗಳಿಗೆ ಹೇಳಿದೆ. ಯಾರೂ ನನ್ ಮಾತು ಕೇಳಲಿಲ್ಲ’ ಬೆಕ್ಕಣ್ಣ ಪೇಪರು ಓದುತ್ತ, ತುಸು ಅಸಮಾಧಾನದಿಂದ ಹೇಳಿತು.

‘ಮಾರ್ಜಾಲ ಮಠ ಎದಕ್ಕಲೇ... ಕದ್ದ ಹಾಲನ್ನ ಕಣ್ಮುಚ್ಚಿ ಕುಡಿಯೂದ್ ಹೆಂಗಂತ ಉಪದೇಶ ಮಾಡಾಕ್ಕೇನು’ ನಾನು ಅಚ್ಚರಿಯಿಂದ ಕೇಳಿದೆ.

‘ನೀವ್ ಹಂಗ್ ಕಣ್ಣುಮುಚ್ಚಿ ಮಾಡೂ ಕಾರುಬಾರಿಗೆ ನಮ್ಮ ಹೆಸರು ಎದಕ್ಕ ಹೇಳ್ತೀರಿ. ನಮ್ಮನ್ನ ಬ್ರಹ್ಮ ಹಂಗ ಹುಟ್ಟಿಸ್ಯಾನ. ನಾವು ಬಾಯಿ ಮುಚ್ಚಿ ತೆಗೆದೂ ಮಾಡೂ ಮುಂದೆ ನಮ್ಮ ಕಣ್ಣಿನ ಹುಬ್ಬು ಕೆಳಗಾಗಿ, ನಿಮಗ ಮುಚ್ಚಿದಂಗ ಕಾಣತದ. ಉಪದೇಶ ಮಾಡಕೆ ನಮ್ಮ ವಿಶ್ವಗುರುಗಳು ಮತ್ತು ಅವರ ಭಕ್ತರು ಅದಾರ, ನಾವೆದಕ್ಕೆ ಮಾಡೂಣು. ಮಾರ್ಜಾಲ ಮಠ ಮಾಡಿಕೆಂಡಿದ್ರೆ ಯೆಡ್ಯೂರಜ್ಜಾರು ನಮಗೂ ಬಜೆಟ್ಟಿನಾಗೆ ಕೋಟಿಗಟ್ಟಲೆ ರೊಕ್ಕ ಕೊಡತಿದ್ದರು...’ ಬೆಕ್ಕಣ್ಣ ಮೆತ್ತಗೆ ಬಾಯಿಬಿಟ್ಟಿತು.

‘ಅದಕ್ಕ ಉಳಿದ ಬೆಕ್ಕುಗಳು ಏನಂದವು?’

‘ಸುಮ್ಮಿರೋ ಮಾರಾಯ... ನಾವೇನ್ ಮನಷ್ಯಾರಂಗ ಕೆಟ್ಟುಹೋಗೀವೇನು ಅಂದವು. ಕೊರೊನಾ ಕಾಲದಾಗೆ ಮಂದಿಗಿ ಕಣ್ಣೀರು ಕಪಾಲಕ್ಕೆ ಬಂದಾವು. ಮಳಿ, ಬೆಳಿ ಸರಿಯಾಗಿ ಆಗವಲ್ದು, ಹೊಸ ಕಾನೂನು ತೆಲಿಮ್ಯಾಗೆ ಕತ್ತಿ ಹಂಗೆ ತೂಗತದ. ಹಿಂತಾವೆಲ್ಲ ವಿಧಾನಸೌಧದಾಗೆ ಚರ್ಚೆ ಮಾಡೂದ್ ಬಿಟ್ಟು, ಸೀಡಿ ಹಗರಣ ರಾಡಿ ಎಬ್ಬಿಸ್ಯಾರ’.

‘ಈಗ ಬೀದಿ ಬೆಕ್ಕು, ಮನಿಬೆಕ್ಕು, ಪರ್ಷಿಯನ್ ಮುದ್ದಿನ ಬೆಕ್ಕು, ಹಿಂಗ ನಾವ್ ಒಬ್ಬರಿಗೊಬ್ಬರು ಭೇದಭಾವಿಲ್ಲದೇ ಕೂಡ್ತೀವಿ, ಮರಿ ಮಾಡ್ಕಂತೀವಿ. ಬ್ಯಾರೆಬ್ಯಾರೆ ಥರದ ಬೆಕ್ಕುಗಳು ಕೂಡೂದನ್ನು ತಡೀಲಿಕ್ಕೆ ಮಂಡಳಿ, ಪಂಡಳಿ ಮಾಡೂಣು ಅಂತ ಯಾವುದಾದರೂ ಮಠ ದವರು ಫರ್ಮಾನು ಹೊರಡಿಸಿದರೆ ಕಷ್ಟ. ಮಠದ ರಾಜಕೀಯ, ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂತ್ಹೇಳಿ ವಿಧಾನಸೌಧ ದೊಳಗೆ ರಾಡಿ ಎಬ್ಬಿಸಾದು ಇದೆಲ್ಲ ಆ ಮನಿಷ್ಯಾರೆ ಮಾಡಿಕೆಂಡಿರಲಿ, ನಾವು ಮಾತ್ರ ಜಾಣ ಬೆಕ್ಕುಗಳಾಗೇ ಇರೂಣಂತ ನಿರ್ಧಾರ ಮಾಡಿದ್ವಿ. ಅಂದ್ಹಂಗ ನೀವ್ ಖರೇಖರೇ ಮನುಷ್ಯರಾಗೂದು ಯಾವಾಗ’ ಬೆಕ್ಕಣ್ಣ ಕುಟುಕಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.