ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪಾಲಿಟಿಕ್ಸೋ ಫೋಬಿಯ

Last Updated 18 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ತುರೇಮಣೆಗೆ ಮನೇಲಿ ಪೆಗ್ ಸೈಜಿನ ಕರೀ ಪಗ್ಗೊಂದಿತ್ತು. ತುರೇಮಣೆ ಅದಕ್ಕೆ ತಮ್ಮ ಮೆಚ್ಚಿನ ಬ್ಲ್ಯಾಕ್‍ಡಾಗ್ ವಿಸ್ಕಿ ನೆನಪಿನಲ್ಲಿ ಬ್ಲ್ಯಾಕಿ ಅಂತ ನಾಮಕರಣ ಮಾಡಿಕೊಂಡಿದ್ದರು.

ದಿನಾ ಸಂಜೆಯಾಯ್ತಲೇ ತುರೇಮಣೆ ಮಗ್ಗುಲಗೆ ಕೂತು ಲೊಳ್ ಲೊಳ್ ಬೌ ಬೌ ಅಂತ ಬೊಗಳಕ್ಕೆ ಶುರು ಮಾಡಿಬುಡತಿತ್ತು. ಈ ಗಲಾಟೆ ಕೇಳನಾರದೇ ಶ್ರೀಮತಿ ತುರೇಮಣೆ, ಮನೇಲಿ ನಾಯಿಗಳ ಕಾಟ ತಡೆಯಕಾಯ್ತಿಲ್ಲ ಅಂತ ಮಕ್ಕುಗೀತಿದ್ದಳು.

ಆವತ್ತು ತುರೇಮಣೆ ತಮ್ಮ ಮನೆ ಮುಂದೆ ನಾಯಿಗೆ ಮಾಸ್ಕು ಹಾಕಿ ಸಪ್ಪಗೆ ಕುಂತುದ್ರು. ನಾನು ಕೇಳಿದೆ ‘ಏನ್ಸಾ ಅಕ್ಕ ಬೈತಾ? ನಿಮಗೇನು ವಸದಲ್ಲವಲ್ಲಾ ಬುಡಿ’.

‘ಅದಲ್ಲಾ ಕನೋ, ನನ್ನ ಬ್ಲ್ಯಾಕಿ ಯಾಕೋ ಸಪ್ಪಗಾಗಿ ಬುಟ್ಟದೆ. ಡಾಕ್ರು ತಕ್ಕೋಗನ ಬಾ’ ಅಂದ್ರು. ಇಬ್ರೂ ಟಾಮಿ ಆಸ್ಪತ್ರಿಗೋದೊ. ಯಾರಿಗೆ ಹುಸಾರಿಲ್ಲ ಅಂದ್ರು ಡಾಕ್ಟ್ರು.

‘ಡಾಕ್ಟ್ರೆ ನಮ್ಮ ಬ್ಲ್ಯಾಕಿ ಪೇಪರು, ಟೀವಿನಗೆ ರಾಜಕಾರಣಿಗಳ ಮಕ ಕಂಡ್ರೆ ಹೆದರಿ ಕಯಗುಟ್ಟಿಕ್ಯಂದು ರೂಮಿಗೋಗಿ ಮಂಚದ ಕೆಳಗೆ ಅವಿತ್ಕಬುಡ್ತದೆ. ಮಳೆಹಾನಿ ತಪ್ಪು ಲೆಕ್ಕ, ಪಾಲಿಕೆಗಳ ನಕಲಿ ಕಾಮಗಾರಿ ಬಿಲ್ಲುಗಾರಿಕೆ, ಅನಾರೋಗ್ಯ ಇಲಾಖೆಯ ಕೊರೊನಾ ತಪ್ಪು ಮಾಹಿತಿ, ಜಗತ್ತಿನ ದೊಡ್ಡ ಕೋವಿಡ್ ಕೇರ್ಲೆಸ್ ಕೇಂದ್ರದ ಅವಾಂತರ ಏನಾದ್ರು ನೋಡ್ತೋ ಪ್ರಜ್ಞೆ ತಪ್ಪಿ ಬಿದ್ದೋಯ್ತದೆ! ಏನಾಗದೆ ವಸಿ ನೋಡಿ’ ಅಂತ ಡಾಕ್ಟ್ರ ತಾವು ಅಲವತ್ತುಕಂಡರು.

‘ಅಲ್ಲುವರಾ ಮಂತೆ! ಪಕ್ಸಗಳ ಚಾಲು, ಕಾವುಗೋಳಿ ಆಟ ನೋಡಿ ನಮಗೇ ಕೆಳಗಿಂದ ಉರೀತದೆ. ಬ್ಲ್ಯಾಕಿ ಭಾಳ ಸತುವಂತ ನಾಯಿ. ಟೀವಿ, ಪೇಪರಲ್ಲಿ ರಾಜಕೀಯದಾಟ ನೋಡಿದ್ರೆ ವಾಕರಿಕೆ, ಸಿಟ್ಟು, ತಲೆನೋವು, ಭಯ! ರಾಜಕಾರಣಿಗಳ ಮಖ ನೋಡಿದೇಟಿಗೆ ಪೇಪರ್ ಹರಿದಾಕ್ತದೆ ಅಲ್ಲುವರಾ! ಇದು ಪಾಲಿಟಿಕ್ಸೋ ಫೋಬಿಯಾ ಅಂತ ಅಪರೂಪದ ಕಾಯಿಲೆ. ಇದುಕ್ಕೆ ಕಾಯಿಲೆ ಬಂದೋರು ಲಸಿಕೆ ತಕ್ಕಳಂಗಿಲ್ಲ, ಕಾಯಿಲೆ ತಂದೋರಿಗೆ ಕೊಡಬೇಕು’ ಅಂದ್ರು ಡಾಕ್ಟ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT