ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಇಪ್ಪತ್ತೊಂದಕ್ಕೆ ವಿದಾಯ

Last Updated 23 ಡಿಸೆಂಬರ್ 2021, 19:32 IST
ಅಕ್ಷರ ಗಾತ್ರ

‘21 ಇನ್ನೇನು ಮುಗಿದೇ ಹೋಗುತ್ತೆ...ಈ ವರ್ಷವಂತೂ ಭಯಂಕರವಾಗೇ ಇತ್ತು. ಅದೇನು ಮಳೆ, ಎಲ್ಲೆಲ್ಲೂ ಬರೇ ನೀರು. ಮನೆಯಿಂದ ರಸ್ತೆಗೆ ಬರೋಕ್ಕೆ ಬೋಟ್ ಬಳಸುವಷ್ಟು! ಓ ಮೈ ಗಾಡ್’ ಅತ್ತೆ ಕ್ಯಾಲೆಂಡರ್ ನೋಡಿದರು.

‘ಓ ಮೈಕ್ರಾನ್ ಅನ್ನಿ ಅಜ್ಜಿ’ ಪುಟ್ಟಿ ಕಿಸಕ್ಕನೆ ನಕ್ಕಳು. ‘ಹ್ಞೂಂ, ಡೆಲ್ಟಾ ಆಯಿತು ಈಗ ಈ ಅವತಾರದಲ್ಲಿ... ನಾವು ನಮ್ಮ ಜಾಗ್ರತೆಯಲ್ಲಿ ಇರಬೇಕು’ ಅತ್ತೆಯವರ ಮಾತು ಮುಗಿಯುವ ಮೊದಲೇ ಕಂಠಿ ಹಾಜರ್, ಉಣ್ಣೆಯ ಮಫ್ಲರ್‌ನಿಂದ ಮುಖ, ತಲೆಯನ್ನು ಬಿಗಿದು, ಕಣ್ಣು ಮಾತ್ರ ಕಾಣುವಷ್ಟು ಉಳಿಸಿ!

‘ಅಬ್ಬಾ ಅದೇನು ಚಳಿ’ ಎನ್ನುತ್ತಾ ಚೇರಿನಲ್ಲಿ ಮುದುರಿದ. ‘ನಾಲ್ಕು ದಿನದಿಂದ ನಾಪತ್ತೆ? ಎಲ್ಲಿತ್ತೋ ಸವಾರಿ?’ ಛೇಡಿಸಿದೆ.

‘ಇಪ್ಪತ್ತೊಂದಕ್ಕೆ ವಿದಾಯ- ಹೊಸ ವರ್ಷಕ್ಕೆ ಸ್ವಾಗತ’ ಕಾರ್ಯಕ್ರಮ ಬಾಸ್ ಮನೇಲಿ, ಅದಕ್ಕೇ ಬಿಝಿ’ ಬೀಗಿದ.

‘ಏನು ಆಚರಣೆನೋ? ಈ ವರ್ಷ ಕಷ್ಟಗಳ ಸರಮಾಲೆಯೇ ಆಯಿತು, ಕೊನೆಗೆ ತಿನ್ನೋ ತರಕಾರೀನೂ ಬಿಡಲಿಲ್ಲ, ಒಂದಕ್ಕಿಂತ ಒಂದರ ರೇಟು ಪೈಪೋಟಿಯಲ್ಲಿ ನೂರನ್ನು ದಾಟಿದವು!’

‘ಸಡಗರಪಡೋಕ್ಕೆ ಹಲವು ಸಂಗತಿಗಳಿವೆ. ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್‌ಗಳಲ್ಲಿ ನಾವು ಜಯಭೇರಿ ಬಾರಿಸಿದ್ದೀವಿ, ಕೋವಿಡ್‌ನ ಕಂಟ್ರೋಲ್‌ನಲ್ಲಿ ಇಟ್ಟಿದ್ದೀವಿ, ಮಕ್ಕಳು ಶಾಲೆ ಮುಖ ಕಂಡಿವೆ, ಮನೆಯವರಿಗೆ ಅಷ್ಟರ
ಮಟ್ಟಿಗೆ ರಿಲೀಫ್ ಅಲ್ವೇ’ ನಾನು ನನ್ನ ಅನಿಸಿಕೆ ಹೊರಬಿಟ್ಟೆ.

‘ಎಲ್ಲಕ್ಕಿಂತ ಮುಖ್ಯವಾಗಿ ಭುವನ ಸುಂದರಿ ಪಟ್ಟ ನಮ್ಮ ಭಾರತದ ಸುಂದರಿಯ ಪಾಲು’ ಪುಟ್ಟಿ ಭುಜ ಕುಣಿಸಿದಳು.

‘ಬಾಸ್ ಮನೇಲಿ ಲಿಮಿಟೆಡ್ ಗೆಸ್ಟ್‌ಗಳು. ವಿಶೇಷ ಅಂದ್ರೆ ಬಾಸ್ ಮಿಸೆಸ್‌ ‘ಬೆಸ್ಟ್ ಹೋಮ್ ಮೇಕರ್’ ಬಿರುದು ಕೊಟ್ಟು ನಾಲ್ಕೈದು ಮಂದಿಗೆ ಸನ್ಮಾನ ಇಟ್ಕೊಂಡಿದ್ದಾರೆ. ಶ್ರೀಮತಿ ಹೆಸರೂ ಲಿಸ್ಟ್‌ನಲ್ಲಿ ಇದೆ...’ ನನ್ನವಳ ಕಣ್ಣಲ್ಲಿ ಸಣ್ಣ ಕಿಡಿ.

‘ಯಾಕೋ ಬಲಗಣ್ಣು ಅದುರಿದಾಗಲೇ ಅಂದುಕೊಂಡೆ ಏನೋ ಸಿಹಿಸುದ್ದಿ ಇರುತ್ತೆ ಅಂತ’ ನನ್ನವಳತ್ತ ನೋಡಿದೆ. ನನ್ನವಳು ನಾಚಿ, ‘ಕಾಫಿ ತಂದೆ’ ಎನ್ನುತ್ತಾ ಅಡುಗೆಮನೆಯತ್ತ ಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT