ಶನಿವಾರ, ಏಪ್ರಿಲ್ 1, 2023
30 °C

ಚುರುಮುರಿ: ಮಾತಿನ ಪಟಾಕಿ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿ ಮುಗಿದರೂ ಬೆಕ್ಕಣ್ಣನ ದುಸುಮುಸು ನಿಂತಿರಲಿಲ್ಲ.

‘ಪಟಾಕಿ ಹಚ್ಚೂದು ನಮ್ಮ ಸಂಸ್ಕೃತಿವಳಗ ಐತಂತ ದೊಡ್ಡದೊಡ್ಡ ಮಂದಿ ಹೇಳತಿದ್ರು. ಮಕ್ಕಳು ಪಟಾಕಿ ಹಚ್ಚಲಿ, ಅವರ ಆನಂದ ಕಸೀಬ್ಯಾಡ್ರಿ ಅಂತ ಸದ್ಗುರು ಕೂಡ ಉಪದೇಶ ಕೊಟ್ಟಿದ್ರು. ಹಸಿರು ಪಟಾಕಿನಾರೆ ಕೊಡಸು ಅಂತ ಎಷ್ಟ್ ಬಡಕೊಂಡ್ರೂ ನೀ ಕೊಡಸಲಿಲ್ಲ. ಎಷ್ಟರ ಜಿಪುಣತನ ಮಾಡತೀ... ಇನ್ ಮುಂದಿನ ವರ್ಸಾನೆ ಹಬ್ಬ ಬರೂದು’ ಒಂದೇ ಸಮನೆ ಕೊಸಕೊಸ ನಡೆಸಿತ್ತು.

‘ಯಾವ ಪಟಾಕಿ ಹಚ್ಚಿದ್ರೂ ಹೊಗೆ ಬರತೈತಿ, ವಾಯುಮಾಲಿನ್ಯ ಹೆಚ್ಚತೈತಿ. ಸುದ್ದಿ ಕೇಳೀ ಇಲ್ಲೋ... ದೇಶದಾಗೆ 17 ನಗರದಾಗಿನ ಗಾಳಿ ಎಷ್ಟ್ ಹದಗೆಟ್ಟೈತಿ ಅಂದ್ರ ಉಸಿರಾಡಿದ್ರೆ ಉಬ್ಬಸ ಬರತೈತಿ ಅಂತ ಮಾಲಿನ್ಯ ಮಂಡಳಿನೇ ಹೇಳೈತಿ’ ನಾನು ಸಮಾಧಾನಿಸಲು ಪ್ರಯತ್ನಿಸಿದೆ.

‘ಹಸಿರು ಪಟಾಕಿಗೇನೂ ಆಗತಿದ್ದಲ್ಲ... ವರದಿವಳಗ ಬೆಂಗಳೂರು ಗಾಳಿ ತೃಪ್ತಿಕರ ಅಂದಾರಲ್ಲ’ ಮತ್ತೆ ವಾದಿಸಿತು.

‘ಪಟಾಕಿ ಕಡಿಮಿ ಸುಟ್ಟಿದ್ದಕ್ಕೇ ತೃಪ್ತಿಕರ ಐತಿ. ಆ 17 ನಗರದಾಗೆ ಅರ್ಧಕರ್ಧ ನಿಮ್ಮ ಯೋಗಿಮಾಮಾನ ರಾಜ್ಯದಾಗೆ ಐತಿ, ಇನ್ನರ್ಧ ಹರ್ಯಾಣ ರಾಜ್ಯದಾಗೆ ಅದಾವು. ಎರಡೂ ಕಮಲಕ್ಕನ ಮಕ್ಕಳ ರಾಜ್ಯಗಳೇ’ ಎಂದೆ.

‘ಅದ್ ಬರೀ ಪಟಾಕಿ ಸುಟ್ಟಿದ್ದಕ್ಕೆ ಅಲ್ಲೇಳು... ಕಾರ್ಖಾನೆ ಹೊಗೆ, ಹೊಲದಾಗೆ ಉಳಿದ ಕೂಳೆ ಸುಡೂದು ಎಲ್ಲ ಸೇರೈತಿ. ಮಲೆನಾಡಿನಾಗೆ ಅಜ್ಜೀ ಮನಿ ಕಡಿಗಿ ವರ್ಷಿಡೀ ಪಟಾಕಿ ಹಚ್ಚತಾರಂತ ನೀನೇ ಹೇಳೀಯಲ್ಲ’ ಬೆಕ್ಕಣ್ಣನ ವಾದ ನಿಲ್ಲಲಿಲ್ಲ.

‘ಛಂದಕ್ಕೆ ಹಚ್ಚತಾರೇನು? ಮಲೆನಾಡಿನಾಗೆ ತ್ವಾಟಕ್ಕೆ ಲಗ್ಗೆ ಇಡೂ ಕಪಿಸೈನ್ಯ ಓಡಿಸಾಕೆ ಪಟಾಕಿ ಹಚ್ಚತಾರ. ನಮ್ಮ ಸುದ್ದಿಗೆ ಬಂದ್ರ ಕೈಕತ್ತರಿಸತೇವಿ, ಕಣ್ಣು ಕೀಳತೀವಂತ ಮಾತಿನ ಪಟಾಕಿ ಹಚ್ಚತಾರಲ್ಲ, ಹಂಗ ನೀನೂ ಮಾತಿನ ಪಟಾಕೀನೇ ಹಚ್ಚು’ ಎಂದೆ.

ಬೆಕ್ಕಣ್ಣ ಥಟ್ಟನೆ ‘ಬೆಟ್ಟವನಗೆದು ಇಲಿ ಹಿಡಿದಂತೆ, ಬೆಟ್ಟವ ಬೋಳಿಸಿ, ಹಣ್ಣಿನ ಮರಗಳ ಉರುಳಿಸಿ, ಮಂಗನ ಹಿಡಿಯಲು ಪಟಾಕಿ ಸುಡುವರು’ ಎಂದು ಪ್ರಾಸಪದ್ಯದ ಪಟಾಕಿ ಢುಂ ಎನ್ನಿಸಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.