ಶುಕ್ರವಾರ, ಆಗಸ್ಟ್ 7, 2020
24 °C

ಚುರುಮುರಿ | ಅಂತರ ಪಾಲನೆ!

ಪ್ರೊ. ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಗುಂಡ ಆರು ತಿಂಗಳ ಹಿಂದೆ ಕೊಂಬು ಕಳೆದುಕೊಂಡು ಗಂಡನಾಗಿದ್ದ. ವಿಧಾನಸೌಧದಲ್ಲಿ ಸಿಕ್ಕ ಅವನು ಕುಂಟುತ್ತಿದ್ದ. ವಿಚಾರಿಸಿದೆ‌‌.

‘ಹೆಂಡ್ತಿ ಊರಿಗೆ ಹೋಗಿದ್ದೆ’ ಎಂದ‌.

‘ಅಲ್ಲೇನಾಯ್ತೋ?’ ಕೇಳಿದೆ.

‘ಬೆಂಗ್ಳೂರಿನೋರು ಕೊರೊನಾ ತರ್ತಾರೇಂತ ಅವ್ರು ಊರೊಳ್ಗೆ ಬರದಂತೆ, ದಾರಿಗೆ ಬೇಲಿ ಹಾಕಿದ್ರು. ನಾನು ಕಳ್ಳದಾರೀಲಿ ನುಸುಳೋವಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾಯ್ತು’.

‘ಈ ಬೇಲಿ ವಿಷಯ ಪೇಪರಲ್ಲಿ, ಟೀವೀಲಿ ಬಂದಿತ್ತಲ್ಲ, ಯಾಕೆ ಹೋಗಿದ್ಯೋ?’

‘ಆಷಾಢಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದೂಂತ ನಮ್ಮಮ್ಮ ಆಕೇನ ತವರಿಗೆ ಕಳಿಸಿದ್ರು. ಸಂಬಳವಾದಕೂಡ್ಲೇ ಬನ್ನೀಂತ ಪೇಟೆಗೆ ಬಂದೋರ ಕೈಲಿ ನಮ್ಮಾಕೆ ಹೇಳಿಕಳಿಸಿದ್ಲು’.

‘ಅತ್ತೆಯಂದಿರಿಗೆ ಇದೊಂದು ಸುವರ್ಣಾವ ಕಾಶವಲ್ವೆ! ಭೇಷಾಯ್ತು, ಈ ಕೋವಿಡ್ ಟೈಮಲ್ಲಿ ಅಂತರ ಪಾಲನೆ ಎಲ್ಲರಿಗೂ ಒಳ್ಳೇದು. ಆದ್ರೆ ನೀನು ಊರಲ್ಲಿ ಎಷ್ಟು ದಿನ ಝಾಂಡಾ ಹೊಡೆದಿದ್ಯೋ?’

‘ಪತ್ತೆ ಹಚ್ಚಿದ ಊರೋರು ನನ್ನನ್ನ ಆಂಜನೇಯನ ಗುಡೀಲಿ ಕ್ವಾರಂಟೈನ್‌ಗೆ ಹಾಕಿದ್ರಯ್ಯಾ. ಅಲ್ಲಿಗೇ ಊಟ ತಂದುಕೊಟ್ಟ ನಮ್ಮತ್ತೆ ಮಗಳ ಅಲೋಯನ್ಸ್ ತಗೊಂಡು ಹೋದರು. ರಾತ್ರಿಯಿಡೀ ಸೊಳ್ಳೆ ಕಡಿಸಿಕೊಂಡ ನನ್ನನ್ನು ಬೆಳಗಿನ ಜಾವದ ಮೊದಲ ಬಸ್‌ಗೆ ಹತ್ತಿಸಿದರು... ನನ್ನ ಪ್ಲಾನೆಲ್ಲಾ ಫ್ಲಾಪು’.

‘ನರಸಿಂಹಸ್ವಾಮಿಯವರ ಪದ್ಯದಲ್ಲಿ ಬರೋ ಮಾವನ ಮನೆಗೆ ಬಂದ ರಾಯರ ಕತೆಯಾಯ್ತು ಅನ್ನು..‌. ಅದ್‌ಸರಿ, ಈಗಿಲ್ಲಿ ಏನ್ ಮಾಡ್ತಿದೀಯೋ?’

‘ಮನೆಯಾಕೆಗೆ ವಿರಹ ಮೇಘ ಸಂದೇಶ ಕಳಿಸೋಣಾಂತ ಈ ಮೂರನೇ ಮಹಡಿಗೆ ಬಂದಿದೀನಯ್ಯಾ... ಆಷಾಢಸ್ಯೇ ಪ್ರಥಮ ದಿವಸೇ...‌’

‘ಸಾಕಯ್ಯಾ, ಅಭಿನವ ಕಾಳಿದಾಸ! ಬಾ ಕ್ಯಾಂಟೀನ್‌ಗೆ. ಬೈ ಟೂ ಕಾಫಿಗೆ ಚಿಯರ್ಸ್ ಹೇಳೋಣ’.

‘ಎಸ್ಕೇಸೀನೂ ಬೇಕಪ್ಪಾ’ ಎನ್ನುತ್ತಾ ಗುಂಡ ಹಿಂಬಾಲಿಸಿದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು