ಕಂಠಿ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಜೋರು ಮಳೆ, ಮುಖದಲ್ಲಿ ಗೆಲುವಿನ ಕಳೆ. ‘ಏನ್ ಸಮಾಚಾರ? ಲಾಟರಿ ಗೀಟರಿ ಹೊಡೀತಾ? ಬಾಸ್‌ಗೆ ಎತ್ತಂಗಡಿ?’ ಅಚ್ಚರಿಯನ್ನು ಕಕ್ಕಿದೆ.
‘ಬಾಸ್ ಹೊಸ ಮನೆ ಕೊಂಡಿದ್ದಾರೆ. ನಿನ್ನೆ ಹೌಸ್ ವಾರ್ಮಿಂಗ್- ಬರದಿದ್ದರೆ ಸಂಬಳ ಕಟ್ ಅಂತ ವಾರ್ನಿಂಗ್, ಅದಕ್ಕೇ ಹೋಗಿದ್ದೆ- ಊಟೋಪಚಾರ ಸೂಪರ್’.
‘ಉಡುಗೊರೆಗೆ ಏನು ಕೊಟ್ಟಿರೋ, ಸುಮ್ನೆ ಉಂಡು ಬರೋಕ್ಕಾಗಲ್ವಲ್ಲ?’ ಕಿಚಾಯಿಸಿದೆ.
‘ಯಾರಿಗೂ ಹೇಳ್ಬೇಡ, ಕಾಲು ಕೆ.ಜಿ ಕಷಾಯದ ಪುಡಿ... ನೀಟ್ ಆಗಿ ಪ್ಯಾಕ್ ಮಾಡಿ, ಅದೂ ಮಿಣಮಿಣ ಪೇಪರ್‌ನಲ್ಲಿ... ಕೊಟ್ಟೆ’.
‘ಯಾವ ಕೊರೊನಾನೂ ಹತ್ತಿರಕ್ಕೂ ಬರೋಲ್ಲ, ಬೆಲೆ ಕಟ್ಟಲಾಗದ್ದು, ಅಂಗಡೀಲಿ ಸಿಗೋಲ್ಲ. ಖಾಲಿಯಾದ ಮೇಲೆ ನನಗೆ ಹೇಳಿ, ನಾನೇ ಖುದ್ದಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸ್ತೀನಿ ಅಂತ ಮೇಡಂ ಕಿವಿಗೆ ಹಾಕಿದೆ. ಪರಿಣಾಮ, ಮುಂದಿನ ವಾರದಿಂದ ಮೆಟ್ರೊಲಿ ಓಡಾಡೋ ಖರ್ಚು ಸ್ಪೆಷಲ್ ಭತ್ಯೆಯಾಗಿ ಸ್ಯಾಂಕ್ಷನ್’. ಹಲ್ಕಿರಿದು ಇನ್ನಷ್ಟು ಹೊಟ್ಟೆಯುರಿಸಿದ.
‘ಕೆ.ಜಿ ಅನ್ನುತ್ಲು ನೆನಪಾಯ್ತು, ಸರ್ಕಾರಿ ಶಾಲೆಗಳಲ್ಲಿ ಕೆ.ಜಿ ಕ್ಲಾಸ್ ಶುರು ಮಾಡ್ತಾರಂತೆ? ಈ ಬಾರಿ ಸರ್ಕಾರಿ ಶಾಲೆ ಕಾಲೇಜುಗಳಲ್ಲೂ ದಾಖಲಾತಿಗಳು ಚೆನ್ನಾಗಿ ಆಗಿವೆಯಂತೆ? ಒಳ್ಳೆ ಸುದ್ದಿನೇ ಅಲ್ವಾ? ಸರ್ಕಾರ ಕೊಡೋ ಸವಲತ್ತು
ಗಳನ್ನೂ ಉಪಯೋಗಿಸಿಕೊಳ್ಳಬೇಕು’ ಅತ್ತೆ ಮೂಗು ತೂರಿಸಿದರು.
‘ಇನ್ನೇನು ಮುಂದಿನ ತಿಂಗಳಿಂದ ಕಾಲೇಜ್ ಶುರುವಾಗುತ್ತೆ. ಒಂದಷ್ಟು ಆನ್‌ಲೈನ್ ಖರೀದಿ ಮಾಡ್ತಿದ್ದೀನಿ... ನಿಮ್ಮ ಮೊಬೈಲ್ ಕೊಡಿ ಒಟಿಪಿ ಬರುತ್ತೆ’ ಮಗಳು ಅವಸರಿಸಿದಳು. ‘ನಾನೂ ಒಂದೆರಡು ಸೀರೆ ತೊಗೊಂಡೆ’ ನನ್ನವಳ ಕ್ಷೀಣ ದನಿ.
‘ಮನೆಮಂದಿಯ ಸಂತೋಷವೇ ನಮ್ಮ ಸಂತೋಷ’ ಕಂಠಿ ತೀರ್ಪು ಕೊಟ್ಟ. ಚರ್ಚೆ ಮಾಡದೇ ಪುಟ್ಟಿಗೆ ಮೊಬೈಲ್ ಕೊಟ್ಟೆ.
‘ಈ ಮಳೆಗೆ ಗರಿಗರಿ ಮಿರ್ಚಿ ಮಾಡ್ತೀನಿ, ಕಾಫಿಗೆ ಬದಲು ಬಿಸಿಬಿಸಿ ಗಸಗಸೆ ಪಾಯಸ, ಈಗ್ಲೇ ಬರ್ತೀನಿ’ ನನ್ನವಳು ಅಡುಗೆಮನೆಗೆ ಹೋದಳು.
‘ಗಸಗಸೆ ಪಾಯಸ ಕುಡಿದ್ರೆ ಒಳ್ಳೇ ನಿದ್ದೆ ಗ್ಯಾರಂಟಿ’ ಅತ್ತೆಯ ಕಮೆಂಟ್ ಕಿವಿಗೆ ಬೀಳುತ್ತಲೇ ಕಂಠಿ ಮುಗುಳ್ನಕ್ಕ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.