ಬುಧವಾರ, ಸೆಪ್ಟೆಂಬರ್ 30, 2020
20 °C

ಚುರುಮುರಿ | ಆರೋಗ್ಯ ಸಾರಿಗೆ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

ಚುರುಮುರಿ

ತೀರ್ಥ ಸ್ವೀಕರಿಸಿದಂತೆ ಕಂಡಕ್ಟರ್‍ರಿಂದ ಸ್ಯಾನಿಟೈಸರ್ ಸ್ವೀಕರಿಸಿ ಶಂಕ್ರಿ, ಸುಮಿ, ಕೈತೊಳೆದುಕೊಂಡರು. ಹಣೆಗೆ ಗುರಿಯಿಟ್ಟು ಥರ್ಮಲ್ ಸ್ಕ್ಯಾನ್ ಮಾಡಿದ ಕಂಡಕ್ಟರ್, ಹೆಸರು, ವಿಳಾಸ, ವಯಸ್ಸು, ಮೊಬೈಲ್ ನಂಬರ್ ವಗೈರೆ ಮಾಹಿತಿ ಪಡೆದು, ‘ನಿಮಗೆ ಕಾಯಿಲೆ- ಕಸಾಲೆಗಳಿವೆಯಾ? ಕೇಳಿದರು.

‘ಆರ್ಥಿಕ ಅನಾರೋಗ್ಯ ಬಿಟ್ಟರೆ ಇನ್ಯಾವ ರೋಗವಿಲ್ಲ’ ಅಂದ ಶಂಕ್ರಿ.

‘ಆರೋಗ್ಯ ವಿಚಾರಿಸುತ್ತಿದ್ದೀರಲ್ಲ, ನೀವು ಕಂಡಕ್ಟ್ರೋ, ಡಾಕ್ಟ್ರೋ?’ ಸುಮಿಗೆ ಕುತೂಹಲ.

‘ಕೊರೊನಾ ಶುರುವಾದಾಗಿನಿಂದ ನಾನು ಕಂ- ಡಾಕ್ಟರ್, ಹೆಹ್ಹೆಹ್ಹೆ...’ ನಕ್ಕರು.

ಬಸ್ಸಿನಲ್ಲಿ ಶಂಕ್ರಿ, ಸುಮಿ ಅಕ್ಕಪಕ್ಕ ಅಂಟಿಕೊಂಡು ಕುಳಿತಿದ್ದರು. ಸಿಟ್ಟಾದ ಕಂಡಕ್ಟರ್, ‘ಅಂಟಿಕೊಂಡು ಕೂರಲು ಇದು ಹನಿಮೂನ್ ಎಕ್ಸ್‌ಪ್ರೆಸ್ ಅಲ್ಲ, ಆರೋಗ್ಯ ಸಾರಿಗೆ. ಹೆಂಡ್ತಿ ಜೊತೆ ಅಂತರ ಕಾಪಾಡಿಕೊಳ್ಳಿ...’ ರೇಗಿದರು.

‘ನಮ್ಮ ಅನ್ಯೋನ್ಯ ದಾಂಪತ್ಯ ಅಗಲಿಸುವುದು ಸರಿಯಲ್ಲ’ ಶಂಕ್ರಿ ಗೊಣಗಿದ.

‘ನಿಮ್ಮ ಅನ್ಯೋನ್ಯತೆ ಮನೆಯಲ್ಲಿಟ್ಟುಕೊಳ್ಳಿ. ಬಸ್ಸಿನಲ್ಲಿ ದಂಪತಿಯಾಗಲಿ, ಲವರ್ಸ್ ಆಗಲಿ ಡಿಸ್ಟೆನ್ಸ್ ಕಾಪಾಡಿಕೊಂಡು, ಕೊರೊನಾ ಕಂಡೀಷನ್ಸ್ ಅನುಸರಿಸಬೇಕು’.

‘ಮಗುವನ್ನು ಸಪರೇಟ್ ಸೀಟಿನಲ್ಲಿ ಮಲಗಿಸಿ, ಹೆಂಡ್ತೀನ ಬೇರೆ ಸೀಟಿನಲ್ಲಿ ಕೂರಿಸಿದ್ದೀನಿ ನಾನು. ಹೀಗೆ ಕೂರಲು ನೀವೇನು ಆದರ್ಶ ದಂಪತಿ  ಯೇನ್ರೀ?...’ ಪ್ರಯಾಣಿಕನೊಬ್ಬ ಕಿಡಿಕಾರಿದ.

‘ಎಲ್ಲರೂ ರೂಲ್ಸ್ ಫಾಲೋ ಮಾಡ್ಬೇಕು. ನಾನು ಸ್ಟ್ರಿಕ್ಟ್ ಕಂಡಕ್ಟರ್, ಯಾವತ್ತೂ ರೂಲ್ಸ್ ಬ್ರೇಕ್ ಮಾಡಿಲ್ಲ. ನನ್ನ ಸರ್ವೀಸಿನಲ್ಲಿ ಯಾವುದೇ ರಿಮಾರ್ಕ್ ಇಲ್ಲ, ಯಾವ ಪ್ರಯಾಣಿಕರ ಮೇಲೂ ಚಿಲ್ಲರೆ ಋಣವಿಲ್ಲ...’‌

‘ಮಾತೂ ಆಡಬಾರದೆ?’ ಶಂಕ್ರಿ ಕೇಳೇಬಿಟ್ಟ.

‘ಉಸಿರು ಹೊರಬಾರದಂತೆ ಮಾಸ್ಕ್ ಮರೆ ಯಲ್ಲಿ ಮಾತನಾಡಬೇಕು. ಅಷ್ಟೇ ಅಲ್ಲ, ಬಸ್ಸಿನಲ್ಲಿ ಯಾರೂ ಕೆಮ್ಮಂಗಿಲ್ಲ, ಸೀನುವಂತಿಲ್ಲ, ಕ್ಯಾಕರಿಸಿ ಉಗಿದರೆ ಬಸ್ಸಿನಿಂದ ಇಳಿಸಿ, ಆಂಬುಲೆನ್ಸ್ ಹತ್ತಿಸಿಬಿಡ್ತೀನಿ...’ ಕಂಡಕ್ಟರ್ ಖಡಕ್ ಎಚ್ಚರಿಕೆ ನೀಡಿದರು. ಪ್ರಯಾಣಿಕರು ಗಪ್‍ಚುಪ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು