ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮರಿ: ಅಂತರಗೆಲಾಕ್ಸಿ ಷಡ್ಯಂತ್ರ

Last Updated 21 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಹಿರಿಯ ಪೊಲೀಸ್ ಅಧಿಕಾರಿಗಳ ಆಫೀಸಿನಲ್ಲಿ ಎಲೆಕ್ಟ್ರಿಕ್ ಶಾರ್ಟ್ ಸರ್ಕಿಟ್‌ ಆಗಿ ಕಂಪ್ಯೂಟರ್, ಪ್ರಿಂಟರ್, ಎ.ಸಿಗಳು ಹೀಗೆ ಲಕ್ಷಾಂತರ ಬೆಲೆಯ ಸಲಕರಣೆಗಳು ಸುಟ್ಟು, ಕೆಟ್ಟುಹೋದವು. ‘ಸರಿ ಮಾಡಿಸ್ರೀ’ ಎಂದು ಕಿರಿಯ ಅಧಿಕಾರಿಗೆ ಸಾಹೇಬರು ಆಜ್ಞೆ ಮಾಡಿದರು.

ಆತ ಆನ್‌ಲೈನಿನಲ್ಲಿ ಹುಡುಕಿ, ಎಲೆಕ್ಟ್ರಿಷಿಯನ್‌ಗಳ ಫೋನ್ ನಂಬರ್ ಬರೆದುಕೊಂಡರು. ಮೊದಲು ಒಬ್ಬರಿಗೆ ಫೋನ್ ಮಾಡಿದರು. ವಿವರ ಕೇಳಿದ ಎಲೆಕ್ಟ್ರಿಷಿಯನ್ ‘ಆಯ್ತು ಸಾ, ಪೆಟ್ರೋಲು ಸೆಂಚುರಿ ಬಾರಿಸ್ತಾ ಐತೆ, ಅದ್ಕೇ ಟೂಲ್‌ಕಿಟ್ ತಗಂಡು ನಡ್ಕಂಡೇ ಬರ್ತೀನಿ’ ಎಂದ. ಟೂಲ್‌ಕಿಟ್ ಹೆಸರು ಕೇಳಿ ದಿಗಿಲುಗೊಂಡ ಕಿರಿಯ ಅಧಿಕಾರಿ ಫೋನಿಟ್ಟು ಬೆವರೊರೆಸಿಕೊಂಡರು.

ನಾಲ್ಕಾರು ಎಲೆಕ್ಟ್ರಿಷಿಯನ್‌ಗಳಿಗೆ ಫೋನ್ ಮಾಡಿದರು. ಎಲ್ಲರೂ ‘ಟೂಲ್‌ಕಿಟ್ ತಗಂಡು ಬರ್ತೀನಿ’ ಎನ್ನುವವರೇ. ಎಂದೂ ಇಲ್ಲದೆ ಹೀಗೆ ಶಾರ್ಟ್ ಸರ್ಕಿಟ್‌ ಆಗಿದ್ದು, ಸಲಕರಣೆಗಳೆಲ್ಲ ಹಾಳಾಗಿದ್ದು ಮತ್ತು ಎಲೆಕ್ಟ್ರಿಷಿಯನ್‌ಗಳು ಟೂಲ್‌ಕಿಟ್ ಹಿಡಿದು ಬರುವುದು... ಓಹೋ... ಇದೊಂದು ಅಂತರರಾಷ್ಟ್ರೀಯ ಷಡ್ಯಂತ್ರ ಇರಬಹುದೆಂದು ಕಿರಿಯ ಅಧಿಕಾರಿ ಸಾಹೇಬರ ಬಳಿ ಅನುಮಾನ ತೋಡಿಕೊಂಡರು. ಸಾಹೇಬರೂ ಹೌಹಾರಿಬಿಟ್ಟರು.

ಇಬ್ಬರೂ ಸೇರಿ ವಿಚಾರಿಸಲೆಂದು ಮೊಬೈಲಿನ ಸ್ಪೀಕರ್ ಆನ್ ಮಾಡಿ, ಮೊದಲಿನ ಎಲೆಕ್ಟ್ರಿಷಿಯನ್‌ಗೆ ಕರೆ ಮಾಡಿದರು. ‘ಏನೇನಿರುತ್ತಯ್ಯಾ ನಿನ್ನ ಟೂಲ್‌ಕಿಟ್ಟಿನಲ್ಲಿ?’ ಕಿರಿಯ ಅಧಿಕಾರಿ ಗತ್ತಿನಿಂದ ಕೇಳಿದರು.

‘ಸ್ಕ್ರೂ ಡ್ರೈವರ‍್ರು, ಕಟಿಂಗ್ ಪ್ಲೈಯರ‍್ರು ಹಿಂಗೇ ಎಲ್ಲಾ ಟೂಲ್‌ಗಳಿರ್ತವೆ ಸಾ. ವೈರಿಂಗು ಚೆಕ್ ಮಾಡ್ಬೇಕು... ವೈರಿಂಗು ಹೆಂಗಿರುತ್ತೆ ಅಂದ್ರೆ... ಅದೇ ಸಾ, ನಮ್ಮ ಮಿದುಳಿನಾಗೆ ನರಮಂಡಲ ಇದ್ದಂಗೆ ಇರ್ತದೆ. ನರಗಳು ಒಂದಕ್ಕೊಂದು ಸಿಕ್ಕಾಕಿಕೊಂಡು ಗಂಟಾದಂಗೆ ಇರ್ತವೆ. ಅವನ್ನ ಚೆಕ್ ಮಾಡಿ, ಸರಿಮಾಡಬೇಕು’ ಎಲೆಕ್ಟ್ರಿಷಿಯನ್ ಇವರಿಗೆ ಸರಳವಾಗಿ ವಿವರಿಸಲು ಪ್ರಯತ್ನಿಸಿದ.

ಮಿದುಳಿಗೇ ಕೈಹಾಕುವ ಈ ಟೂಲ್‌ಕಿಟ್‌ ಅಂತರರಾಷ್ಟ್ರೀಯ ಮಾತ್ರವಲ್ಲ, ಅಂತರಗೆಲಾಕ್ಸಿ ಷಡ್ಯಂತ್ರವೇ ಸರಿ ಎಂದು ಅಧಿಕಾರಿಗಳು ಗಾಬರಿಗೊಂಡು, ಎದ್ದೂಬಿದ್ದೂ ಮೇಲಿನವರಿಗೆ ವರದಿ ಮಾಡಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT