ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಾಲಿಗೆ ನಿಗ್ರಹ

Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

‘ಎಲೆಕ್ಷನ್ ಟೈಮ್‌ನಲ್ಲಿ ರಾಜಕೀಯ ಪಕ್ಷಗಳು ಹೆಲ್ತ್ ಕ್ಯಾಂಪ್ ನಡೆಸಿ ತಮ್ಮ ನಾಯಕರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ಕೊಡಬೇಕು ಕಣ್ರೀ...’ ಎಂದಳು ಸುಮಿ.

‘ಹೌದು, ಪಾದಯಾತ್ರೆ, ಜಾಥಾ, ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡಿ, ಘೋಷಣೆ ಕೂಗಿ ನಾಯಕರು ದಣಿಯುತ್ತಾರೆ. ಕಾರ್ಯ ಒತ್ತಡದಲ್ಲಿ ಏರುಪೇರಾಗುವ ಅವರ ಬಿ.ಪಿ, ಶುಗರ್, ಖದರ್, ಬೆವರನ್ನು ತಪಾಸಣೆ ಮಾಡಿ ತಹಬಂದಿಗೆ ತರಬೇಕಾಗುತ್ತದೆ’ ಎಂದ ಶಂಕ್ರಿ.

‘ಸಾಲದಕ್ಕೆ, ಮಾಧ್ಯಮದವರು ತಲೆಬಿಸಿಯಾಗುವ ಪ್ರಶ್ನೆ ಕೇಳಿ ಕೆಣಕಿ ನಾಯಕರನ್ನು ಕೆರಳಿಸುತ್ತಾರೆ, ಅಲ್ಲದೆ, ಹೈಕಮಾಂಡ್ ನೀಡುವ ಟಾರ್ಗೆಟ್, ಕೋ-ಕಮಾಂಡ್‍ಗಳು ಕೊಡುವ ಟಾರ್ಚರ್ ನಾಯಕರನ್ನು ಕಾಡಿ ಕಂಗೆಡಿಸುತ್ತವೆ’.

‘ರಾಜ್ಯ ಪ್ರವಾಸ ಕಾಲದಲ್ಲಿ ಕಾವೇರಿ, ತುಂಗಭದ್ರೆ, ಕೃಷ್ಣೆ, ಕಪಿಲೆ, ನರ್ಮದೆ, ನೇತ್ರಾವತಿ ನದಿಗಳ ನೀರಿನ ಮಿನರಲ್ ವಾಟರ್, ಒಗ್ಗದ ಊಟ ಸೇವನೆ, ಹೊಸ ಜಾಗದ ವಾಸ್ತವ್ಯ ಇವೆಲ್ಲವೂ ನಾಯಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು’.

‘ಅಷ್ಟೆ ಅಲ್ಲಾರೀ, ಶತ್ರುಗಳನ್ನು ಗೆಲ್ಲುವ ಗುರಿ, ಹಿತಶತ್ರುಗಳು ಗಿಲ್ಲುವ ಉರಿ ತಾಳದೆ ತಾಳ್ಮೆ ಕೆಟ್ಟು ನಾಯಕರ ತಲೆಕೆಡಬಹುದು. ನಾಯಕ ತಾನು ಕೆಡುವುದಲ್ಲದೆ ಪಕ್ಷವನ್ನೂ ಕೆಡಿಸುತ್ತಾನೆ ಎಂಬ ಆಪಾದನೆಯೂ ಬರಬಹುದು’.

‘ತಮ್ಮ ನಾಯಕರ ಸೇವೆ ಕೊಂಡಾಡುವ, ವಿಪಕ್ಷದವರ ಲೋಪಗಳನ್ನು ಚೆಂಡಾಡುವ ಉದ್ವೇಗದ ಭಾಷಣ ಮಾಡುವಾಗ ನಾಯಕರ ನಾಲಿಗೆ-ಮೆದುಳು ನಡುವಿನ ಸಂಪರ್ಕ ಕಡಿತಗೊಳ್ಳಬಹುದು. ಪ್ರತಿಪಕ್ಷದವರನ್ನು ಬೈಯ್ಯುವ ಭರದಲ್ಲಿ ಮೆದುಳು ತಾನೊಂದನ್ನು ಬೈಯ್ಯಲು ಹೇಳಿದರೆ, ನಾಲಿಗೆ ಇನ್ನೊಂದನ್ನು ಬೈಯ್ದು ಆಭಾಸ ಮಾಡಬಹುದು’.

‘ಪರಿಸ್ಥಿತಿ ಕುತ್ತಿಗೆಗೆ ಬಂದಾಗ, ಉದ್ದೇಶ ಪೂರ್ವಕವಾಗಿ ಬೈದಿಲ್ಲ ಎಂದು ತಿಪ್ಪೆ ಸಾರಿಸ ಬೇಕಾಗುತ್ತದೆ. ಇಂತಹ ಅನಾರೋಗ್ಯಗಳ ನಿವಾರಣೆಗೆ ನಾಯಕರಿಗೆ ನಾಲಿಗೆ ನಿಗ್ರಹ ಚಿಕಿತ್ಸೆ ನೀಡಿ ಪಕ್ಷದ ಆರೋಗ್ಯ ಕಾಪಾಡಿಕೊಳ್ಳಬೇಕು ಅಲ್ವೇನ್ರೀ?’ ಎಂದಳು ಸುಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT