ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ನಾಟು-ನೋಟು-ವೋಟು!

Last Updated 15 ಮಾರ್ಚ್ 2023, 21:40 IST
ಅಕ್ಷರ ಗಾತ್ರ

'ಲೇಯ್, ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾರೆ. ಆದ್ರೆ ನಮ್ ಆರ್‌ಸಿಬಿ ಹೆಣ್ಮಕ್ಕಳ ವಿಚಾರದಲ್ಲಿ ಇದು ತುಂಬಾ ರಾಂಗು ಗುರು. ಈ ತರ ಸಾಲು ಸಾಲು ಸೋಲಕ್ಕೆ ಏನು ಕಾರಣ ಅಂತ ಗೊತ್ತಾಗ್ಲಿಲ್ಲ’ ಎಂದು ತಲೆ ಕೆರೆದುಕೊಂಡ ಮಾಲಿಂಗ.

‘ಅದಕ್ಕೆ ಒಂದೇ ಒಂದು ಕಾರಣ ಕಣ್ರಲೇ. ನಮ್ ಹುಡುಗ್ರು ಹಿಂದೆ ಆಡ್ಬೇಕಾದ್ರೆ ಚಿಯರ್ ಗರ್ಲ್ಸ್ ಇರ್ತಿದ್ರು. ಅದೇ ಥರ ಚಿಯರ್ ಬಾಯ್ಸ್ ‘ನಾಟು ನಾಟು’ ಹಾಡು ಹಾಕ್ಕಂಡು ಕುಣಿದಿದ್ರೆ ನಮ್ ಆರ್‌ಸಿಬಿ ಹುಡುಗೀರು ಔಟ್ ಔಟು ಅನ್ನದೇ ಬ್ಯಾಟು ಬೀಸಿ ಸಿಕ್ಸರ್ ಮೇಲೆ ಸಿಕ್ಸರ್ ಚಚ್ಚುತ್ತಿದ್ರು’ ಅಂದ ಗುದ್ಲಿಂಗ.

‘ಅಯ್ಯೋ ಈಗ ಕ್ರಿಕೆಟ್ ಫೀಲ್ಡಲ್ಲಿ ನಾಟು ನಾಟು ಹಾಕ್ಕಂಡು ಕುಣಿಯೋಕೆ ಯಾರಿಗೆ ಪುರಸತ್ತಿದೆ? ಈಗ ರಾಜಕೀಯದೋರಿಗೆ ಟಿಕೆಟ್ ಸಿಗೋದೇ ಕಗ್ಗಂಟು. ನಾಟು, ತುಂಬಾ ನಾಟು, ತಗಳಿ ತಗಳಿ ನೋಟು ನೋಟು, ಹಾಕಿ ಹಾಕಿ ವೋಟು ಅಂತ ಗಂಗ್ನಮ್ ಡ್ಯಾನ್ಸ್ ಮಾಡಕ್ ಶುರು ಹಚ್ಕಂಡಿದಾರೆ’.

‘ಇದು ಗಂಗ್ನಮ್ ಡ್ಯಾನ್ಸ್ ಅಲ್ಲ, ಜನಗಳಿಗೆ ನಾಮ ತಿಕ್ಕೋ ಡ್ಯಾನ್ಸ್. ಪಕ್ಷದಿಂದ ಪಕ್ಷಕ್ಕೆ ಎತ್ತು ಹಾರಿದಂತೆ, ಎಲೆಕ್ಷನ್ ಜಾತ್ರೇಲಿ ಹಳೇ ಪುಂಗಿ ಊದಿದಂತೆ, ಉಟ್ಟ ಪಂಚೆ ಎತ್ತಿಕಟ್ಟಿ ಹಳೇ ವರಸೆ ತೆಗೆದಂತೆ, ಪಡ್ಡೆ ಗೆಡ್ಡೆ ಕಟ್ಟಿಕೊಂಡು ಹುಳಿ ಹೆಂಡಕೆ ಸೋಡಾ ನೀರು ಬೆರೆಸಿದಂತೆ, ನಮ್ಮಾಟ ನೋಡು, ಕಳ್ಳಾಟ ನೋಡು, ಭಂಡಾಟ ನೋಡು, ಮತದಾರರಿಗೆ ಅರೆದ ಮೆಣಸ ಘಾಟು ನೋಡು, ಜೇಬು ಬಿಚ್ಚಿ ಕೊಡುತಿಹರು ಕೈ ತುಂಬ ನೋಟು... ನಮಗೇ ಹಾಕಿ ವೋಟು... ನಾಟಿ ಕೋಳಿ ನಾಟು, ತಗೊ ತಗೋ ಎರಡು ಸೌಟು, ಏಟು ಎದಿರೇಟು, ಎಲ್ಲಾ ಪೋಟು, ಎಲೆಕ್ಸನ್ ಆದ ಮೇಲೆ ಮತ್ತೆ ಜೂಟು ಜೂಟು...’ ಹಾಡಿದ ಕಲ್ಲೇಶಿ.

‘ಸಕತ್ ಕಣ್ಲಾ, ಇದನ್ನ ಕಳಿಸಿಬಿಟ್ಟಿದ್ರೆ ರಾಜಮೌಳಿ ಹಾಡಿಗೆ ಬರೋ ಆಸ್ಕರ್ ಇದಕ್ಕೇ ಬಂದ್‌ಬಿಡ್ತಿತ್ತು’.

‘ಈ ರಾಜಕೀಯದೋರಿಗೆ ನೋ ಆಸ್ಕರ್, ನೋ ಟೆಲ್ಲರ್, ಅಂದ್ರೆ ಹೇಳೋರು ಕೇಳೋರಿಲ್ಲ, ಅವರಿಗೆ ಬೇಕಾಗಿರೋದು ಆಸ್ಕರ್ ಅಲ್ಲ, ಬರೀ ಪವರ್ ಅಷ್ಟೇ’ ಎಂದ ಪರ್ಮೇಶಿ.

‘ನಾಟು ನಾಟು, ನೋಟು ನೋಟು, ವೋಟು ವೋಟು’ ಎಂದು ಎಲ್ಲಾ ಕೋರಸ್ ಕೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT