ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೂಲಿಗಾಗಿ ಕಾಲು

Last Updated 3 ಆಗಸ್ಟ್ 2020, 19:51 IST
ಅಕ್ಷರ ಗಾತ್ರ

‘ನೋಡಿ ಸಾ, ಬಿಜೆಪೀಲಿ ಎಲ್ಲಾ ಸಂತೋಸವಾಗಿ ಯಡುರಪ್ಪಾರ ಸಣ್ಣೈದನ್ನ ಉಪದ್ರಾದ್ಯಕ್ಸ ಮಾಡ್ಯವುರಂತೆ!’ ಅಂದೆ.

‘ಬಿಜೇಪಿಯೋರು ಅವುರ ಮನೆ ಬಿಕ್ಕಟ್ಟು ಪರಿಹಾರಕ್ಕೆ ಕಿಕ್ಕಡ್ ದಿ ಬಿಕ್ಕಟ್ ಮಾಡಿಕ್ಯಂಡವರೆ ಬುಡು. ನಮ್ಮ ಸಹಕಾರ ಸಚಿವರು ಹೇಳವುರಲ್ಲೋ ‘ವಿರೋಧಿಗಳನ್ನ ಬಲಿ ಹಾಕಕೆ ಸಮರ್ಥರ ಕೈಗೆ ಕತ್ತಿ ಕೊಟ್ಟು ಪಕ್ಸದ ಕೂಲಿಗಿಳಿಸೀವಿ’ ಅಂತ!’

‘ಮಾಡ್ಲಿ ಸಾ. ಸರ್ಕಾರ ಕಟ್ಟಿದೋರಿಗೆ ಈಗ ಉದ್ಯೋಗ ಖಾತರಿ ಯೋಜನೆಯಲ್ಲಿ ಜಾಬ್ ಕಾರ್ಡ್ ಸಿಕ್ಕ್ಯದೆ. ಆದ್ರೆ ಪಕ್ಸದ ಕೂಲಿ ಮಾಡದು ಬುಟ್ಟು ಯಾರು ಯಾರ ಕಾಲಿಗೆ ಬಿದ್ದಿದ್ದು ಅಂತ ಕಾಲೆಳಕಕೂತವ್ರಲ್ಲಾ?’

‘ಇದು ಕೂಲಿಗಾಗಿ ಕಾಲು ಕಾರ್ಯಕ್ರಮದ ಜಾಬ್ ಕಾರ್ಡ್ ಕನೋ. ಮಾರನಗರದ ದಾಯಾದಿಗಳ ಕಾಲುಕೂಟದಲ್ಲಿ ಯಾರು ಯಾರ ಕಾಲು ಹಿಡದು ಕೆಲಸ ಮಾಡಿಸಿಗ್ಯತಾವ್ರೆ, ಯಾರು ಯಾರ ಕಾಲಿಂಗನ ಮಾಡ್ಕತಾವ್ರೆ ಅನ್ನದೇ ಇಂಪಾಲ್ಟೆಂಟು ಕಾಲೋಪಾಸಕರಿಗೆ!’

‘ಹಂಗಾದ್ರೆ ಸಾ, ಕಾಲು-ಬಾಯಿ ರೋಗ ಅಂದ್ರೆ ಇದೆಯೋ?’ ಅಂತಂದೆ. ‘ಹ್ಞೂಂಕನ ಮಗಾ, ಕ್ಯಾಮೆ ಕಮ್ಮಿಯಾಗಿ ಜಾಸ್ತಿ ಕಾಲಾಡಕೆ ಸುರುವಾದಾಗ ಬುದ್ದಿ ಕಮ್ಮಿಯಾಗಿ ಬಾಯಿ ಜೋರಾಯ್ತದೆ’ ಅಂದ್ರು. ‘ಸಾ, ಬುದ್ದಿ ಯಾಕೆ ಕಮ್ಮಿಯಾಯ್ತದೆ?’ ಅಂದೆ.

‌‘ಬ್ರಮ್ಮ ಮನುಸ್ರುನ್ನ ತಯಾರು ಮಾಡಿದ ಮ್ಯಾಲೆ ಒಳಕ್ಕೆ ಬುದ್ದಿ ಮಡಗಿ ತಲೆ ಮ್ಯಾಲೆ ಕಯ್ಯಿಟ್ರೆ ಮೆದುಳು ಚಾಲೂ ಆಯ್ತಿತ್ತು. ಈಗ ಬ್ರಮ್ಮ ದೇವರು ಲಕ್ಸಗಟ್ಟಲೆ ತಲೆ ಮ್ಯಾಲೆ ಕೈ ಮಡಗನಾರದೇ ಒಟ್ಟು ತೀರ್ಥ ಚುಮುಕಿಸಿದಾಗ ಯಾರ ತಲೆ ಮ್ಯಾಲೆ ಅದು ಬೀಳ್ತದೋ ಅವರು ದೇಶಕ್ಕೆ ಆಸ್ತಿಯಾಯ್ತರೆ! ಜಲ ಬೀಳದೇ ಹೋದ ತಲೆಗೋಳ ಮೆದುಳು ಚಾಲೂ ಆಗದೇ ದೇಶಕ್ಕೆ ಜಾಸ್ತಿಯಾಯ್ತರೆ’.

‘ಮೆದುಳಿಲ್ಲದೋರು ಯಾರು ಸಾ?’ ಅಂದೆ.

‘ನನ್ನ ಬಾಯಲ್ಲಿ ಅಪಸಬ್ದ ಕಡಸಬ್ಯಾಡ ಕಲಾ, ಮನಿಗೋಗಿ ಅಯೋದ್ಯೆ ರಾಮನ ಪೂಜೆ ನೋಡು’ ಅಂದ ತುರೇಮಣೆ ‘ಕಾಲ್ ಕಾಲ್ ಎಲ್ನೋಡಿ ಕಾಲ್, ಸೊಂಟಕ್ ಕತ್ತಿ ಕಟ್ಟಿಕೊಂಡು, ಕಾಲಿಗ್‌ ಗೆಜ್ಜೆ ಹಾಕಿಕೊಂಡು, ಲೆಗ್ಸಿಟ್ನಲ್ಲಿ ಜಾರಿಕೊಳ್ತಾರೋ’ ಅಂತ ಹಾಡಿಕ್ಯಂಡು ಹೊಂಟೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT