ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ನೋಟ್ ಕೋಚಿಂಗ್!

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

‘ನಮ್ ಧೂಪದ ಮಾದೇವ್ರು ತಮ್ ರಾಜಕೀಯ ಎದುರಾಳಿ ದೊಡ್ ಚುನಾವಣೆನಾಗ್ ಗೆದ್‌ಬುಟ್ರೆ ರಾಜೀನಾಮೆ ಕೊಟ್‌ಬುಡ್ತೀನಿ ಅಂತ ಸವಾಲ್ ಹಾಕಿದ್ರಂತೆ. ಕೊಡ್ಲೇ ಇಲ್ಲ ಅಲ್ವಾ?’ ಹರಟೆಕಟ್ಟೇಲಿ ಗುದ್ಲಿಂಗ ಮಾತು ತೆಗೆದ.

‘ನಾನ್ ರಾಜೀನಾಮೆ ಕೊಡಾಕಿಲ್ಲ ಅಂತ ಯೋಳವ್ರಲ್ಲ, ನೀನ್ಯಾಕ್ ಮತ್ ಅದ್ರು ಸಿಬ್ರು ಎಬ್ತಿದೀಯ?’ ಕೇಳಿದ ಮಾಲಿಂಗ.

‘ಅವರು ಯೋಳಿರಾದು ನ್ಯಾಯವಾಗೇ ಐತೆ. ಸುಮ್ಕೆ ಪುಕ್ಸಟ್ಟೆ ಪ್ರಚಾರಕ್ ಅಂಗಂದಿರ್ತಾರೆ. ರಾಜಕೀಯ ಅಂದ್ಮೇಲೆ ಎಲ್ಲಾ ಸತ್ಯಹರಿಶ್ಚಂದ್ರನಂಗೆ, ರಾಮಚಂದ್ರನಂಗೆ ಇರ್ಬೇಕು ಅಂದ್ರೆ ಆಯ್ತದಾ?’ ವಕಾಲತ್ತು ವಹಿಸಿದ ಕಲ್ಲೇಶಿ.

‘ಹ್ಞೂಂ ಕಣ್ಲಾ, ಈಗ ರಾಜಕೀಯ ಸನ್ಯಾಸ ತಗಾತೀನಿ ಅಂತ ಯೋಳ್ದೋರೆಲ್ಲ ಆಮ್ಯಾಕೆ ನಂಗ್ ಎಂಎಲ್‍ಎ ಸೀಟಿರ್‍ಲಿ, ಎಂಡ್ರುಗೆ ಎಂಪಿ ಸೀಟಿರ್‍ಲಿ, ಮಗಂಗೆ ಮಂಡಳಿ ಸೀಟು ಸಿಗ್ಲಿ ಅಂತ ಕಾವ್ ಕಾವ್ ಅಂದ್ಕಂಡು ಹೋರಾಡಕಿಲ್ವಾ? ಇವರನ್ನ ರಾಜೀನಾಮೆ ಕೊಡಿ ಅಂತ ಯಾಕ್ ಜುಲ್ಮೆ ಮಾಡ್ಬೇಕು ಅಂತಿವ್ನಿ’.

‘ಅಲ್ಲ ಕಣಲೇ, ಜನ ಹೊಸುಬ್ರು ಬರ್‍ಲಿ, ಹಳೇ ಜಿಡ್ಡು ತೊಳೀಲಿ ಅಂತ ತಾನೇ ವೋಟು ಹಾಕಿ ಗೆಲ್ಸೋದು’.

‘ಅದು ಜನಗಳ ತಪ್ಪು ಕಣ್ಲಾ, ಮಾದೇವ್ರೇ ಕೇಳವ್ರಲ್ಲ, ನೀವ್ಯಾಕೆ ಬಟ್ಟೆ ಹರ್ಕತೀರಿ, ನಾವು ರಾಜಕೀಯದೋರೆಲ್ಲಾ ಒಂದೇ ಅಂತ’.

‘ಅಂಗಾರೆ ಇನ್ ಏನೂ ಕೇಳೋ ಅಂಗೇ ಇಲ್ಲ ಬುಡು. ನಾವೆಲ್ಲಾ ಒಂದೇ ಅಂದ್‌ಮ್ಯಾಗೆ ಇನ್ ಕೇಳೋದೇನೈತೆ? ಹಿಂದಿನೋರ್ ಮಾಡಿದ್ದನ್ನೇ ಇವ್ರೂ ಮಾಡ್ತಾರೆ, ಅದೇ ನಾತ, ಅದೇ ಅನುಪಾತ. ಕಾವಲಿ ಬೇರೆ, ಹಿಟ್ಟು ಒಂದೇ ಅನ್ನೋ ಅಂಗಾಯ್ತು, ಯಾರ್ ಬುಟ್ರೂ ಹುಳಿದ್ವಾಸೆನೇ’.

‘ಅಂಗಾರೆ ಮಾದೇವ್ರು ಒಂದು ಇಸ್ಕೂಲ್ ನಡುಸ್ಕಂಡು ಹೈಕ್ಳುಗೆ ನೀಟ್ ನೋಟು ಬರು
ಸ್ತಾವ್ರಲ್ಲ, ಅವರೆಲ್ಲಾ ಇದ್ನೇ ಕಲುತ್ಕೊಳೋದಾ?’

‘ಎಲ್ಲಾ ಮಾಡಾದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ವೇನ್ಲಾ? ನೀಟು ಕೋಚಿಂಗ್ ಜೊತೆಗೇ ನೋಟ್ ಕೋಚಿಂಗ್’.

‘ಜನ ದುಡ್ದಿದ್ದ ಗೇಣು ಬಟ್ಟೆನೂ ಹರ್ಕಬೇಕು ಬಿಡು’.

‘ಹರ್ಕಳಕ್ಕೆ ಎಲ್ಲಿರುತ್ತೆ ಬಟ್ಟೆ, ಇವರೇ ಜನರನ್ನ ಬಟ್ಟೆ ಬಿಚ್ಚಿ ನಿಲ್ಸಿರ್ತಾರಲ್ಲ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT