ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ರೆಸಾರ್ಟ್ ರೆಬೆಲ್ಸ್

Published 13 ಆಗಸ್ಟ್ 2024, 18:31 IST
Last Updated 13 ಆಗಸ್ಟ್ 2024, 18:31 IST
ಅಕ್ಷರ ಗಾತ್ರ

ರೆಸಾರ್ಟ್‌ನಲ್ಲಿ ರೆಬೆಲ್ ನಾಯಕರು ಸಭೆ ಸೇರಿದ್ದರು. ನ್ಯೂಸ್ ಚಾನೆಲ್ ಕ್ಯಾಮೆರಾ, ವರದಿಗಾರರ ಕಣ್ಣು ರೆಸಾರ್ಟ್ ಸುತ್ತುವರಿದಿದ್ದವು.

ಸಭೆ ಮುಗಿಸಿ ನಾಯಕರು ಹೊರಬಂದರು. ‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ಭಿನ್ನಮತೀಯರು ರೆಸಾರ್ಟ್‌ನಲ್ಲಿ ಕೂಡುವುದು ಸಾಮಾಜಿಕ ಸಮಸ್ಯೆನಾ ಸಾರ್?’ ವರದಿಗಾರರ ಪ್ರಶ್ನೆ. ‘ನಾವು ಪಕ್ಷನಿಷ್ಠರು, ಭಿನ್ನಮತೀಯರಲ್ಲ...’ ನಾಯಕರೊಬ್ಬರು ರೇಗಿದರು.

‘ಹೌದು ಭಿನ್ನಮತೀಯರಲ್ಲ, ತಿನ್ನೊಮತೀಯರು, ಊಟ ಮಾಡಲು ಸೇರಿದ್ದೆವು... ಹಹ್ಹಹ್ಹಾ’ ಮತ್ತೊಬ್ಬರು ತೇಗಿದರು.

‘ಊಟಗೋಷ್ಠಿಗೆ ರೆಸಾರ್ಟೇ ಯಾಕೆ?’

‘ಹೊಂಗೆ ಮರದ ಕೆಳಗೆ ಸಭೆ ಮಾಡಲಾಗುತ್ತೇನ್ರಿ?’ ಸಿಟ್ಟಾದ ಇನ್ನೊಬ್ಬರು, ‘ಸಭೆ ನಡೆಸಲು ಊಟ, ಕುರ್ಚಿ ವ್ಯವಸ್ಥೆ ಇರಬೇಕಲ್ವಾ?’ ಅಂದರು.

‘ಸಭೆಯ ಮೆನು ಏನೇನಿತ್ತು ಸಾರ್?’

‘ರುಚಿಕರ ಊಟ, ಹಿತಕರ ಚರ್ಚೆ ಇತ್ತು’.

‘ದಕ್ಷಿಣ ಪಾದಯಾತ್ರೆಗೆ ಪರ್ಯಾಯವಾದ ನಿಮ್ಮ ಉತ್ತರ ಪಾದಯಾತ್ರೆ ಎಲ್ಲಿಗೆ ಬಂತು?’

‘ರಿಹರ್ಸಲ್ ಮಾಡ್ತಿದ್ದೀವಿ. ನಮ್ಮಲ್ಲಿ ಕೆಲವರು ದಿನಕ್ಕೆ ಏಳೆಂಟು ಕಿ.ಮೀ. ನಡೆಯುತ್ತಾ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ’.

‘ಅವರು ದಕ್ಷಿಣ ದಿಕ್ಕಿನಲ್ಲಿ, ನೀವು ಉತ್ತರ ದಿಕ್ಕಿನಲ್ಲಿ ನಡೆದರೆ ಪಕ್ಷದ ಶಿಸ್ತು ದಿಕ್ಕು ತಪ್ಪು
ವುದಿಲ್ಲವೇ?’

‘ಇಲ್ಲ, ದಿಕ್ಕು ತಪ್ಪಿರುವ ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಮ್ಮ ಪಾದಯಾತ್ರೆ. ಸರ್ಕಾರದ ಹಗರಣಗಳನ್ನು ಖಂಡಿಸಿ, ಪ್ರವಾಹ, ಡ್ಯಾಂ ಡ್ಯಾಮೇಜ್ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ನಡಿಗೆ ಹೋರಾಟ ಮಾಡ್ತೀವಿ’.

‘ನಿಮ್ಮ ಡ್ಯಾಮೇಜ್ ರಿಪೇರಿ ಮಾಡಿಕೊಳ್ಳಲು ಪಾದಯಾತ್ರೆಯ ದಾರಿ ಹಿಡಿದಿದ್ದೀರಿ ಅಂತ ನಿಮ್ಮವರೇ ಹೇಳ್ತಿದ್ದಾರೆ’.

‘ಅವರಿಗೆ ಕೇರ್ ಮಾಡಲ್ಲ, ಪಾದಯಾತ್ರೆ ಮಾಡ್ತೇವೆ. ಹೈಕಮಾಂಡ್ ತೋರಿಸುವ ದಾರಿಯಲ್ಲಿ ಸಾಗುತ್ತೇವೆ’.

‘ಅದು ಪಾದಯಾತ್ರೆಗೆ ದಾರಿ ತೋರಿಸುತ್ತಾ?’

‘ತೋರಿಸುವುದು ಬೇಡ, ಪಾದಯಾತ್ರೆಗೆ ರಹದಾರಿ ನೀಡಿಬಿಟ್ಟರೆ ಸಾಕು...’ ಎಂದು ಹೇಳಿ ನಾಯಕರು ಕಾರು ಹತ್ತಿ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT