ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಲಿಕ್ವಿಡ್ ಆಕ್ಸಿಜನ್!

Last Updated 29 ಏಪ್ರಿಲ್ 2021, 19:38 IST
ಅಕ್ಷರ ಗಾತ್ರ

ಬೆಳಬೆಳಿಗ್ಗೆ ಕೈಚೀಲ ಹಿಡ್ಕಂಡು ಪೇಟೆ ಬೀದೀಲಿ ಹೊರಟಿದ್ದ ತೆಪರೇಸಿನ ಕಂಡು ದುಬ್ಬೀರ ಚಪ್ಪಾಳೆ ತಟ್ಟಿ ಕರೆದ, ‘ಲೇ ತೆಪರ, ಏನೋ ಇದು ಆಶ್ಚರ್ಯ? ಇಷ್ಟು ಬೇಗ ಎದ್ದುಬಿಟ್ಟಿದೀಯ? ಕೈಯಲ್ಲಿ ಬ್ಯಾಗು ಬೇರೆ. ಏನ್ ತರೋಕೆ ಹೊರಟಿದೀಯ, ಹಾಲೋ ಆಲ್ಕೋಹಾಲೋ?’ ಎಂದ ನಗುತ್ತ.

‘ಏಯ್, ಹಾಲು, ತರಕಾರಿ ತರಾಕೆ ಹೊಂಟೀದಿನಿ ಕಣಲೆ. ಹತ್ತು ಗಂಟಿ ಒಳಗೆ ಮನಿ ಸೇರ್ಕಾಬೇಕಲ್ಲ...’

‘ತಿಂಡಿ ಆತಾ? ಬಾ ಚಾ ಕುಡಿಯಾಣ’ ದುಬ್ಬೀರ ಕರೆದ.

‘ಬ್ಯಾಡ ಕಣಲೆ, ತಿಂಡಿ ಆತು, ಇವತ್ತು ಬೆಳಿಗ್ಗೇನೇ ಪಮ್ಮಿ ಹತ್ರ ಬೈಸ್ಕಂಡೆ...’ ತೆಪರೇಸಿ ನಗುತ್ತ ಹೇಳಿದ.

‘ಬೈಸ್ಕಂಡೆ ಅಂತೀಯ, ಮತ್ತೆ ನಗ್ತೀಯಲ್ಲೋ?’

‘ಅದೂ ಹಂಗಲ್ಲ... ಪಮ್ಮಿ ಬೆಳಿಗ್ಗೆ ಉಪ್ಪಿಟ್ಟು ಕೊಟ್ಲಾ, ಒಂದು ಸ್ಪೂನು ಬಾಯಿಗೆ ಹಾಕ್ಕಂಡೆ. ರುಚಿನೇ ಇಲ್ಲ? ಓ ಇದು ಕೊರೊನಾ ಲಕ್ಷಣ ಅನ್ಕಂಡು ಗಾಬರಿಯಾಗಿ, ‘ಲೇ ಪಮ್ಮಿ ನಂಗೆ ಕೊರೊನಾ ಬಂದಂಗಿದೆ ಕಣೆ, ರುಚಿನೇ ಗೊತ್ತಾಗ್ತಿಲ್ಲ’ ಅಂದೆ. ಪಮ್ಮಿಗೂ ಗಾಬರಿ. ಅವಳೂ ಒಂಚೂರು ಉಪ್ಪಿಟ್ಟು ಬಾಯಿಗೆ ಹಾಕ್ಕಂಡು ನೋಡಿದ್ಲು. ತಕ್ಷಣ ‘ನಿಮ್ ತಲೆ, ನಾನು ಉಪ್ಪಿಟ್ಟಿಗೆ ಉಪ್ಪೇ ಹಾಕಿಲ್ಲ. ಕೊರೊನಾ ಅಂತೆ ಕೊರೊನಾ...’ ಅಂತ ನನ್ ಮೂತಿಗೆ ತಿವಿದ್ಲು ಕಣಲೆ...’

ದುಬ್ಬೀರನಿಗೆ ನಗು ತಡೆಯಲಾಗಲಿಲ್ಲ, ‘ಥೂ ನಿನ್ನ, ಅಷ್ಟೂ ಗೊತ್ತಾಗಲ್ಲೇನ್ಲೆ? ಹೋಗ್ಲಿ ಎಣ್ಣೆಗೆ ಏನ್ ವ್ಯವಸ್ಥೆ ಮಾಡ್ಕಂಡೆ?’

‘ಥೋ... ಅದೊಂದ್ ಕತೆ. ಮನೆಗೆ ವಿಸ್ಕಿ ತಗಂಡ್ ಹೋದ್ರೆ ಪಮ್ಮಿ ಬೈತಾಳೆ ಅಂತ ವಾಸನೆ ಇಲ್ಲದ ವೋಡ್ಕಾ ತಗಂಡ್ ಹೋದೆ...’

‘ಸರಿ, ಪಮ್ಮಕ್ಕ ಅದೇನು ಅಂತ ಕೇಳಲಿಲ್ವ?’

‘ಕೇಳಿದ್ಲು. ನಾನು ಇದು ಲಿಕ್ವಿಡ್ ಆಕ್ಸಿಜನ್ ಕಣೆ, ಕೊರೊನಾ ಬರಬಾರ್ದು ಅಂದ್ರೆ ಆಗಾಗ ತಗೋತಿರಬೇಕು ಅಂದೆ’.

‘ಹೌದಾ? ಆಮೇಲೆ?’

‘ಅದ್ಕೆ ಪಮ್ಮಿ ಅದನ್ನ ನೀವೊಬ್ರೇ ತಗಂಡ್ರೆ ಹೆಂಗೆ? ನಮಗೂ ಕೊಡಿ, ನಾವೂ ಬದುಕಬಾರ್ದಾ ಅನ್ನೋದಾ?’

ದುಬ್ಬೀರನಿಗೆ ಮತ್ತೂ ನಗು ತಡೆಯಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT