ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಜೋಡೆತ್ತು ಸವಾರಿ

Last Updated 16 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವಿಧಾನಸೌಧಕ್ಕೆ ಜೋಡೆತ್ತುಗಳು ಮೆರವಣಿಗೆ ಹೋಗಿ ಬಂದ ಮೇಲೆ ಸಂಜೆ ಎತ್ತುಗಳೆಲ್ಲ ಸಭೆ ಸೇರಿದ್ದವು. ಮಾಜಿ ಮುಖ್ಯಮಂತ್ರಿ, ಭಾವಿ ಮುಖ್ಯಮಂತ್ರಿ, ಹಾಲಿ ಶಾಸಕರುಗಳನ್ನೆಲ್ಲ ಹೊತ್ತ ಜೋಡೆತ್ತುಗಳಿಗೆ ಅಭಿನಂದನೆಯ ಸುರಿಮಳೆಯೇ ಆಯಿತು. ‘ಅಂತೂ ನೀವೂ ವಿಧಾನಸೌಧದ ಮೆಟ್ಟಿಲು ಹತ್ತಿ ಬಂದ್ರಿ...’ ಮುದಿ ಎತ್ತೊಂದು ವ್ಯಂಗ್ಯವಾಡಿತು.

‘ಯಾಕೆ? ಎಂತೆಂಥೋರೋ ಹತ್ತಿದಾರಂತೆ, ನಾವು ಹತ್ತಬಾರದಾ?’ ಜೋಡೆತ್ತುಗಳಿಗೆ ಸಿಟ್ಟು ಬಂತು. ‘ಅದೇ, ಅದೇ ನಾನು ಹೇಳಿದ್ದು... ಎಂತೆಂಥೋರೋ ಹತ್ತಿರುವ ಅಲ್ಲಿಗೆ ನಮ್ಮಂಥ ಕಾಯಕ ಜೀವಿಗಳು, ಪ್ರಾಮಾಣಿಕರು ಹೋಗಬಾರದಿತ್ತು ಅಂತ...’ ಮುದಿ ಎತ್ತು ಮಾತು ತಿರುಗಿಸಿತು.

‘ಹೋಗ್ಲಿ ಬಿಡ್ರಪ್ಪ, ವಿಧಾನಸೌಧ ಹೆಂಗಿತ್ತು ಅದನ್ನ ಹೇಳ್ರಿ’ ಗಿಡ್ಡ ಎತ್ತಿಗೆ ಕುತೂಹಲ.

‘ಅದಾ? ಅಬಾ ಅಬಾ... ಎಷ್ಟು ದೊಡ್ಡದೈತಿ ಗೊತ್ತಾ? ನಮ್ಮ ಕೊಟ್ಟಿಗೆಯ ನೂರರಷ್ಟು...’

‘ಅಂದ್ರೆ ಒಂದು ಸಾವಿರ ದನ ಕಟ್ಟಬೋದಾ?’

‘ಇನ್ನೂ ಜಾಸ್ತಿ ಕಟ್ಟಬಹುದು. ಮೇವು ತರೋ ಕಷ್ಟನೇ ಇಲ್ಲ, ಎಲ್ಲ ಅಲ್ಲೇ ಸಿಗುತ್ತಂತೆ’.

‘ವಿಧಾನಸೌಧದಲ್ಲಿ ಹೆಗ್ಗಣಗಳ ಕಾಟ ಅಂತಿದ್ರು, ನಿಮಗೇನರೆ ಕಂಡ್ವಾ?’ ಕರಿ ಎತ್ತು ಕೇಳಿತು. ‘ಹೇ... ಹೆಗ್ಗಣಗಳು ಹಗಲು ಹೊತ್ತು ಕಾಣ್ತಾವಾ? ನೀನೊಳ್ಳೆ’ ಜೋಡೆತ್ತುಗಳು ನಕ್ಕವು.

‘ಅಲ್ಲ ಕಣ್ರೊ, ಬೆಂಗ್ಳೂರಲ್ಲಿ ರಸ್ತೆ ಬೆಣ್ಣೆಯಂಗಿದ್ರೂ ಯಾಕೆ ಜೋಲಿ ಹೊಡೀತಿತ್ತು ಬಂಡಿ?’ ಮುದಿ ಎತ್ತು ಪ್ರಶ್ನಿಸಿತು.

‘ಮತ್ತೇನ್ಮಾಡೋದು? ನಮ್ಮದು ಎತ್ತಿನ ಬಂಡಿನೋ ಪಂಚಲಿಂಗೇಶ್ವರ ಬಸ್ಸೋ? ತೀರಾ ಅಷ್ಟಾಕಂದು ಜನ ಹತ್ತಿದ್ರೆ ಹೆಂಗೆ?’

‘ಅದ್ಸರಿ, ಆದ್ರೆ ಬಂಡಿ ಬೀಳಬಾರದಿತ್ತು ಅಲ್ವ?’ ಬಿಳಿ ಎತ್ತು ಕೇಳಿತು.

‘ನಮ್ಮದೇನೂ ತಪ್ಪಿಲ್ಲ, ಮಾಜಿ ಸಾಹೇಬ್ರು ಆ ಕಡೆಗೆ, ಭಾವಿ ಸಾಹೇಬ್ರು ಈ ಕಡೆಗೆ ಹಗ್ಗ ಎಳೆದ್ರೆ ಬಂಡಿ ಬೀಳದೆ ಏನಾಗುತ್ತೆ? ಬಂಡಿ ನಡೆಸೋದು ಅಂದ್ರೆ ಏನು ಸರ್ಕಾರ ನಡೆಸಿದಂಗಾ?’

ಜೋಡೆತ್ತುಗಳ ಮಾತಿಗೆ ಎಲ್ಲ ಎತ್ತುಗಳೂ ಗೊಳ್ಳೆಂದು ನಕ್ಕವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT