ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪಕ್ಕಾ ಲೆಕ್ಕಾಚಾರ!

Last Updated 2 ಮಾರ್ಚ್ 2023, 23:30 IST
ಅಕ್ಷರ ಗಾತ್ರ

‘ರೀ... ಮುಷ್ಕರಾನ ಒಂದೇ ದಿನಕ್ಕೆ ಯಾಕೆ ವಾಪಸ್ ತಗಂಡ್ರು ನಿಮ್ ಸಂಘದೋರು? ಹದಿನೈದು ದಿನಾದ್ರು ಮುಂದುವರಿಸ್ಬೇಕಿತ್ತು’.

ಹೆಂಡತಿ ಪಮ್ಮಿ ಮಾತಿಗೆ ತೆಪರೇಸಿ ಹುಬ್ಬುಕೂಡಿಸಿ ‘ಯಾಕೆ?’ ಅಂದ.

‘ನಾರ್ತ್ ಇಂಡಿಯಾ ಟೂರಾದ್ರು ಹೋಗಬೋದಿತ್ತು ಅಲ್ವ?’

‘ಅರೆ, ಇದೊಳ್ಳೆ ಕತಿ... ನಮ್ ಬೇಡಿಕೆ ಈಡೇರ್ತಲ್ಲ, ಮತ್ಯಾಕೆ ಮುಷ್ಕರ ಮುಂದುವರಿಸ್ಬೇಕು?’

‘ಎಲ್ಲಿ ಈಡೇರಿದೆ? ನೀವು ಕೇಳಿದ್ದೆಷ್ಟು, ಸರ್ಕಾರದೋರು ಕೊಟ್ಟಿದ್ದೆಷ್ಟು? ಅಲ್ಲ, ಸಂಬಳಾನ ಫಾರ್ಟಿ ಪರ್ಸೆಂಟೇ ಹೆಚ್ಚಿಸಿ ಅಂತ ಯಾಕೆ ಕೇಳಿದ್ರಿ? ಈ ಫಾರ್ಟಿ ಪರ್ಸೆಂಟ್ ಅಂದಕೂಡ್ಲೆ ಬೇರೇನೋ ಅರ್ಥ ಬರುತ್ತಪ್ಪ...’

‘ನಿನ್ತೆಲಿ, ಅರ್ಥ ಏನರೆ ಬರ್‍ಲಿ, ನೀವು ಹೆಣ್‌ಮಕ್ಳು ಹಣ್ಣು, ತರಕಾರಿ ವ್ಯಾಪಾರ ಮಾಡುವಾಗ ಚೌಕಾಶಿ ಮಾಡ್ತೀರೋ ಇಲ್ಲೋ? ಮಾರೋನು ಹೇಳಿದ ರೇಟಿಗೆ ಅರ್ಧಕ್ಕರ್ಧ ಕಮ್ಮಿ ಕೇಳ್ತೀರಿ’.

‘ಹೌದು, ಕೇಳ್ತೀವಿ, ಅಷ್ಟಕ್ಕೇ ಕೊಡ್ತಾನೆ ಅವ್ನು’.

‘ನೀವು ಅರ್ಧ ರೇಟಿಗೆ ಕೇಳ್ತೀರಿ ಅಂತ ಅವನಿಗೆ ಗೊತ್ತು, ಅದ್ಕೇ ಅವ ಮೊದ್ಲೇ ಡಬ್ಬಲ್ ರೇಟು ಹೇಳಿರ್ತಾನೆ. ನಮ್ದೂ ಹಂಗೇ... ನಾವು ನಲವತ್ತು ಪರ್ಸೆಂಟ್ ಕೇಳಿದ್ರೆ ಅವರು ಇಪ್ಪತ್ತ
ಕ್ಕಾದ್ರೂ ಬಂದೇ ಬರ್ತಾರೆ ಅಂತ ಗೊತ್ತು. ನಮಗೆ ಬೇಕಿರೋದೇ ಅಷ್ಟು. ಸರಿಯಾತಲ್ಲ, ಹೆಂಗೆ?’ ತೆಪರೇಸಿ ನಕ್ಕ.

‘ನೀವೂ ಭಾರೀ ಅದೀರಿ ಬಿಡ್ರಿ, ಅದಿರ್‍ಲಿ, ಈಗ ಮೂಲವೇತನದ 17 ಪರ್ಸೆಂಟ್ ಮೊತ್ತ ಹೆಚ್ಚಳ ಅಂದ್ರೆ ನಿಮಗೆ ಎಷ್ಟ್ ಜಾಸ್ತಿ ಆಗ್ತತಿ?’

‘ಒಂದ್ ನಾಕೈದು ಸಾವಿರ ಜಾಸ್ತಿ ಆಗಬಹುದು ಅನುಸ್ತತಿ’.

‘ಅಷ್ಟೂ ರೊಕ್ಕ ಮನಿ ಖರ್ಚಿಗೆ ಕೊಡ್ಬೇಕು ನೀವು. ಸಿಲಿಂಡರ್ ರೇಟು ಜಾಸ್ತಿ ಆಗೇತಿ, ಹಾಲು, ತರಕಾರಿ ರೇಟು ಡಬಲ್ ಆಗಿದಾವು’.

‘ಅಷ್ಟೂ ನಿನಗೇ ಕೊಟ್ರೆ ನನ್ ಖರ್ಚಿಗೇನ್ಮಾಡ್ಲಿ? ಬೇಕಿದ್ರೆ ಒಂದೆರಡು ಸಾವಿರ ಕೊಡ್ತೀನಿ ಅಷ್ಟೆ’ ತೆಪರೇಸಿ ಆಕ್ಷೇಪಿಸಿದ.

‘ಆತಾತು, ಅಷ್ಟೇ ಕೊಡ್ರಿ, ಹೆಂಗೋ ಅಡ್ಜಸ್ಟ್ ಮಾಡ್ತೀನಿ’ ಎಂದ ಪಮ್ಮಿ, ನನಗೆ ಬೇಕಿದ್ದೂ ಅಷ್ಟೇ ಎಂದು ಒಳಗೇ ನಕ್ಕಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT