ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪ್ರಶಸ್ತಿ ಪರ್ವ

Last Updated 25 ಅಕ್ಟೋಬರ್ 2021, 19:37 IST
ಅಕ್ಷರ ಗಾತ್ರ

‘ಸಾ, ಈ ಸಾರಿ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ರಾಜಕೀಯ ನಡೆಯಕುಲ್ಲ, ಅಪ್ಲಿಕೇಸನ್ ಹಾಕದಿದ್ದರೂ ಯೋಗ್ಯರಿಗೆ ಪ್ರಶಸ್ತಿ ಸಿಕ್ತದೆ ಅಂದದೆ ಸುನೀಲಣ್ಣ!’ ಅಂತಂದೆ.

‘ಆಗ್ಲೇ ಸಾವಿರಾರು ಅರ್ಜಿ ಬಂದವಂತೆ ತಗಾ! ಬೇಕಾದೋವುಕ್ಕೆಲ್ಲಾ ಹಂಚಿದ ಮ್ಯಾಲೆ ಏನಾದ್ರೂ ಉಳುದ್ರೆ ಯೋಗ್ಯರ ಅದೃಷ್ಟ. ರಾಜ್ಯೋತ್ಸವ ಪ್ರಶಸ್ತಿ ಖರೀದಿಗೆ ಸಿಗದಿದ್ರೆ ಅಡ್ನಾಡಿ ವೀನಿವರ್ಸಿಟಿ ಗೌರವ ಡಾಕ್ಟರೇಟ್ ಅದಲ್ಲೋ’ ಯಂಟಪ್ಪಣ್ಣ ಕೋಪಾಮುದ್ರೆ ಹಾಕಿತು.

‘ಪ್ರಶಸ್ತಿ ಯಾರ‍್ಯಾರಿಗೆ ಕೊಡಬಕು ಅಂತ ಬಸಣ್ಣ, ಸುನೀಲಣ್ಣನಿಗೆ ನಾನು ಮಾರ್ಗಸೂಚಿ ಕೊಡ್ತಾ ಇವ್ನಿ. ದುಂದುಗಾರಿಕೆ ಮಾಡ್ತಿರೋ ಬಿಡಿಎಗೆ ‘ಅಶಿಸ್ತಾವಧಾನಿ’ ಪ್ರಶಸ್ತಿ, ಗುಂಡಿಗಳ ನಡಂತರದೇಲಿ ಆ ಒಂದು, ಆ ಎರಡು ಅಂತ ರೋಡು ಹುಡಿಕ್ಕ್ಯಂದು ನಡೆಯಂಗೆ ಮಾಡಿರೋ ಬಿಬಿಎಂಪಿಗೆ ‘ಗುಂಡಿ ಗಾರುಡಿಗ’ ಪ್ರಶಸ್ತಿ, ವಿದ್ಯುತ್ ನಿಗಮಗಳ ಕಳ್ಳಾಟಕ್ಕೆ ‘ವಿದ್ಯುತ್ ವಿಕ್ರಮ’ ಪ್ರಶಸ್ತಿ, ಕೇಂದ್ರ ಸರ್ಕಾರಕ್ಕೆ ‘ಇಂಧನ ವಿಶಾರದ’ ಪ್ರಶಸ್ತಿ ಕೊಡಬೇಕಾಯ್ತದೆ’ ಅಂದ್ರು ತುರೇಮಣೆ.

‘ಹಂಗಾದ್ರೆ ವೇಷ ಕಟ್ಟೋರಿಗೆ ‘ಛದ್ಮಶ್ರೀ’ ಪ್ರಶಸ್ತಿ, ವೃತ್ತಿಪರ ಪಕ್ಷಾಂತರಿಗಳಿಗೆ ‘ಲಾಗಭೂಷಣ’ ಪ್ರಶಸ್ತಿ, ಗಳಿಗ್ಗೊಂದು ಆಟ ಕಟ್ಟೋರಿಗೆ ‘ಚಾಲ್‍ರತ್ನ’, ಹಡಬಿಟ್ಟಿ ದುಡ್ಡಿನ ಹೊಟ್ಟೆ ಬೆಳೆಸಿಕಂಡೋರಿಗೆ ‘ಭಾರದರತ್ನ’, ಸಿಂಡಾಟದೋರಿಗೆ ‘ಸ್ವಾರ್ಥರತ್ನ’, ವಯಸ್ಸಾದ್ರೂ ಅಧಿಕಾರ ಬುಡದೋರಿಗೆ ‘ತರುಣಶ್ರೀ’ ಪ್ರಶಸ್ತಿ ಕೊಡಬೇಕಲ್ಲವೇನ್ರೋ?’ ಅಂತು ಯಂಟಪ್ಪಣ್ಣ.

‘ವಾಟ್ಸಪ್ಪಲ್ಲಿ ಸಿಟ್ಟು ಫಾರ್ವರ್ಡ್ ಮಾಡಿಕ್ಯಂಡು ತೆಪ್ಪಗಿರೋ ನಮ್ಮ ಸತ್‍ಪ್ರಜೆಗಳಿಗೆ ಏನು ಅವಾರ್ಡು ಕೊಡಬೌದು ಹೇಳಿ ಸಾ?’ ನಾನು ಕೇಳಿದೆ.

‘ನೋಡ್ಲಾ, ನಮ್ಮ ಇಲಾಖೇಲಿ ಒಬ್ಬರು ಉತ್ತರಭಾರತದ ಕಮೀಷನರ್ ಇದ್ರು. ಅವರಿಗೆ ಕನ್ನಡ ಸರಿಯಾಗಿ ಬರ್ತಿರಲಿಲ್ಲ. ಆದ್ರೂ ಮೀಟಿಂಗಲ್ಲಿ ‘ಸರಿಯಾಗಿ ಕೆಲಸ ಮಾಡಬೇಕೂಪಾ, ಫೈಲು ಬೇಗ ಬೇಗ ಕ್ಲಿಯರ್ ಮಾಡಬೇಕೂಪಾ, ಜನಕ್ಕೆ ಅನುಕೂಲ ಆಗಬೇಕೂಪಾ’ ಅನ್ನೋರು. ಹಂಗೇ ನಮ್ಮ ಜನಕ್ಕೆ ಎದ್ದೇಳ್ ಬೇಕೂಪಾ ಅಂತ ತಿವಿಯೋರು ಬೇಕಾಗ್ಯದೆ’ ಅಂತ ಅಟಕಾಯಿಸಿದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT