ಸೋಮವಾರ, ಜುಲೈ 4, 2022
22 °C

ಚುರುಮುರಿ: ಬೇಕೊಂದು ಹಾಸ್ಯ ವಿ.ವಿ!

ಚಂದ್ರಕಾಂತ ವಡ್ಡು Updated:

ಅಕ್ಷರ ಗಾತ್ರ : | |

Prajavani

ತೆಪರೇಸಿ, ಗುಡ್ಡೆ, ಕೊಟ್ರೇಶಿ, ದುಬ್ಬೀರ, ಬೆಕ್ಕಣ್ಣ, ಶಂಕ್ರಿ, ಸುಮಿ, ಪರ್ಮೇಶಿ, ತುರೇಮಣೆ, ಶ್ರೀಮತಿ, ಯಂಕಪ್ಪಣ್ಣ... ಎಲ್ಲರೂ ಒಟ್ಟಿಗೇ ಫ್ರೀಡಂ ಪಾರ್ಕಿನಲ್ಲಿ ಕರೆದ ವಿಶೇಷ ಸಭೆಯಲ್ಲಿ ಭಾಗಿಯಾಗಿದ್ದರು. ಪರಸ್ಪರರ ಸ್ಟೇಟಸ್ಸುಗಳಿಗೆ ಲವ್ವು, ಥಮ್ಸಪ್ಪು, ಕಣ್ಣೀರು, ಕೋಪ, ಗಹಗಹಿಕೆ ಒತ್ತಿಕೊಳ್ಳುವ ಫೇಸ್ಬುಕ್ಕಿನ ಪುರಾತನ ಗೆಳೆಯರಂತಿದ್ದರೂ ಇವರೆಲ್ಲಾ ಮುಖತಃ ಭೇಟಿಯಾಗಿದ್ದು ಇದೇ ಮೊದಲು.

ಈ ಅಭೂತಪೂರ್ವ ಸಮಾಗಮಕ್ಕೆ ಕಾರಣನಾದ ತಿಂಗಳೇಶ ಮಾತು ಆರಂಭಿಸಿದ:
‘ಸಮಾನ ಮನಸ್ಕ ಸಂಗಾತಿಗಳೇ…’

‘ಇದೇನು ಟೌನ್‌ಹಾಲ್ ಭಾಷಣ ಅಲ್ಲ, ಗೆಳ್ಯಾರು ಅನ್ನಲೇ ಸಾಕು…’ ದುಬ್ಬೀರ ಕೂಗಿದ.

‘ಜಂಟಿ ಅಧಿವೇಶನದ ಬರೆದುಕೊಟ್ಟ ಭಾಷಣ ಬೇಡ, ವಿರೋಧಿಗಳು ಬಾವಿಗಿಳಿದಾಗ ಪಾಸಾಗುವ ಮಸೂದೆಯಂತೆ ತುರ್ತಾಗಿ ಮುಗಿಸಿ’ ತುರೇಮಣಿ ಸಲಹೆ.

‘ಮಸೂದೆಗಳ ಅಂಗೀಕಾರಕ್ಕೆ ವಿರೋಧಪಕ್ಷಗಳಿಂದ ಸಿಗುವ ಸಭಾತ್ಯಾಗ ಸಹಕಾರವೂ ನಮ್ಮ ಸದಸ್ಯರಿಂದ ದೊರಕದಿದ್ದರೆ ಹೇಗೆ…?’ ತಿಂಗಳೇಶ ಅಸಮಾಧಾನ ಹೊರಹಾಕಿದ.

‘ಹೌದು, ಸಮಯವಿಲ್ಲ. ಈ ವಾರವೇ ಬಜೆಟ್ ಮಂಡನೆಯಾಗಲಿದೆ. ಮುಖ್ಯಮಂತ್ರಿಗಳು ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಾವು ಈಗಲೇ ಅವರನ್ನು ಕಂಡು ಬೇಡಿಕೆ ಸಲ್ಲಿಸಬೇಕು’ ಯಂಕಪ್ಪಣ್ಣನ ವಿವೇಕಯುತ ಮಾತು.

‘ಹಾಸ್ಯ ವಿಶ್ವವಿದ್ಯಾಲಯ ಈ ಸಾಲಿನಲ್ಲಿಯೇ ಸ್ಥಾಪನೆಯಾಗಬೇಕು’ ಒಂದೇ ಸಾಲಿನ ಠರಾವು ಮಂಡಿಸಿದ ಬೆಕ್ಕಣ್ಣ.

‘ಈ ಬಜೆಟ್ಟಿನಲ್ಲಿಯೇ ಹಣ ತೆಗೆದಿರಿಸಬೇಕು’, ‘ಹಾಸ್ಯ ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ನಮ್ಮ ಸಂಘದ ಸದಸ್ಯರಿಗೆ ಮೀಸಲಾತಿ ಕಲ್ಪಿಸಬೇಕು’, ‘ಕುಲಪತಿ ಹುದ್ದೆಗೆ ನಮ್ಮ ಸೃಷ್ಟಿಕರ್ತ ಯಜಮಾನರಲ್ಲಿ ಒಬ್ಬರನ್ನು ಪರಿಗಣಿಸಬೇಕು’, ‘ಹಾಸ್ಯ ಭಾಷಣ, ಹಾಸ್ಯ ಸಾಹಿತ್ಯ, ಹಾಸ್ಯ ಬದುಕು, ಹಾಸ್ಯ ರಾಜಕಾರಣಕ್ಕೆ ಪ್ರತ್ಯೇಕ ವಿಭಾಗಗಳಿರಲಿ’, ‘ವಿ.ವಿಗೆ ಗಂಗಾವತಿಯೇ ಸೂಕ್ತ’... ಇನ್ನಷ್ಟು ಸೇರಿಸಿದರು ಸಭಾಸದಸ್ಯರು.

ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಎದುರು ಬಿಚ್ಚಿಟ್ಟ ನಂತರ ಹಾಸ್ಯಪಾತ್ರಗಳೆಲ್ಲಾ ತಮಗಿಷ್ಟದ ಚುರುಮುರಿ, ಮಂಡಾಳೊಗ್ಗರಣೆ, ನರ್ಗೀಸ್, ಸೂಸಲ, ತೋಯಿಸಿದ ಮಂಡಕ್ಕಿ ತಿನ್ನುತ್ತ ಜಾಗ ಖಾಲಿ ಮಾಡಿದವು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.