‘ಮೋದಿ ಮಾಮಾ ಬೆಂಗಳೂರು- ಮೈಸೂರು ದಶಪಥ ಉದ್ಘಾಟನೆ ಮಾಡ್ಯಾನ... ನಾವೂ ಒಮ್ಮಿ ಹೋಗಿಬರೂಣು. ಟ್ಯಾಕ್ಸಿ ಬುಕ್ ಮಾಡು’ ಎಂದು ಕಳೆದ ವಾರ ಬೆಕ್ಕಣ್ಣ ತಲೆ ತಿನ್ನುತ್ತಿತ್ತು.
‘ಟ್ಯಾಕ್ಸಿಗೆ ಅಲ್ಲದೇ ಅಲ್ಲಿ ಟೋಲ್ ಕೊಡಾಕೂ ರೊಕ್ಕ ಸುರೀಬಕು. ನಾ ಮಾಡಾಳ್ ಅಡಿಕೆ ತಳಿ ತ್ವಾಟ ಹಾಕಿಲ್ಲಲೇ, ನನ್ ಹತ್ರ ಅಷ್ಟ್ ರೊಕ್ಕ ಇಲ್ಲ’ ಎಂದು ಬೈದು ಸುಮ್ಮನಾಗಿಸಿದ್ದೆ.
‘ನೋಡಲೇ, ಒಂದೇ ಮಳೆಗೆ ಬೆಂಗಳೂರು- ಮೈಸೂರು ‘ದಶಪಥ’ ಹೋಗಿ, ‘ದೋಣಿ ಪಥ’ ಆಗೈತಂತ...’ ಎಂದು ಮೊನ್ನೆ ಮಳೆಯ ಸುದ್ದಿ ತೋರಿಸಿದೆ.
‘ಅಕಾಲದಾಗೆ ಮಳಿ ಸುರಿದ್ರ ಹಿಂತಾವು ಆಗೂದೆ. ಅದನ್ನೇ ನೀ ದೊಡ್ಡದು ಮಾಡಬ್ಯಾಡ. ಮಳೆಗಾಲಕ್ಕಿಂತ ಮುಂಚೆ ಅಲ್ಲಿ ನಾಕು ಮೋಟಾರ್ ದೋಣಿನೂ ಇಡ್ತಾರೇಳು. ಮಳಿ ಬಂದಾಗ ದೋಣಿವಳಗ ಕುಂತು ಹೆದ್ದಾರಿವಳಗ ಜುಮ್ ಅಂತ ಹೋಗಬೌದು’ ಬೆಕ್ಕಣ್ಣ ಉಡಾಫೆಯಿಂದ ಮೀಸೆ ಹಾರಿಸಿ, ಲ್ಯಾಪ್‌ಟಾಪಿನಲ್ಲಿ ತಲೆ ತೂರಿಸಿತು.
‘ಬೊಮ್ಮಾಯಿ ಅಂಕಲ್ಲು ಮಹದೇಶ್ವರ ಬೆಟ್ಟದಾಗೆ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ಉದ್ಘಾಟನೆ ಮಾಡ್ಯಾರೆ, ಸುದ್ದಿ ಓದೀಯಿಲ್ಲೋ?’ ಎಂದು ಕೆಲಸ ಮಾಡುತ್ತಲೇ ಕೇಳಿತು.
‘ಅದೊಂದೇ ಅಲ್ಲಲೇ... ಸುಮಾರು 10-15 ಪ್ರತಿಮೆಗಳನ್ನ ಬೇರೆ ಬೇರೆ ಜಿಲ್ಲೆವಳಗೆ ಉದ್ಘಾಟನೆ ಮಾಡ್ಯಾರೆ. ಹೊಟ್ಟಿಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿಸತಾರೆ. ಅದ್ಸರಿ, ನೀ ಏನ್ ಕಾರುಬಾರು ನಡೆಸೀಯಲೇ?’
‘ಇನ್ನುಳಿದ ಯಾವ್ಯಾವ ಜಿಲ್ಲೆವಳಗ ಯಾರ ಪ್ರತಿಮೆ ನಿಲ್ಲಿಸಬೌದು, ಯಾರ ಪ್ರತಿಮೆ ನಿಲ್ಲಿಸಿದರೆ ಯಾವ ಜಾತಿಯವರ ಎಷ್ಟು ಮತ ಕಮಲಕ್ಕನ ಬುಟ್ಟಿಗೆ ಬೀಳತೈತೆ, ಪ್ರತಿಮೆ ಎಷ್ಟ್ ಎತ್ತರ ಇರಬಕು, ಎಲ್ಲಿ ನಿಲ್ಲಿಸಬಕು, ಯಾರು ಉದ್ಘಾಟನೆ ಮಾಡಬಕು, ಹೀಂಗ ಇತ್ಯಾದಿ ಅಂಶಗಳನ್ನ ಅವಲಂಬಿಸಿ ಮತಗಳು ಬೀಳತಾವು. ಇದನ್ನ ಲೆಕ್ಕಾಚಾರ ಮಾಡಾಕೆ ಒಂದು ಪ್ರತಿಮಾ ಟೂಲ್ ಕಿಟ್ ಅಭಿವೃದ್ಧಿ ಮಾಡಿ ಕಮಲಕ್ಕನ ಐಟಿ ಸೆಲ್ಲಿಗೆ ಕಳಿಸಾಕತ್ತೀನಿ’ ಎಂದು ಮೀಸೆ ತಿರುವಿತು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.