ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಾವು ಅಲಿಪ್ತರು

Last Updated 27 ಫೆಬ್ರುವರಿ 2022, 22:00 IST
ಅಕ್ಷರ ಗಾತ್ರ

‘ಈಗಾದ್ರೂ ಒಪ್ಪತೀಯಿಲ್ಲೋ ನಮ್ ಮೋದಿಮಾಮಾನೆ ವಿಶ್ವನಾಯಕ, ವಿಶ್ವಗುರು ಅಂತ’ ಬೆಕ್ಕಣ್ಣ ಕುಣಿಯುತ್ತ ಕೇಳಿತು.

‘ವಿಶ್ವನಾಯಕ ಆಗೂಹಂಗೆ ಅವ್ರೇನ್ ಮಾಡಿದ್ರಲೇ ಈಗ’ ನನಗೆ ತಲೆಬುಡ ತಿಳಿಯಲಿಲ್ಲ.‌

‘ಉಕ್ರೇನ್ ಮ್ಯಾಲ ಯುದ್ಧ ನಿಲ್ಲಿಸಂತ ರಷ್ಯಾಕೆ ಹೇಳ್ರೀ ಅಂತ ಎಲ್ಲಾ ದೇಶದವರು ಮೋದಿಜಿಯವರಿಗೆ ಬೇಡಿಕೊಳ್ಳಾಕ ಹತ್ಯಾರೆ, ಎದಕ್ಕಂದ್ರ ಅವ್ರು ವರ್ಲ್ಡ್ ಲೀಡರ್ ಅದಾರ ಅಂತ ಸಂಸದೆ ಹೇಮಕ್ಕ ಹೇಳ್ಯಾಳ’ ಬೆಕ್ಕಣ್ಣ ಎದೆಯುಬ್ಬಿಸಿತು.

‘ಅಲ್ಲಲೇ... ನೆಹರೂ ಕಾಲದಿಂದ ನಮ್ಮದು ಅಲಿಪ್ತ ರಾಷ್ಟ್ರ, ನಾವು ಯಾರ ವಿರುದ್ಧನೂ ಇಲ್ಲ, ಪರನೂ ಇಲ್ಲ. ಮತ್ತ ನಿಮ್ಮ ಮೋದಿಮಾಮಾ ಹೇಳಿದ ತಕ್ಷಣ ಪುಟಿನ್ ಯುದ್ಧ ನಿಲ್ಲಿಸಿ ಬಿಡತಾನೇನು? ಯುದ್ಧ ನಿಲ್ಲಿಸೂದು ಅಂದ್ರ ಟ್ರಾಫಿಕ್ ಸಿಗ್ನಲ್ಲಿನಾಗೆ ನಿಂತು ಕೈಮಾಡಿ, ವಾಹನ ನಿಲ್ಲಿಸಿದಂಗೆ ಅಂತ ಮಾಡೀಯೇನ್’ ಎಂದು ನಕ್ಕೆ.

‘ಹಿಂದೆಲ್ಲ ರಾಜರು ಸ್ವತಃ ರಣರಂಗಕ್ಕೆ ಹೋಗಿ ಯುದ್ಧ ಮಾಡತಿದ್ರಂತ, ಈಗಿನ ಪ್ರಧಾನಿಗಳು, ಅಧ್ಯಕ್ಷರುಗಳು ಬಟನ್ ಒತ್ತಿದಂಗೆ ಯುದ್ಧ ಶುರು ಮಾಡಿ, ಸೈನಿಕರನ್ನು ಸಾಯೋದಕ್ಕೆ ಕಳಿಸೋ ಬದಲಿಗೆ ಅವರೇ ನೇರಾನೇರ ಯುದ್ಧ ಮಾಡಬೇಕಿತ್ತು ನೋಡು’ ಎಂದಿತು.

‘ಅವರೆದಕ್ಕ ರಣರಂಗಕ್ಕೆ ನೇರ ಇಳಿತಾರಲೇ...ಸಾಯೋರು ಮಾತ್ರ ಎರಡೂ ಕಡೆ ಸೈನಿಕರು, ಅಮಾಯಕ ಜನರು...’ ವ್ಯಥೆಯಿಂದ ಹೇಳಿದೆ.

‘ಹಿಂಗ ಯುದ್ಧಗಿದ್ದ ಆದ್ರ ಎಣ್ಣೆ, ಪೆಟ್ರೋಲು ಎಲ್ಲ ದುಬಾರಿ ಆಗತೈತಿ. ಅದಕ್ಕ ನಮ್ಮ ಕರ್ನಾಟಕದ ಶಾಸಕರ ಸಂಬಳ ಹೆಚ್ಚಿಗಿ ಮಾಡಿದ್ದು ವಳ್ಳೇದಾತು ನೋಡು, ಪಾಪ... ಎಷ್ಟ್ ಖರ್ಚು ಇರತೈತಿ ಅವರಿಗಿ’ ಎಂದು ಲೊಚಗುಟ್ಟಿತು.‌

‘ಅಲ್ಲಲೇ ನಮ್ಮ 224 ಶಾಸಕರಲ್ಲಿ 215 ಮಂದಿ ಕೋಟ್ಯಧಿಪತಿಗಳಂತೆ, ಅವರಿಗ್ಯಾವ ಬೆಲೆಯೇರಿಕೆ ಬಿಸಿ ತಟ್ಟತೈತಿ?’ ರೇಗಿದೆ.

‘ಇದೊಂದೇ ನಿರ್ಣಯಕ್ಕೆ ಪಕ್ಷಭೇದವಿಲ್ಲದೆ ಎಲ್ಲ ಶಾಸಕರೂ ಒಕ್ಕೊರಲಿನಿಂದ ಒಪ್ಪಿದಾರೆ ನೋಡು’ ಎಂದು ಬೆಕ್ಕಣ್ಣ ಕೊಂಕುನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT