ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತಲೆಬ್ಯಾನೆ

Last Updated 23 ಆಗಸ್ಟ್ 2021, 21:15 IST
ಅಕ್ಷರ ಗಾತ್ರ

‘ಸಾ, ತಾಲಿಬಾನ್ ಅಫ್ಗಾನಿಸ್ತಾನವ ವಶ ಮಾಡಿಕ್ಯಂಡದಂತೆ? ಸಂಘಟನೆಗಳು ಅವುರುದ್ದೇ ಸೈನ್ಯ, ಸೈನಿಕರು, ಆಯುಧ ಮಡಿಕಂಡು ಜಗತ್ತಿಗೆಲ್ಲ ಇರುವಾರದ ಕಾಟ ಕೊಡ್ತಾ ತಲೆಬ್ಯಾನೆ ಆಗ್ಯವರಲ್ಲಾ ಸಾ!’ ಅಂತ ತುರೇಮಣೆಗೆ ಕೇಳಿದೆ.

‘ತಾಲಿಬಾನ್ ಅನ್ನದು ಮಂಡ್ಯೇದ ಕನ್ನಡ ಪದ ಅಂತ ಯಾರಿಗೂ ಗೊತ್ತಿಲ್ಲ ಕನ್ರೋ! ಇಲ್ಲಿಂದ ಅದು ಅಫ್ಗಾನಿಸ್ತಾನದ ಗಂಟ ಕಡದು ಹೋಗಿ ಈಗ ತಲೆಬ್ಯಾನೆ ಸುರುವಾಗ್ಯದೆ’ ಅಂದ್ರು ತುರೇಮಣೆ. ನನಗೆ ಆಶ್ಚರ್ಯ ಆಯ್ತು.

‘ಇದೇನ್ಸಾ ಹಿಂಗಂದೀರಿ? ತಾಲಿಬಾನ್ ಅಂದ್ರೆ ಪುಶ್ತೂನ್ ಭಾಷೇಲಿ ವಿದ್ಯಾರ್ಥಿಗಳು ಅಂತ ಅರ್ಥವಂತೆ! ನೀವು ನೋಡಿದ್ರೆ ನಮ್ಮ ಪದ ಅಂತೀರಿ? ನಿಮಗೆ ಯಾವುದೋ ಗಾಳಿ ಮೆಟ್ಟಿಕ್ಯಂಡದೆ. ಹದ್ದಿನಕಲ್ಲು ಹನುಮಂತರಾಯನ ಬೆಟ್ಟಕ್ಕೋಗಿ ಕೋಳಿ ಕೂದು ಕಲ್ಲು ಹುಯ್ಯಿಸಿದರೆ ಆಯ್ತಿತ್ತು!’ ಅಂದೆ ಗಾಬರಿಯಲ್ಲಿ.

‘ಬೊಡ್ಡಿಹೈದ್ನೆ, ಹಳೇ ಕಾಲದೇಲಿ ಮಂಡ್ಯಾದ ನೆರವಿ ಬಾಡೂಟಕ್ಕೆ ತಲೆಬಾನ ಅಂತಿದ್ರು. ತಲೆ ಅಂದ್ರೆ ಕುರಿ ತಲೆ, ಬಾನ ಅಂದ್ರೆ ಮಾಂಸ, ತಲೆಮಾಂಸದ ಬಾಡೂಟ ಅಂತ. ಬಾಡಿನೆಸರು ಕಂಡ ಕಡೇಲೆಲ್ಲಾ ಒಂದು ಸೊಟ್ಟಗ ಬಾಡು ತಿನ್ನೋನಿಗೆ ತಲೆಬಾನ್ ಅಂತ ಆಡಿಕ್ಯತಿದ್ರು. ವಿರೋಧಿಗಳ ತಲೆಕಡಿದು ಹಾಕೋ ಅಫ್ಗನ್‌ ಉಗ್ರಗಾಮಿಗಳಿಗೆ ತಾಲಿಬಾನ್ ಅಂತ ಅಡ್ಡೆಸರು ಬಂದದೆ!’ ಅವರ ಮಾತು ನನಗೇನೂ
ಅರ್ಥವಾಗ್ಲಿಲ್ಲ.

‘ಸಾ, ತಲೆಮಾಂಸ ತಿನ್ನೋರೆಲ್ಲಾ ತಾಲಿಬಾನುಗಳೆ ಅಂತೀರಾ? ಇವರೆಲ್ಲಾ ಎಲ್ಲೆಲ್ಲಿ ಇರತರೆ?’ ನಲ್ಲಿಮೂಳೆ ನೆಕ್ಕತಾ ನನ್ನ ಅನುಮಾನ ಹೇಳಿದೆ.

‘ನೋಡ್ಲಾ, ಸಂಬಳಕ್ಕೆ ಸರಿಯಾಗಿ ಕ್ಯಾಮೆ ಮಾಡದಿರೋ ಅಧಿಕಾರಿಗಳು, ಬ್ಯಾಳೆ ಮಾತಾಡಿಕೊಂಡು ಜನಾಶೀರ್ವಾದ, ಕ್ಷೇತ್ರದ ಭೇಟಿ ಅಂತ ಕಳ್ಳಬಿದ್ದಿರೋ ಮಂತ್ರಿಗಳು, ಪ್ರಚಾರಕ್ಕೋಸ್ಕರ ನಾಲಗೆ ತೆವಲು ತೀರಿಸಿಕೊಳ್ಳೋ ರಾಜಕಾರಣಿಗಳು, ಅತೃಪ್ತರು, ಎಲ್ಲದಕ್ಕೂ ಅರ್ಥ ಹುಡುಕೋ ನಿನ್ನಂತಾ ಕೇಮೆ ಇಲ್ದೋರು ಎಲ್ಲಾರೂ ತಾಲಿಬಾನೀಯರೇ!’ ಅಂದಾಗ ಮೂಳೆ ಗಂಟ್ಲಗೆ ಸಿಗಾಕ್ಕ್ಯಂಡು ವತ್ತರಿಸಿಕೊಂಡು ಬಂದ ಕೆಮ್ಮು ತಡಿನಾರ್ದೆ ಅಫ್ಗಾನಿ ಭಾಷೆಯಲ್ಲಿ ಕೆಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT