ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸರ್ವಂ ಹಿಂದಿಮಯಂ!

Last Updated 1 ಮೇ 2022, 19:31 IST
ಅಕ್ಷರ ಗಾತ್ರ

‘ಈಗ ನಾ ಹಿಂದಿ ಕಲಿತರೆ ವಳ್ಳೇದಾ ಅಥವಾ ಸಂಸ್ಕೃತ ಕಲಿತರೆ ವಳ್ಳೇದಾ?’ ಬೆಕ್ಕಣ್ಣ ಭಾರಿ ಗೊಂದಲದಲ್ಲಿ ಕೇಳಿತು.

‘ಮಂಗ್ಯಾನಂಥವನೇ... ಮದ್ಲು ಛಲೋತ್ನಾಗೆ ಕನ್ನಡ ಓದೂದು, ಬರೆಯೂದು ಕಲಿ. ನಿನಗೆದಕ್ಕೆ ಹಿಂದಿ, ಸಂಸ್ಕೃತ ಬೇಕು... ಆಮ್ಯಾಲ ಬೇಕಂದ್ರ ಇಂಗ್ಲಿಷು ಕಲಿ’ ಎಂದೆ.

‘ಅತ್ತ ಕಡೆ ದೇವಗನ್ ಅಣ್ಣಾರಿಂದ ಹಿಡಿದು ಇತ್ ಕಡೆ ನಮ್ಮ ಸೀಟಿ ರವಿಯಣ್ಣನವರೆಗೆ ಎಲ್ಲಾರೂ ಹಿಂದಿ ರಾಷ್ಟ್ರಭಾಷೆ ಅಂತಾರ. ಈಗ ನಮ್ಮ ಕಂಗನಾಕ್ಕ ನೋಡಿದ್ರ ಹಿಂದಿ ಯಾವಾಗಿದ್ರೂ ರಾಷ್ಟ್ರಭಾಷೆ, ಜೊತಿಗಿ ಸಂಸ್ಕೃತನೂ ರಾಷ್ಟ್ರಭಾಷೆ ಆಗಬಕು ಅಂದಾಳ’.

‘ಯಾವ ರಾಷ್ಟ್ರದ ಭಾಷೆ ಅಂತ ಆಕಿಗಿ ಕೇಳಲೇ. ನಮ್ಮ ದೇಶದಾಗೆ ಯಾವುದೋ ಒಂದ್ ಊರಿನಾಗೆ ಮಂದಿ ಸಂಸ್ಕೃತ ಮಾತಾಡೂದು ಬಿಟ್ಟರೆ, ಬ್ಯಾರೆ ಎಲ್ಲೂ ಸಂಸ್ಕೃತ ಆಡುಭಾಷೆ ಅಲ್ಲ. ಆಕಿಗೆ ಸಂಸ್ಕೃತದಾಗೆ ಒಂದು ಡಯಲಾಗ್ ತಪ್ಪಿಲ್ಲದೆ ವದರಾಕೆ ಹೇಳು, ನೋಡೂಣು’.

‘ಕಂಗನಾಕ್ಕ ಹೇಳ್ಯಾಳ. ಹಿಂದಿಗೆ ವಿರುದ್ಧ ಮಾತಾಡಿದರ ಕೇಂದ್ರ ಸರ್ಕಾರಕ್ಕೆ, ಸಂವಿಧಾನಕ್ಕೆ ವಿರುದ್ಧ ಮಾತಾಡಿದಂತೆ. ಎದಕ್ಕಂದ್ರ ಹಿಂದಿ ರಾಷ್ಟ್ರಭಾಷೆ ಅಂತ ಸಂವಿಧಾನದಾಗೆ ಬರದೈತಿ. ದೇಶದ ನೀತಿ, ನಿಯಮ, ಕಾನೂನು ಆಗೂದು ಡೆಲ್ಲಿವಳಗ, ಹಿಂದಿವಳಗ. ಹಂಗಾಗಿ ಹಿಂದಿ ವಿರುದ್ಧ ಮಾತಾಡಬಾರದು ಅಂತ ಆಕಿ ಹುಕುಂ ಹೊರಡಿಸ್ಯಾಳ’.

‘ಆಕಿ ಯಾವ ದೊಣೆನಾಯಕಿ ಹುಕುಂ ಹೊರಡಿಸಾಕೆ? ಆಕಿ ಬೇಕಾದರ ತನ್ನ ತಾಯಿನುಡಿ ಬಿಟ್ಟು ಸಂಸ್ಕೃತದಾಗೆ ಮಾತಾಡಲಿ. ಉಳಿದವರ ಉಸಾಬರಿ ಆಕಿಗೆ ಎದಕ್ಕ? ಪೆಟ್ರೋಲು, ಗ್ಯಾಸ್ ತುಟ್ಟಿ, ಈಗ ಕಲ್ಲಿದ್ದಲೂ ಇಲ್ಲ, ವಿದ್ಯುತ್ ಕೊರತೆ, ಉತ್ತರದಾಗೆ ಬಿಸಿಗಾಳಿ... ಹಿಂತಾ ಸಾವಿರ ಸಮಸ್ಯೆಗೆ ಏನು ಮಾಡಬಕು ಅಂತ ಆ ನಟ-ನಟಿಯರಿಗೆ ಕೇಳಲೇ’ ನಾನು ರೇಗಿದೆ.

‘ಈ ದಿಲ್ಲಿಮಂದಿ ನೀತಿ, ನಿಯಮ ಎಲ್ಲಾನೂ ಹಿಂದಿವಳಗ ಬರೆದು, ಏನರ ಗೋಲ್‌ಮಾಲ್ ಮಾಡಿದ್ರ ನಮಗ ಗೊತ್ತಾಗೂದು ಹೆಂಗ? ಅದಕ್ಕಾರೂ ನಾವ್ ಹಿಂದಿ ಕಲಿಬೇಕು’ ಎಂದು ಮತ್ತೊಂದು ವಿತಂಡವಾದ ಹೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT