‘ಏಳು ಸಾವಿರ ಕಾರು, ಅದ್ರಲ್ಲಿ ರೋಲ್ಸ್‌ರಾಯ್ ಕಾರು ಆರುನೂರು. ಒಂದು ಕಾರಿಗೆ ಚಿನ್ನದ ಬಾಡಿ ಐತಂತ. ಇಷ್ಟೇ ಸಾಲದು ಅಂತ ಎರಡು ಬೋಯಿಂಗ್ ವಿಮಾನ, ಒಂದು ಏರ್‌ಬಸ್, ಹೆಲಿಕಾಪ್ಟರು...’ ಬೆಕ್ಕಣ್ಣ ಸುದ್ದಿ ಓದುತ್ತಿತ್ತು.
‘ಯಾರ ಸುದ್ದಿ ಹೇಳಾಕೆ ಹತ್ತೀಯಲೇ’ ಎಂದೆ ಕುತೂಹಲದಿಂದ.
‘ಅದೇ ಬ್ರೂನೈ ರಾಜ... ಅಂವನ ಅರಮನೆಯೊಳಗೆ 7,800 ಕೋಣೆಗಳಂತೆ. ಮೇಲೆ ಚಿನ್ನದ ಗೋಪುರನೂ ಐತಂತೆ. ಈಗಿನ ಬೆಲೆವಳಗೆ ಅರಮನೆ 1.6 ಬಿಲಿಯನ್ ಡಾಲರ್ ಅಂದ್ರ 2,550 ಕೋಟಿ ರೂಪಾಯಿ ಬೆಲೆಬಾಳುತ್ತಂತೆ!’ ಬೆಕ್ಕಣ್ಣ ವರ್ಣಿಸಿತು.
‘ಅದೇನ್ ಮಹಾ ಬಿಡಲೇ… ಅಂಬಾನಿ ಅರಮನೆ ಆಂಟಿಲಿಯಾದಲ್ಲಿ 27 ಮಹಡಿ ಐತಿ. ಅದ್ರಾಗೆ ಆರು ಮಹಡಿ ಕಾರುಗಳಿಗೇ ಐತಂತೆ. ಅಂಬಾನಿ ಅರಮನೆ ಸುಮಾರು 2 ಬಿಲಿಯನ್ ಡಾಲರ್ ಬೆಲೆಬಾಳುತ್ತಂತೆ’ ಎಂದೆ.
‘ಆದ್ರೂ ರಾಜನ ವೈಭೋಗ ಉದ್ಯಮಿಗಳಿಗೆ ಎಲ್ಲಿರತೈತಿ? ಆ ರಾಜ ತೆರೆದ ಮೇಲ್ಚಾವಣಿಯ ಚಿನ್ನದ ಕಾರಿನೊಳಗೆ, ಚಿನ್ನದ ಛತ್ರಿಯ ಕೆಳಗಿರೋ ಆಸನದಲ್ಲಿ ಪತ್ನಿ ಜೊತೆ ಕುಂತು ಸವಾರಿ ಮಾಡತಾನಂತೆ’.
‘ದೇಶದೊಳಗೆ ಮಸ್ತ್ ತೈಲ ನಿಕ್ಷೇಪ ಐತಿ… ಅದು ಬರಿದಾಗೋವರೆಗೆ ಅಂವಾ ಹಿಂಗೇ ಅಂದಾದುಂದಿ ಮಾಡಬೌದು’.
‘ಅಲ್ಲಿ ಶ್ರೀಸಾಮಾನ್ಯರ ತಲಾದಾಯವೂ ಹೆಚ್ಚಾಗಿ ಇದೆಯಂತೆ. ಯಾರೂ ಆದಾಯ ತೆರಿಗೆನೂ ಕೊಡೂದು ಬ್ಯಾಡಂತೆ. ರಾಜನೇ ಎಲ್ಲಾ ಸವಲತ್ತು ಕೊಡತಾನಂತೆ. ಏನರೆ ಕೆಲಸ ಹುಡಿಕ್ಯಂಡು ಬ್ರೂನೈಗೇ ಹೋಗೂದು ಛಲೋ ಅನ್ನಿಸತೈತಿ!’ ಬೆಕ್ಕಣ್ಣ ಹಗಲುಗನಸು ಕಾಣಹತ್ತಿತು.
‘ನಮ್ಮಲ್ಲಿ ನೋಡಿದರೆ ನಿರ್ಮಲಕ್ಕ ವಿಮೆ ಮ್ಯಾಲೂ ಜಿಎಸ್‌ಟಿ ಹಾಕ್ಯಾರೆ! ಆದಾಯ ತೆರಿಗೆ ಸಾಲದು ಅಂತ ಎಲ್ಲಾದರ ಮ್ಯಾಗೂ ಜಿಎಸ್‌ಟಿ’.
‘ಅಲ್ಲಿಯ ತೈಲ ನಿಕ್ಷೇಪಕ್ಕೆ ರಾಜನೇ ಒಡೆಯ, ಆದರೆ ಎಲ್ಲ ಪ್ರಜೆಗಳೂ ಶ್ರೀಮಂತರು. ನಮ್ಮಲ್ಲಿ ಪ್ರಜಾಪ್ರಭುತ್ವ... ಎಲ್ಲಾ ಥರದ ಸಂಪತ್ತಿಗೆ ಕೆಲವರಷ್ಟೇ ಒಡೆಯರು, ಕೆಲವರಷ್ಟೇ ಕೋಟ್ಯಧಿಪತಿಗಳು!’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.