ಸೋಮವಾರ, ಮಾರ್ಚ್ 20, 2023
24 °C

ಚುರುಮುರಿ | ರೋಣಗಲ್ ರಾಜಕೀಯ!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಮಹಾನ್ ನೇತಾರ ಗುಳಕಯ್ಯನವರ ಕಟ್ಟಾ ಅನುಯಾಯಿ ಗುಂದ್ಲಿಂಗ ಧಣಿಗಳ ಮುಂದೆ ಕುಕ್ಕರಿಸಿದ್ದ: ‘ಅಣ್ಣ, ಲೋಕಣ್ಣ ಹಟ್ಟಿ ಹಟ್ಟಿಗೋಗಿ ರೊಟ್ಟಿ ತಿನ್ಕಂಡು ವಾಸ್ತವ್ಯದ ಮೇಲೆ ವಾಸ್ತವ್ಯ ಮಾಡ್ತಾವ್ರೆ’.

‘ಮಾಡ್ಲಿ ಬುಡ್ಲಾ, ಮನ್ಯಾಗೆ ಎಂಡ್ರು, ಮಕ್ಕಳ ಜೊತೆ ಏನೋ ಸಮಸ್ಯೆ ಇರ್ಬೇಕು. ಅದಕ್ಕೇ ಮನೆ, ಬಿಟ್ಟು ಊರೂರು ಅಲೀತಾವ್ನೆ’.

‘ಅಂಗಲ್ಲಣ್ಣ, ಓದ್ ಓದ್ ಕಡೆ ಎಲ್ಲಾ ಜನ್ರಿಗೆ ಮನೆ ಕಟ್ಕಳಕ್ಕೆ ಅಕ್ಕುಪತ್ರ ಕೊಡುಸ್ತಾವ್ರೆ’.

‘ಕೊಡುಸ್ಲಿ ಬುಡ್ಲಾ, ಅವನು ಅಕ್ಕುಪತ್ರ ಕೊಡ್ಲಿ... ನಾವು ಮನೆ ಕಟ್ಟುಸ್‍ಕೊಟ್ರಾಯ್ತು’.

‘ಕೆಲವರಿಗೆ ಮನೆನೂ ಕಟ್ಟಿಕೊಟ್ಟವ್ರಂತೆ’.

‘ಹೌದೇನ್ಲಾ? ಅದ್ನ ಅಡ ಇಡ್ಸಿ ಸಾಲ ಕೊಡ್ಸಣ. ನಮ್ ಸರ್ಕಾರ ಬಂದಾಗ ಮನ್ನಾ ಮಾಡ್ಸಣ’.

‘ಓದ್ ಕಡೆಲೆಲ್ಲಾ ಮೈಲಿಗಟ್ಟಲೆ ರಸ್ತೆ ಮಾಡುಸ್ತಾವ್ರಂತೆ ಕಣಣ್ಣೋ’.

‘ಮಾಡುಸ್ಲಿ ಬುಡ್ಲಾ? ಅದೇನ್ ಹೈವೇನೇನ್ಲಾ? ಮುಂದಿನ ಮಳೆಗಾಲಕ್ಕೆ ಕಿತ್ ಬತ್ತದೆ. ಆಗ್ ಓಗಿ ನಾವು ಗುಂಡಿ ತುಂಬ್ಸಿ ರಿಪೇರಿ ಮಾಡ್ಸುದ್ರಾಯ್ತು. ಕೆಲಸನೂ ಆಯ್ತದೆ, ಕಮಿಷನ್ನೂ ಬತ್ತದೆ’.

‘ಅದ್ಯಾವುದೋ ಕಾಡಲ್ಲಿದ್ ಜನಕ್ಕೆ ಬಗರ್‌ಹುಕುಂ ಜಮೀನ್ನ ಅವರ ಹೆಸರಿಗೇ ಮಾಡಿಸಿಕೊಟ್ಟವ್ರಂತೆ’.

‘ಒಳ್ಳೇದೇ ಆಯ್ತಲ್ಲೋ... ಅದನ್ನ ನಾವು ಆರಕ್ಕೆ ಮೂರರಂಗೆ ದುಡ್ ಕೊಟ್ಟು ತಗಂಡು ಲೇಔಟೋ ರೆಸಾರ್ಟೋ ಮಾಡ್ಬಹುದಲ್ಲೋ...’

‘ಏನಣ್ಣ ನೀನು? ನಾನು ಈಟೆಲ್ಲಾ ಯೋಳುದ್ರೂ ನೀ ತಲೆನೇ ಕೆಡಿಸ್ಕಳ್ದಂಗೆ ಕುಂತಿ ದೀರಿ. ಎಲೆಕ್ಷನ್ ಕತ್ತಿ ತಲೆ ಮ್ಯಾಗೆ ತೂಗಾಡ್ತೈತೆ. ಇಂತ ಟೈಮಲ್ಲೂ ಆಕ್ಸಾಲನಾ? ಇಂಗಾದ್ರೆ ನೀವು ಬಾಯಿಗೆ ಮಣ್ಣಾಕ್ಕಂಡಂಗೇಯ!’

‘ಅಯ್ಯೋ ಗುಲ್ಡು ನನ್ ಮಗನೇ, ಹಟ್ಟಿಲಿ ರೊಟ್ಟಿ ಕಡುದ್‌ಬಿಟ್ರೆ ವೋಟ್ ಆಯ್ತದೇನ್ಲಾ? ಏನ್ ಕೊಟ್ರೇನ್ಲಾ? ಜನ ಎಲಕ್ಷನ್ ಹಿಂದಿನ ದಿನ ಕೊಡೋ ಪ್ಯಾಕೆಟ್ಟು, ಗಿಫ್ಟು ಮಾತ್ರನೇ ಕಣ್ಲಾ ನೆನಪಿಟ್ಕಳಾದು. ಅವನು ಅಲ್ಲಿ ಓಗಿ ಕುಂತವ್ನೆ... ನಾನು ಕ್ಷೇತ್ರದಲ್ಲೇ ಗೂಟ ಒಡ್ಕಂಡು ಕುಂತಿವ್ನಿ. ತಿರುಗೋ ರೋಣಗಲ್ಲಿಗೆ ಏನೂ ಮೆತ್ಕಳಕಿಲ್ಲ ಕಣ್ಲಾ? ಅದು ತಿರುಗಿ ಕಾಳು ಉದುರುಸ್ತದೆ. ನಾವು ಗುಡ್ಡೆ ಮಾಡ್ಕಂಡು ತಿಂತೀವಿ, ಎಂಗೆ?’ ಗುಳಕಯ್ಯನವರು ನಕ್ಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು