ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವಿಶೇಷ ಪಥ

Last Updated 19 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಕ್ಕಣ್ಣ ಕರ್ನಾಟಕದ ನಕ್ಷೆಯ ಮೇಲೆ ಅದೇನೋ ರಸ್ತೆಗಳ ಹಾಗೆ ಬಿಡಿಸಿತ್ತು. ಶ್ರೀಸಾಮಾನ್ಯಳಾದ ನಾನು ಏನೆಂದು ಗೊತ್ತಾಗದೇ ತಲೆಕೆರೆದುಕೊಂಡೆ. ಬೆಕ್ಕಣ್ಣ ತಲೆಎತ್ತದೆ ಇನ್ನೂ ಗೀಚುತ್ತಲೇ ‘ಇದು ಬೆಂಗಳೂರಿನಿಂದ ಹಿಡಿದು ಇಡೀ ರಾಜ್ಯದ ಕುಗ್ರಾಮಗಳವರೆಗೆ ಎಲಿವೇಟೆಡ್ ಎಕ್ಸ್‌ಪ್ರೆಸ್ ಹೈವೇ’ ಎಂದಿತು.

‘ನಮ್ಮ ಎಷ್ಟೋ ಹಳ್ಳಿಗಳಿಗೆ ನೆಲದ ಮ್ಯಾಗೇ ರಸ್ತೆ ಇಲ್ಲ, ಹಳ್ಳಿ ಬಿಡು, ಬೆಂಗಳೂರಿನಾಗೂ ಎಷ್ಟೋ ಕಡಿಗಿ ಗುಂಡಿಗಳನ್ನ ಹೈಜಂಪ್ ಮಾಡ್ತಾ ಹೋಗಬೇಕಾಗೈತಿ. ಅಂಥಾದ್ರಾಗೆ ಇದೇನಲೇ ನೆಲದಿಂದ ಮ್ಯಾಗಿನ ರಸ್ತೆ’ ಎಂದೆ ಬೆಪ್ಪಳಾಗಿ.

‘ಮೊನ್ನೆ ಶಾಸಕರೊಬ್ಬರು ಅಲವತ್ತು ಕೊಂಡಾರ, ಟೋಲ್ನಾಗೆ ನಮಗೆ ನಿಂದ್ರಿಸಿ ಐಡಿ ಕೇಳಿ ಅವಮಾನಿಸ್ತಾರ. ನಾವೇನು ಶ್ರೀಸಾಮಾನ್ಯರೇನು ಐಡಿಪೈಡಿ ಎಲ್ಲ ತೋರಿಸಿಗೋತ ನಿಂದರಾಕೆ, ನಮಗೆ ಪ್ರತ್ಯೇಕ ಪಥವೇ ಬೇಕು ಅಂತ. ಬರೋಬ್ಬರಿ ಹೇಳ್ಯಾರ. ಟೋಲ್ಗೇಟಿನಾಗೆ ಮಾತ್ರವಲ್ಲ, ಜನಸೇವೆ ಮಾಡಾಕ ಟೊಂಕ ಕಟ್ಟಿ ನಿಂತೋರಿಗೆ ಎಲ್ಲಾ ಕಡಿಗಿ ಓಡಾಡಾಕೆ ಸ್ಪೆಶಲ್ ರಸ್ತೆ ಬೇಕು. ನೆಲದ ಮ್ಯಾಗೆ ವಿಶೇಷ ಪಥ ಮಾಡಿದ್ರ, ಎಲ್ಲಾ ಮಂದೀನೂ ಅದ್ರಾಗೆ ಎಮ್ಮಿ ಹಂಗ ನುಗ್ಗತಾರ. ಶಾಸಕರು, ಸಚಿವರು ಅಂದ್ರ ಕಿಮ್ಮತ್ತಿಲ್ಲೇನ್? ಅವರಿಗೆ ಅಡ್ಡಾಡಕಂತ ಈ ಎಲಿವೇಟೆಡ್ ಎಕ್ಸ್‌ಪ್ರೆಸ್ ಹೈವೇ ಯೋಜನೆ ತಯಾರು ಮಾಡೀನಿ’ ಉದ್ದಕ್ಕೆ ವಿವರಿಸುತ್ತಲೇ ಇತ್ತು.

‘ಹಂಗಾರೆ ಇವ್ರಿಗೆಲ್ಲ ಬೇರೆಬೇರೆ ಕಡೇನೂ ಸ್ಪೆಶಲ್ ಜಾಗ ಇಡಬೇಕಾಗತೈತಿ’ ಎಂದೆ. ‘ಹೌದು, ಅದು ಬ್ಯಾರೆ ಪ್ರಾಜೆಕ್ಟ್ ತಯಾರು ಮಾಡೀನಿ’ ಎಂದು ಕಣ್ಣು ಮಿಟುಕಿಸಿತು.

‘ನಯಾಪೈಸಿ ದುಡಿಮೆ ಇಲ್ಲದ ಹಿಂತಾ ಕಾರುಬಾರು ಮಾಡೂ ಬದಲಿಗಿ, ನಿಮ್ಮ ಗಡ್ಕರಿ ಅಂಕಲ್ ಯುಟ್ಯೂಬಿನಾಗೆ ವಿಡಿಯೊ ಅಪ್ಲೋಡ್ ಮಾಡಿ ತಿಂಗಳಿಗೆ ನಾಕು ಲಕ್ಷ ಸಂಪಾದನೆ ಮಾಡತಾನಂತ. ಅಂತಾದೇನರೂ ಮಾಡಲೇ’ ಅಂದೆ.

‘ಹಿಂತಾ ಯೋಜನೆಗಳ ವಿಡಿಯೊ ಮಾಡಿ, ಯುಟ್ಯೂಬಿನಾಗೆ ಅಪ್ಲೋಡ್ ಮಾಡತೀನಿ, ನನ್ನ ವಿಡಿಯೊನೂ ಬೇಜಾನ್ ಮಂದಿ ನೋಡತಾರ’ ಎಂದು ಮತ್ತೊಂದು ಹೊಸ ಯೋಜನೆ ಹೊಸೆಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT