ಬುಧವಾರ, ಸೆಪ್ಟೆಂಬರ್ 29, 2021
20 °C
ರಾಜಕಾರಣದಲ್ಲಿ ಮಠಾಧೀಶರ ಪಾಲ್ಗೊಳ್ಳುವಿಕೆ ಸರಿಯೇ?

ಪ್ರಜಾತಂತ್ರದಲ್ಲಿ ಮಠಗಳ ಪ್ರಾಬಲ್ಯ ಹೆಚ್ಚುತ್ತಲೇ ಹೋಗಿದ್ದು ಹೇಗೆ?

ಜಾನಕಿ ನಾಯರ್‌ Updated:

ಅಕ್ಷರ ಗಾತ್ರ : | |

ಮಠಾಧೀಶರು, ಜನಪ್ರಾತಿನಿಧ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ  ವ್ಯಕ್ತಿ, ಪಕ್ಷ ಅಥವಾ ಸಿದ್ಧಾಂತವನ್ನು ಸಾರ್ವಜನಿಕವಾಗಿ ಬೆಂಬಲಿಸಬಹುದೇ? ಹಿಂದುಳಿದ ಜಾತಿಗಳಿಗೆ ಇರುವ ಮೀಸಲಾತಿಯ ವರ್ಗೀಕರಣದಲ್ಲಿ ಪಂಚಮಸಾಲಿ ಲಿಂಗಾಯತರನ್ನು 3ಬಿ ವರ್ಗದ ಬದಲಿಗೆ 2ಎ ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು 2021ರ ಆರಂಭದಲ್ಲಿ ಉಗ್ರವಾಗಿಯೇ ಪ್ರತಿಪಾದಿಸಲಾದ ಬಳಿಕ ಈ ಪ್ರಶ್ನೆಯ ಬಗ್ಗೆ ಹಲವರು ಸಾರ್ವಜನಿಕ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಅದೇ ಸ್ಥಾನದಲ್ಲಿ ಉಳಿಸಬೇಕು ಎಂದು ದೊಡ್ಡ ಸಂಖ್ಯೆಯಲ್ಲಿ ಮಠಾಧೀಶರು ಸಾರ್ವಜನಿಕವಾಗಿ ಆಗ್ರಹಿಸಿದ್ದರು. ಮಠಾಧೀಶರು ಮುಂದಿಟ್ಟ ಹಲವು ಬೇಡಿಕೆಗಳು ಬೆದರಿಕೆಯ ಅಂಚಿನಲ್ಲಿಯೇ ಇದ್ದವು. ಕಾವಿಧಾರಿಗಳು ಇಂತಹ ಆಗ್ರಹಗಳನ್ನು ಇರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸರಿಯೇ ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ. 


ಜಾನಕಿ ನಾಯರ್‌

ಬಹುದೀರ್ಘ ಕಾಲದಿಂದ ಒಳಗೊಳಗೇ ರೂಪುಗೊಳ್ಳುತ್ತಿದ್ದ ಪ್ರಕ್ರಿಯೆಯೊಂದರ ಅಭಿವ್ಯಕ್ತಿ ಎಂದು ಮಠಾಧೀಶರು ಬೀದಿಗೆ ಇಳಿದಿದ್ದನ್ನು ವಿಶ್ಲೇಷಿಸಬಹುದು. 1883ರಲ್ಲಿಯೇ ಆರಂಭಗೊಂಡು ಅತ್ಯಂತ ಗಟ್ಟಿಯಾಗಿ ನೆಲೆಯೂರಿರುವ ಮುಜರಾಯಿ ಇಲಾಖೆಯ ಸಾವಿರಾರು ಪುಟಗಳ ಕಡತಗಳನ್ನು ಅಧ್ಯಯನ ಮಾಡಿರುವ ಮಾನವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು, ಮಠಗಳು ಮತ್ತು ಮೈಸೂರು/ಕರ್ನಾಟಕ ಸರ್ಕಾರದ ನಡುವಣ ಸಂಕೀರ್ಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಯತ್ನ ನಡೆಸಿದ್ದಾರೆ. ಕೆಲವು ಪ್ರಮುಖ ಮಠಗಳು ತಮ್ಮನ್ನು ಸಂಸ್ಥಾನಗಳು ಅಥವಾ ಸಿಂಹಾಸನ ಪೀಠಗಳು ಎಂದೂ ಸ್ವಾಮೀಜಿಯನ್ನು ಜಗದ್ಗುರು, ನೃಪ ಇತ್ಯಾದಿಯಾಗಿ ಕರೆದುಕೊಳ್ಳುವುದನ್ನೂ ನಾವು ನೋಡಿದ್ದೇವೆ. ಕೆಲವು ಮಠಗಳ ಕಟ್ಟಡದ ನಿರ್ಮಾಣವೇ ಕೋಟೆಯನ್ನು ಹೋಲುವಂತಿವೆ. ಮಠಗಳಲ್ಲಿ ನಡೆಯುವ ದಸರಾ ದರ್ಬಾರ್‌ ಸಂದ‌ರ್ಭದಲ್ಲಿ ಮಠಾಧೀಶರು ನಾಡನ್ನಾಳುವ ದೊರೆಗಳಂತೆಯೇ ತಮ್ಮನ್ನು ಬಿಂಬಿಸಿಕೊಳ್ಳುತ್ತಾರೆ (ಪ್ರಭಾವಳಿ ಮತ್ತು ದೃಶ್ಯಾವಳಿಗಳೆರಡಲ್ಲೂ ಇದು ನಿಜ). ಕಿರಿಯ ಸ್ವಾಮೀಜಿಯನ್ನು ಮಠಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಪಟ್ಟಾಭಿಷೇಕ ಎಂದೇ ಹೆಸರು. 

ಕರ್ನಾಟಕದ ಮಠಗಳು ಅದರಲ್ಲೂ ವಿಶೇಷವಾಗಿ ಲಿಂಗಾಯತ ಮಠಗಳು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಕ್ಕೆ ಪರ್ಯಾಯವಾಗಿ ತಮ್ಮನ್ನು ಬಿಂಬಿಸಿಕೊಳ್ಳುವುದು ನೇರವಾದ ರೀತಿಯಲ್ಲಿ ಮುನ್ನೆಲೆಗೆ ಬಂದಿದ್ದು ಅಲ್ಲ. ಹಾಗೆ ನೋಡಿದರೆ, ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಸರ್ಕಾರವು ಮಠಗಳನ್ನು ನಿಯಂತ್ರಣದಲ್ಲಿಯೇ ಇರಿಸಿಕೊಂಡಿತ್ತು. ಮಠಗಳು ಎಷ್ಟು ವರ್ಷ ಹಳೆಯವು ಮತ್ತು ಅವುಗಳ ಸಂಪತ್ತು ಎಷ್ಟು ಎಂಬುದರ ಆಧಾರದಲ್ಲಿ ಮೈಸೂರು ಆಡಳಿತವು ಮಠಗಳನ್ನು ಶ್ರೇಣೀಕರಣಗೊಳಿಸಿತ್ತು. ಬಿರುದುಗಳಿಗೆ ಸಂಬಂಧಿಸಿ ನಡೆದ ಸಂಘರ್ಷದಲ್ಲಿಯೂ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಮೈಸೂರಿನ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಬೇಕು ಎಂಬ ಲಿಂಗಾಯತ ಮಠಗಳ ಬೇಡಿಕೆಗೆ ಸಂಬಂಧಿಸಿ ನ್ಯಾಯಾಲಯಗಳು ಮಹತ್ವದ ಪಾತ್ರ ವಹಿಸಿವೆ. ಶೃಂಗೇರಿ ಸ್ವಾಮೀಜಿಗಳನ್ನು ಬಿಟ್ಟರೆ ಇತರ ಯಾವ ಸ್ವಾಮೀಜಿಗೂ ಈ ಹಕ್ಕು ಇಲ್ಲ ಎಂದು ನ್ಯಾಯಾಲಯಗಳು ಹೇಳಿವೆ. 19ನೇ ಶತಮಾನದ ಕೊನೆಯ ಅವಧಿಯಲ್ಲಿ ಹಕ್ಕುಗಳಿಗೆ ಸಂಬಂಧಿಸಿ ಇಂತಹ ಹಲವು ಸಂಘರ್ಷಗಳು ನ್ಯಾಯಾಲಯಗಳಲ್ಲಿ ನಡೆದಿವೆ. ವಸಾಹತುಶಾಹಿ ಅವಧಿಯಲ್ಲಿ‌, ಮಠಗಳು ಸೇರಿದಂತೆ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಮೇಲ್ವಿಚಾರಣೆ ನಡೆಸುವುದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳ ಆಡಳಿತಾತ್ಮಕ ಕರ್ತವ್ಯದಲ್ಲಿ ನಿಯಮಿತವಾದ ಚಟುವಟಿಕೆ ಆಗಿತ್ತು. ತಮ್ಮ ವ್ಯಾಪ್ತಿಯ ಎಲ್ಲ ಧಾರ್ಮಿಕ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಅಧಿಕಾರಿಗಳು ನಡೆಸುತ್ತಿದ್ದರು; ವಂಶಪಾರಂಪರ್ಯದ ಉತ್ತರಾಧಿಕಾರಕ್ಕೆ ಸಂಬಂಧಿಸಿದ ತಕರಾರುಗಳನ್ನು ಬಗೆಹರಿಸುವುದು, ಈ ಸಂಸ್ಥೆಗಳ ಸಿಬ್ಬಂದಿ ನಿರ್ವಹಣೆ, ಈ ಮಠಗಳು ಯಾವ ಪ್ರಮಾಣದ ವೆಚ್ಚ ಮಾಡಬಹುದು ಎಂಬುದರ ನಿಗದಿ ಮತ್ತು ಕೆಲವೊಮ್ಮೆ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಎಲ್ಲವನ್ನೂ ಅಧಿಕಾರಿಗಳು ಮಾಡುತ್ತಿದ್ದರು.

ಸ್ವಾತಂತ್ರ್ಯದ ಬಳಿಕ ಜನಪ್ರಾತಿನಿಧ್ಯದ ಪ್ರಜಾತಂತ್ರದಲ್ಲಿ ಇವೆಲ್ಲವೂ ಬದಲಾಗಿದ್ದು ಹೇಗೆ? ಸರ್ಕಾರದ ಅಧಿಕಾರಕ್ಕೆ ಪರ್ಯಾಯವಾಗಿ ದಿನನಿತ್ಯದ ಜೀವನದಲ್ಲಿ ಸಂಧಾನಕಾರರ ಪಾತ್ರವು ತಮಗೆ ದೊರೆಯುವಂತೆ ಮಾಡಿಕೊಳ್ಳುವಲ್ಲಿ ಮಠಗಳ ಪಾತ್ರ ಏನಿದೆ? ತಮ್ಮ ಸಮುದಾಯಗಳಿಗೆ ಸಂಬಂಧಿಸಿ ಕಾವಿಧಾರಿಗಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂಬುದು ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳು ಮತ್ತು ವರದಿಗಳನ್ನು ನೋಡಿದರೆ ಮನದಟ್ಟಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಥವಾ ವ್ಯಾಜ್ಯಗಳನ್ನು ಪರಿಹರಿಸುವುದು ಎಲ್ಲದರಲ್ಲಿಯೂ ಮಠದ ಭಾಗವಹಿಸುವಿಕೆಯು ಗಣನೀಯವಾಗಿಯೇ ಇದೆ. 

ಸರ್ಕಾರವು ನಡೆಸುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಠಾಧೀಶರು ಭಾಗಿಯಾಗುತ್ತಿದ್ದಾರೆ ಎಂದಾದರೆ ಅವರಿಗೆ ರಾಜಕಾಣಿಗಳಿಗಿಂತ ಸ್ವಲ್ಪ ಎತ್ತರದ ಕುರ್ಚಿ ಹಾಕಲಾಗುತ್ತದೆ. ಚುನಾಯಿತ ಪ್ರತಿನಿಧಿಗಳಿಂದ ಈ ಸ್ವಾಮೀಜಿಗಳು ಭಾರಿ ಗೌರವ ಪಡೆದುಕೊಳ್ಳುತ್ತಾರೆ. ತಾವು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಬೇಕು ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಪಾಲುದಾರಿಕೆ ದೃಢವಾಗಿ ಇರಲೇಬೇಕು ಎಂಬ ಬಯಕೆಯ ಕಾರಣದಿಂದಾಗಿಯೇ ಅವರ ಸ್ಥಾನಮಾನವು ಎತ್ತರದ್ದಾಗಿ ಬದಲಾಗಿದೆ. ಜನಪ್ರಾತಿನಿಧ್ಯ ಪ್ರಜಾತಂತ್ರದ ಸಂಸ್ಥೆಗಳು ಹೆಚ್ಚುಹೆಚ್ಚು ದೃಢವಾಗುತ್ತಾ ಸಾಗಿದಂತೆಯೇ ಮಠಗಳ ರಾಜಕೀಯ ಶಕ್ತಿಯು ಕುಸಿಯುವ ಬದಲಿಗೆ ಹೆಚ್ಚುತ್ತಲೇ ಹೋಗಿದೆ. ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಮಠಗಳ ಪ್ರಾಬಲ್ಯವು ಹೆಚ್ಚುತ್ತಲೇ ಹೋಗಿದೆ ಮತ್ತು 20ನೇ ಶತಮಾದನಲ್ಲಿ ಹೆಚ್ಚುತ್ತಲೇ ಹೋದ ಜಾತಿ ಸಂಘಗಳಿಗಿಂತಲೂ ಮಠಗಳೇ ಹೆಚ್ಚು ಪ್ರಾಬಲ್ಯವನ್ನು ತೋರುತ್ತಿವೆ. ಈ ಮಠಗಳೇ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ.

ನಿಜವಾಗಿಯೂ ಅತ್ಯಂತ ಸಣ್ಣ ಜಾತಿಗಳು ಕೂಡ ಈಗ ಮಠಗಳನ್ನು ಹೊಂದುವುದು ಕಡ್ಡಾಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಮೀಸಲಾತಿ ವರ್ಗೀಕರಣ ಬದಲಾವಣೆಯ ಹೋರಾಟದಲ್ಲಿ ಕಂಡ ಹಾಗೆ ತಾವು ಹೆಚ್ಚು ಹೆಚ್ಚು ಕಾಣಿಸಿಕೊಳ್ಳ ಬೇಕು ಎಂದು ಮಠಗಳು ಬಯಸುತ್ತಿವೆ. ಸರ್ಕಾರವು ತಮ್ಮತ್ತ ಗಮನ ಹರಿಸುತ್ತಲೇ ಇರಬೇಕು ಎಂಬ ಆಕಾಂಕ್ಷೆಯನ್ನೂ ಹೊಂದಿವೆ. 

ತಮ್ಮ ಅನುಯಾಯಿಗಳು ಕೈಗೊಳ್ಳುವ ನಿರ್ಧಾರಗಳ ಹಿಂದಿನ ಶಕ್ತಿಯಾಗುವಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಬದಲು ಮಠಾಧೀಶರೇ ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಇನ್ನು ಉಳಿದಿರುವುದು ಒಂದು ಸಣ್ಣ ಮೆಟ್ಟಿಲು ಮಾತ್ರ ಎಂಬುದನ್ನು ಈ ಎಲ್ಲವೂ ತೋರಿಸುತ್ತಿದೆಯೇ? ನೇರವಾಗಿ ಚುನಾವಣಾ ಕಣಕ್ಕೆ ಇಳಿಯುವ ಪ್ರಯತ್ನವನ್ನು ಕೆಲವು ಸಣ್ಣ ಮಠಗಳು ಮಾಡಿವೆ. ಮತಗಳನ್ನು ಪಡೆದುಕೊಂಡರೆ ಉಂಟಾಗುವ ಒಂದು ರೀತಿಯ ಉತ್ತರದಾಯಿತ್ವಕ್ಕಾಗಿ ತಾವು ಈಗಾಗಲೇ ಹೊಂದಿರುವ ನೈತಿಕ ಅಧಿಕಾರವನ್ನು ಕಳೆದುಕೊಳ್ಳಲು ಮಠಾಧೀಶರು ಮುಂದಾಗುವ ಸಾಧ್ಯತೆ ಕಡಿಮೆ.

ಹಾಗಾಗಿಯೇ, ಮಠಾಧೀಶರು ರಾಜಕೀಯ ಅಧಿಕಾರದ ಆಕರ್ಷಣೆಗೆ ಒಳಗಾದ ನಿದರ್ಶನ ಈವರೆಗೆ ಕಂಡು ಬಂದಿಲ್ಲ. ಆದರೆ, ಕಳೆದ ಒಂದೂವರೆ ಶತಮಾನದ ಅವಧಿಯಲ್ಲಿ ಮಠ ಮತ್ತು ಸರ್ಕಾರದ ನಡುವಣ ಸಂಬಂಧವು ಬದಲಾಗಿದೆ ಮತ್ತು ಹೊಸ ರೂಪ ಪಡೆದುಕೊಂಡಿದೆ. ಈಗಂತೂ, ಹೊಸ ರೀತಿಯ ಸಂಬಂಧವೊಂದು ಹರಳುಗಟ್ಟಲು ಆರಂಭವಾಗಿದೆ. 

ಲೇಖಕಿ: ಇತಿಹಾಸ ಪ್ರಾಧ್ಯಾಪಕಿ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ, ದೆಹಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು