ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಕೊಲಿಜಿಯಂ: ಮಾದರಿ ವ್ಯವಸ್ಥೆಯೇನೂ ಅಲ್ಲ

ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಕಾರ್ಯಾಂಗದ ಪ್ರಾತಿನಿಧ್ಯ ಇರಬೇಕೇ?
Last Updated 20 ಜನವರಿ 2023, 22:44 IST
ಅಕ್ಷರ ಗಾತ್ರ

ಒಂದು ಮಾದರಿಯಾದ ವ್ಯವಸ್ಥೆಯಾಗಿದ್ದಲ್ಲಿ, ನ್ಯಾಯಮೂರ್ತಿಗಳ ನೇಮಕಾತಿಯ ಅಧಿಕಾರವು ಸಂಪೂರ್ಣವಾಗಿ ನ್ಯಾಯಮೂರ್ತಿಗಳ ಕೈಯಲ್ಲೇ ಇರಬಾರದು. ಇಲ್ಲಿ ನ್ಯಾಯಮೂರ್ತಿಗಳ ಉತ್ತರದಾಯಿತ್ವದ ಪ್ರಶ್ನೆಯೂ ಇದೆ. ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಲು ದೀರ್ಘಕಾಲದವರೆಗೆ ಹಿಂದೇಟು ಹಾಕಿದ್ದರಿಂದ ಹಿಡಿದು, ಕೊಲಿಜಿಯಂನ ಭಾಗವೇ ಆಗಿದ್ದ ನ್ಯಾಯಮೂರ್ತಿ ಖೇಹರ್ ಅವರು ಎನ್‌ಜೆಎಸಿ ಪ್ರಕರಣವನ್ನು ನಿರ್ಧರಿಸಿದ್ದು – ಹೀಗೆ ನ್ಯಾಯಾಂಗವು ಅಸಾಧಾರಣವಾದುದು ಎಂಬ ಮನಸ್ಥಿತಿ ಇದೆ

***

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ವಸ್ತುನಿಷ್ಠವಾಗಿಸುವ ಸಲುವಾಗಿ ಶೋಧ ಮತ್ತು ಮೌಲ್ಯಮಾಪನ ಸಮಿತಿ ರಚಿಸಬೇಕು ಎಂದು ಕೇಂದ್ರ ಕಾನೂನು ಸಚಿವರು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್‌ ಅವರಿಗೆ ಪತ್ರ ಬರೆದಿರುವುದು ವರದಿಯಾಗಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರು ಈ ಶೋಧ ಮತ್ತು ಮೌಲ್ಯಮಾಪನ ಸಮಿತಿಯಲ್ಲಿ ಸದಸ್ಯರಾಗಿರಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಕೊಲಿಜಿಯಂನಲ್ಲಿ ನಮಗೆ ಪ್ರಾತಿನಿಧ್ಯ ಇರಬೇಕು ಎಂದು ಸರ್ಕಾರವು ಈ ಪತ್ರದಲ್ಲಿ ಕೇಳಿಲ್ಲ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯನ್ನು ನಮ್ಮ ಸಂವಿಧಾನ ನಿಗದಿ ಮಾಡಿಲ್ಲ. ನ್ಯಾಯಾಂಗದ ಉನ್ನತ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಣ ಜಟಾಪಟಿಗೆ ಇದು ಕಾರಣವಾಗಿದೆ. ಸಂವಿಧಾನದ 124(2)ನೇ ವಿಧಿಯು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಮಾಲೋಚನೆಯ ಆಧಾರದಲ್ಲಿ ನ್ಯಾಯಾಂಗದ ನೇಮಕಾತಿಗಳನ್ನು ನಡೆಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ (ಅವರು ಕಾರ್ಯಾಂಗದ ಭಾಗ). ಅದೂ ಅಗತ್ಯವಿದೆ ಎಂದು ರಾಷ್ಟ್ರಪತಿಯು ಭಾವಿಸಿದರೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕಾತಿ ಮತ್ತು ವರ್ಗಾವಣೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ತನ್ನ ವಿಶೇಷ ಉಲ್ಲೇಖ ಸಂಖ್ಯೆ 1(1998)7ಎಸ್‌ಸಿಸಿ739ರಲ್ಲಿ ವಿವರಿಸಿದೆ (ಈ ಉಲ್ಲೇಖವನ್ನು ಥರ್ಡ್‌ ಜಡ್ಜ್‌ ಕೇಸ್‌ ಎಂದು ಕರೆಯಲಾಗುತ್ತದೆ). ಈ ಉಲ್ಲೇಖದ ಮೂಲಕ ವಿವರಿಸಲಾದ ವ್ಯವಸ್ಥೆಯೇ ಕೊಲಿಜಿಯಂ. ಕೊಲಿಜಿಯಂನಲ್ಲಿ ಸು‍ಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇರುತ್ತಾರೆ. ಕಾರ್ಯಾಂಗದ ಪ್ರಾಬಲ್ಯದಿಂದ ನ್ಯಾಯಾಂಗವನ್ನು ರಕ್ಷಿಸುವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಪರಿಗಣಿಸಿ, ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ನ್ಯಾಯಾಂಗದ ಮೇಲೆ ಕಾರ್ಯಾಂಗದ ಪ್ರಾಬಲ್ಯವು, ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಾಧಿಸುತ್ತದೆ ಎಂಬ ಕಳವಳವು ಸಮಂಜಸವಾದದ್ದೇ. ತೀರಾ ಹಿಂದಿನದ್ದೇನೂ ಅಲ್ಲ, ಇಂದಿರಾ ಗಾಂಧಿ ಸರ್ಕಾರವು ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಮತ್ತು ತನ್ನ ವಿರುದ್ಧ ತೀರ್ಪು ಬರುವುದನ್ನು ತಡೆಯಲು ನ್ಯಾಯಾಂಗದ ನೇಮಕಾತಿ ಹಾಗೂ ವರ್ಗಾವಣೆಯನ್ನು ಬಳಸಿಕೊಳ್ಳುತ್ತಿತ್ತು. ನ್ಯಾಯಾಂಗದ ನೇಮಕಾತಿಯಲ್ಲಿನ ಕಾರ್ಯಾಂಗದ ಪ್ರಾಬಲ್ಯವು, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಅಪಾಯ.

ಕಾರ್ಯಾಂಗದ ಪಾಲ್ಗೊಳ್ಳುವಿಕೆಯು, ಕಾರ್ಯಾಂಗದ ಪ್ರಾಬಲ್ಯಕ್ಕಿಂತ ಭಿನ್ನವಾದುದು. ಈಗಿನ ಸ್ವರೂಪದಲ್ಲಿರುವ ಕೊಲಿಜಿಯಂ ವ್ಯವಸ್ಥೆಯು ಮಾದರಿಯಾಗೇನೂ ಇಲ್ಲ. ಕೊಲಿಜಿಯಂ, ನೇಮಕಾತಿಗಳನ್ನು ಹೇಗೆ ನಡೆಸಬೇಕು ಎಂಬ ಸ್ಪಷ್ಟ ಮಾರ್ಗಸೂಚಿಗಳು ಇಲ್ಲ. ಇಡೀ ಪ್ರಕ್ರಿಯೆಯು ಗೋಪ್ಯವಾಗಿ ನಡೆಯುತ್ತದೆ. 2017ರಿಂದ ಈಚೆಗೆ ಕೊಲಿಜಿಯಂನ ನಿರ್ಣಯಗಳನ್ನು ಸುಪ್ರೀಂ ಕೋರ್ಟ್‌ನ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ. 2017 ಮತ್ತು 2019ರ ನಡುವಣ ನ್ಯಾಯಮೂರ್ತಿಗಳ ನೇಮಕಾತಿಗೆ ಕಾರಣಗಳನ್ನು ನೀಡಲಾಗಿದೆ. ಉದಾಹರಣೆಗೆ, 3ನೇ ಅಕ್ಟೋಬರ್‌ 2017ರಲ್ಲಿ ಕೇರಳ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ನೇಮಕವಾದ ಪ್ರತಿಯೊಬ್ಬ ನ್ಯಾಯಾಂಗದ ಅಧಿಕಾರಿಯ ವಿವರ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ನಿರ್ಣಯದಲ್ಲಿ ವಿವರಿಸಲಾಗಿತ್ತು. ಆದರೆ, ನ್ಯಾಯಮೂರ್ತಿಗಳಾಗಿ ನೇಮಕವಾದವರ ಆಯ್ಕೆಗೆ ಕಾರಣಗಳು ಮತ್ತು ಆಯ್ಕೆಯಾಗದೇ ಇರುವವರನ್ನು ತಿರಸ್ಕರಿಸಲು ಕಾರಣಗಳನ್ನು ಆ ನಿರ್ಣಯದಲ್ಲಿ ಉಲ್ಲೇಖಿಸಿಲ್ಲ.

2019ರ ನಂತರ ಪ್ರಕಟಿಸಲಾಗುತ್ತಿರುವ ನಿರ್ಣಯಗಳಲ್ಲಿ ಇಂತಹ ಕನಿಷ್ಠ ವಿವರಗಳೂ ಇಲ್ಲ. ಜಾಲತಾಣದಲ್ಲಿ ನಿರ್ಣಯಗಳನ್ನು ಪ್ರಕಟಿಸುವುದು ಸಾಮಾನ್ಯ ಎಂಬಂತಾಗಿದ್ದು, ಅದಕ್ಕೆ ಅರ್ಥವೇ ಇಲ್ಲ. 2022ರ ಸೆಪ್ಟೆಂಬರ್‌ 28ರಂದು ಕೊಲಿಜಿಯಂನ ನಿರ್ಣಯವನ್ನು ಪ್ರಕಟಿಸಲಾಗಿದೆ. ಅದರಲ್ಲಿ ನ್ಯಾಯಮೂರ್ತಿ ಜಸ್ವಂತ್ ಸಿಂಗ್‌, ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಲಿ ಮೊಹಮ್ಮದ್ ಮಾಗ್ರೆ ಅವರನ್ನು ಕ್ರಮವಾಗಿ ಒಡಿಶಾ, ಕರ್ನಾಟಕ ಮತ್ತು ಜಮ್ಮು–ಕಾಶ್ಮೀರ ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ ಎಂದಷ್ಟೇ ಹೇಳಲಾಗಿದೆ. ಬೇರೆ ಯಾವುದೇ ಮಾಹಿತಿ ಅದರಲ್ಲಿ ಇಲ್ಲ. ಇದರ ಪರಿಣಾಮವಾಗಿ, ನೇಮಕಾತಿ ಮತ್ತು ವರ್ಗಾವಣೆಗೆ ನ್ಯಾಯಮೂರ್ತಿಗಳನ್ನು ಹೇಗೆ ಆಯ್ಕೆ ಮಾಡಲಾಯಿತು ಎಂಬುದು ನಾಗರಿಕರಿಗೆ ಗೊತ್ತಾಗುವುದೇ ಇಲ್ಲ. ಸೌರವ್ ಕೃಪಾಲ್‌ ಅವರನ್ನು ನ್ಯಾಯಮೂರ್ತಿಯಾಗಿ ಆಯ್ಕೆ ಮಾಡದಿರಲು ಸರ್ಕಾರವು ಮುಂದಿಟ್ಟಿರುವ ಪೂರ್ವಗ್ರಹಪೀಡಿತ ಆಕ್ಷೇಪಗಳನ್ನು ಸುಪ್ರೀಂ ಕೋರ್ಟ್‌ ಈಚೆಗೆ ಬಹಿರಂಗಪಡಿಸಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಎರಡರ ಕಾರಣಗಳೂ ಮುಕ್ತ ಹಾಗೂ ಪಾರದರ್ಶಕವಾಗಿ ಇರಬೇಕಾದ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.

ಹೈಕೋರ್ಟ್‌ಗಳ ಸ್ವಾತಂತ್ರ್ಯದ ಮೇಲಿನ ಪ್ರಭಾವವು, ಕೊಲಿಜಿಯಂ ವ್ಯವಸ್ಥೆಯಲ್ಲಿನ ಮತ್ತೊಂದು ಕೊರತೆ. ಸಂವಿಧಾನದ ಪ್ರಕಾರ ನಮ್ಮ ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುವುದಿಲ್ಲ. ಆದರೆ, ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವ ಅತಿ ವಿವೇಚನೆಯನ್ನು ಸುಪ್ರೀಂ ಕೋರ್ಟ್‌ನ ಕೆಲವೇ ನ್ಯಾಯಮೂರ್ತಿಗಳ ಕೈಗೆ ಕೊಲಿಜಿಯಂ ವ್ಯವಸ್ಥೆ ನೀಡಿದೆ. ಈ ಮೂಲಕ ಹೈಕೋರ್ಟ್‌ಗಳ ಸ್ವಾತಂತ್ರ್ಯವನ್ನು ಕೊಲಿಜಿಯಂ ಇಲ್ಲವಾಗಿಸಿದೆ. ಈಗಿನ ಸ್ವರೂಪದಲ್ಲಿರುವ ಕೊಲಿಜಿಯಂ ವ್ಯವಸ್ಥೆಯು, ವೈವಿಧ್ಯಮಯ ನ್ಯಾಯಾಂಗವನ್ನು ರೂಪಿಸುವಲ್ಲಿ ವಿಫಲವಾಗಿದೆ. 2018ರಿಂದ 2022ರವರೆಗೆ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಕವಾದವರಲ್ಲಿ ಶೇ 79ರಷ್ಟು ಜನರು ಪ್ರಭಾವಿ ಜಾತಿಗಳಿಗೆ ಸೇರಿದವರು ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ಸುವ್ಯವಸ್ಥೆಯ ಸಂಸದೀಯ ಸಮಿತಿಗೆ ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ. 25 ವರ್ಷಗಳಲ್ಲಿ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾದವರಲ್ಲಿ ಮಹಿಳೆಯರ ಪ್ರಮಾಣ ಶೇ 8ಕ್ಕಿಂತಲೂ ಕಡಿಮೆ.

ಒಂದು ಮಾದರಿಯಾದ ವ್ಯವಸ್ಥೆಯಾಗಿದ್ದಲ್ಲಿ, ನ್ಯಾಯಮೂರ್ತಿಗಳ ನೇಮಕಾತಿಯ ಅಧಿಕಾರವು ಸಂಪೂರ್ಣವಾಗಿ ನ್ಯಾಯಮೂರ್ತಿಗಳ ಕೈಯಲ್ಲೇ ಇರಬಾರದು. ಇಲ್ಲಿ ನ್ಯಾಯಮೂರ್ತಿಗಳ ಉತ್ತರದಾಯಿತ್ವದ ಪ್ರಶ್ನೆಯೂ ಇದೆ. ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಲು ದೀರ್ಘಕಾಲದವರೆಗೆ ಹಿಂದೇಟು ಹಾಕಿದ್ದರಿಂದ ಹಿಡಿದು, ಕೊಲಿಜಿಯಂನ ಭಾಗವೇ ಆಗಿದ್ದ ನ್ಯಾಯಮೂರ್ತಿ ಖೇಹರ್ ಅವರು ಎನ್‌ಜೆಎಸಿ ಪ್ರಕರಣವನ್ನು ನಿರ್ಧರಿಸಿದ್ದು– ಹೀಗೆ ನ್ಯಾಯಾಂಗವು ಅಸಾಧಾರಣವಾದುದು ಎಂಬ ಮನಸ್ಥಿತಿ ಇದೆ. ಈ ಮನಸ್ಥಿತಿಯು ಕಳವಳಕಾರಿಯಾದುದು. ಜೊತೆಗೆ, ಉತ್ತರದಾಯಿಯಾಗಿರಲು ನ್ಯಾಯಮೂರ್ತಿಗಳು ಹಿಂದೇಟು ಹಾಕುತ್ತಿದ್ದಾರೆ.

ಎಲ್ಲಾ ಅಧಿಕಾರವೂ ತಮ್ಮಲ್ಲೇ ಇರಬೇಕು ಎಂಬ ಮನಸ್ಥಿತಿಯು ಉನ್ನತ ನ್ಯಾಯಾಂಗದ ಹಲವರಲ್ಲಿ ಇದೆ. ನ್ಯಾಯಮೂರ್ತಿಗಳಲ್ಲಿ ವೈವಿಧ್ಯದ ಕೊರತೆ ಇದೆ ಎಂಬುದನ್ನೂ ನಿರ್ಲಕ್ಷಿಸಲಾಗದು. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯ ಮಧ್ಯೆ ಸಮತೋಲನ ಸಾಧಿಸುವುದು ಹೇಗೆ ಎಂದು ಕೇಳಬೇಕಾದ ಸಮಯವಿದು. ಜತೆಗೆ ನೇಮಕಾತಿಗೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಪರಿಗಣಿಸಬೇಕು ಎಂದೂ ಕೇಳಬೇಕಾಗಿದೆ.

ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಿದೆ ಎಂದು ಕಾನೂನು ಸಚಿವರು ಹೇಳಿದ್ದು ಸರಿಯಾಗಿದೆ. ಸಾರ್ವಜನಿಕವಾಗಿ ಒಪ್ಪಿತವಾಗಿರುವ ಅರ್ಹತೆ ಮತ್ತು ವೈವಿಧ್ಯದಂತಹ ಮಾನದಂಡಗಳು ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿರಬೇಕು. ನ್ಯಾಯಾಂಗ ನೇಮಕಾತಿ ಸಂಸ್ಥೆಯ ಎಲ್ಲಾ ಪ್ರಕ್ರಿಯೆಗಳನ್ನು ಮತ್ತು ಪ್ರತಿಯೊಬ್ಬ ಸದಸ್ಯನ ಅಭಿಪ್ರಾಯಗಳನ್ನು ದಾಖಲಿಸಬೇಕು. ಇವು ಸಾರ್ವಜನಿಕರಿಗೆ ಲಭ್ಯವಿರಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ, ಮುಖ್ಯವಾಗಿ ಶೋಧ ಮತ್ತು ಮೌಲ್ಯಮಾಪನ ಸಮಿತಿಯ ರೂಪದಲ್ಲಿ ಕಾರ್ಯಾಂಗದ ಪಾಲ್ಗೊಳ್ಳುವಿಕೆಯನ್ನು ಒಪ್ಪಬಹುದು. ನೇಮಕಾತಿಗೆ ಪರಿಗಣಿಸುವ ಅಭ್ಯರ್ಥಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆ ಮೂಲಕ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸಲು ಈ ಸಮಿತಿಯು ನೆರವಾಗಬಹುದು. ಕಾರ್ಯಾಂಗದ ಪ್ರಾಬಲ್ಯ ಎಂಬುದು ಕಳವಳಕಾರಿ ವಿಷಯವಾಗಿರುವ ಕಾರಣ, ಅಂತಹ ಸಮಿತಿಯಲ್ಲಿ ನ್ಯಾಯಾಂಗದ ಸದಸ್ಯರ ಸಂಖ್ಯೆ ಹೆಚ್ಚು ಇರಬೇಕು. ಕಾರ್ಯಾಂಗದ ಪಾಲ್ಗೊಳ್ಳುವಿಕೆಯ ಪಕ್ಷಪಾತಿಯಾಗುವುದನ್ನು ತಪ್ಪಿಸಲು, ಕಾರ್ಯಾಂಗದ ಪ್ರಾತಿನಿಧ್ಯವು ವಿರೋಧ ಪಕ್ಷದ ನಾಯಕನನ್ನೂ ಒಳಗೊಳ್ಳುವಂತಾಗಬೇಕು. ಆದರೆ, ಇಂತಹ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಭಾಗವಾಗದೇ ಇರುವವರನ್ನು ಹೊರಗಿಡುವುದು ಅನಪೇಕ್ಷಿತ.

____________________________

–ಲಿಯಾ ಅವರು ಸಂಶೋಧನಾ ನಿರ್ವಾಹಕಿ, ಅನಿಂದಿತಾ ಅವರು ಸಂಶೋಧಕಿ, ದಕ್ಷ್‌ ಸಂಸ್ಥೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT