ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ದಲಿತರ ಹಣಕ್ಕೆ ‘ಕನ್ನ’ ಹಾಕಬೇಡಿ: ಗೋವಿಂದ ಎಂ. ಕಾರಜೋಳ

ಪರಿಶಿಷ್ಟ ಸಮುದಾಯಗಳ ಅನುದಾನವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ವರ್ಗಾಯಿಸಿದ್ದು ಸರಿಯೇ?
Published 5 ಆಗಸ್ಟ್ 2023, 0:25 IST
Last Updated 5 ಆಗಸ್ಟ್ 2023, 0:25 IST
ಅಕ್ಷರ ಗಾತ್ರ

ಗೋವಿಂದ ಎಂ. ಕಾರಜೋಳ

2013ರ ಕಾಯ್ದೆ ಅಡಿ ಈ ವಿಶೇಷ ಅನುದಾನವನ್ನು ದಲಿತರ ಏಳಿಗೆಗಾಗಿ ಶೈಕ್ಷಣಿಕ, ಸ್ವಯಂ ಉದ್ಯೋಗ, ಅವರ ವಾಸದ ಪ್ರದೇಶಗಳ ಅಭಿವೃದ್ಧಿಗಾಗಿಯೇ ಬಳಸಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಇತರ ಎಲ್ಲರಂತೆ ಸಮಾನವಾಗಿ, ಸ್ವಾಭಿಮಾನದಿಂದ ಬದುಕಬೇಕು ಎಂಬುದು ಕಾಯ್ದೆಯ ಆಶಯ. ಆದರೆ ಇವರು ಮಾಡುತ್ತಿರುವುದೇನು? ದಲಿತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಒಕ್ಕೊರಲಿನಿಂದ ಖಂಡಿಸಬೇಕು.

ವಿಧಾನಸಭೆ ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಪಕ್ಷ ಗ್ಯಾರಂಟಿಯ ಆಮಿಷವನ್ನು ಒಡ್ಡಿತ್ತು. ಆ ಆಮಿಷ ಈಡೇರಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನವನ್ನು (ಎಸ್‌ಸಿಎಸ್‌ಪಿ– ಟಿಎಸ್‌ಪಿ) ಬಳಸಿದ್ದಾರೆ. ಇದು ಆಘಾತಕಾರಿ. ದಲಿತ ಸಮುದಾಯವನ್ನು ಕಾಂಗ್ರೆಸ್‌ ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ. ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬಳಸಬೇಕಾದ ಅಮೂಲ್ಯ ನಿಧಿಗೆ ‘ಕನ್ನ’ ಹಾಕಿದ್ದಾರೆ. ಈ ರೀತಿ ಕದಿಯುವುದು ಸರ್ಕಾರದ ನೈತಿಕ ಅಧಃಪತನಕ್ಕೆ ನಿದರ್ಶನ.

ಅಷ್ಟಕ್ಕೂ ‘ಗ್ಯಾರಂಟಿ’ ಚುನಾವಣಾ ಆಮಿಷ. ಇದನ್ನು ವಿಶ್ಲೇಷಣೆಗೊಳಪಡಿಸುವುದೇ ಅಪರಾಧ ಎಂಬ ವಾತಾವರಣ ಸೃಷ್ಟಿಸಿದ್ದಾರೆ. ಇದೊಂದು ‘ಮಹಾನ್‌ ಕ್ರಾಂತಿಕಾರಿ ಹೆಜ್ಜೆ’, ‘ಅದ್ಭುತ ಪ್ರಯೋಗ’ ಎಂದೆಲ್ಲ ಕಾಂಗ್ರೆಸ್‌ ನಾಯಕರು ಮತ್ತು ಅವರ ಬಾಲಬಡುಕರು ಭಜನೆ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅದಕ್ಕೆ ಒದಗಿಸಲು ಖಜಾನೆಯಲ್ಲಿ ಹಣವೇ ಇಲ್ಲ. ಎಲ್ಲೆಲ್ಲಿಂದಲೋ ಕೆರೆದು, ಬಾಚಿ ಕೊಡುವ ಸ್ಥಿತಿ ಇದೆ. ಅದರ ಪರಿಣಾಮವೇ ಎಸ್‌ಸಿಎಸ್‌ಪಿ– ಟಿಎಸ್‌ಪಿ ನಿಧಿಗೆ ಕೈ ಹಾಕಿದ್ದು. ‘ಈ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮಾತ್ರ ಬಳಸುತ್ತೇವೆ. ಬೇರೆ ಯಾರಿಗೂ ಬಳಸುವುದಿಲ್ಲ’ ಎಂದು ತೇಪೆ ಹಚ್ಚುವ ಮಾತುಗಳು ಸರ್ಕಾರದಿಂದ ಬರುತ್ತಿದೆ. ಇದು ಸಮರ್ಥನೀಯವಲ್ಲ. ನೈತಿಕವಾಗಿ ಭ್ರಷ್ಟರಾಗಿರು ವುದರಿಂದಲೇ, ಇಂತಹ ಮಾತುಗಳು ಬರುತ್ತಿವೆ. ಎಸ್‌ಸಿಎಸ್‌ಪಿ–ಟಿಎಸ್‌ಪಿ ಪಾಲಿನಲ್ಲಿ ಗ್ಯಾರಂಟಿಗಳಿಗೆ ಎತ್ತಿಕೊಟ್ಟ ₹11,114 ಕೋಟಿ ಸಣ್ಣ ಮೊತ್ತವೇನಲ್ಲ.

2013ರ ಕಾಯ್ದೆ ಅಡಿ ಈ ವಿಶೇಷ ಅನುದಾನವನ್ನು ದಲಿತರ ಏಳಿಗೆಗಾಗಿ ಶೈಕ್ಷಣಿಕ, ಸ್ವಯಂ ಉದ್ಯೋಗ, ಅವರ ವಾಸದ ಪ್ರದೇಶಗಳ ಅಭಿವೃದ್ಧಿಗಾಗಿಯೇ ಬಳಸಬೇಕು. ಈ ಮೂಲಕ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಇತರ ಎಲ್ಲರಂತೆ ಸಮಾನವಾಗಿ, ಸ್ವಾಭಿಮಾನದಿಂದ ಬದುಕಬೇಕು ಎಂಬುದು ಕಾಯ್ದೆಯ ಆಶಯ. ಆದರೆ ಇವರು ಮಾಡುತ್ತಿರುವುದೇನು? ದಲಿತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಒಕ್ಕೊರಲಿನಿಂದ ಖಂಡಿಸಬೇಕು.

ನಮ್ಮ ಸರ್ಕಾರ ಇದ್ದಾಗ ದಲಿತರ ಶಿಕ್ಷಣಕ್ಕೆ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೆವು. ರಾಜ್ಯದಲ್ಲಿ 826 ವಸತಿ ಶಾಲೆಗಳಿವೆ. ಸಾಕಷ್ಟು ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ನಮ್ಮ ಸರ್ಕಾರ 156 ವಸತಿ ಶಾಲೆಗಳಿಗೆ ತಲಾ ₹25 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸುವ ಕಾಮಗಾರಿ ಆರಂಭಿಸಿತ್ತು. ಈ ಸರ್ಕಾರ ಅದನ್ನು ಅರ್ಧಕ್ಕೆ ನಿಲ್ಲಿಸಿದೆ. 75 ಹಾಸ್ಟೆಲ್‌ಗಳ ನಿರ್ಮಾಣವನ್ನು ಆರಂಭಿಸಿದ್ದೆವು. ಅದರ ನಿರ್ಮಾಣವನ್ನೂ ನಿಲ್ಲಿಸಿದ್ದಾರೆ. ಈ ಹಾಸ್ಟೆಲ್‌ ಕಟ್ಟಡಗಳನ್ನು ತಲಾ ₹5 ಕೋಟಿಯಿಂದ ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಗ್ಯಾರಂಟಿ ಪರಿಣಾಮ ದಲಿತರ ಹಣಕ್ಕೇ ಸಂಚಕಾರ ಬಂದಿದೆ. 108 ವಸತಿ ಶಾಲೆಗಳಿಗಾಗಿ ನಮ್ಮ ಸರ್ಕಾರ ತಲಾ 10 ಎಕರೆವರೆಗೆ ಜಮೀನು ಖರೀದಿಸಿ ನೀಡಿತ್ತು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮಾದರಿಯಲ್ಲಿ ಒಂದೇ ಆವರಣದಲ್ಲಿ ವಸತಿ ಮತ್ತು ಶಾಲೆ ಇರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಕೈಗೊಂಡ ಹಲವು ಕ್ರಮಗಳ ಪರಿಣಾಮ ದಲಿತ ವಿದ್ಯಾರ್ಥಿಗಳ ಫಲಿತಾಂಶವೂ ಉತ್ತಮ ಮಟ್ಟದಲ್ಲಿತ್ತು. ಅಂದರೆ, ಶೇ 97ರವರೆಗೆ ಫಲಿತಾಂಶವಿತ್ತು.

ಗೋವಿಂದ ಎಂ. ಕಾರಜೋಳ
ಗೋವಿಂದ ಎಂ. ಕಾರಜೋಳ

ರಾಜ್ಯದಲ್ಲಿ ದಲಿತರ ವಸತಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಒಂದು ಕೊಠಡಿಯಲ್ಲಿ 20ರಿಂದ 30 ವಿದ್ಯಾರ್ಥಿಗಳು ವಾಸವಿರುತ್ತಾರೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಇಂತಹ ಸ್ಥಿತಿಯಲ್ಲಿ ಉತ್ತಮ ಶಿಕ್ಷಣ ಸಾಧ್ಯವೇ? ಆದ್ದರಿಂದಲೇ ಅವುಗಳ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿದ್ದೆವು. ಇವರು ಗ್ಯಾರಂಟಿಗೆ ಕೊಟ್ಟಿರುವ ₹11,114 ಕೋಟಿಯಲ್ಲಿ ₹2,500 ಕೋಟಿಯನ್ನು ಇದಕ್ಕೆ ನೀಡಬೇಕು. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯ. ಅದನ್ನು ಬಿಟ್ಟು ಪುಕ್ಕಟೆ ಬಸ್ಸು, ಪುಕ್ಕಟೆ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ.

ದಲಿತರ ಸರ್ವಾಂಗೀಣ ಅಭಿವೃದ್ಧಿ ಎಂದರೆ ಅಕ್ಕಿ–ಬೇಳೆ ಕೊಡುವುದು ಅಲ್ಲ. ಶತಮಾನಗಳಿಂದ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗಿರುವ ಈ ಜನಕ್ಕೆ ಉತ್ತಮ ಶಿಕ್ಷಣವೇ ಆದ್ಯತೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್‌ ಹೇಳಿದ್ದರು. ಸಂವಿಧಾನದ ಆಶಯವೂ ಅದೇ ಆಗಿದೆ. ಶೇ 99ರಷ್ಟು ದಲಿತರು ವಾಸವಿರುವುದು ಹಳ್ಳಿಗಳಲ್ಲಿ. ನಗರ ಪ್ರದೇಶಗಳಲ್ಲಿ ದಲಿತರ ಸಂಖ್ಯೆ ಕಡಿಮೆ. ಜಮೀನು ಇಲ್ಲದ ದಲಿತರಿಗೆ ಕೃಷಿಗಾಗಿ ಕಡಿಮೆ ಬೆಲೆಯಲ್ಲಿ ಜಮೀನು ಕೊಡಬೇಕು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ವೇಳೆ 4,831 ಎಕರೆ ಜಮೀನನ್ನು ಖರೀದಿ ಮಾಡಿ ಹಂಚಿಕೆ ಮಾಡಲಾಗಿತ್ತು. ತುಳಿತಕ್ಕೊಳಗಾದ ಜನ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇಂತಹ ಕಾರ್ಯಗಳಿಂದಲೇ ಸಾಧ್ಯವಾಗುತ್ತದೆ. ಇಂತಹ ಕೆಲಸಗಳು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಬೇಕು. ಸರ್ಕಾರ ಕೊಡುವ ಹಣ ವ್ಯರ್ಥವಾಗಬಾರದು. ಈ ಸಮುದಾಯದ ಪಾಲಿಗೆ ಕಾಯಂ ಸ್ವತ್ತುಗಳಾಗಿರಬೇಕು.

ಅಷ್ಟಕ್ಕೂ ರಾಜ್ಯದಲ್ಲಿ ಎಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನ ಇದ್ದಾರೆ ಎಂಬ ಸಂಖ್ಯೆಯನ್ನು ಹೇಳಬೇಕು. ಅವರಲ್ಲಿ ಎಷ್ಟು ಮಂದಿ ಈ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಲೆಕ್ಕ ಮುಂದಿಡಲಿ. ಸುಮ್ಮನೇ ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣ ತೆಗೆದು ಗ್ಯಾರಂಟಿಗಳಿಗೆ ಕೊಡುವು ದನ್ನು ಎಲ್ಲ ಪ್ರಜ್ಞಾವಂತರೂ ಖಂಡಿಸಬೇಕು. ಸಿದ್ದರಾಮಯ್ಯ ಸರ್ಕಾರದ ಗೊತ್ತುಗುರಿ ಇಲ್ಲದ ಆಡಳಿತಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ.

ನಮ್ಮ ಅವಧಿಯಲ್ಲೂ ಬೇರೆ ಕಾರ್ಯಕ್ರಮಗಳಿಗೆ ಈ ಹಣ ಬಳಸಲಾಗಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ವಾಸ್ತವದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7–ಡಿ ಅಡಿ ನಿಶ್ಚಿತ ಉದ್ದೇಶಕ್ಕಲ್ಲದೇ ಬೇರೆಯದ್ದಕ್ಕೂ ಬಳಸುವ ಅವಕಾಶ ನೀಡಿದ್ದು ಯಾರ ಅವಧಿಯಲ್ಲಿ ಎಂಬುದನ್ನು ಅವರು ಹೇಳಲಿ. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಸ್ತೆ, ಸೇತುವೆ ಮುಂತಾದ ಇತರೆ ಯೋಜನೆಗಳಿಗೂ ಈ ಅನುದಾನವನ್ನು ತಿರುಗಿಸಲಾಗಿತ್ತು. ನಾನು ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಅಂತಹ ಯೋಜನೆಯ ಹಣವನ್ನು ವಾಪಸ್‌ ಮಾಡಿದ್ದೆ. ಹೀಗಾಗಿ ವೃಥಾ ಆರೋಪ ಸರಿಯಲ್ಲ. ಈ ಸರ್ಕಾರ ಸೆಕ್ಷನ್‌ 7–ಡಿ ರದ್ದು ಮಾಡಿರುವುದು ಸ್ವಾಗತಾರ್ಹ. ಆ ಕೆಲಸವನ್ನು ಬಿಜೆಪಿ ಸರ್ಕಾರವೇ ಆರಂಭಿಸಿದ್ದು.

ಸಿದ್ದರಾಮಯ್ಯ ಮತ್ತು ಎಚ್‌.ಸಿ.ಮಹದೇವಪ್ಪ ಜೋಡಿ ಮೊದಲಿಗೆ ₹11,114 ಕೋಟಿಯನ್ನು ವಾಪಸ್‌ ಮಾಡಿ ಮುಖ ಉಳಿಸಿಕೊಳ್ಳಲಿ. ನಿಮ್ಮ ಮತಬ್ಯಾಂಕ್‌ ರಾಜಕಾರಣಕ್ಕೆ ದಲಿತರ ಹಿತವನ್ನು ಬಲಿ ಕೊಡಬೇಡಿ. ದಲಿತರಿಗೆ ಗ್ಯಾರಂಟಿಗಿಂತ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಮುಖ್ಯ. ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿದ ನನಗೆ ಅದರ ಅರಿವು ಇದೆ.

ಲೇಖಕ: ಸಮಾಜ ಕಲ್ಯಾಣ ಖಾತೆಯ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT