ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಸನಾತನ: ಶಾಸ್ತ್ರಬದ್ಧ ಅಸಮಾನತೆ

Published 29 ಸೆಪ್ಟೆಂಬರ್ 2023, 0:30 IST
Last Updated 29 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಸನಾತನ ಧರ್ಮ ಎಂಬ ಸಂಕಥನದಲ್ಲಿಯೇ ಎಲ್ಲ ಬಗೆಯ ಅಸಮಾನತೆ ಮತ್ತು ಭೇದಗಳನ್ನು ಶಾಸ್ತ್ರಬದ್ಧಗೊಳಿಸಲಾಗಿದ್ದು, ಹತ್ತಾರು ಆಚರಣೆಗಳ ಮೂಲಕ ಆ ಭಾವಗಳನ್ನು ಗಟ್ಟಿಗೊಳಿಸುತ್ತಲೇ ಬರಲಾಗಿದೆ

ವೇದವೆಂಬುದು ಓದಿನ ಮಾತು/ ಶಾಸ್ತ್ರವೆಂಬುದು ಸಂತೆಯ ಸುದ್ದಿ/ ಪುರಾಣವೆಂಬುದು ಪುಂಡರ ಗೋಷ್ಠಿ/ ತರ್ಕವೆಂಬುದು ತಗರ ಹೋರಟೆ/ ಭಕ್ತಿಯೆಂಬುದು ತೋರುಂಬ ಲಾಭ/ ಗುಹೇಶ್ವರನೆಂಬುದು ಮೀರಿದ ಘನವು

ಸನಾತನ ಧರ್ಮವು ತನ್ನ ತಾತ್ವಿಕತೆಗೆ ಆಧಾರವಾಗಿ ಇಟ್ಟುಕೊಂಡಿರುವ ಎಲ್ಲ ಪಠ್ಯಗಳನ್ನು ಅಲ್ಲಮಪ್ರಭು ಈ ವಚನದಲ್ಲಿ ತುಂಬಾ ಸ್ಪಷ್ಟವಾಗಿ ನಿರಾಕರಿಸುತ್ತಾನೆ. ವೇದ, ಶಾಸ್ತ್ರ, ಪುರಾಣಗಳೆಲ್ಲವೂ ನಿರ್ದಿಷ್ಟ ಸಮುದಾಯದ ಹಿತಾಸಕ್ತಿ ಕಾಪಾಡುವ, ಆ ಮೂಲಕ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ ಎಂಬುದನ್ನು ಬಸವಾದಿ ಶಿವಶರಣರು ಹತ್ತಾರು ವಚನಗಳಲ್ಲಿ ನಿಷ್ಕರ್ಷಿಸಿ ಅವುಗಳನ್ನು ಸಾರಾಸಗಟಾಗಿ ಧಿಕ್ಕರಿಸಿದ್ದಾರೆ. ಇಂಥ ಸನಾತನ ಧರ್ಮವನ್ನು ಉದಾತ್ತೀಕರಿಸುತ್ತ ಸಿ.ಎನ್.ರಾಮಚಂದ್ರನ್ ಅವರು ‘ಇಂದು ನಾವು ಅಳವಡಿಸಿಕೊಳ್ಳಬೇಕಿರುವುದು ಸನಾತನ ಧರ್ಮದ ಆಧುನಿಕ ರೂಪ’ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 23).

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಬೃಹತ್ ನಿಘಂಟಿನಲ್ಲಿ, ಸನಾತನ ಎಂದರೆ ಯಾವಾಗಲೂ ಇರುವ, ಶಾಶ್ವತವಾದ, ಹಳೆಯದಾದ, ಪುರಾತನವಾದ ಎಂಬ ಅರ್ಥಗಳನ್ನು ನೀಡಲಾಗಿದೆ. ‘ಧ್ವನ್ಯಾಲೋಕ’ ಕೃತಿಯಲ್ಲಿ ಇದಕ್ಕೆ ಬ್ರಹ್ಮವೆಂತಲೂ ಅರ್ಥವಿರುವುದನ್ನು ಕಾಣಿಸಲಾಗಿದೆ. ಸನಾತನ ಧರ್ಮ ಎಂಬುದಕ್ಕೆ ಅದೇ ನಿಘಂಟುವಿನಲ್ಲಿ ಪರಂಪರಾಗತವಾಗಿರುವ ಧರ್ಮ ಎಂದು ಅರ್ಥ ನೀಡಲಾಗಿದೆ. ಈ ಎಲ್ಲ ಅರ್ಥಗಳು ಸನಾತನದ ಪ್ರಾಚೀನತೆಯನ್ನು, ಚಿರಂತನತೆಯನ್ನು ಹೇಳುತ್ತವೆ ವಿನಾ ಅದರ ಶ್ರೇಷ್ಠತೆ ಅಥವಾ ಜೀವಪರತೆಯನ್ನೇನೂ ದೃಢೀಕರಿಸುವುದಿಲ್ಲ.

ವೈದಿಕರ ತತ್ವ, ಸಿದ್ಧಾಂತಗಳು ಕಾನೂನುಬದ್ಧಗೊಳಿಸಿದ್ದ ಹಿಂಸೆಯನ್ನು ಹಳಿಯುವ ಬಸವಣ್ಣ, ವೇದಾದಿಗಳು ವಿಧಿಸಿದ ಜಾತಿ ವ್ಯವಸ್ಥೆಯ ಕೀಳಾಚಾರಗಳನ್ನು ವಿಡಂಬಿಸುತ್ತ ‘ವೇದ ನಡನಡುಗಿತ್ತು/ ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದುದಯ್ಯ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ! ಆಗಮ ಹೊರತೊಲಗಿ ಅಗಲಿದ್ದಿತಯ್ಯ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ’ ಎಂದು ಘೋಷಿಸುತ್ತಾರೆ. ಅಂದರೆ ಸನಾತನಿಗಳ ವೇದಾದಿಗಳು, ಮನುಷ್ಯರು ಮತ್ತು ಅವರ ಕಾಯಕಗಳನ್ನು ಕುಲಾದಿಗಳಲ್ಲಿ ವಿಂಗಡಿಸಿ ಅವುಗಳಿಗೆ ಉಚ್ಚ, ನೀಚ ಎಂಬ ಷರಾ ಕೂಡ ಬರೆದಿದ್ದರು. ಅಸ್ಪೃಶ್ಯ ಕುಲದವರು ಅಧಮರು. ಅವರಿಗೆ ದೇವರನ್ನು ಮುಟ್ಟಿ ಪೂಜಿಸುವ, ಆರಾಧಿಸುವ, ಅಷ್ಟೇ ಏಕೆ ಕಣ್ಣಿಂದ ನೋಡುವ ಹಕ್ಕೂ ಇರಲಿಲ್ಲ. ಇಂಥ ಸನಾತನ ಧರ್ಮವು ಮಾದಾರ ಚೆನ್ನಯ್ಯನ ಮನೆಯ ಅಂಬಲಿಯ ಎಂಜಲನ್ನು ಕೂಡಲಸಂಗಯ್ಯನೆಂಬ ದೇವನು ಉಂಡನು ಎಂದು ಹೇಳಿದರೆ ಅರಗಿಸಿಕೊಂಡೀತೆ? ವೇದಾದಿಗಳು ನಡುಗಿ ಬಕ್ಕ ಬಾರಲೇ ಬೀಳದೆ ಏನು ತಾನೇ ಮಾಡಿಯಾವು ಎನ್ನುತ್ತಾರೆ ಬಸವಣ್ಣ.

ಚೆನ್ನಯ್ಯನ ಪ್ರಸಂಗವು ಪವಾಡ ಎನ್ನುವುದಾದರೆ, ಪುರಾಣಗಳ ಕಲ್ಪಿತ ಅಂಶಗಳನ್ನು ಪುರಾಣಗಳಿಂದಲೇ ಒಡೆಯುವ ವಚನಕಾರರ ತಾತ್ವಿಕ ಸಂಘರ್ಷವನ್ನು ಇಂಥ ಹತ್ತಾರು ವಚನಗಳು ನಿರೂಪಿಸುತ್ತವೆ. ಹೀಗೆ ಸುಮಾರು ಎಂಟು ಶತಮಾನಗಳ ಹಿಂದೆಯೇ ತಿರಸ್ಕರಿಸಲಾಗಿದ್ದ ಧರ್ಮದಲ್ಲಿ ಸ್ವೀಕರಿಸುವಂಥದ್ದು ಶೂದ್ರಾದಿ ದಲಿತರಿಗೆ ಏನಿದೆ?

ಆದಾಗ್ಯೂ ರಾಮಚಂದ್ರನ್ ಅವರು ‘ಸನಾತನ ಧರ್ಮವು ವ್ಯಾಪಕ ವೈಚಾರಿಕತೆಯನ್ನು ಆಧರಿಸಿದೆ. ಅದು ಶ್ರುತಿ, ಸ್ಮೃತಿ, ಪುರಾಣ ಈ ಮೂರು ವೈಚಾರಿಕ ಸ್ತಂಭಗಳ ಮೇಲೆ ನಿಂತಿದೆ’ ಎಂದು ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ಗೌತಮ ಬುದ್ಧ, ಮಹಾವೀರ, ಬಸವಾದಿ ಶರಣರು ಈ ಪರಿ ಖಂಡಿಸಿದ್ದು ಏಕೆ? ಬುದ್ಧನನ್ನು ವೇದಭಂಜಕನೆಂದೇ ಕರೆಯಲಾಗುತ್ತದೆ. ಹಾಗೇಯೇ ಜೈನ ಧರ್ಮವೂ ನಾಸ್ತಿಕವೆ. ಬಸವಾದಿಗಳ ಕಾಣ್ಕೆ ನಾಸ್ತಿಕವಲ್ಲವಾದರೂ ವೇದಾದಿಗಳನ್ನು ಮಾನ್ಯ ಮಾಡುವ ಸನಾತನವೆಂಬ ಧರ್ಮವನ್ನು ಅವರು ನಖಶಿಖಾಂತ ಹಳಿದಿದ್ದಾರೆ. ಕಾರಣ, ಈ ಸನಾತನ ಅರ್ಥಾತ್ ವರ್ಣಾಶ್ರಮ ಧರ್ಮ ಯಾವತ್ತೂ ಶೂದ್ರರನ್ನು, ಪಂಚಮರನ್ನು ಮನುಷ್ಯರೆಂದೇ ಪರಿಗಣಿಸಲಿಲ್ಲ.

ವೇದಪ್ರಣೀತ ಈ ಧರ್ಮದ ಎಲ್ಲ ಅಪಸವ್ಯಗಳನ್ನು ರಾಮಚಂದ್ರನ್ ವಿವರಿಸುತ್ತಾರಾದರೂ ಕೊನೆಗೆ ಮಾತ್ರ, ಉಪನಿಷತ್ತುಗಳ ಪಠಣ ಮತ್ತು ಮನನ ಮಾಡಬೇಕು, ಸ್ಮೃತಿಗಳನ್ನು ತಿರಸ್ಕರಿಸಬೇಕು ಹಾಗೂ ಪುರಾಣಗಳನ್ನು ಕಾಲ್ಪನಿಕ ಕಥೆಗಳಂತೆ ಓದಬೇಕು ಎಂದು ಶಿಫಾರಸು ಮಾಡುತ್ತಾರೆ. ಈ ಎಲ್ಲ ಸೂಚನೆಗಳನ್ನು ಅವರು ತುಳಿಸಿಕೊಂಡವರಿಗೆ ಹೇಳುತ್ತಾರೋ ಅಥವಾ ಧರ್ಮದ ಹೆಸರಲ್ಲಿ ಕೆಳ ಸಮುದಾಯದ ಜನರನ್ನು ತುಚ್ಚವೆಂದು ಈ ಕ್ಷಣಕ್ಕೂ ತಿಳಿದು ಅದರಂತೆ ಆಚರಿಸಿಕೊಂಡು ಬರುತ್ತಿರುವ ಸಮುದಾಯಗಳಿಗೆ ಹೇಳುತ್ತಾರೋ ಎನ್ನುವುದು ಸ್ಪಷ್ಟವಾಗಿಲ್ಲ. ಸನಾತನ ಧರ್ಮವೆಂದು ಕರೆಸಿಕೊಳ್ಳುತ್ತಿರುವ ಇದನ್ನು ಇಷ್ಟೆಲ್ಲ ಅನಿಷ್ಟಗಳ ನಡುವೆಯೂ ಆಚರಿಸಿಕೊಂಡು ಬರಬೇಕೆ?

ಅಷ್ಟಕ್ಕೂ ಸನಾತನ ಧರ್ಮದ ಕುರಿತು ಅದರ ಪ್ರತಿಪಾದಕರು ಎಷ್ಟೇ ಉದಾತ್ತೀಕರಿಸಿದರೂ ಅದರ ಮೂಲದಲ್ಲಿರುವ ತಾರತಮ್ಯ, ಅಸಮಾನತೆ ಇಲ್ಲವಾಗುತ್ತವೆಯೇ? ಕಾರಣ, ಸನಾತನ ಧರ್ಮ ಎಂಬ ಸಂಕಥನದಲ್ಲಿಯೇ ಎಲ್ಲ ಬಗೆಯ ಅಸಮಾನತೆ ಮತ್ತು ಭೇದಗಳನ್ನು ಶಾಸ್ತ್ರಬದ್ಧಗೊಳಿಸಲಾಗಿದೆ. ಅಷ್ಟೇಅಲ್ಲ ಹತ್ತಾರು ಆಚರಣೆಗಳ ಮೂಲಕ ಆ ಭಾವಗಳನ್ನು ಗಟ್ಟಿಗೊಳಿಸುತ್ತಲೇ ಬರಲಾಗಿದೆ. ಉಪನಿಷತ್ತುಗಳ ಅಪ್ರಾಯೋಗಿಕ ಆದರ್ಶಗಳಿಂದ ಸಮಾಜದಲ್ಲಿ ಇಲ್ಲಿಯವರೆಗೆ ವೈದಿಕ ಲೋಕದಲ್ಲಿ ಅದಾವ ಬದಲಾವಣೆ ಆಗಿದೆ ಎಂಬುದನ್ನು ಪ್ರಮಾಣೀಕರಿಸಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT