ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ | ಸಿನಿಮಾ ಕಾರ್ಮಿಕರ ಹಿತರಕ್ಷಣೆ ಯೋಚಿಸದ ಚಿತ್ರೋದ್ಯಮ: ಅಶೋಕ್‌

ಸಿನಿ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕ್ಷೇಮಾಭಿವೃದ್ಧಿ ಮಂಡಳಿ ಬೇಕೇ, ಬೇಡವೇ?
ಅಶೋಕ್‌
Published 2 ಆಗಸ್ಟ್ 2024, 23:53 IST
Last Updated 2 ಆಗಸ್ಟ್ 2024, 23:53 IST
ಅಕ್ಷರ ಗಾತ್ರ

ಬಹಳಷ್ಟು ಸಿನಿ ಕಾರ್ಮಿಕರು ಅನಕ್ಷಸ್ಥರು ಅಥವಾ ದೊಡ್ಡ ಮಟ್ಟಿನ ಅಕ್ಷರ ಜ್ಞಾನ ಹೊಂದಿದವರಲ್ಲ. ಲೈಟ್‌, ಸೆಟ್ಟಿನ ಕೆಲಸ ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿಲ್ಲ. 58 ಅಲ್ಲ, 68 ದಾಟಿದರೂ ದಿನವೂ ಕೆಲಸಕ್ಕೆ ಬರಲೇಬೇಕಾದ ಅನಿವಾರ್ಯ ಬಹಳಷ್ಟು ಜನರಿಗಿದೆ. ಇವರಿಗೆ ಯಾವುದೇ ಆಸರೆ, ಭರವಸೆ ಇಲ್ಲ. ಕಾರ್ಮಿಕ ಕಲ್ಯಾಣ ನಿಧಿಯಿಂದ ನಿವೃತ್ತಿ ವೇತನ, ಕೊನೆಗಾಲದಲ್ಲಿ ಆರೋಗ್ಯ ನೆರವು ಸಿಕ್ಕರೆ ಅದುವೇ ಅವರಿಗೆ ದೊಡ್ಡ ವರ...

ರಾಜ್ಯದ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಾರ್ಮಿಕರಿಗಾಗಿ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಲು ಅವಕಾಶ ನೀಡುವ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ– 2024ಕ್ಕೆ ಚಿತ್ರೋದ್ಯಮದ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದುರಂತವೆಂದರೆ ಇವರು ಯಾರೂ ಕಾರ್ಮಿಕರ ಹಿತರಕ್ಷಣೆಯ ಕುರಿತು ಯೋಚಿಸುತ್ತಿಲ್ಲ. ತಮ್ಮ ಲಾಭ ಕಡಿಮೆಯಾಗುತ್ತದೆ ಎಂಬುದಷ್ಟನ್ನೇ ಯೋಚಿಸುತ್ತಿದ್ದಾರೆ. ಚಿತ್ರದ ನಾಯಕನ ಊಟಕ್ಕಾಗಿ ದಿನಕ್ಕೆ ₹20 ಸಾವಿರ–₹30 ಸಾವಿರ ಖರ್ಚು ಮಾಡುವ ನಿರ್ಮಾಪಕರು, ತಮ್ಮದೇ ಕುಟುಂಬದ ಸದಸ್ಯರಾದ ಸೆಟ್‌ಬಾಯ್‌ಗಳು, ಲೈಟ್‌ಬಾಯ್‌ಗಳು, ಮೇಕಪ್‌ ಸಹಾಯಕರು ಮೊದಲಾದ ದಿನಗೂಲಿ ಕಾರ್ಮಿಕರ ಬದುಕಿನ ಕುರಿತು ಯೋಚಿಸದೇ ಇರುವುದು ವಿಪರ್ಯಾಸ.

1951ರಲ್ಲಿ ಛಾಯಾಚಿತ್ರಗ್ರಾಹಕರ ಕಾಯ್ದೆ ಬಂತು. ಅದನ್ನು 1984ರಲ್ಲಿ ತಿದ್ದುಪಡಿ ಮಾಡಲಾಯಿತು. ‘ಯಾರೆಲ್ಲ ಸಿನಿಮಾ ಕಾರ್ಮಿಕರು’ ಎಂಬುದಕ್ಕೆ ಅದರಲ್ಲಿ ವಿವರಣೆ ಇದೆ. ಸಿನಿಮಾಕ್ಕೆ ನೇರವಾಗಿ ಅಥವಾ ಗುತ್ತಿಗೆದಾರರ ಮೂಲಕ ಕೆಲಸ ಮಾಡುವ ಕಾರ್ಮಿಕರು, ನೃತ್ಯಗಾರರು, ಸಂಗೀತಗಾರರು, ನಟ–ನಟಿಯರೆಲ್ಲ ಸಿನಿಮಾ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ. ಇಷ್ಟಾಗಿಯೂ ಸಿನಿಮಾ ಕಾರ್ಮಿಕರ ನಿಯಂತ್ರಣ ಸಾಧ್ಯವಿಲ್ಲ ಎಂಬ ಮಾತು ಇತ್ತು. ಕಾರ್ಮಿಕರೆಲ್ಲ ಸೇರಿ ಯೂನಿಯನ್‌, ಫೆಡರೇಷನ್‌ಗಳನ್ನು ರಚಿಸಿಕೊಂಡೆವು. ಆಗ ಯಾರೆಲ್ಲ ಯಾವ ಸಿನಿಮಾಕ್ಕೆ ಕೆಲಸ ಮಾಡುತ್ತಾರೆ, ವೇತನವೆಷ್ಟು ಇತ್ಯಾದಿ ಮಾಹಿತಿಗಳ ದಾಖಲೀಕರಣ ಪ್ರಾರಂಭವಾಯಿತು. ಅದನ್ನೇ ಪಿಎಫ್‌ (ಭವಿಷ್ಯ ನಿಧಿ) ಮತ್ತು ಇಎಸ್‌ಐ ಕಚೇರಿಗಳಿಗೆ ನೀಡಿದೆವು. ಇದರ ಆಧಾರದ ಮೇಲೆ ಸಿನಿ ಕಾರ್ಮಿಕರಿಗೆ ನಿವೃತ್ತಿ ನಂತರ ಜೀವನಾಧಾರ ಬೇಕು ಎಂಬ ಪ್ರಕರಣ ದಾಖಲು ಮಾಡಿದೆವು. ಸಂಬಂಧಿಸಿದ ಇಲಾಖೆ ನಿರ್ಮಾಪಕರಿಗೆ ವಾರೆಂಟ್‌ ಕಳುಹಿಸಿತು. ಆಗ, ‘ಅಶೋಕ್‌ ದೊಡ್ಡ, ದೊಡ್ಡ ನಿರ್ಮಾಪಕರನ್ನು ಬಂಧಿಸಲು ಯತ್ನಿಸುತ್ತಿದ್ದಾರೆ’ ಎಂಬ ಆರೋಪ ಬಂತು. ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಸಹಕಾರ ಪ್ರಾರಂಭವಾಯಿತು. ಕೊನೆಗೆ ನಾನು ರಾಜೀನಾಮೆ ನೀಡಿ ಬಂದೆ. ರಾಜ್ಯದಲ್ಲಿನ ಸಿನಿಮಾ ಕಾರ್ಮಿಕರಿಗೆ ಪಿಎಫ್‌, ಇಎಸ್‌ಐ ಇತ್ಯಾದಿ ಸೌಲಭ್ಯಗಳಿಗೆ ಒತ್ತಾಯಿಸುವ ಹೋರಾಟ ಅಲ್ಲಿಯೇ ನಿಂತಿದೆ. 

ಸೆನ್ಸಾರ್‌ಗೆ ಕಟ್ಟಿದ ಹಣವನ್ನು ಕಾರ್ಮಿಕರ ಕಲ್ಯಾಣ ನಿಧಿಗೆ ನೀಡಬಹುದು ಎಂಬ ವಾದ ಹಲವರದ್ದು. ಆದರೆ, ಇಲ್ಲಿಯ ತನಕ ಕಾರ್ಮಿಕರಿಗೆ ಆ ಹಣದಿಂದ ಯಾವುದೇ ಸವಲತ್ತು ಸಿಕ್ಕಿಲ್ಲ. ಬಹುಶಃ ಸೆನ್ಸಾರ್‌ ಮಂಡಳಿಯ ಸಿಬ್ಬಂದಿ, ಕಚೇರಿ ನಿರ್ವಹಣೆ, ಸೆನ್ಸಾರ್‌ ಮಾಡಲೆಂದು ಸಿನಿಮಾ ನೋಡಿದವರಿಗೆ ಗೌರವಧನ ಇತ್ಯಾದಿಗೆ ಆ ಹಣ ಖರ್ಚಾಗುತ್ತಿರಬೇಕು!

ಇಲ್ಲಿ ಬಹಳಷ್ಟು ಸಿನಿ ಕಾರ್ಮಿಕರು ಅನಕ್ಷಸ್ಥರು ಅಥವಾ ದೊಡ್ಡ ಮಟ್ಟಿನ ಅಕ್ಷರ ಜ್ಞಾನ ಹೊಂದಿದವರಲ್ಲ. ಕೌಶಲಭರಿತರಲ್ಲ. ಲೈಟ್‌, ಸೆಟ್ಟಿನ ಕೆಲಸ ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿಲ್ಲ. ಅವರು ದಿನಗೂಲಿ ನೌಕರರು. 58 ಅಲ್ಲ, 68 ದಾಟಿದರೂ ದಿನವೂ ಕೆಲಸಕ್ಕೆ ಬರಲೇಬೇಕಾದ ಅನಿವಾರ್ಯ ಬಹಳಷ್ಟು ಜನರ ಮನೆಯಲ್ಲಿದೆ. ಅಂಥ ಕಾರ್ಮಿಕರಿಗೆ ಯಾವುದೇ ಆಸರೆ, ಭರವಸೆ ಇಲ್ಲ. ಕಾರ್ಮಿಕ ಕಲ್ಯಾಣ ನಿಧಿಯಿಂದ ನಿವೃತ್ತಿ ವೇತನ, ಕೊನೆಗಾಲದಲ್ಲಿ ಆರೋಗ್ಯ ನೆರವು ಸಿಕ್ಕರೆ ಅದುವೇ ದೊಡ್ಡ ವರ.

‘ಸೆಸ್‌ ವಿಧಿಸಬೇಡಿ. ನಾವು ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ ಕೊಡುತ್ತಾ ಇದ್ದೇವೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂಬ ವರದಿಯನ್ನು ಇತ್ತೀಚೆಗೆ ಓದಿದೆ. ಆದರೆ ಸಿನಿಮಾ ಕಾರ್ಮಿಕರಿಗೆ ಈ ಯಾವ ಸೌಲಭ್ಯವನ್ನೂ ನೀಡುತ್ತಿಲ್ಲ. ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಸಿನಿಮಾ ಕಾರ್ಮಿಕರು ಅಷ್ಟೊಂದು ವಿದ್ಯಾವಂತರಲ್ಲದೇ ಇರುವುದರಿಂದ ಸಚಿವರನ್ನು ಭೇಟಿ ಮಾಡಿ ಈ ವಿಷಯ ತಲುಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕವೇ ಸಿನಿಮಾ ಕಾರ್ಮಿಕರಿಗೆ ನ್ಯಾಯ ದೊರಕಬೇಕು. 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅನುದಾನದ ಕುರಿತು ಚರ್ಚೆ ನಡೆಯುತ್ತಿದೆ. ನಮಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು, ಸುಪ್ರೀಂಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ. ಅಲ್ಲಿನ ನ್ಯಾಯವಾದಿಗಳಿಗೆ ಕೊಡುವಷ್ಟು ಹಣ ನಮ್ಮ ಸಂಘಟನೆಗಳಲ್ಲಿ ಇಲ್ಲ. ಹೀಗಾಗಿ ರಾಜ್ಯ ಸರ್ಕಾರವನ್ನೇ ಒತ್ತಾಯಿಸಬೇಕು. ಸೆಸ್‌ ಹಾಕಿ ಕಲ್ಯಾಣ ನಿಧಿಗೆ ಬೇಕಾದ ಹಣ ಸಂಗ್ರಹ ಮಾಡಿದರೆ, ನಾವು ಸರ್ಕಾರಕ್ಕೆ, ‘ಇಷ್ಟು ಕೊಡಬೇಕು, ಕೊಡಿ’ ಎಂದು ಬೇಡಿಕೆ ಇಡಬಹುದು. ಅದಕ್ಕೆ ಅಡ್ಡಪಡಿಸಿದರೆ ಸಿನಿಮಾ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ.

ಟಿಕೆಟ್‌ ಮೇಲೆ ಸೆಸ್‌ ಹಾಕುತ್ತಾರೆ ಎನ್ನುತ್ತಿದ್ದಾರೆ. ಟಿಕೆಟ್‌ ಕೊಂಡಾಗ ನಾವು ಆ ಹಣವನ್ನು ನಿರ್ಮಾಪಕರಿಗೆ ಕೊಡುತ್ತೇವೆ. ಉದಾಹರಣೆಗೆ ₹100 ಟಿಕೆಟ್‌ನಲ್ಲಿ ₹30 ಚಿತ್ರಮಂದಿರದ ಬಾಡಿಗೆ ಇತ್ಯಾದಿಗೆ ಹೋದರೂ ₹70 ನಿರ್ಮಾಪಕನಿಗೆ ಹೋಗುತ್ತದೆ. ಅದರಲ್ಲಿ ಎರಡು ರೂಪಾಯಿ ಕಾರ್ಮಿಕರಿಗಾಗಿ ಕೊಡಿ ಎಂದು ಸರ್ಕಾರ ಈ ಮಸೂದೆ ಮೂಲಕ ಕೇಳಲು ಹೊರಟಿದೆ. ಆದರೆ ನಿರ್ಮಾಪಕರು ಅದನ್ನು ಕೊಡಲು ಸಿದ್ಧರಿಲ್ಲ.

ಸಿನಿಮಾದಲ್ಲಿ ಗ್ಲಾಮರ್‌ ಕಾಣಿಸುತ್ತದೆ. ದೊಡ್ಡ ಸಂಭಾವನೆ ಪಡೆಯುವವರು ಕಾಣುತ್ತಾರೆ. ದಿನಗೂಲಿ ಮಾಡುವವರು ಕಾಣಿಸುವುದಿಲ್ಲ. ನಾನು ಇಲ್ಲಿಯವರೆಗೂ ಹೋರಾಟ ಮಾಡಿದ್ದು, ಈ ಕಾರ್ಮಿಕರ ಬಗ್ಗೆಯೇ. ನಾವು ನಿಮ್ಮ ಕುಟುಂಬದ ಸದಸ್ಯರಲ್ಲವೇ? ನಾವು ಕುಟುಂಬದವರ ಬಳಿಯೇ ಹಣವನ್ನು ಕೇಳುತ್ತಿದ್ದೇವೆ. ಮುಂಬೈನಿಂದ ನಾಯಕಿ ಕರೆಸಲು, ನಾಯಕನಿಗೆ ಕೋಟಿಗಟ್ಟಲೇ ಸಂಭಾವನೆ ಕೊಡಲು ಯಾವುದೇ ಅಡ್ಡಿ ಇರುವುದಿಲ್ಲ. ನಮಗೆ ₹200 ಕೊಡಲು ನಿರ್ಮಾಪಕರಿಗೆ ನೋವಾಗುತ್ತದೆ. ‌

ಕಾಂಪಿಟೇಷನ್‌ ಕಮಿಷನ್‌ ಆಫ್‌ ಇಂಡಿಯಾ (ಸಿಸಿಐ) ಬಂದ ಮೇಲೆ ಸಿನಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಯಾರೂ ನಿರ್ಮಾಪಕರಿಗೆ ನಿರ್ಬಂಧ ಮಾಡಬಾರದು ಎಂಬ ಕಾನೂನು ಬಂತು. ಇಷ್ಟೇ ಸಂಭಾವನೆ ಕೊಡಬೇಕು, ಇಷ್ಟೇ ಸಮಯ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ ಎಂಬ ನೀತಿ ಜಾರಿಯಾಯಿತು. ಸಿನಿಮಾ ಕೆಲಸಕ್ಕೆ ‘ನಿಮ್ಮ ಯೂನಿಯನ್‌ ಸದಸ್ಯರೇ ಬೇಕಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ದೇಶದಲ್ಲಿದ್ದ ಸಿನಿಮಾ ಕಾರ್ಮಿಕರ ಫೆಡೆರೇಷನ್‌ಗಳು ಅಶಕ್ತವಾಗಿವೆ. ಸರ್ಕಾರದ ಕಾನೂನುಗಳು ಶ್ರೀಮಂತರ ಪರವಾಗಿ ಇರುತ್ತವೆಯೇ ವಿನಾ ಜನಸಾಮಾನ್ಯರ
ಪರವಾಗಿ ಅಲ್ಲ. 

ಈಗಾಗಲೇ ಬಹಳಷ್ಟು ಕಾರ್ಮಿಕರು ಈ ವೃತ್ತಿಯಿಂದಲೇ ವಿಮುಖರಾಗುತ್ತಿದ್ದಾರೆ. ಇದಕ್ಕಿಂತ ಗಾರೆ, ಮರದ ಕೆಲಸ ಮಾಡುವುದು ಲೇಸು ಎನ್ನಿಸಿದೆ. ಇಂಥ ಹೊತ್ತಿನಲ್ಲಿ ಲೈಟ್‌, ಕ್ಯಾಮೆರಾಗಳ ಬಗ್ಗೆ ಅರಿವಿರುವ, ನುರಿತ ಕಾರ್ಮಿಕರನ್ನು ಸರಿಯಾದ ಸವಲತ್ತು ನೀಡಿ ಉಳಿಸಿಕೊಳ್ಳುವುದು ಚಿತ್ರರಂಗಕ್ಕೆ ಒಳಿತಲ್ಲವೇ? ಲಕ್ಷಾಂತರ ಬೆಲೆ ಬಾಳುವ ಕ್ಯಾಮೆರಾ, ಲೈಟ್‌ಗಳನ್ನು ನಿರ್ವಹಣೆ ಮಾಡುವವರಿಗೆ ಕನಿಷ್ಠ ಭದ್ರತೆಯೂ ಬೇಡವೇ? ಈ ನಿಟ್ಟಿನಲ್ಲಿ ಖಂಡಿತ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಸೆಸ್‌ ಸಂಗ್ರಹದ ಬಳಿಕ ಅದನ್ನು ಕಾರ್ಮಿಕರಿಗೆ ತಲುಪಿಸುವ ರೀತಿಯೂ ಪಾರದರ್ಶಕವಾಗಿ ನಿಯಂತ್ರಣಕ್ಕೆ ಒಳಪಡಬೇಕು. 

ಅಶೋಕ್‌

ಅಶೋಕ್‌

-ಲೇಖಕ: ಸಿನಿ ಕಾರ್ಮಿಕರ ಒಕ್ಕೂಟದ ಮಾಜಿ ಅಧ್ಯಕ್ಷ

-ನಿರೂಪಣೆ: ವಿನಾಯಕ ಕೆ.ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT