ಸೋಮವಾರ, ಆಗಸ್ಟ್ 10, 2020
23 °C
ಡಬ್ಬಿಂಗ್‌ ಪರ– ವಿರೋಧದ ವಾದ ಮಂಡನೆಗಳು ಏನೇ ಇರಲಿ, ಪ್ರಜ್ಞಾವಂತ ವೀಕ್ಷಕ ಮಾತ್ರ ಒಳಿತನ್ನು ಜೀರ್ಣಿಸಿಕೊಂಡು, ಕೆಡುಕನ್ನು ವಿಸರ್ಜಿಸುತ್ತಾ ಸಾಗುತ್ತಿದ್ದಾನೆ

ಚರ್ಚೆ | ಡಬ್ಬಿಂಗ್‌: ತೀರ್ಮಾನ ವೀಕ್ಷಕರಿಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿತೆರೆಗೆ ಬಂದ ಡಬ್ಬಿಂಗ್ ಸಂಸ್ಕೃತಿಯು ಕೊರೊನಾ ವೈರಸ್‌ ನೆಪದಲ್ಲಿ ಈಗ ಕಿರುತೆರೆಯನ್ನೂ ಆವರಿಸಿಕೊಂಡಿದ್ದು, ಕನ್ನಡತನಕ್ಕೆ ಮಾರಕವಾಗಿ ಪರಿಣಮಿಸಿದೆ ಎಂಬ ಕೆಲವು ವಿಚಾರವಂತರ ಆತಂಕ ಸಹಜವಾದುದೇ. ಆದರೆ, ಹೀಗೆ ತಮ್ಮ ವಾದವನ್ನು ಮಂಡಿಸಿ, ವಿರೋಧಿಸುತ್ತಿರುವ ಅನೇಕರು ಆಂತರ್ಯದಲ್ಲಿ ಇಂತಹ ಪರಿಸ್ಥಿತಿಗೆ ಸಮಪಾಲುದಾರರೇ ಆಗಿರುವುದು ಹೌದು.

ಅನೇಕರು ತಮ್ಮ ಬರಹ, ಭಾಷಣಗಳಲ್ಲಿ ‘ಜಗತ್ತೇ ಒಂದು ಮನೆಯಿದ್ದಂತೆ. ಭಾಷೆ, ದೇಶ, ಜಾತಿಗಳ ನೆಪದಲ್ಲಿ ಸಮುದಾಯವನ್ನು ಒಡೆಯಲು ಪ್ರಯತ್ನಿಸಬಾರದು. ಇಡೀ ಜಗತ್ತಿನ ಭಾಷೆಗಳ ಕೃತಿಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು’ ಎನ್ನುತ್ತಾರೆ. ಈಗ ಅಂತಹ ಮಹತ್ವದ ಕತೆಗಳು ಕನ್ನಡಿಗರಿಗೂ ಲಭಿಸುತ್ತಿದ್ದರೆ, ಡಬ್ಬಿಂಗ್ ನೆಪದಲ್ಲಿ ಅದನ್ನು ವಿರೋಧಿಸುವುದು ಸಲ್ಲದು.

ಮಹಾನಾಯಕ, ಮಹಾಭಾರತ, ರಾಮಾಯಣ, ದೇವಕಿ ನಂದನ, ಮಾಲ್ಗುಡಿ ಡೇಸ್ ಮತ್ತಿತರ ಕೃತಿಗಳು ಕಿರುತೆರೆ ಮೂಲಕ ಸದ್ಯ ಕನ್ನಡಿಗರಿಗೆ ಕೆಲವು ದೋಷ- ಮಿತಿಗಳ ನಡುವೆಯೂ ದಕ್ಕುತ್ತಿವೆ. ಅವನ್ನು ನಮ್ಮ ಹೊಲದಲ್ಲಿ ಉತ್ತಮ ಬೆಳೆ ಬರುವವರೆಗಾದರೂ ಉಣ್ಣುವ ಕೆಲಸ ಆಗಬೇಕೇ ವಿನಾ, ಯಾವುದೋ ಕುಂಟು ನೆವ ಹೇಳಿಕೊಂಡು ಹಸಿವಿನಿಂದ ಸಾಯು
ವುದು ತರವಲ್ಲ. ಹಾಗೆಂದು ಇಂತಹ ವಿದ್ಯಮಾನಗಳನ್ನುಶಾಶ್ವತವಾಗಿ ಮುಂದುವರಿಸುವುದೂ ಸಮ್ಮತವಲ್ಲ. ಕಿರುತೆರೆ ಉದ್ಯಮವು ನಮ್ಮದೇ ನೆಲದ ಕಲಾವಿದರು, ತಂತ್ರಜ್ಞರನ್ನು ಒಳಗೊಂಡ ಧಾರಾವಾಹಿಗಳನ್ನು ನಿರ್ಮಿಸಿ ಕನ್ನಡಿಗರಿಗೆ ಕೊಡಲು ತಡಮಾಡದೆ ಕಾರ್ಯಪ್ರವೃತ್ತವಾಗಬೇಕು. ಇದರ ಜೊತೆಗೆ, ಇಂದು ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಚಾನೆಲ್ಲುಗಳ ಮಾಲೀಕರು, ಮುಖ್ಯಸ್ಥರು ಕನ್ನಡದ ಬಗೆಗೆ ಗೌರವ ಹೊಂದಿ, ಸ್ವಂತ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಡುವ ಬದ್ಧತೆ ತೋರಬೇಕಾದುದು ಅತ್ಯಗತ್ಯ. ಇದು ಲಾಭದ ಪ್ರಶ್ನೆಯೊಂದೇ ಆಗದೆ ತಾನು ಹುಟ್ಟಿ, ಉಂಡು, ಆಡಿ, ಬೆಳೆದ ನೆಲದ ಸಂಸ್ಕೃತಿಗೆ ಋಣಿಯಾಗುವುದೂ ಆಗಿರುತ್ತದೆ.

ಡಬ್ಬಿಂಗ್‌ ಧಾರಾವಾಹಿಗಳನ್ನು ಕುರಿತ ಪರ– ವಿರೋಧದ ವಾದ ಮಂಡನೆಗಳು ಏನೇ ಇರಲಿ, ಪ್ರಜ್ಞಾವಂತ ವೀಕ್ಷಕ ಮಾತ್ರ ಒಳಿತನ್ನು ಜೀರ್ಣಿಸಿಕೊಂಡು, ಕೆಡುಕನ್ನು ವಿಸರ್ಜಿಸುತ್ತಾ ಸಾಗುತ್ತಿದ್ದಾನೆ. ಅದೆಷ್ಟೇ ಕೆಟ್ಟದ್ದಿರಲಿ, ಉತ್ತಮವಾದು
ದಿರಲಿ ವೀಕ್ಷಿಸುವ ಜನರೇ ‘ಜೊಳ್ಳನ್ನು ತೂರಿ, ಗಟ್ಟಿಕಾಳನ್ನು ಬಳಸುವ’ ತೀರ್ಮಾನ ಮಾಡುತ್ತಿದ್ದಾರೆ. ಇದಕ್ಕೆ ಯಾವ ಮಧ್ಯವರ್ತಿಗಳೂ ಅನಗತ್ಯ ಎಂಬುದನ್ನು, ಸದ್ಯ ಪ್ರಸಾರವಾಗುತ್ತಿರುವ ಡಬ್ಬಿಂಗ್ ಕಾರ್ಯಕ್ರಮಗಳು ಸಾಬೀತು ಮಾಡುತ್ತಿವೆ.

ಹನಿಯೂರು ಚಂದ್ರೇಗೌಡ, ಬೆಂಗಳೂರು

******

ಅಪಾಯಕಾರಿ ವಿದ್ಯಮಾನ

ಕನ್ನಡದಲ್ಲಿ ಸುಮಾರು ಇಪ್ಪತ್ನಾಲ್ಕು ವಾಹಿನಿಗಳಿದ್ದು, ಸುದ್ದಿ, ಮನರಂಜನೆ, ಸಿನಿಮಾ ಮೊದಲಾದವುಗಳನ್ನು ಪ್ರಸಾರ ಮಾಡುತ್ತಿವೆ. ಇವುಗಳಲ್ಲಿ ಕನ್ನಡದ ಸಾವಿರಾರು ಕಲಾವಿದರು, ತಂತ್ರಜ್ಞರಿದ್ದಾರೆ. ಡಬ್ಬಿಂಗ್‌ನಿಂದ ಇವರೆಲ್ಲ ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಇವರ ಅನ್ನವನ್ನು ಕಸಿದುಕೊಳ್ಳುವುದು ಸಾಂವಿಧಾನಿಕ ಹಕ್ಕಿನ ಚ್ಯುತಿಯಾಗುತ್ತದೆ. ಕನ್ನಡಕ್ಕೆ ಮೀಸಲಾದ ವಾಹಿನಿ
ಗಳಲ್ಲಿನ ಡಬ್ಬಿಂಗ್ ಪ್ರಸಾರದಿಂದ ಹಲವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಬೇಕಾದರೆ ಅವರು ಪ್ರತ್ಯೇಕವಾಗಿ ಡಬ್ಬಿಂಗ್ ವಾಹಿನಿಗಳನ್ನು ಪ್ರಾರಂಭಿಸಿ, ಅವುಗಳಲ್ಲಿ ಶೈಕ್ಷಣಿಕವಾದ, ಸಾಮಾಜಿಕ ಕಾಳಜಿ ಉಳ್ಳವುಗಳನ್ನು ಪ್ರಸಾರ ಮಾಡಲೆಂದು ಆಶಿಸುತ್ತೇವೆ.

ದೇಶದಲ್ಲಿ ಕನ್ನಡ ಭಾಷೆಯಲ್ಲಿ ಮನರಂಜನಾ ಕ್ಷೇತ್ರವು ಸೀಮಿತ ಸಾಮರ್ಥ್ಯವುಳ್ಳದ್ದಾಗಿದ್ದು, ಹೊರ ರಾಜ್ಯಗಳಿರಲಿ, ಗಡಿ ಜಿಲ್ಲೆಗಳಲ್ಲೇ ಪ್ರೇಕ್ಷಕರು ಚದುರಿದಂತಿದ್ದಾರೆ. ಕನ್ನಡವು ಮನರಂಜನೆಯಲ್ಲಿ ಅನ್ಯ ಭಾಷೆಗಳ ಪೈಪೋಟಿಯನ್ನು ಎದುರಿಸಲು ಇನ್ನೂ ಕಾಲ ಪಕ್ವವಾಗಿಲ್ಲ. ಅಲ್ಲದೆ ಈ ಕ್ಷೇತ್ರಕ್ಕೆ ಬೃಹತ್ ಬಂಡವಾಳವನ್ನು ಹೂಡುವವರು ವಿರಳವಾಗಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ನಿರೀಕ್ಷೆ ಕೈಗೆಟುಕದ ದ್ರಾಕ್ಷಿಯಾಗಿದೆ. ಕೆಲವರು ಗುಣಮಟ್ಟದ ಕೊರತೆಯ ಪ್ರಶ್ನೆಯನ್ನೆತ್ತಿದ್ದು, ಇದು ಕನ್ನಡವಲ್ಲದೆ ಅನ್ಯಭಾಷೆಗಳಲ್ಲಿಯೂ ಇರುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಕೋವಿಡ್ ಸಂದರ್ಭವನ್ನೇ ನೆಪವಾಗಿಸಿಕೊಂಡು ಕನ್ನಡ ವಾಹಿನಿಗಳು ಮೂವತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳನ್ನು ನಿಲ್ಲಿಸಿ, ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಲಾಕ್‍ಡೌನ್ ಸಡಿಲಿಕೆಯಾದರೂ ನಿಂತುಹೋದ ಧಾರಾವಾಹಿಗಳಿಗೆ ಅವಕಾಶ ಕೊಡದಿರುವುದು ಪ್ರಶ್ನಾರ್ಹವಾಗಿದೆ. ವಾಹಿನಿಗಳ ಡಬ್ಬಿಂಗ್ ಪರವಾದ ನಿಲುವು ರಾಷ್ಟ್ರದ ಭಾಷಿಕ ಒಕ್ಕೂಟ ರಚನೆಯ ಆಶಯಕ್ಕೆ ವಿರುದ್ಧವಾಗಿದೆ. ಇದು ತಕ್ಷಣಕ್ಕೆ ಹಿತಕರವಾಗಿರುವಂತೆ ಕಂಡರೂ ಇದರ ದೀರ್ಘಕಾಲೀನ ಪರಿಣಾಮಗಳು ಗಂಡಾಂತರಕಾರಿಯಾಗಿವೆ. ಮುಖ್ಯವಾಗಿ ಇದು ಉತ್ತರ ಭಾರತದವರು ದಕ್ಷಿಣ ಭಾರತದ ಕಲೆ, ಸಂಸ್ಕೃತಿ ಇತ್ಯಾದಿಗಳ ಮೇಲೆ ಮಾಡುವ ಯಜಮಾನಿಕೆಯ ಮುನ್ಸೂಚನೆಯಾಗಿದೆ.
ಇದನ್ನು ಕನ್ನಡಿಗರೂ ಸೇರಿದಂತೆ ಹಿಂದಿಯೇತರ ಭಾಷಿಕ ಸಮುದಾಯಗಳು ಜರೂರಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಬದುಕು ಮತ್ತು ಸೃಜನಶೀಲತೆ ಸೇರಿದಂತೆ ಎಲ್ಲವನ್ನೂ ಒತ್ತೆಯಿಡಬೇಕಾದ ದಿನಗಳು ದೂರವಿಲ್ಲ. ಹೀಗಾಗಿ, ಇಲ್ಲಿನ ನಾಡು, ನುಡಿ, ಪರಂಪರೆಯ ಬಗೆಗಿರುವ ನಮ್ಮ ನೈಜ ವಾರಸುದಾರಿಕೆಯನ್ನು ಡಬ್ಬಿಂಗ್‌ ಎಂಬ ಅತಾರ್ಕಿಕ ಮತ್ತು ಅಪಾಯಕಾರಿ ವಿದ್ಯಮಾನಕ್ಕೆ ಬಲಿ ಕೊಡದಿರುವ ಎಚ್ಚರವನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ.

ರಾ.ನಂ.ಚಂದ್ರಶೇಖರ,
ರುದ್ರೇಶ್ ಅದರಂಗಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು