ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಜಾತಿ ಆಧಾರಿತ ನಿಗಮ ರಚನೆ: ಮಾಜಿ ಮುಖ್ಯಮಂತ್ರಿಗಳ ಅಭಿಪ್ರಾಯವೇನು?

Last Updated 24 ನವೆಂಬರ್ 2020, 19:45 IST
ಅಕ್ಷರ ಗಾತ್ರ

ರಾಜಕೀಯ ಲಾಭಕ್ಕೆ ಇಂಥ ಗಿಮಿಕ್‌ ಸಲ್ಲ
ಜಾತಿ ಹೆಸರಲ್ಲಿ ನಿಗಮ ಮಾಡಲೇಬಾರದು ಎಂದು ಹೇಳಲಾರೆ. ಯಾವ ಜಾತಿಗಳಿಗಾಗಿ ನಿಗಮ ಮಾಡಬೇಕು? ಅವುಗಳ ಉದ್ದೇಶ ಏನು? ಅದಕ್ಕಾಗಿ ಅನುಸರಿಸಲಾಗುವ ಮಾನದಂಡಗಳೇನು? ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬೇಕು.

ನಾನು ಮುಖ್ಯಮಂತ್ರಿಯಾಗಿದ್ದಾಗ ಅವಕಾಶ ವಂಚಿತ ಜಾತಿಗಳಾದ ಉಪ್ಪಾರ, ವಿಶ್ವಕರ್ಮ ಮತ್ತು ಗಂಗಾಮತಸ್ಥ ಜಾತಿಗಳಿಗಾಗಿ ನಿಗಮಗಳನ್ನು ಸ್ಥಾಪಿಸಿದೆ. ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮೂಲಕ ಈ ಜಾತಿಗಳನ್ನು ಹಿಂದೆಯೇ ಹಿಂದುಳಿದ ಜಾತಿಗಳ ಗುಂಪಿನಲ್ಲಿ ಸೇರಿಸಲಾಗಿತ್ತು.

ಆದರೆ, ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸರಿ ಅಲ್ಲ. ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಬಡತನ ಎಂಬುದು ಜಾತಿ-ಧರ್ಮಗಳನ್ನು ಮೀರಿದ್ದು. ಕೇವಲ ತಳಸಮುದಾಯಗಳಲ್ಲಿ ಮಾತ್ರವಲ್ಲ ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರೂಪಿಸುವ ಕಾರ್ಯಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಕೇವಲ ರಾಜಕೀಯ ಲಾಭಕ್ಕಾಗಿ ಮಾಡುವ ಇಂತಹ ಗಿಮಿಕ್‌ಗಳು ಕೆಟ್ಟಪರಂಪರೆಗೆ ದಾರಿ ಮಾಡಿಕೊಡುತ್ತದೆ.

ಎಲ್ಲ ಜಾತಿಗಳಲ್ಲಿರುವ ಬಡವರ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸುವ ಪ್ರಾಮಾಣಿಕವಾದ ಕಾಳಜಿ ರಾಜ್ಯ ಸರ್ಕಾರಕ್ಕೆ ಇರುವುದಾದರೆ ಸುಲಭದ ದಾರಿ ಇದೆ. ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅತ್ಯಂತ ವೈಜ್ಞಾನಿಕವಾಗಿ ನಡೆಸಿರುವ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ವರದಿ ಸಿದ್ಧಗೊಂಡು ಸರ್ಕಾರದ ಮುಂದಿದೆ. ಅದನ್ನು ಒಪ್ಪಿಕೊಂಡು ಅವಕಾಶ ವಂಚಿತ ಸಮುದಾಯಗಳಿಗಾಗಿ ಆ ವರದಿ ಆಧಾರದ ಮೇಲೆ ನಿಗಮ ರಚನೆಯೂ ಸೇರಿದಂತೆ ಯೋಗ್ಯವೆನಿಸುವ ಯಾವ ಯೋಜನೆಗಳನ್ನಾದರೂ ರೂಪಿಸಬಹುದು.

ನಾನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳು ಜಾತಿ-ಧರ್ಮಕ್ಕೆ ಸೀಮಿತವಾಗಿರದೆ ಸರ್ವಾಜನಾಂಗದ ಬಡವರ ಕಲ್ಯಾಣ ಕಾರ್ಯಕ್ರಮಗಳು. ಆದರೆ, ಈಗಿನ ಸರ್ಕಾರ ಉಪಚುನಾವಣೆಯ ಕಾಲದಲ್ಲಿ ನಿರ್ದಿಷ್ಟ ಜಾತಿಗಳನ್ನು ಓಲೈಸಲು ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ಇವರ ಉದ್ದೇಶದಲ್ಲಿ ಪ್ರಾಮಾಣಿಕತೆ ಇಲ್ಲ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

**

ಎಲ್ಲ ಪಕ್ಷಗಳೂ ಸೇರಿ ನೀತಿ ರೂಪಿಸಬೇಕು
ಜಾತಿಗೊಂದು ನಿಗಮ– ಮಂಡಳಿ ಸೃಷ್ಟಿಸುತ್ತಿರುವುದು ನಾವೇ ಮೊದಲಲ್ಲ. ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್ ಸರ್ಕಾರದ‌ ಅವಧಿಯಲ್ಲೂ ವಿವಿಧ ಜಾತಿಗಳಿಗೆ ನಿಗಮ– ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಜಾತಿ ನಿಗಮಗಳಿಂದ ಒಂದಷ್ಟು ಒಳ್ಳೆಯ ಕೆಲಸಗಳೂ ಆಗಿವೆ, ಇಲ್ಲ ಎಂದು ಹೇಳಲು ಆಗುವುದಿಲ್ಲ. ಆಯಾ ಜಾತಿ–ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ.

ಅದೇ ರೀತಿ ನಮ್ಮ ಸರ್ಕಾರ ಮರಾಠಾ ಮತ್ತು ವೀರಶೈವ–ಲಿಂಗಾಯತ ಸಮುದಾಯದವರಿಗೂ ನಿಗಮಗಳನ್ನು ಸ್ಥಾಪಿಸಿರುವುದು ಮೊದಲ ಬಾರಿಗೆ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬೇರೆ ಬೇರೆ ಜಾತಿಗಳಿಗೆ ಹತ್ತಾರು ನಿಗಮ– ಮಂಡಳಿಗಳನ್ನು ಮಾಡಿದರು. ಆಗ ಆ ವಿಷಯ ಚರ್ಚೆ ಆಗಲಿಲ್ಲ. ನಾವು ಮಾಡಿದಾಗ ಮಾತ್ರ ಚರ್ಚೆಗೆ ಬಂದಿದೆ. ಈಗಿನ ವ್ಯವಸ್ಥೆಗೆ ಇದು ಅನಿವಾರ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ. ಅವುಗಳಿಂದ ರಚನಾತ್ಮಕ ಕೆಲಸಗಳು ಆಗಬೇಕಿದೆ.

ಎಲ್ಲ ಜಾತಿಗಳಲ್ಲೂ ಬಡವರು ಇದ್ದಾರೆ. ಹಾಗೆಂದು ಎಲ್ಲ ಜಾತಿಗೂ ನಿಗಮ ಮಂಡಳಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲವಾಗುತ್ತದೆ. ಈ ಬಗ್ಗೆ ಎಲ್ಲ ಪಕ್ಷಗಳು ಮತ್ತು ಎಲ್ಲರೂ ಕೂಡಿ ವಿಚಾರ ಮಾಡಬೇಕು. ಒಂದು ನೀತಿ ರೂಪಿಸಲು ತೀರ್ಮಾನ ತೆಗೆದುಕೊಳ್ಳಬೇಕು. ಈಗ ಎಲ್ಲ ಮಹಾತ್ಮರ ಜನ್ಮ ದಿನಗಳಂದು ಸರ್ಕಾರಿ ರಜೆ ಘೋಷಿಸುವ ಪರಿಪಾಟ ನಡೆದಿದೆ. ಬಸವಣ್ಣ ಅವರ ಹೆಸರಿನಲ್ಲಿ ಬಸವ ಜಯಂತಿ ಆಚರಣೆ ಮಾಡುತ್ತೇವೆ. ಈಗ ಬಸವಣ್ಣ ಅವರು ಜೀವಂತ ಇದ್ದಿದ್ದರೆ, ರಜೆ ಘೋಷಣೆ ಮಾಡಬೇಡಿ– ಕಾಯಕವೇ ಕೈಲಾಸ ಎನ್ನುವುದನ್ನು ಪಾಲಿಸಿ ಎನ್ನುತ್ತಿದ್ದರು. ಒಂದು ಸರ್ಕಾರ ಏನೋ ಒಂದು ಮಾಡಿದರೆ, ಇನ್ನೊಂದು ಸರ್ಕಾರ ಮತ್ತಿನ್ನೇನನ್ನೊ ಮಾಡುತ್ತದೆ. ಒಟ್ಟಾರೆ ಜನರಿಗೆ ಒಳಿತಾಗಬೇಕು.
-ಜಗದೀಶ ಶೆಟ್ಟರ್‌,ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ

**

ನಿಗಮವಲ್ಲ, ಶಾಶ್ವತ ಪರಿಹಾರ ಹುಡುಕಬೇಕು
ರಾಜಕೀಯ ಕಾರಣಕ್ಕಾಗಿ ಜಾತಿಗೊಂದು ನಿಗಮ ಸ್ಥಾಪನೆಗೆ ಕೈಹಾಕಿದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ನಿಗಮಗಳ ಸ್ಥಾಪನೆಯಿಂದ ಯಾವ ಸಮುದಾಯದ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರಕುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು ಹಲವು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಗಳಿಗೆ ವಾರ್ಷಿಕ ₹30,000 ಕೋಟಿವರೆಗೂ ಅನುದಾನ ಮೀಸಲಿಡಲಾಗುತ್ತಿದೆ. ಅವರ ಸಮಸ್ಯೆಗಳೆಲ್ಲವೂ ಬಗೆಹರಿದಿವೆಯೆ?

ರಾಜಕೀಯ ಲಾಭ ಪಡೆಯಲು ಮತ್ತು ಒಬ್ಬ ವ್ಯಕ್ತಿಗೆ ಕಾರು, ಹುದ್ದೆ, ಕಚೇರಿ ನೀಡಲು ನಿಗಮ ಸ್ಥಾಪಿಸಬಹುದು. ಅದರಿಂದ ಆ ಸಮುದಾಯದ ಸಾಮಾನ್ಯ ಜನರಿಗೆ ಯಾವ ಅನುಕೂಲ ಆಗುತ್ತದೆ ಎಂಬುದು ಮುಖ್ಯ. ಈಗಾಗಲೇ ಅಸ್ತಿತ್ವದಲ್ಲಿ ಇರುವ ನಿಗಮಗಳು ಎಷ್ಟು ಜನರನ್ನು ತಲುಪಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ. ಆಗ, ನಿಗಮಗಳ ಸ್ಥಾಪನೆಯಿಂದ ಯಾರಿಗೆ ಲಾಭ ಆಗುತ್ತದೆ ಎಂಬುದು ತಿಳಿಯುತ್ತದೆ.

ಜನರಿಗೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ವಸತಿ ಸೌಕರ್ಯಗಳು ಬೇಕಿವೆ. ಆ ಬಳಿಕ ಪ್ರತಿಯೊಬ್ಬರಿಗೂ ಒಂದು ಉದ್ಯೋಗ ಲಭಿಸುವಂತಾಗಬೇಕು. ಈ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಪೂರಕವಾಗಿ ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ನಿಗಮಗಳನ್ನು ರಚಿಸಿದ ಮಾತ್ರಕ್ಕೆ ಸಮುದಾಯವೊಂದರ ಅಭಿವೃದ್ಧಿಯಾಯಿತು ಎಂಬ ಭ್ರಮೆ ಸೃಷ್ಟಿಸುವುದರಿಂದ ಯಾವ ಪ್ರಗತಿಯೂ ಆಗುವುದಿಲ್ಲ.

ಕೆಲವು ದಿನಗಳ ಹಿಂದೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಮಾಡಲಾಯಿತು. ಅದರ ಸ್ಥಿತಿ ಏನಾಗಿದೆ ಗೊತ್ತಿಲ್ಲ. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೂ ಆದೇಶ ಹೊರಬಿದ್ದಿದೆ. ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವ ಆದೇಶದೊಂದಿಗೆ ₹ 500 ಕೋಟಿ ಅನುದಾನವನ್ನೂ ಘೋಷಿಸಿದ್ದಾರೆ. ಅದರಿಂದ ಎಷ್ಟು ಜನರಿಗೆ ಅನುಕೂಲ ಆಗುತ್ತದೆ ಎಂಬುದನ್ನು ಈ ಸರ್ಕಾರ ಹೇಳಲಿ. ಆಗ ನಿಗಮಗಳ ಸ್ಥಾಪನೆಯ ಹಿಂದಿರುವ ನೈಜ ಕಾರಣಗಳು ಜನರಿಗೆ ತಿಳಿಯುತ್ತವೆ.
-ಎಚ್‌.ಡಿ.ಕುಮಾರಸ್ವಾಮಿ,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT