ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಕಸಾಪವನ್ನು ‘ಹೌದಪ್ಪ’ಗಳ ಚಾವಡಿಯಾಗಿಸುವ ಯತ್ನ

ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ತಿದ್ದುಪಡಿ ಅಗತ್ಯ ಇದೆಯೇ?
Last Updated 18 ಫೆಬ್ರುವರಿ 2022, 20:53 IST
ಅಕ್ಷರ ಗಾತ್ರ

1915ರಲ್ಲಿ ರಾಜಪ್ರಭುತ್ವದ ಆಶ್ರಯದಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ-ಕನ್ನಡಿಗ-ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿ ಬೆಳೆದು ಬಂದ ಬಗೆಯೇ ವಿಸ್ಮಯಕರವಾದುದು. ಅರಮನೆಯ ಆವರಣದಲ್ಲಿ ಉಪಜೀವಿತವಾಗಿ ಉಸಿರಾಡುತ್ತಿದ್ದ ಸಾಹಿತ್ಯ, ಕೇವಲ ಪಂಡಿತಮಾನ್ಯರ ಸ್ವತ್ತಾಗದೆ ಜನಸಾಮಾನ್ಯರ ಅನುಭವ ಸಂಪತ್ತಾಗಿ ಜನಮುಖಿಯಾಗಿ ಪಾಮರರ ಬೀದಿ ಜಗಲಿಗಳನ್ನೂ ಒಳಗೊಳ್ಳುತ್ತಾ ವಿಶ್ವಕನ್ನಡಿಗರ ವ್ಯಾಪ್ತಿಗೆ ವಿಸ್ತರಿಸಿ ಬೆಳೆದದ್ದೇ ಒಂದು ಬೆರಗು. ಪ್ರಭುಗಳ ಆಶ್ರಯದಲ್ಲಿ ಪ್ರಾರಂಭವಾದರೂ ಪ್ರಭುಗಳು ಅದರ ಸ್ವಾಯತ್ತತೆಯನ್ನು ಘನತೆಯಲ್ಲಿ ಗೌರವಿಸಿದ್ದರು. ಪ್ರಜಾಪ್ರಭುತ್ವದಲ್ಲೂ ಯಾವ ರಾಜಕೀಯ ಪಕ್ಷವೂ ಕಸಾಪದ ಸ್ವಾಯತ್ತತೆಯ ಘನತೆಗೆ ಕುಂದು ಉಂಟು ಮಾಡಿರಲಿಲ್ಲ.

ನಮ್ಮ ಸಾಮಾಜಿಕ ಪಿಡುಗಾಗಿರುವ ಜಾತಿರಾಜಕಾರಣದ ದುರ್ಗಂಧ ಸುಳಿದರೂ ಅದು ಕಸಾಪದ ಮೂಲ ಆಶಯಕ್ಕೆ ಎಂದೂ ದ್ರೋಹ ಬಗೆಯಲಿಲ್ಲ. ಕೆಲವು ಅಧ್ಯಕ್ಷರ ಅಧಿಕಾರ ಲಾಲಸೆಯ ಕಾರಣದಿಂದಾಗಿ, ಮೂರುವರ್ಷದ ಅಧಿಕಾರಾವಧಿ ಐದುವರ್ಷದ ವಿಸ್ತರಣೆಗೆ ವಾಮಮಾರ್ಗದಲ್ಲಿ ಹರಿದದ್ದು ಕಸಾಪದಲ್ಲಿ ನಡೆದ ಕೆಟ್ಟ ಬೆಳವಣಿಗೆ. ಇದರ ಕೆಟ್ಟ ಪರಿಣಾಮವೆಂದರೆ ಇದುವರೆಗಿನ ‘ರಾಜಮಾರ್ಗ’ವನ್ನು ಬಿಟ್ಟು ಅನೀತಿಯ ಅಕ್ರಮ ಮಾರ್ಗದಲ್ಲಿ ಅಹಂಕಾರದ ವರ್ತನೆಗಳು ವಿಜೃಂಭಿಸತೊಡಗಿವೆ.

//2021ರ ಕಸಾಪ ಅಧ್ಯಕ್ಷರ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದು ಒಬ್ಬ ವ್ಯಕ್ತಿಗೆ ಬೆಂಬಲವನ್ನು ಪಕ್ಷ ವಲಯದಲ್ಲಿ ಘೋಷಿಸಿದಂತೆ ಕಸಾಪ ಚುನಾವಣೆಯಲ್ಲಿ ಭಾಗವಹಿಸಿತು//. ಅದರ ಬೆಂಬಲದಿಂದ ಗೆದ್ದ ವ್ಯಕ್ತಿ, ಅಧಿಕಾರಗ್ರಹಣದ ನಂತರ ಸರ್ವಾಧಿಕಾರಿಯಂತೆ ವರ್ತಿಸತೊಡಗಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತಾ ಕನ್ನಡದ ಸಾಕ್ಷಿಪ್ರಜ್ಞೆಯಂತಿರುವ ಕಸಾಪವನ್ನು ಒಂದು ಸಂಘಟನೆಯ ಪಕ್ಷರಾಜಕಾರಣದ ವೇದಿಕೆಯಾಗಿ ಪರಿವರ್ತಿಸಹೊರಟಿದ್ದಾರೆ.

ನೂರು ವರ್ಷಗಳಿಂದಲೂ ಬೈಲಾ ತಿದ್ದುಪಡಿಯೇ ಆಗಿಲ್ಲವೆಂದು ಹಸಿಸುಳ್ಳು ಹೇಳುತ್ತಾ, ಕಸಾಪ ಬೈಲಾದ ಸಮಗ್ರ ತಿದ್ದುಪಡಿಗೆ ಸಮಿತಿ ರಚಿಸಿದ್ದಾರೆ. ಆ ಸಮಿತಿ ಸಿದ್ಧಪಡಿಸಿದ ಕರಡು ಪ್ರತಿಯ ಕೆಲ ಅಂಶಗಳು ಪತ್ರಿಕೆಯಲ್ಲಿ (ಫೆ. 15ರಂದು) ಪ್ರಕಟವಾಗಿವೆ. ಅಲ್ಲಿ ಪ್ರಸ್ತಾಪಿತವಾಗಿರುವ ಹಲವು ತಿದ್ದುಪಡಿಗಳು ಕಸಾಪದ ಮೂಲ ಹಾಗೂ ಮುಖ್ಯ ಆಶಯಕ್ಕೇ ಕೊಡಲಿ ಬೀಸಿವೆ.

(1) ‘ಕಸಾಪ ಸದಸ್ಯರಾಗಲು 10ನೇ ತರಗತಿ ತೇರ್ಗಡೆಯಾಗಿರಬೇಕು. ಇಲ್ಲದಿದ್ದರೆ ಪರಿಷತ್ತು ನಡೆಸುವ ಪರೀಕ್ಷೆಯನ್ನು ಎದುರಿಸಬೇಕು. ಹೊರನಾಡು ಹೊರದೇಶಗಳಲ್ಲಿರುವ ಕನ್ನಡಿಗರಿಗೆ ಈ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆ ಅನ್ವಯವಾಗದು’

ಈ ನಿಬಂಧನೆ ಎಷ್ಟು ಹಾಸ್ಯಾಸ್ಪದವೋ ಅಷ್ಟೇ ದ್ವಂದ್ವಾತ್ಮಕವೂ ವೈರುಧ್ಯಗಳಿಂದ ಕೂಡಿದುದೂ ಆಗಿರುವುದರ ಜೊತೆಗೆ ತುಂಬಾ ಅಪಾಯಕಾರಿಯಾದುದೂ ಆಗಿದೆ. ಮಾನ್ಯ ಅಧ್ಯಕ್ಷರು ಈಗಾಗಲೇ ಕಸಾಪದಲ್ಲಿ ಮೂವತ್ತು ಸಾವಿರ ಹೆಬ್ಬೆಟ್ಟಿನವರು ಸದಸ್ಯರಾಗಿದ್ದಾರೆ ಎಂದು ತೀರ ಅಸಡ್ಡೆಯ ಧೋರಣೆಯಲ್ಲಿ ಮಾತನಾಡಿದ್ದಾರೆ. ಅವರ ಮಾತು ಸಾಹಿತ್ಯವನ್ನು ಕೇವಲ ಅಕ್ಷರವಂತರ ಸ್ವತ್ತಾಗಿ ಕಾಣುವ ಅಹಂಕಾರದ ಮಾತಾಗಿದೆ. ಕವಿರಾಜಮಾರ್ಗಕಾರ ಕನ್ನಡ ಜನಪದರನ್ನು ‘ಕುರಿತೋದದೆಯುಮ್ ಕಾವ್ಯಪ್ರಯೋಗ ಪರಿಣತಮತಿಗಳ್‌ ನಾಡವರ್ಗಳ್‌ʼ - ಎಂದು ಗೌರವಿಸಿದ್ದಾರೆ. ಅದಕ್ಕೆ ಸಾಕ್ಷ್ಯ ಎಂಬಂತೆ ಸಮೃದ್ಧವಾದ ಕನ್ನಡ ಜಾನಪದ ಸಾಹಿತ್ಯ ನಮ್ಮ ಕಣ್ಣೆದುರೇ ಇದೆ. ಜಾನಪದ ವೃತ್ತಿ ಗಾಯಕರು ಹಾಡಿರುವ ಇಪ್ಪತ್ತಕ್ಕೂ ಅಧಿಕ ಸಂಖ್ಯೆಯ ಜನಪದ ಪುರಾಣ ಕಾವ್ಯಗಳು ಇಲ್ಲಿ ಉಲ್ಲೇಖಾರ್ಹ.

ಅವುಗಳ ಲೋಕದರ್ಶನ ಮನುಷ್ಯಕೇಂದ್ರಿತ ನೆಲೆಗಿಂತ ಜೀವಕೇಂದ್ರಿತ ವ್ಯಾಪ್ತಿಯ ನಿಸರ್ಗಧರ್ಮ ನಿಷ್ಠವಾದುದು. ಇಂಥ ಜನಪದ ಕಲಾವಿದರನ್ನು ಜನಪದ ಕಾಯಕ ಜೀವಿಗಳನ್ನು ಜನಪದ ಸಾಹಿತ್ಯವನ್ನು ಇದುವರೆಗೂ ಕಸಾಪ ತುಂಬು ಗೌರವದಲ್ಲಿ ಒಳಗೊಂಡಿದೆ ಹಾಗೂ ಅಷ್ಟೇ ಘನತೆಯಲ್ಲಿ ಅವರನ್ನು ನಡೆಸಿಕೊಂಡಿದೆ. ಈ ಸನ್ಮಾನ್ಯ ಅಧ್ಯಕ್ಷರು ಅವರನ್ನು ಹೊರಗಿಡುವ ನಿಯಮ ರೂಪಿಸಿದಂತೆ ಮಾತನಾಡುತ್ತಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಒಂದು ಕೋಟಿ ಸದಸ್ಯತ್ವದ ಉದ್ದೇಶ ಯಾರನ್ನು ಯಾವ ಸಮುದಾಯವನ್ನು ನಿರ್ದಿಷ್ಟತೆಯಲ್ಲಿಟ್ಟುಕೊಂಡ ದುರುದ್ದೇಶದಿಂದ ಕೂಡಿದೆ?

(2) ‘ಪರಿಷತ್ತಿನ ಸದಸ್ಯರು ಸದಸ್ಯ ಸಂಸ್ಥೆಗಳು ಅನುಚಿತ ನಡವಳಿಕೆ ಇತ್ಯಾದಿ ಆರೋಪಕ್ಕೆ ಒಳಗಾದರೆ ಮೇಲ್ನೋಟಕ್ಕೆ ಸರಿ ಎನ್ನಿಸಿದರೆ ಕೇಂದ್ರ ಘಟಕದ ಅಧ್ಯಕ್ಷರು ಅಂತಹವರನ್ನು ನೇರವಾಗಿ ಅಮಾನತು ಮಾಡಬಹುದು. ಇದಕ್ಕೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಬೇಕಿಲ್ಲ’ ಎಂದೂ ಕರಡಿನಲ್ಲಿ ಹೇಳಲಾಗಿದೆ. ಇದು ಪ್ರಜಾಪ್ರಭುತ್ವವಾದಿ ಆಡಳಿತಾತ್ಮಕ ನಡೆಯಲ್ಲ. ಸರ್ವಾಧಿಕಾರಿ ಧೋರಣೆಯ ಏಕಪಕ್ಷೀಯ ನಿರ್ಧಾರದ ಅಜ್ಞಾನದ ನಡೆ. ಸಹಿತತ್ವದ ಸಾಹಿತ್ಯ ವಲಯದಲ್ಲಿ ಸರ್ವಾಧಿಕಾರಿ ಅಹಂಕಾರ ವಿಜೃಂಭಿಸಿದರೆ ‘ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತುʼ ಎಂಬಂತೆ ಬಲಿಹೋಗುವ ನಿರಪರಾಧಿಗಳ ಪ್ರಮಾಣಕ್ಕೆ ಲೆಕ್ಕಕೊಡುವವರೂ ಇಲ್ಲದಂತಾಗುತ್ತಾರೆ.

(3) ‘ತಾತ್ಕಾಲಿಕವಾಗಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕಾತಿ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡಬೇಕು’ -ಈ ಪ್ರಸ್ತಾವ ವಿಕೇಂದ್ರೀಕರಣ ನೀತಿಯಲ್ಲಿ ವಿಸ್ತರಿಸಿಕೊಂಡಿದ್ದ ಕಸಾಪದ ಬೆಳವಣಿಗೆಯನ್ನು ಏಕವ್ಯಕ್ತಿ ಕೇಂದ್ರಿತ ಅಧಿಕಾರದ ಅಡ್ಡೆಯಾಗಿಸುವ ನಡೆಯಾಗಿದೆ.

(4) ‘ಪರಿಷತ್ತಿಗೆ ಸಿಬ್ಬಂದಿ ನೇಮಕ ಮಾಡುವ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೇ ನೀಡಬೇಕು; - ಪ್ರಸ್ತಾವಿತ ತಿದ್ದುಪಡಿ ಸೇರಿದಂತೆ ಮೇಲಿನ ಎರಡೂ ತಿದ್ದುಪಡಿಗಳು ಸರ್ವಾಧಿಕಾರಿ ಧೋರಣೆಗೆ ಅಧ್ಯಕ್ಷರನ್ನು ಬೆಳೆಸುತ್ತವೆಯೇ ಹೊರತು ಕಾರ್ಯಕಾರಿ ಸಮಿತಿಯ ಅಗತ್ಯವನ್ನೇ ಅಪ್ರಸ್ತುತಗೊಳಿಸುವ ನಿಯಮಗಳಾಗಿವೆ.

(5) ‘ಜಿಲ್ಲಾ ಸಮ್ಮೇಳನಗಳ ಅತಿಥಿಗಳ ಆಯ್ಕೆಯ ತೀರ್ಮಾನವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡಬೇಕು’- ಇದು ಜಿಲ್ಲಾಧ್ಯಕ್ಷರನ್ನು ಅಲ್ಲಿಯ ಕಾರ್ಯಕಾರಿ ಸಮಿತಿಯನ್ನು ಹಾಗೂ ಜಿಲ್ಲಾ ಸಾಹಿತ್ಯ ವಲಯವನ್ನು ಜಿಲ್ಲೆಯ ಜನತೆಯನ್ನು ಅಗೌರವಿಸುವ ನಿಲುವಾಗಿದೆ.

ಮೇಲಿನ ಐದೂ ಪ್ರಸ್ತಾವಿತ ತಿದ್ದುಪಡಿಗಳ ಉದ್ದೇಶ ಕಸಾಪದಲ್ಲಿ ಇದುವರೆಗೆ ಅನುಷ್ಠಾನದಲ್ಲಿದ್ದ ವಿಕೇಂದ್ರೀಕರಣ ನೀತಿಯನ್ನು ತೊಡೆದುಹಾಕಿ ಕೇಂದ್ರೀಕೃತ ಅಧಿಕಾರಶಾಹಿಯನ್ನು ಜಾರಿಗೆ ತರುವುದು ಹಾಗೂ ಶ್ರೀಸಾಮಾನ್ಯರನ್ನು ಮತ್ತು ಪ್ರಶ್ನಿಸುವವರನ್ನು ಕಸಾಪದಿಂದ ದೂರವಿಟ್ಟು ಅದನ್ನು ಹೌದಪ್ಪಗಳ ಚಾವಡಿಯಾಗಿಸುವುದೇ ಆಗಿದೆ. ಇಲ್ಲಿಯ ಹೌದಪ್ಪಗಳು ಇನ್ನಾರೂ ಆಗಿರದೆ ಒಂದು ರಾಜಕೀಯ ಪಕ್ಷದ ಸೈದ್ಧಾಂತಿಕ ಒಪ್ಪಿತ ಮುದ್ರೆಯ ಕಾಲಾಳುಗಳೇ ಆಗಿರುತ್ತಾರೆ. ಅಂಥವರ ಕಬ್ಜಾ ಆಗುವಂತೆ ಕಸಾಪವನ್ನು ಬದಲಾಯಿಸುವುದು.

ಇದನ್ನು ಆಗುಮಾಡುವ ನಿಟ್ಟಿನಲ್ಲಿ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತಿರುವ ಮಾನ್ಯ ಅಧ್ಯಕ್ಷರು ದಿನಕ್ಕೊಂದು ಬಗೆಯ ಮಾತುಗಳನ್ನು ಉದುರಿಸುತ್ತಾ ಕನ್ನಡಿಗರನ್ನು ಕನ್ನಡ ಪ್ರಜ್ಞೆಯನ್ನು ಲೆಕ್ಕಕ್ಕೇ ಇಟ್ಟುಕೊಳ್ಳದಂತೆ ಮಾತನಾಡುತ್ತಿದ್ದಾರೆ. ಇದುವರೆಗೂ ಐದುನೂರು ರೂಪಾಯಿಗಳಿದ್ದ ಸದಸ್ಯತ್ವದ ಶುಲ್ಕವನ್ನು ಒಮ್ಮೆಗೇ ಇನ್ನೂರೈವತ್ತಕ್ಕೆ ಇಳಿಸಿದ ಮಾತನಾಡಿದರು. ಈಗ ಮತ್ತೆ ಸದಸ್ಯರಿಗೆ ಕೊಡುವ ಸ್ಮಾರ್ಟ್‌ಕಾರ್ಡ್‌ ಶುಲ್ಕವನ್ನೂ ಸೇರಿಸಿ 400 ರೂಪಾಯಿ ಸದಸ್ಯತ್ವದ ಶುಲ್ಕ ಕಟ್ಟಬೇಕೆನ್ನುತ್ತಿದ್ದಾರೆ. ಇದುವರೆಗೂ ಸದಸ್ಯರಾಗುವವರು ಹತ್ತನೇ ತರಗತಿ ಪಾಸಾಗಿರಬೇಕು ಎನ್ನುತ್ತಿದ್ದವರು ಈಗ ಏಳನೇ ತರಗತಿ ಓದಿದ್ದರೆ ಸಾಕು ಎನ್ನುತ್ತಿದ್ದಾರೆ. ಹೆಬ್ಬೆಟ್ಟುಗಳಿಗೆ ಕನ್ನಡ ಕಲಿಸುವ ಮಾತನಾಡುತ್ತಿದ್ದಾರೆ. ಆಯ್ಕೆಯಾದ ಎರಡು ತಿಂಗಳ ಒಳಗೆ ಜಿಲ್ಲಾಧ್ಯಕ್ಷರುಗಳು ತಾಲ್ಲೂಕಿನ ಸದಸ್ಯರುಗಳ ಸಮಾಲೋಚನಾ ಸಭೆ ನಡೆಸಿ ಸಮಿತಿಯನ್ನು ರಚಿಸಬೇಕು. ರಚಿಸಿದ ಸಮಿತಿಯ ಪಟ್ಟಿಗೆ ಕೇಂದ್ರ ಅಧ್ಯಕ್ಷರ ಅನುಮತಿ ಪಡೆದು ಎರಡು ತಿಂಗಳೊಳಗೇ ಕಾರ್ಯಕ್ರಮಗಳನ್ನು ಆರಂಭಿಸಬೇಕು.

ಇದು ಇದುವರೆಗೂ ಇದ್ದ ನಿಯಮ. ಆದರೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಇನ್ನೂ ಎಲ್ಲಾ ಜಿಲ್ಲೆಗಳ ಸಮಿತಿಗಳಿಗೆ ಅನುಮೋದನೆಯನ್ನೇ ನೀಡಿಲ್ಲ. ರಾಜ್ಯ ಘಟಕಕ್ಕೂ ಪೂರ್ಣ ಪ್ರಮಾಣದಲ್ಲಿ ಸಮಿತಿಗಳ ನೇಮಕಾತಿ ಮಾಡಿಲ್ಲ. ಹೀಗೆ ಮಾಡಬೇಕಾದ ಕೆಲಸ ಬೆಟ್ಟದಷ್ಟಿರುವಾಗ ಇದಾವುದನ್ನೂ ತ್ವರಿತಗತಿಯಲ್ಲಿ ಮಾಡದೆ ಅಧಿಕಾರಗ್ರಹಣ ಮಾಡಿಕೊಂಡ ಮರುಕ್ಷಣದಿಂದಲೇ ಬೈಲಾ ತಿದ್ದುಪಡಿಯ ಉಮೇದಿಗೆ ಬಿದ್ದಿದ್ದಾರೆ. ಯಾವುದೇ ಸಂಸ್ಥೆಯ ಬೈಲಾತಿದ್ದುಪಡಿಗೆ ಮುನ್ನ ಆ ಸಂಸ್ಥೆಯ ಮೂಲ ಬೈಲಾದ ಆಗುಹೋಗುಗಳ ಅನುಭವಾತ್ಮಕ ಅರಿವು ಮುಖ್ಯ. ಇದಕ್ಕೆ ಕನಿಷ್ಠ ಒಂದೆರಡು ವರ್ಷಗಳ ಅನುಭವ ಪಡೆದ ನಂತರ ಮಾನ್ಯ ಅಧ್ಯಕ್ಷರು ಈ ಮಾತನ್ನಾಡಿದ್ದರೆ ಅದಕ್ಕೆ ಬೆಲೆ ಬರುತ್ತಿತ್ತು. ಅದನ್ನು ಬಿಟ್ಟು ಆತುರಾತುರವಾಗಿ ಬೈಲಾ ತಿದ್ದುಪಡಿ ಮಾಡಹೊರಟಿರುವ ಈ ಧೋರಣೆ ಕಸಾಪಕ್ಕೆ ವಕ್ಕರಿಸಿರುವ ದೊಡ್ಡ ಆಪತ್ತೇ ಸರಿ.

ಮಾನ್ಯ ಜೋಷಿಯವರು ಕನ್ನಡ-ಕನ್ನಡಿಗ-ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿರುವ ಕಸಾಪವನ್ನು ಅದರ ಸ್ವಾಯತತ್ತೆಯನ್ನು ಸಾಂಸ್ಕೃತಿಕ ಹಿರಿಮೆಯನ್ನು ಒಳಗೊಳ್ಳುವ ಗುಣದಲ್ಲಿ ಬೆಳೆಸುವ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಅಧಿಕಾರಿಯ ಅಹಂಕಾರಕ್ಕಿಂತ ಸರ್ವರೊಳಗೊಂದೊಂದು ನುಡಿಗಲಿತ ಸರ್ವಜ್ಞಪ್ರಜ್ಞೆಯ ವಿನಯದಲ್ಲಿ, ವಿಕೇಂದ್ರೀಕರಣದ ಬಹುತ್ವಭಾವಸಿರಿಯಲ್ಲಿ ಕಸಾಪವನ್ನು ಮುನ್ನಡೆಸುವ ತಿಳಿವಳಿಕೆಯನ್ನೂ ರೂಢಿಸಿಕೊಳ್ಳಲಿ ಎಂದು ಕಸಾಪದ ಒಬ್ಬ ಸದಸ್ಯನಾಗಿ ಹಾಗೂ ಒಬ್ಬ ಸಾಮಾನ್ಯ ಕನ್ನಡಿಗನಾಗಿ ವಿನಂತಿಸುತ್ತೇನೆ.

***

ಪ್ರಸ್ತಾವಿತ ತಿದ್ದುಪಡಿಗಳ ಉದ್ದೇಶ ಕಸಾಪದಲ್ಲಿ ಇದುವರೆಗೆ ಅನುಷ್ಠಾನದಲ್ಲಿದ್ದ ವಿಕೇಂದ್ರೀಕರಣ ನೀತಿಯನ್ನು ತೊಡೆದುಹಾಕಿ ಕೇಂದ್ರೀಕೃತ ಅಧಿಕಾರಶಾಹಿಯನ್ನು ಜಾರಿಗೆ ತರುವುದು ಹಾಗೂ ಶ್ರೀಸಾಮಾನ್ಯರನ್ನು ಮತ್ತು ಪ್ರಶ್ನಿಸುವವರನ್ನು ಕಸಾಪದಿಂದ ದೂರವಿಟ್ಟು ಅದನ್ನು ಹೌದಪ್ಪಗಳ ಚಾವಡಿಯಾಗಿಸುವುದೇ ಆಗಿದೆ. ಇಲ್ಲಿಯ ಹೌದಪ್ಪಗಳು ಇನ್ನಾರೂ ಆಗಿರದೆ ಒಂದು ರಾಜಕೀಯ ಪಕ್ಷದ ಸೈದ್ಧಾಂತಿಕ ಒಪ್ಪಿತ ಮುದ್ರೆಯ ಕಾಲಾಳುಗಳೇ ಆಗಿರುತ್ತಾರೆ. ಅಂಥವರ ಕಬ್ಜಾ ಆಗುವಂತೆ ಕಸಾಪವನ್ನು ಬದಲಾಯಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT