ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?: ಸರ್ಕಾರ ಜನರಿಗೆ ಮಾಡಿದ ಮಹಾದ್ರೋಹ– SR ಹಿರೇಮಠ

ಪ್ರಜಾವಾಣಿ ಚರ್ಚೆ: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ ಸರಿಯೇ?
ಎಸ್‌.ಆರ್. ಹಿರೇಮಠ
Published : 6 ಸೆಪ್ಟೆಂಬರ್ 2024, 19:07 IST
Last Updated : 6 ಸೆಪ್ಟೆಂಬರ್ 2024, 19:07 IST
ಫಾಲೋ ಮಾಡಿ
Comments

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಕ್ರಯ ಪತ್ರ ಮಾಡಿಕೊಡಲು ಹೊರಟಿದೆ. ಸಂವಿಧಾನದ ಮೇಲೆ ಶಪಥ ಮಾಡಿ ಅಧಿಕಾರಕ್ಕೆ ಏರಿದವರಿಗೆ, ಸಾರ್ವಜನಿಕ ವಿಚಾರಗಳ ಬಗ್ಗೆ ಪ್ರಾಮಾಣಿಕ ಕಳಕಳಿ ಇರಬೇಕು. ಸಂಪುಟದಲ್ಲಿ ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಮಾಡಬೇಕು. ತಾವು ಸರಿಯಾದುದನ್ನೇ ಮಾಡುತ್ತಿದ್ದೇವೆ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಈ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ಈ ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಎಚ್‌.ಕೆ.ಪಾಟೀಲ ಅವರು ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ಬಗ್ಗೆ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಪಾಟೀಲರು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇದನ್ನು ವಿರೋಧಿಸಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಅವರದ್ದೇ ಪಕ್ಷದ ಅರವಿಂದ ಬೆಲ್ಲದ ಜಿಂದಾಲ್‌ಗೆ ಭೂಮಿ ಕ್ರಯ ಮಾಡಿಕೊಡುವ ಪ್ರಸ್ತಾವ ವಿರೋಧಿಸಿದ್ದರು. ವಿಪರ್ಯಾಸ ಅಂದರೆ, ವಿಪಕ್ಷದಲ್ಲಿದ್ದಾಗ ವಿರೋಧ ಮಾಡಿದ್ದವರೇ ಅಧಿಕಾರಕ್ಕೆ ಬಂದಾಗ ನಿರ್ಣಯದ ಪರ ಕೆಲಸ ಮಾಡುತ್ತಾರೆ. ಇದು ಅಪ್ರಾಮಾಣಿಕ ರಾಜಕಾರಣಿಗಳು ಮಾಡುವ ಕೆಲಸವೇ ವಿನಾ ಒಬ್ಬ ಮುತ್ಸದ್ದಿ ಮಾಡುವಂತಹದ್ದಲ್ಲ.

ಜಿಂದಾಲ್‌ನವರು ಸರ್ಕಾರದ ಹಣವನ್ನು ನೇರವಾಗಿ ದೊಡ್ಡ ಪ್ರಮಾಣದಲ್ಲಿ ಸುಲಿಗೆ ಮಾಡಿದ್ದಾರೆ. ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ, ಅಕ್ರಮ ಗಣಿಗಾರಿಕೆ ಬಗ್ಗೆ ಎರಡು ಉತ್ಕೃಷ್ಟ ವರದಿಗಳನ್ನು ಕೊಟ್ಟಿದ್ದಾರೆ. 2008ರಲ್ಲಿ ನೀಡಿದ ಮೊದಲ ವರದಿಯಲ್ಲಿ ಜಿಂದಾಲ್‌ನವರು ಮಾಡಿದ ಅನ್ಯಾಯದ ಬಗ್ಗೆ ಪೂರ್ಣ ವಿವರಗಳಿವೆ. ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮತ್ತು ಜಿಂದಾಲ್‌ನವರು ಹಿಂದೆ ಜಂಟಿ ಕಂಪನಿ ಮೂಲಕ ವ್ಯವಹಾರ ಮಾಡಿದ್ದರು. ಆಗ ಜಿಂದಾಲ್‌ನವರು ಮೈಸೂರು ಮಿನರಲ್ಸ್ ಲಿಮಿಟೆಡ್‌ಗೆ ಅದಿರಿನ ಹಣವನ್ನೇ ಪಾವತಿಸಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಉತ್ತಮ ವರದಿ ಕೊಟ್ಟಿದೆ. ಇಷ್ಟೆಲ್ಲ ಆದರೂ, ಇದುವರೆಗೂ ಯಾವ ಸರ್ಕಾರವೂ ಹಣ ವಸೂಲಿ ಮಾಡಿಲ್ಲ. 

ಅಕ್ರಮ ಗಣಿಗಾರಿಕೆ ವಿರೋಧಿಸಿ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಎಲ್ಲ ರೀತಿಯ ಅಕ್ರಮ ಗಣಿಗಾರಿಕೆಗಳ ಬಗೆಗೂ ಕ್ರಮ ಜರುಗಿಸುವುದಾಗಿ ಆಗ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ನಾವು ಒಂದಷ್ಟು ಮಂದಿ ಅವರನ್ನು ಭೇಟಿ ಮಾಡಿ, ‘ನಿಮ್ಮ ಸರ್ಕಾರಕ್ಕೆ ಕನಿಷ್ಠ ಅಂದರೂ ₹1 ಲಕ್ಷ ಕೋಟಿ ಗಣಿಗಾರಿಕೆಯಿಂದ ಬರುತ್ತದೆ. ಅಕ್ರಮ ಗಣಿಗಾರಿಕೆ ಕುರಿತ ಸಂತೋಷ್ ಹೆಗ್ಡೆ ಅವರ ಎರಡೂ ವರದಿಗಳನ್ನು ಜಾರಿ ಮಾಡಿ’ ಎಂದು ಒತ್ತಾಯಿಸಿದ್ದೆವು. ಆದರೆ, ಇದುವರೆಗೂ ಅವರು ಕ್ರಮ ಜರುಗಿಸಿಲ್ಲ. ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಇವರು ತಾವು ಹೇಳಿದಂತೆ ನಡೆದುಕೊಳ್ಳಲಿಲ್ಲ.

ಸರ್ಕಾರ ಜಿಂದಾಲ್‌ಗೆ ಕೊಡಲು ಹೊರಟಿರುವ ಜಮೀನಿನ ಮಾರುಕಟ್ಟೆ ಬೆಲೆ ಕೋಟಿಗಟ್ಟಲೆ ಇದೆ. 3,667 ಎಕರೆಯನ್ನು ಜಿಂದಾಲ್‌ಗೆ ಕ್ರಯ ಮಾಡಿಕೊಡಲು ಹೊರಟಿರುವುದು ಸಿದ್ದರಾಮಯ್ಯ ಸರ್ಕಾರವು ಕರ್ನಾಟಕದ ಜನರಿಗೆ ಮಾಡುತ್ತಿರುವ ಮಹಾದ್ರೋಹದ ಕೆಲಸ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಜನರು ಮಾಡಬೇಕು. ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲಕ ಜನ ಆಳುವವರಿಗೆ ಅವರ ಜವಾಬ್ದಾರಿಯನ್ನು ನೆನಪಿಸಬೇಕಿದೆ. ಬಡವರು, ಎಸ್‌ಸಿ, ಎಸ್‌ಟಿ, ಮಹಿಳೆಯರಿಗೆ ಅನ್ಯಾಯ ಮಾಡಿ, ಅವರ ಸಂಪತ್ತನ್ನು ಅಂಬಾನಿ, ಅದಾನಿಗೆ ಸುರಿದ ನರೇಂದ್ರ ಮೋದಿ ಅವರು ‘ಚಾರ್ ಸೌ ಪಾರ್’ ಮುಟ್ಟದಂತೆ ಜನ ಬುದ್ಧಿ ಕಲಿಸಿದರು. ಅದು ಸಿದ್ದರಾಮಯ್ಯ ಅವರಿಗೆ ಪಾಠವಾಗಬೇಕು. ಜಿಂದಾಲ್‌ಗೆ ಜಮೀನು ಮಾರಾಟ ಮಾಡುವಂಥ ಅನ್ಯಾಯವನ್ನು ಕರ್ನಾಟಕದ ಜನ ಯಾವ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ಣಯವನ್ನು ಬದಲಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಅಂಥ ಪಕ್ಷದಿಂದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯನವರು ‘ಕೋರ್ಟ್‌ ಆಜ್ಞೆಗೆ ತಲೆಬಾಗಿ ಜಮೀನು ಕೊಡುತ್ತಿದ್ದೇವೆ’ ಎಂದು ಸಮರ್ಥಿಸಿಕೊಳ್ಳುವುದು ಸರಿ ಅಲ್ಲ. ಅವರು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ಚಲಾಯಿಸಲಿ. ಅವರ ಸರ್ಕಾರವು ಸಂವಿಧಾನದತ್ತವಾದ ಅಧಿಕಾರ ಚಲಾಯಿಸುವಲ್ಲಿ, ಸಾಮಾಜಿಕ ಜವಾಬ್ದಾರಿ ನಿಭಾಯಿಸುವಲ್ಲಿ ಇದುವರೆಗೆ ದಯನೀಯವಾಗಿ ಸೋತಿದೆ. ಕೋರ್ಟ್ ಹೇಳಿದಂತೆ ಮಾಡುತ್ತೇವೆ ಎಂದರೆ, ಇವರನ್ನು ಜನ ಏಕೆ ಆರಿಸಿ ಕಳಿಸಿದ್ದಾರೆ? ಇವರು ತಮ್ಮ ಮೂಲಭೂತ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ.

ಜಿಂದಾಲ್ ಕಂಪನಿ ಹಣಕಾಸಿನ ದೃಷ್ಟಿಯಿಂದ ಸಾಕಷ್ಟು ಸದೃಢವಾಗಿದೆ. ‘ನಾವು 13 ಪಟ್ಟು ಹೆಚ್ಚು ಬೆಲೆ ಕೊಡುತ್ತಿದ್ದೇವೆ’ ಎನ್ನುತ್ತಿದ್ದಾರೆ. ಅವರು ಯಾರಿಗೇನೂ ಉಪಕಾರ ಮಾಡುತ್ತಿಲ್ಲ. ಅಲ್ಲಿ ಅದಿರು ಇದೆ. ಭೂಮಿ ಯಾರ ಮಾಲೀಕತ್ವದಲ್ಲಿದ್ದರೂ ಅದರೊಳಗಿನ ಅದಿರು ಯಾವಾಗಲೂ ಸರ್ಕಾರದ್ದೇ ಆಗಿರುತ್ತದೆ. ಸರ್ಕಾರ ಹಣವಂತರಿಗೆ ಮಣಿಯಬಾರದು. ನಮ್ಮ ಸಂವಿಧಾನದ ಆಶಯವೂ ಅದೇ ಆಗಿದೆ.

ಸಿದ್ದರಾಮಯ್ಯನವರು ಈ ಹಿಂದೆ ಲೋಕಾಯುಕ್ತ ಪೊಲೀಸ್ ಅಧಿಕಾರವನ್ನು ಕಬಳಿಸಿ, ಎಸಿಬಿ ಜಾರಿ ಮಾಡುವ ಮೂಲಕ, ತಮ್ಮ ಮತ್ತು ಮುಖ್ಯ ಕಾರ್ಯದರ್ಶಿ ಕೈಯಲ್ಲಿ ಭ್ರಷ್ಟ ನಿಗ್ರಹದ ಅಧಿಕಾರ ಇಟ್ಟುಕೊಂಡರು. ಹೈಕೋರ್ಟ್ ಲೋಕಾಯುಕ್ತವನ್ನು ಪುನಃ ಸ್ಥಾಪನೆ ಮಾಡಬೇಕಾಯಿತು. ಸಿದ್ದರಾಮಯ್ಯನವರಿಗೆ ನೈತಿಕತೆ, ಸಾರ್ವಜನಿಕ ಜವಾಬ್ದಾರಿ ಇದ್ದರೆ ಅವರು ಜಿಂದಾಲ್‌ಗೆ ಜಮೀನು ಮಾರುವ ವಿಚಾರದಲ್ಲಿ ಜನಪರವಾಗಿ ವರ್ತಿಸಬೇಕು. ಜಿಂದಾಲ್ ಪ್ರಕರಣವು ಸರ್ಕಾರಕ್ಕೆ ಒಂದು ಪರೀಕ್ಷೆ ಆಗಿದೆ.

ಇದೇ ಸಿದ್ದರಾಮಯ್ಯ ಕಳೆದ ಸಲ ಬಳ್ಳಾರಿಗೆ ಹೋದಾಗ ತುಂಗಭದ್ರಾ ಜಲಾಶಯದ ಬಳಿ ಇರುವ ಸರ್ಕಾರದ ಅತಿಥಿ ಗೃಹದಲ್ಲಿರದೆ, ಜಿಂದಾಲ್‌ನವರ ಅತಿಥಿ ಗೃಹದಲ್ಲಿ ತಂಗಿದ್ದರು. ಸಾಂವಿಧಾನಿಕವಾಗಿ ಮಹತ್ವದ ಸ್ಥಾನದಲ್ಲಿರುವ ಸಿಎಂ ಅಲ್ಲಿಗೆ ಹೋಗಬಾರದು ಎಂದು ನಾವು ಆಗ ಪ್ರತಿಭಟನೆ ಮಾಡಿದ್ದೆವು.

ನಾವು ಜೀವ ಪಣಕ್ಕಿಟ್ಟು ಬಳ್ಳಾರಿಯ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇವೆ. ಈಗ ವಿವಿಧ ಸಂಘಟನೆಗಳ ಜತೆ ಸೇರಿ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದರ ವಿರುದ್ಧ ಹೋರಾಡುತ್ತೇವೆ. ನಾನು ಈ ಸಂಬಂಧ ಈಗಾಗಲೇ ರೈತ ಸಂಘದವರ ಜತೆ ಮಾತುಕತೆ ನಡೆಸಿದ್ದೇನೆ. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಧರ್ಮಸಿಂಗ್, ಸಿದ್ದರಾಮಯ್ಯ ಎಲ್ಲರೂ ತಪ್ಪು ಮಾಡಿದ್ದಾರೆ. ಇದನ್ನು ಜನ ಕ್ಷಮಿಸಬಾರದು. ತಮ್ಮ ತಪ್ಪನ್ನು ಒಪ್ಪಿಕೊಂಡು ನಿರ್ಧಾರ ವಾಪಸ್ ಪಡೆದರೆ ಮಾತ್ರ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲು ಅರ್ಹರು.

–ಲೇಖಕ: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ

ನಿರೂಪಣೆ: ಬಿ.ವಿ.ಶ್ರೀನಾಥ್

SR ಹಿರೇಮಠ

SR ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT