ಭಾನುವಾರ, ಜೂನ್ 26, 2022
26 °C

ಚರ್ಚೆ | ಸಾಮರಸ್ಯಕ್ಕಾಗಿ ಕಾಯ್ದೆಯ ಸಂರಕ್ಷಣೆ ಅಗತ್ಯ

ಜೈನಾ ಕೊಠಾರಿ Updated:

ಅಕ್ಷರ ಗಾತ್ರ : | |

ಧಾರ್ಮಿಕ ಸ್ಥಳವೊಂದರ ಸ್ವರೂಪವು 1947ರಲ್ಲಿ ಹೇಗೆ ಇತ್ತು ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂಬ ಯಾವುದೇ ಬೇಡಿಕೆಯ ಒಳಗೆಯೇ ಹತ್ತಾರು ಸಂಕೀರ್ಣತೆಗಳು ಇವೆ. ಪೂಜಾ ಸ್ಥಳವೊಂದರ ಮೂಲ ಧಾರ್ಮಿಕ ಸ್ವರೂಪವನ್ನು ದೃಢಪಡಿಸಿಕೊಳ್ಳಲು ಬೇಕಾದ ಪುರಾತತ್ವ ಮತ್ತು ಚಾರಿತ್ರಿಕ ಸಾಧನಗಳು ನಮ್ಮ ಬಳಿ ಇವೆಯೇ ಎಂಬಲ್ಲಿಂದ ತೊಡಗಿ, ಇಂತಹ ವಿಚಾರಗಳ ಬಗ್ಗೆ ತೀರ್ಪು ನೀಡಲು ಬೇಕಾದ ಕೌಶಲಗಳು ನ್ಯಾಯಾಲಯಗಳಿಗೆ ಇವೆಯೇ ಎಂಬಲ್ಲಿ ವರೆಗೆ ಈ ಸಂಕೀರ್ಣತೆಗಳು ವ್ಯಾಪಿಸಿವೆ. ಈ ಎಲ್ಲ ಸಂಕೀರ್ಣತೆಗಳನ್ನು ಗಮನದಲ್ಲಿ ಇರಿಸಿಕೊಂಡೇ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯನ್ನು 1991ರಲ್ಲಿ ರೂಪಿಸಲಾಗಿದೆ. 

***


ಜೈನಾ ಕೊಠಾರಿ

ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ವಿಚಾರಣೆಗೆ ಒಳಗಾಗಿ ಮತ್ತೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವಹಿಸಲಾದ ವಾರಾಣಸಿಯ ಜ್ಞಾನವಾಪಿ ಮಸೀದಿ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳು ಧಾರ್ಮಿಕ ಸ್ಥಳಗಳ ಮೂಲಗಳ ಬಗ್ಗೆ ಸಂಕೀರ್ಣವಾದ ಹಲವು ಪ್ರಶ್ನೆಗಳನ್ನು ಎತ್ತಿವೆ. ತಾಜ್ ಮಹಲ್‌, ಕುತುಬ್‌ ಮಿನಾರ್‌ ಸೇರಿದಂತೆ ಪ್ರಸಿದ್ಧವಾದ ಧಾರ್ಮಿಕ ಕಟ್ಟಡಗಳು ಮತ್ತು ಸ್ಮಾರಕಗಳ ಮೂಲಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ, ಅದೇ ಸ್ಥಳದಲ್ಲಿ ಅಥವಾ ದೇವಾಲಯದ ಮೇಲೆಯೇ ಇವುಗಳನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಕಾನೂನು ಹೇಳುವುದೇನು?

ಕೆಲವು ಪ್ರಕರಣಗಳಲ್ಲಿ, ನಿರ್ದಿಷ್ಟ ಸ್ಥಳವೊಂದರಲ್ಲಿರುವ ಕಟ್ಟಡದ ಮೂಲ ಸ್ವರೂಪ ಏನು ಎಂಬುದನ್ನು ತಿಳಿಯುವುದಕ್ಕಾಗಿ ನ್ಯಾಯಾಲಯಗಳು ಕೆಲವು ದಶಕಗಳು ಅಥವಾ ಕೆಲವು ಶತಮಾನಗಳಷ್ಟು ಹಿಂದೆ ಹೋಗಬೇಕಾಗಿದೆಯೇ? ಹಾಗೆ ಮಾಡುವುದಕ್ಕೆ ಸಾಧ್ಯವೇ? 1991ರಲ್ಲಿ ಪೂಜಾಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ ರೂಪುಗೊಂಡಿದೆ. ಧಾರ್ಮಿಕ ಸ್ಥಳಗಳ ಸ್ವರೂಪವನ್ನು ನಮಗೆ ಸ್ವಾತಂತ್ರ್ಯ ಬಂದ 1947ರ ಆಗಸ್ಟ್‌ 15ರಂದು ಇದ್ದ ರೀತಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂಬುದು ಈ ಕಾಯ್ದೆಯ ಮುಖ್ಯ ಅಂಶವಾಗಿದೆ. ಯಾವುದೇ ಒಂದು ಧರ್ಮದ ಪೂಜಾಸ್ಥಳವನ್ನು ಬೇರೊಂದು ಧರ್ಮದ ಪೂಜಾಸ್ಥಳವಾಗಿ ಪರಿವರ್ತಿಸುವುದನ್ನು ಈ ಕಾಯ್ದೆಯು ನಿಷೇಧಿಸುತ್ತದೆ.

1947ರ ಆಗಸ್ಟ್‌ 15ಕ್ಕೂ ಹಿಂದೆ ಇದ್ದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಸಲ್ಲಿಸುವುದನ್ನು ಅಥವಾ ಕಾನೂನು ಪ್ರಕ್ರಿಯೆಗಳನ್ನು ನಡೆಸುವುದನ್ನು ಈ ಕಾಯ್ದೆಯು ನಿಷೇಧಿಸುತ್ತದೆ. ಪೂಜಾ ಸ್ಥಳವು 1947ರ ಆಗಸ್ಟ್‌ 15ರಂದು ಇದ್ದ ಸ್ಥಿತಿ ಅಬಾಧಿತವಾಗಿಯೇ ಉಳಿಯಬೇಕು ಎಂದು ಕಾಯ್ದೆಯು ಹೇಳುತ್ತದೆ. ಪ್ರಾಚೀನವಾದ ಅಥವಾ ಚಾರಿತ್ರಿಕ ಸ್ಮಾರಕವನ್ನು ಹೊಂದಿರುವ ಪೂಜಾ ಸ್ಥಳವು ಈ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನೂ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ರಾಮ ಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿತ್ತು ಮತ್ತು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪನ್ನೂ ನೀಡಿದೆ.

ಇದನ್ನೂ ಓದಿ: ಚರ್ಚೆ | ದೇಗುಲ ಮೂಲ ಸ್ವರೂಪ ಕಳೆದುಕೊಳ್ಳುವುದು ಸಾಧ್ಯವೇ?

ಕಾನೂನು ಹೀಗೆ ಇದ್ದರೂ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ನ್ಯಾಯಾಲಯಗಳು ವಿಚಾರಣೆಗೆ ಎತ್ತಿಕೊಂಡಿವೆ. ಕೆಲವು ಧಾರ್ಮಿಕ ಸ್ಥಳಗಳ ಸಮೀಕ್ಷೆಗೂ ಆದೇಶ ಕೊಟ್ಟಿವೆ. ಧಾರ್ಮಿಕ ಸ್ಥಳವೊಂದರ ಮೂಲ ಸ್ವರೂಪವು ಏನು ಎಂಬುದನ್ನು ದೃಢಪಡಿಸಿಕೊಳ್ಳುವುದನ್ನು ಈ ಕಾಯ್ದೆಯು ನಿಷೇಧಿಸಿಲ್ಲ ಎಂದು ಜ್ಞಾನವಾ‍ಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ, ಒಮ್ಮೆ ಇಂತಹ ಸಮೀಕ್ಷೆಗಳಿಗೆ ಅವಕಾಶ ಮಾಡಿಕೊಟ್ಟರೆ ಅದು ಜಾರು ಹಾದಿಯೇ ಆಗುತ್ತದೆ. ಅದು ಮುಂದೆ, ಪೂಜಾಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ–1991 ಅನೂರ್ಜಿತಗೊಳ್ಳಲು ಕಾರಣವಾಗಬಹುದು. ಪೂಜಾ ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸುವುದಕ್ಕೆ ಇದು ಅವಕಾಶ ಕೊಡಬಹುದು. 1991ರ ಕಾಯ್ದೆಯು ಈ ಅವಕಾಶವನ್ನು ನಿಷೇಧಿಸಿದೆ.

ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸಿ ದೇಶದಾದ್ಯಂತ ಹಲವು ವಿವಾದಗಳು ಸೃಷ್ಟಿಯಾದ ಬಳಿಕ, ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ–1991ಕ್ಕೆ ಸಾಂವಿಧಾನಿಕ ಸವಾಲು ಎದುರಾಗಬಹುದು. ಮೂರು ದಶಕಗಳಿಗೂ ಹಳೆಯದಾದ ಈ ಕಾಯ್ದೆಗೆ, 2022ರಲ್ಲಿ ಸವಾಲು ಎದುರಾಗಿದೆ ಎಂಬುದು ಆಸಕ್ತಿಕರ.

ಧಾರ್ಮಿಕ ಸ್ಥಳವೊಂದರ ಸ್ವರೂಪವು 1947ರಲ್ಲಿ ಹೇಗೆ ಇತ್ತು ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂಬ ಯಾವುದೇ ಬೇಡಿಕೆಯ ಒಳಗೆಯೇ ಹತ್ತಾರು ಸಂಕೀರ್ಣತೆಗಳು ಇವೆ. ಪೂಜಾ ಸ್ಥಳವೊಂದರ ಮೂಲ ಧಾರ್ಮಿಕ ಸ್ವರೂಪವನ್ನು ದೃಢಪಡಿಸಿಕೊಳ್ಳಲು ಬೇಕಾದ ಪುರಾತತ್ವ ಮತ್ತು ಚಾರಿತ್ರಿಕ ಸಾಧನಗಳು ನಮ್ಮ ಬಳಿ ಇವೆಯೇ ಎಂಬಲ್ಲಿಂದ ತೊಡಗಿ, ಇಂತಹ ವಿಚಾರಗಳ ಬಗ್ಗೆ ತೀರ್ಪು ನೀಡಲು ಬೇಕಾದ ಕೌಶಲಗಳು ನ್ಯಾಯಾಲಯಗಳಿಗೆ ಇವೆಯೇ ಎಂಬಲ್ಲಿ ವರೆಗೆ ಈ ಸಂಕೀರ್ಣತೆಗಳು ವ್ಯಾಪಿಸಿವೆ.

ಈ ಎಲ್ಲ ಸಂಕೀರ್ಣತೆಗಳನ್ನು ಗಮನದಲ್ಲಿ ಇರಿಸಿಕೊಂಡೇ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯನ್ನು 1991ರಲ್ಲಿ ರೂಪಿಸಲಾಗಿದೆ. ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ರಕ್ಷಿಸುವುದಕ್ಕಾಗಿ ಸ್ವಾತಂತ್ರ್ಯ ಬಂದ ದಿನಾಂಕವನ್ನು ಗಡಿರೇಖೆಯಾಗಿ ಇರಿಸಿಕೊಳ್ಳಲಾಗಿದೆ. ಹಾಗಾಗಿಯೇ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸಿದ ಅರ್ಜಿಗಳನ್ನು ಪುರಸ್ಕರಿಸಬಾರದು ಮತ್ತು ಪ್ರಕರಣಗಳ ಮರು ವಿಚಾರಣೆ ನಡೆಸಬಾರದು. ದೇಶದಲ್ಲಿರುವ ಎಲ್ಲ ಧರ್ಮಗಳನ್ನು ಗೌರವಿಸುವುದಕ್ಕಾಗಿ ಮತ್ತು ಧರ್ಮಗಳ ನಡುವೆ ಧಾರ್ಮಿಕ ಸಾಮರಸ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ–1991ರ ಆಶಯವನ್ನು ಜಾರಿಗೊಳಿಸಬೇಕಾದ ಅಗತ್ಯ ಇದೆ.

ಲೇಖಕಿ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು