ಗುರುವಾರ , ಮಾರ್ಚ್ 23, 2023
23 °C
ಶಾಲೆಯಲ್ಲಿ ಧರ್ಮಾಧಾರಿತ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆಯೇ?

ನೈತಿಕ ಶಿಕ್ಷಣ ಕುರಿತಾದ ಚರ್ಚೆ: ಅಗತ್ಯವೂ ಹೌದು, ಅನಿವಾರ್ಯವೂ ಹೌದು

ವಿನಯ್ ಬಿದರೆ Updated:

ಅಕ್ಷರ ಗಾತ್ರ : | |

ನೈತಿಕ ಮೌಲ್ಯ ಶಿಕ್ಷಣವು ಬ್ರಾಹ್ಮಣ್ಯ ಮತ್ತು ವೈದಿಕ ಸಂಸ್ಕೃತಿ ಹೇರಿಕೆಯ ಹುನ್ನಾರ ಎಂಬ ಆರೋಪ ಇದೆ. ಆದರೆ ಈ ಆರೋಪದಲ್ಲಿ ಹುರುಳಿಲ್ಲ. ಇದು ಭಾರತದಲ್ಲೇ ಇರುವ ಒಂದು ಮೂಲಗುಣ. ಈ ಮೂಲಗುಣ ಎನ್ನುವಂಥದ್ದು ಬದುಕಿನ ಎಲ್ಲಾ ಹಂತಗಳಲ್ಲಿಯೂ ಇದೆ. ಕುವೆಂಪು ಅವರು ‘ನೀರೆಲ್ಲವೂ ತೀರ್ಥ’ ಎಂದು ಹೇಳಿದ್ದಾರೆ. ಅದು ಒಂದು ದೊಡ್ಡ ಮೌಲ್ಯ. ನೀರನ್ನು ತೀರ್ಥ ಎಂದು ನೋಡುವುದರಲ್ಲೇ ಎಲ್ಲಾ ನೀರಿಗೂ ಒಂದು ಉನ್ನತ ಸ್ಥಾನ ನೀಡಿದ್ದೇವೆ ಎಂಬ ಅರ್ಥವಿದೆ.

**

ಇಡೀ ನಾಡು ಕಳೆದ ಎರಡು ದಿನದ ಹಿಂದೆ (ಜನವರಿ-12) ಸಂತರ ಸಂತ, ಮಹಾತ್ಮರ ಮಹಾತ್ಮ ಸ್ವಾಮಿ ವಿವೇಕಾನಂದರ 160ನೇ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳ ಬಗ್ಗೆ, ಅದರ ಅವಶ್ಯಕತೆಗಳ ಬಗ್ಗೆ ಅತ್ಯಂತ ಸ್ಪಷ್ಟವಾದ ಮಾತುಗಳಿಂದ ತಿಳಿಸಿದವರಲ್ಲಿ ವಿವೇಕಾನಂದ ಅಗ್ರಗಣ್ಯರು. ಯೋಗಿ ಅರವಿಂದ, ಡಾ. ಸರ್ವಪಲ್ಲಿ ರಾಧಾಕೃಷ್ಣ, ರಸರುಷಿ ಕುವೆಂಪು ಅವರು ಕೂಡ ನೈತಿಕ ಮೌಲ್ಯಾಧಾರಿತ ಶಿಕ್ಷಣದ ಅವಶ್ಯವನ್ನು ಸಾರಿ ಹೇಳಿದ್ದಾರೆ ಮತ್ತು ಮೌಲ್ಯಯುತ ಬದುಕಿಗೆ ಉತ್ತಮ ಉದಾಹರಣೆಗಳಾಗಿದ್ದಾರೆ. ಅವರ ಬರಹ ಮತ್ತು ಬದುಕಿನ ಸಾಮ್ಯತೆ ‘ನುಡಿ ಮತ್ತು ನಡೆ’ಯ ನಡುವೆ ವ್ಯತ್ಯಾಸ ಇರಬಾರದೆಂಬ ಜೀವನ ಮೌಲ್ಯಕ್ಕೆ ನಿದರ್ಶನಗಳಾಗಿವೆ. ಈ ಹೊತ್ತಿನಲ್ಲಿ ದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯು ನೈತಿಕ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಿದೆ. ರಾಜ್ಯ ಸರ್ಕಾರವು ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರನ್ನು ಒಳಗೊಂಡಂತೆ ಶಿಕ್ಷಣ ತಜ್ಞರ ಸಭೆ ನಡೆಸಿ ಪಠ್ಯದಲ್ಲಿ ನೈತಿಕ ಶಿಕ್ಷಣದ ಬಗ್ಗೆ ಸಲಹೆಗಳನ್ನು ಇತ್ತೀಚೆಗೆ ಪಡೆದದ್ದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ.

ಕರ್ನಾಟಕ ರಾಜ್ಯ ಶೈಕ್ಷಣಿಕ ವ್ಯವಸ್ಥೆಗೆ ಮಠಮಾನ್ಯಗಳ ಕೊಡುಗೆ ಅನನ್ಯವಾದದ್ದು. ನಾಡಿನ ಅಸಂಖ್ಯ ಮಾದರಿ ವ್ಯಕ್ತಿತ್ವಗಳು ಈ ಮಠಗಳ ಶಿಕ್ಷಣ ಸಂಸ್ಥೆಗಳಿಂದ ರೂಪುಗೊಂಡಿರುವುದು ವಾಸ್ತವ. ಹಾಗಾಗಿಯೇ ಮೌಲ್ಯ ಶಿಕ್ಷಣದ ಕುರಿತು ಸಲಹೆ ನೀಡಲು ಮಠಗಳು ಅತ್ಯಂತ ಸೂಕ್ತ ಹಾಗೂ ಅವಶ್ಯ ಸಂಸ್ಥೆ ಅಥವಾ ವ್ಯವಸ್ಥೆಯಾಗಿವೆ. ಇತ್ತೀಚೆಗೆ ನಡೆದ ಒಂದೆರಡು ಘಟನೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆಯನ್ನು ಸಾರಿ ಹೇಳುತ್ತಿವೆ. ಮಂಗಳೂರಿನ ವೈದ್ಯ ವಿದ್ಯಾರ್ಥಿಗಳ ಡ್ರಗ್ ಪಾರ್ಟಿ, ಬೆಂಗಳೂರಿನ ಕೆಲವು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ವಿದಾರ್ಥಿಗಳ ಶಾಲಾ ಬ್ಯಾಗ್‍ನಲ್ಲಿ ದೊರೆತ ಅನಪೇಕ್ಷಿತ ವಸ್ತುಗಳು ವಿದ್ಯಾರ್ಥಿ ಮತ್ತು ಯುವ ಸಮುದಾಯದ ಕೆಲವರು 3ಡಿ (ಡ್ರಗ್ಸ್‌-ಡ್ರಿಂಕ್ಸ್‌-ಡೇಟಿಂಗ್‌) ಸಂಸ್ಕೃತಿಗೆ ಮಾರು ಹೋಗುತ್ತಿರುವುದನ್ನು ಸೂಚಿಸುತ್ತದೆ. ಪಾಶ್ಚಿಮಾತ್ಯ ಅನುಕರಣೆಯ, ಕೇವಲ ಮಾರ್ಕ್ಸ್‌ (ಅಂಕ) ಕೇಂದ್ರಿತ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಅಂದರೆ ಶರೀರ- ಬುದ್ಧಿ-ಮನಸ್ಸು-ಆತ್ಮ (ಜೀವ) ಶಿಕ್ಷಣವನ್ನು ರೂಪಿಸುವಂತಹ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆಯು ಬಹು ಮುಖ್ಯವಾದ ಅಂಶವಾಗಿದೆ.

ಮಾರ್ಟಿನ್‌ ಲೂಥರ್ ಕಿಂಗ್ ಶಿಕ್ಷಣದ ಬಗ್ಗೆ ಮಾತನಾಡುವ ಹೊತ್ತಿನಲ್ಲೇ ‘ನೈತಿಕತೆಯಿಲ್ಲದ ಶಿಕ್ಷಣವು ದಿಕ್ಸೂಚಿ ಇಲ್ಲದ ಹಡಗಿನಂತೆ’ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಮೌಲ್ಯಯುತ ಶಿಕ್ಷಣ ಗಳಿಕೆಯು ಮನೆಯಿಂದಲೇ ಪ್ರಾರಂಭವಾಗುವುದಾದರೂ ಶಾಲಾ ಶಿಕ್ಷಣದಲ್ಲಿ ದೊರೆತಾಗ ಅದರ ಪ್ರಭಾವವು ಜೀವನದ ಎಲ್ಲ ಹಂತಗಳಲ್ಲಿ ಸಿಗುವಂತಾಗುತ್ತದೆ. ಧಾರ್ಮಿಕ ಗ್ರಂಥಗಳು ತತ್ವಜ್ಞಾನಿಗಳು, ಚಿಂತಕರು, ಬೋಧಕರು ನೈತಿಕತೆ ಹಾಗೂ ನೈತಿಕ ಮೌಲ್ಯಗಳ ಬಹು ದೊಡ್ಡ ಆಕರವಾಗಿರುತ್ತಾರೆ. ಔಪಚಾರಿಕವಾಗಿ ಶಿಕ್ಷಣ ವ್ಯವಸ್ಥೆ
ಯಲ್ಲಿ ಸಿಗುವ ನೈತಿಕ ಜೀವನ ಮೌಲ್ಯಗಳಂತಯೇ, ರಾಷ್ಟ್ರೀಯತೆ, ನಿಸರ್ಗ, ಆಧ್ಯಾತ್ಮ, ಸಹಬಾಳ್ವೆಯ ಮಾನವೀಯ ಮೌಲ್ಯಗಳು ಧಾರ್ಮಿಕವಾಗಿಯೂ ನಮಗೆ ಸಿಗುವಂತಾಗಬೇಕು. ‘ಧರ್ಮ ಅಫೀಮು’ ಎಂಬ ವಾದಕ್ಕೆ ಕಟ್ಟು ಬಿದ್ದಾಗ ಈ ಸಂಗತಿಗಳನ್ನು ಧರ್ಮದಲ್ಲಿ, ಆಧ್ಯಾತ್ಮದಲ್ಲಿ ಕಾಣಲಾಗದು. ‘ಧರ್ಮ ಅಮೃತ’ ಎಂದಾಗ ಈ ಎಲ್ಲಾ ಸಂಗತಿಗಳು ನಮಗೆ ದೊರಕುತ್ತವೆ.

‘ಕಾಯಕವೇ ಕೈಲಾಸ’, ‘ನೀರೆಲ್ಲವೂ ತೀರ್ಥ’, ‘ದಯವೇ ಧರ್ಮದ ಮೂಲ’ ಮತ್ತು ‘ಶುದ್ಧ ಸಾತ್ವಿಕ ಪ್ರೀತಿ’ ಎಂಬ ಮೌಲ್ಯಗಳು ನಮ್ಮ ಬದುಕಿಗೆ ಆಧಾರ. ‘ಶಕ್ತಿಯೇ ಜೀವನ’, ‘ಹಸಿದವನಿಗೆ ಅನ್ನ’ ಎನ್ನುವ ಮೌಲ್ಯಗಳು ಪ್ರೀತಿ, ಏಕತೆ, ಶೀಲ, ತ್ಯಾಗ, ಸೇವೆ, ನಾವು ಎಂಬ ಭಾವವನ್ನು ಮೂಡಿಸುತ್ತವೆ. ಶರೀರ, ಬುದ್ಧಿ, ಮನಸ್ಸು, ಆತ್ಮದ ವಿಕಾಸಕ್ಕೆ ಪೂರಕವಾದ ಪರಿಪೂರ್ಣ ವ್ಯಕ್ತಿತ್ವವನ್ನು ನೈತಿಕ ಮೌಲ್ಯಗಳ ಶಿಕ್ಷಣವು ರೂಪಿಸುತ್ತದೆ. ಹಾಗಾಗಿ ಈ ಹೊತ್ತಿನಲ್ಲಿ ನೈತಿಕ ಮೌಲ್ಯಗಳ ಶಿಕ್ಷಣ ಅವಶ್ಯಕತೆಯಾಗಿದೆ.

‘ಉದಾತ್ತ ಚಿಂತನೆಗಳು ವಿಶ್ವದ ಎಲ್ಲಾ ದಿಕ್ಕಿನಿಂದಲೂ ಬರಲಿ’ ಎಂಬ ಉನ್ನತ ವಿಚಾರವನ್ನು ಪ್ರತಿಪಾದಿಸಿದ ನಾವು ನೂರಾರು ವರ್ಷಗಳಿಂದ ನಾಡಿನ ಜ್ಞಾನ ದಾಹವನ್ನು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಹಿಂಗಿಸಿದ ನಮ್ಮ ನಾಡಿನ ಮಠಗಳಿಂದ, ಈ ಹೊತ್ತಿನ ಶೈಕ್ಷಣಿಕ ಅವಶ್ಯಕತೆಯನ್ನು ಪಡೆಯಲು ಹೊರಟ ಸರ್ಕಾರದ ನಿರ್ಧಾರ ನೂರಕ್ಕೆ ನೂರು ಸರಿಯಾಗಿದೆ. ಹಾಗೂ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ಇರುವ ಎಲ್ಲರೂ ಸಮರ್ಥಿಸಿ ಸ್ವಾಗತಿಸುವಂತಿದೆ.

ನೈತಿಕ ಮೌಲ್ಯ ಶಿಕ್ಷಣವು ಬ್ರಾಹ್ಮಣ್ಯ ಮತ್ತು ವೈದಿಕ ಸಂಸ್ಕೃತಿ ಹೇರಿಕೆಯ ಹುನ್ನಾರ ಎಂಬ ಆರೋಪ ಇದೆ. ಆದರೆ ಈ ಆರೋಪದಲ್ಲಿ ಹುರುಳಿಲ್ಲ. ಇದು ಭಾರತದಲ್ಲೇ ಇರುವ ಒಂದು ಮೂಲಗುಣ. ಈ ಮೂಲಗುಣ ಎನ್ನುವಂಥದ್ದು ಬದುಕಿನ ಎಲ್ಲಾ ಹಂತಗಳಲ್ಲಿಯೂ ಇದೆ. ಕುವೆಂಪು ಅವರು ‘ನೀರೆಲ್ಲವೂ ತೀರ್ಥ’ ಎಂದು ಹೇಳಿದ್ದಾರೆ. ಅದು ಒಂದು ದೊಡ್ಡ ಮೌಲ್ಯ. ನೀರನ್ನು ತೀರ್ಥ ಎಂದು ನೋಡುವುದರಲ್ಲೇ ಎಲ್ಲಾ ನೀರಿಗೂ ಒಂದು ಉನ್ನತ ಸ್ಥಾನ ನೀಡಿದ್ದೇವೆ ಎಂಬ ಅರ್ಥವಿದೆ. ಅವರು ಬ್ರಾಹ್ಮಣ್ಯವನ್ನು ಹೇರಿದರು ಎಂದೇನಿಲ್ಲ.

ವಿವೇಕಾನಂದರು ವ್ಯಕ್ತಿತ್ವ ರೂಪಿಸುವ ಶಿಕ್ಷಣದ ಬಗ್ಗೆ ಹೇಳಿದ್ದಾರೆ. ಅವರು ಸಹ ಬ್ರಾಹ್ಮಣರಲ್ಲ. ವ್ಯಕ್ತಿತ್ವವನ್ನು ರೂಪಿಸುವಂತಹ ಇಂತಹ ಹೆಚ್ಚು ವಿಚಾರಗಳನ್ನು ಹೇಳಿದ್ದು ವಿವೇಕಾನಂದರೇ. ವ್ಯಕ್ತಿತ್ವ ರೂಪಿಸುವ ಶಿಕ್ಷಣದ ಬಗ್ಗೆ ವಿವೇಕಾನಂದರು ಮಾತನಾಡುವಾಗ ಅದರಲ್ಲಿ ಎಲ್ಲಿಯೂ ಬ್ರಾಹ್ಮಣ್ಯವಾಗಲೀ, ವೈದಿಕತೆಯಾಗಲೀ ಕಾಣುವುದಿಲ್ಲ. ಇವೆಲ್ಲವನ್ನೂ ಒಳಗೊಂಡ ಒಂದು ಸಮಗ್ರ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು ಎಂದು ಅವರು ಹೇಳಿದ್ದಾರೆ. ಹಾಗಾಗಿ ನೈತಿಕ ಮೌಲ್ಯ ಶಿಕ್ಷಣದಲ್ಲಿ ಯಾವುದೇ ಬ್ರಾಹ್ಮಣೀಕರಣದ ಪ್ರಯತ್ನವಿಲ್ಲ. 

ಕಾಲ್‌ ಮಾರ್ಕ್ಸ್‌ ‘ಧರ್ಮ ಅಫೀಮು’ ಎಂದು ಹೇಳಿದ್ದಾನೆ. ಧಾರ್ಮಿಕ ಮುಖಂಡರು ಹೇಳಿದ್ದೆಲ್ಲವನ್ನೂ ಮಾರ್ಕ್ಸ್‌ನ ಈ ಹೇಳಿಕೆಯ ದೃಷ್ಟಿಕೋನದಲ್ಲೇ ನೋಡಿದರೆ, ಅದು ವೈದಿಕ ಸಂಸ್ಕೃತಿಯ ಹೇರಿಕೆ ಎನಿಸುತ್ತದೆ. ವೈದಿಕಶಾಹಿಯನ್ನು ವಿರೋಧಿಸುವಂತಹ ಮಠಮಾನ್ಯಗಳೂ ಸಾಕಷ್ಟಿವೆ. ನೈತಿಕ ಮೌಲ್ಯ ಶಿಕ್ಷಣ ಪದ್ಧತಿ ರೂಪಿಸುವಲ್ಲಿ ಅಂತಹ ಮಠಮಾನ್ಯಗಳು ಸಹ ಸಲಹೆಗಳನ್ನು ನೀಡಿವೆ. 

ದೇಶದಲ್ಲಿ ಈಗ ವೃತ್ತಿ ಸಂಸ್ಕೃತಿ ಎಂಬುದು ಕಡಿಮೆಯಾಗುತ್ತಿದೆ. ದುಡಿಯದೆಯೇ ಹಣಗಳಿಸಬೇಕು ಎಂಬ ಮನಸ್ಥಿತಿ ಹೆಚ್ಚಾಗುತ್ತಿದೆ. ಒಂದು ಕಡೆ ನಮಗೆ ವೇತನ ಬರುತ್ತಿದ್ದರೂ ಬೇರೊಂದು ಮೂಲದಿಂದಲೂ ಹಣ ಬರಲಿ ಎಂಬ ಮನಸ್ಥಿತಿಯಲ್ಲಿ ಜನರಿದ್ದಾರೆ. ಇದರಿಂದ ಬಹಳ ದೊಡ್ಡಮಟ್ಟದ ಭ್ರಷ್ಟಾಚಾರವನ್ನು ಕಾಣುತ್ತಿದ್ದೇವೆ. ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಕೊರತೆ ಇರುವುದೇ ಇದಕ್ಕೆ ಕಾರಣ. ವಿಶ್ವೇಶ್ವರಯ್ಯನವರ ‘ವೃತ್ತಿಜೀವನದ ನೆನಪುಗಳು’ ಆತ್ಮಕತೆಯನ್ನು ಇಲ್ಲಿ ಉದಾಹರಿಸಬಹುದು. ವೃತ್ತಿಜೀವನದಲ್ಲಿ ನೈತಿಕತೆ ಎಷ್ಟು ಮುಖ್ಯ ಎಂಬುದನ್ನು ಆ ಕೃತಿಯಲ್ಲಿ ಕಾಣಬಹುದು. ಆದರೆ ಇಂದು ಅಂತಹ ನೈತಿಕತೆ ಕಾಣಿಸುತ್ತದೆಯೇ? ವಿಶ್ವೇಶ್ವರಯ್ಯನವರ ಕಾಲದಲ್ಲಿ ಭದ್ರಾವತಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್‌ ರಸ್ತೆ ಇನ್ನೂ ಸುಸ್ಥಿತಿಯಲ್ಲಿ ಇದೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡ–ದೊಡ್ಡ ಎಂಜಿನಿಯರ್‌ಗಳು ನಿರ್ಮಿಸಿದ ರಸ್ತೆಗಳು ಆರು ತಿಂಗಳಲ್ಲೇ ಏಕೆ ಹಾಳಾಗಿಹೋಗುತ್ತವೆ? ನೈತಿಕತೆಯ ಕೊರತೆ ಮತ್ತು ವೃತ್ತಿಪರತೆಯ ಕೊರತೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಹಾಗಾಗಿ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ತರುವ ಅವಶ್ಯಕತೆ ಇದೆ. ವೈಯಕ್ತಿಕ ಬದುಕಿನಲ್ಲಿ ಮತ್ತು ಸಮುದಾಯದ ಒಟ್ಟಿಗೂ ಹೇಗೆ ಇರಬೇಕು ಎಂಬುದನ್ನು ನೈತಿಕ ಮೌಲ್ಯಗಳು ಕಲಿಸುತ್ತವೆ.

ನೈತಿಕ ಮೌಲ್ಯ ಎಂಬುದು ಅತ್ಯಂತ ವಿಸ್ತಾರವಾದ ವಿಷಯ. ಇದನ್ನು ವೈದಿಕತೆ ಎಂದೋ, ಸ್ವಾಮೀಜಿಗಳು ಮಾಂಸಾಹಾರದ ಬಗ್ಗೆ ಮಾತನಾಡಿದರು ಎಂದೋ ಇದನ್ನು ವಿರೋಧಿಸುವುದಲ್ಲ. ಬಹುತ್ವವನ್ನು ಪ್ರೀತಿಸುವುದೂ ಒಂದು ಜೀವನ ಮೌಲ್ಯ. ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂದರ್ಭದಲ್ಲೂ ಹೇಳಿಕೊಂಡು ಬರಲಾಗಿದೆ. ಇಂದು ಮಕ್ಕಳು ತಮ್ಮ ಅಪ್ಪ–ಅಮ್ಮನನ್ನು ನೋಡಿಕೊಳ್ಳುವುದಿಲ್ಲ. ಮೌಲ್ಯಗಳು ಇಲ್ಲದೇ ಇರುವಂತಹ ಸ್ಥಿತಿ ಇರುವುದರಿಂದಲೇವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳು ಹೆಚ್ಚಾಗುತ್ತಿವೆ. ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಕೂಡು ಕುಟುಂಬ ಪದ್ಧತಿ ಎಂಬುದು ಸಹ ನಮ್ಮ ಜೀವನ ಮೌಲ್ಯವಾಗಿತ್ತು. ಇಂದು ನಾವು ಅದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆಯೇ? ಈ ಎಲ್ಲಾ ಸಂಗತಿಗಳು ಸಹ ಶಿಕ್ಷಣದಲ್ಲಿ ಬರಬೇಕು. ಭಾರತೀಸುತರು ತಮ್ಮ ಮೋಚಿ ಎಂಬ ಕತೆಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಬರೆದಿದ್ದಾರೆ. ಒಬ್ಬ ಚಪ್ಪಲಿ ಹೊಲಿಯುವವನು ಸಹ ತನ್ನ ಬದುಕನ್ನು ಹೇಗೆ ಉನ್ನತೀಕರಿಸಿಕೊಳ್ಳಬಹುದು ಎಂಬುದನ್ನು ಆ ಕತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸ್ವರೂಪದ ಉಪಕತೆಗಳು, ನೈತಿಕ ಕತೆಗಳು ನಮ್ಮ ಪಠ್ಯದ ಒಳಕ್ಕೆ ಬರಬೇಕು. ನೈತಿಕ ಮೌಲ್ಯ ಶಿಕ್ಷಣ ಈ ಕೆಲಸವನ್ನು ಮಾಡುತ್ತದೆ. ಹಾಗಾಗಿಯೇ ಅದು ಅನಿವಾರ್ಯ.

ಲೇಖಕ: ರಾಜ್ಯ ಕಾರ್ಯದರ್ಶಿ, ಬಿಜೆಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು