ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಸತ್ತೆ ಬೆಳೆಯಬೇಕು

ಭಾರತದ ರಾಜಕಾರಣವು ವ್ಯಕ್ತಿಕೇಂದ್ರಿತ ಪದ್ಧತಿಯಿಂದ ಬಿಡಿಸಿಕೊಳ್ಳುವುದು ಸಾಧ್ಯವಿಲ್ಲವೇ?
Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

ಎರಡನೇ ಜಾಗತಿಕ ಮಹಾಯುದ್ಧದ ನಂತರ ಸ್ವಾತಂತ್ರ್ಯ ಪಡೆದ ಹಲವಾರು ದೇಶಗಳು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡರೂ ಈ ವ್ಯಕ್ತಿ ಪ್ರಧಾನ ರಾಜಕಾರಣದ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಾಶಮಾಡಲಾಗಿಲ್ಲ

ವ್ಯಕ್ತಿ ವೈಭವೀಕರಣ ಅಥವಾ ವ್ಯಕ್ತಿ ಕೇಂದ್ರಿತ ರಾಜಕಾರಣ ಭಾರತದ ಪ್ರಜಾಸತ್ತೆಗೆ ಅಂಟಿಕೊಂಡ ಮಹಾರೋಗ. ವಿಶ್ವದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ರೂಪುಗೊಂಡ ‘ಪ್ರಭು ಪ್ರಭುತ್ವ’ದ ಚಹರೆಗಳು, ಲಕ್ಷಣಗಳು ಪ್ರಜಾಪ್ರಭುತ್ವದಲ್ಲೂ ಮುಂದುವರಿದದ್ದು ಜನರ ಸ್ವಾತಂತ್ರ್ಯಕ್ಕೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ಬುದ್ಧನ ಕಾಲದಲ್ಲಿಯೇ ಬುಡಕಟ್ಟು ಪ್ರಜಾಸತ್ತೆ ನಾಶವಾಗಿ ಸಾಮ್ರಾಜ್ಯಗಳು ಉದಯಿಸಿವೆ. ಸಾಮ್ರಾಟರು, ರಾಜರು ತಮ್ಮ ಆಡಳಿತವನ್ನು ನಿರಾತಂಕವಾಗಿ ನಡೆಸಲು ‘ರಾಜ ಪ್ರತ್ಯಕ್ಷ ದೇವರು’ ಎಂಬ ನಂಬಿಕೆಯನ್ನು ಜನರ ಮೇಲೆ ಹೇರಿದ್ದಾರೆ. ಇಂಥ ಹೇರಿಕೆಗೆ ಪುರೋಹಿತಶಾಹಿ ವ್ಯವಸ್ಥಿತವಾಗಿ ಕೆಲಸ ಮಾಡಿ, ಜನತೆಯು ಪ್ರಭು ಪ್ರಭುತ್ವದ ಗುಲಾಮಗಿರಿಗೆ ಒಳಗಾಗುವಂತೆ ಮಾಡಿದೆ. ಶತಮಾನಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಧ್ಯಮಗಳನ್ನು ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ವರ್ಗ, ಪುರೋಹಿತವರ್ಗ ಇಂಥ ಕೆಲಸಕ್ಕಾಗಿ ಬಳಸಿಕೊಂಡಿದೆ. ಏಳು ಸಮುದ್ರಗಳಾಚೆ ರಾಕ್ಷಸ ಬಂಧಿಸಿಟ್ಟ ರಾಜಕುಮಾರಿಯ ಬಿಡುಗಡೆಗೆ ರಾಜಕುಮಾರನೇ ಹೋದಂತೆ, ಇಂದು ನಮ್ಮ ಚಲನಚಿತ್ರಗಳಲ್ಲಿ ಗೂಂಡಾಗಳನ್ನು, ಸಮಾಜವಿರೋಧಿಗಳನ್ನು ಮಟ್ಟಹಾಕಲು ಒಬ್ಬ ‘ಹೀರೋ’ ಪ್ರವೇಶಮಾಡಿ ಹೊಡೆದಾಡಬೇಕು. ನೊಂದ ಜನಈ ಘಟನೆಯನ್ನು ನಿಂತು ನೋಡಿ ಚಪ್ಪಾಳೆ ತಟ್ಟುತ್ತಾರೆ. ಇದು ಇಂದಿನ ಸಾಮಾಜಿಕ–ರಾಜಕೀಯ ಕ್ಷೇತ್ರಕ್ಕೂ ಅನ್ವಯವಾಗುತ್ತಿದೆ.

ಅಮೆರಿಕದ ಸ್ವಾತಂತ್ರ್ಯ ಹೋರಾಟ (1775–83) ಮತ್ತು ಫ್ರಾನ್ಸ್‌ ಕ್ರಾಂತಿ (1789–99), ಮೊಟ್ಟಮೊದಲು ಈ ಪ್ರಭು ಪ್ರಭುತ್ವ ಮತ್ತು ವಸಾಹತು ಪ್ರಭುತ್ವಗಳನ್ನು ಕೆಳಗಿಳಿಸಿ ಪ್ರಜಾಸತ್ತೆ ಸ್ಥಾಪನೆಗಾಗಿ ನಡೆದ ಐತಿಹಾಸಿಕ ಘಟನೆಗಳು. ಆದರೆ ಫ್ರಾನ್ಸ್‌ ಕ್ರಾಂತಿಯ ನಂತರದಲ್ಲಿ ನೆಪೋಲಿಯನ್ ಎಂಬ ಸರ್ವಾಧಿಕಾರಿ ಬೆಳೆಯುತ್ತಾನೆ. ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನಂಥ ವ್ಯಕ್ತಿಕೇಂದ್ರಿತ ಆಡಳಿತಗಾರರು ಬೆಳೆಯುತ್ತಾರೆ. ಇವರು ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ಆಧುನಿಕ ಕಾಲದಲ್ಲಿಯೂ ಕೆಟ್ಟ ಮಾದರಿಗಳನ್ನು ಕೊಟ್ಟುಹೋಗಿದ್ದಾರೆ. ಎರಡನೇ ಜಾಗತಿಕ ಮಹಾಯುದ್ಧದ ನಂತರ ಸ್ವಾತಂತ್ರ್ಯ ಪಡೆದ ಹಲವಾರು ದೇಶಗಳು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡರೂ ಈ ವ್ಯಕ್ತಿ ಪ್ರಧಾನ ರಾಜಕಾರಣದ ಸಂಸ್ಕೃತಿಯನ್ನು ನಾಶಮಾಡಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ವ್ಯಕ್ತಿ ಪ್ರಾಧಾನ್ಯದ ಜೊತೆಗೆ ಕುಟುಂಬ ಪ್ರಧಾನ ರಾಜಕಾರಣವೂ ವ್ಯಾಪಕವಾಗಿ ಬೆಳೆದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಆದಿಯಾಗಿ ಬಹುತೇಕ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣವನ್ನು, ರಾಜಕುಮಾರರನ್ನು ರಾಜಕಾರಣದಲ್ಲಿ ಬೆಳೆಸಲು ಶ್ರಮಿಸುತ್ತಿವೆ.

ಸ್ವತಂತ್ರ ಭಾರತದ ಪ್ರಜಾಸತ್ತೆಯು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವನ್ನು ಪರಿಣಾಮಕಾರಿಯಾಗಿ ಜಾರಿ ಮಾಡದೇ ಇರುವುದರಿಂದ, ಅಸ್ಪೃಶ್ಯತೆ, ಹಸಿವು, ಬಡತನ, ನೋವು ಸಂಕಟಗಳನ್ನು ಎದುರಿಸುತ್ತಿರುವ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುತ್ತಾರೆ. ರೈತ, ಕಾರ್ಮಿಕ, ದಲಿತ ಚಳವಳಿಗಳು ಹಿನ್ನಡೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಶೋಷಿತ ಜನತೆ ‘ಅವತಾರ ಪುರುಷ’ನ ನಿರೀಕ್ಷೆ ಮಾಡುತ್ತಾರೆ. ಜಾತಿ ವ್ಯವಸ್ಥೆ ಪ್ರಬಲವಾಗಿರುವ ನಮ್ಮ ಸಮಾಜದಲ್ಲಿ ಜಾತಿ ಸಂಘಟನೆಗಳ ನಾಯಕರು, ಜಾತಿಕೇಂದ್ರಿತ ರಾಜಕೀಯ ಪಕ್ಷಗಳು ಅವರಿಗೆ ಅನಿವಾರ್ಯ ಆಶ್ರಯಗಳಾಗುತ್ತವೆ. ಈ ಭಾವನೆ, ಸಂದರ್ಭಗಳೇ ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ಮತ್ತು ಕುಟುಂಬಕೇಂದ್ರಿತ ರಾಜಕಾರಣಕ್ಕೆ ಕಾರಣಗಳಾಗುತ್ತವೆ. ಕಳೆದೆರಡು ದಶಕದಿಂದ ಇದು ಕೋಮು ರಾಜಕಾರಣಕ್ಕೂ ತಿರುಗಿದೆ.

ಬಲವಾಗಿ ಬೆಳೆದು ನಿಂತ ವ್ಯಕ್ತಿ ಪ್ರಧಾನ, ಕುಟುಂಬ ಪ್ರಧಾನ ರಾಜಕಾರಣವನ್ನು ತಡೆಯುವುದು, ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಮೊದಲನೆಯದಾಗಿ ಸಂವಿಧಾನ ಕೊಟ್ಟ ಹಕ್ಕುಗಳ ತಿಳಿವಳಿಕೆಯನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಅವರು ಅನುಭವಿಸುತ್ತಿರುವ ನೋವು, ಸಂಕಟ, ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ಪರಿಣಾಮಕಾರಿಯಾಗಿ ರೂಪಿಸಬೇಕು. ಇದು ಜನಪರ ಚಳವಳಿಗಳ ಜವಾಬ್ದಾರಿ. ಜಾತಿ, ಧರ್ಮ, ಭಾಷೆ, ಪ್ರಾಂತ, ವ್ಯಕ್ತಿಗಳ ಪ್ರಭಾವಕ್ಕೆ ಒಳಗಾದ ಜನತೆ ಒಕ್ಕೂಟ ವ್ಯವಸ್ಥೆಯ ಪ್ರಜೆಗಳು ಎಂಬ ಅಸ್ಮಿತೆಗೆ ಒಳಗಾಗಬೇಕು. ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಪ್ರಭುತ್ವಗಳನ್ನು ಎದುರಿಸುವ ಮನೋಭಾವ ಬೆಳೆಯಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ‘ಆನೀ ಬಿಜ್ಜಳಂಗೆ ಅಂಜುವೆನೆ ಅಯ್ಯಾ’ ಎಂದಿದ್ದಾರೆ. ಬಸವಣ್ಣ ಮತ್ತು ವಚನಕಾರರು ನಮ್ಮ ನಾಡಿನಲ್ಲಿಯೇ ಒಂದು ಜನಪರ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. ಇಂಥ ಸಂಸ್ಕೃತಿಯ ಚಿಂತನೆಗಳ ವ್ಯಾ‍ಪಕ ಪ್ರಚಾರ ನಡೆಯಬೇಕು.

ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಜಾರಿಯಾಗಬೇಕು. ಪಕ್ಷದ ಸಾಮಾನ್ಯ ಕಾರ್ಯಕರ್ತರೂ ಪಕ್ಷದ ನೀತಿ ರೂಪಣೆಗಳಲ್ಲಿ, ನಾಯಕತ್ವದ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಇಂದು ಎಡಪಕ್ಷಗಳು ಹೊರತುಪಡಿಸಿ ಬೇರೆ ಯಾವ ಪಕ್ಷವೂಆಂತರಿಕ ಪ್ರಜಾಸತ್ತೆಯನ್ನು ಪಾಲಿಸುತ್ತಿಲ್ಲ. ಸಿಪಿಐ, ಸಿಪಿಎಂ, ಇತರೆ ಎಡಪಕ್ಷಗಳಲ್ಲಿ ಶಾಖೆಯಿಂದ ಅಖಿಲ ಭಾರತ ಮಟ್ಟದ ಎಲ್ಲ ಹಂತಗಳಲ್ಲಿ ಪಕ್ಷದ ರಾಜಕೀಯ ಹಾಗೂ ಸಂಘಟನಾ ವರದಿಗಳ ಕರಡುಗಳನ್ನು ವಿಮರ್ಶಿಸುತ್ತಾರೆ. ವಿವಿಧ ಹಂತಗಳ ನಾಯಕರ ಆಯ್ಕೆಯನ್ನು ಸಮ್ಮೇಳನ, ಮಹಾ ಅಧಿವೇಶನಗಳಲ್ಲಿ ಮಾತ್ರ ಮಾಡಲಾಗುತ್ತದೆ. ಇತ್ತೀಚೆಗೆ ಎಡಪಕ್ಷಗಳು ಆಂತರಿಕ ಚುನಾವಣೆಯಲ್ಲಿ ಆಯ್ಕೆಯಾದ ನಾಯಕರಿಗೆ ಅವಧಿಯ ಮಿತಿಯನ್ನು, ವಯಸ್ಸಿನ ಮಿತಿಯನ್ನು ಅಳವಡಿಸಿಕೊಂಡಿವೆ. ಅದೇ ರೀತಿ ಚುನಾಯಿತ ಪ್ರತಿನಿಧಿಗಳಿಗೂ ಮರುಸ್ಪರ್ಧೆಗೆ ಅವಧಿಯ ಮಿತಿಯನ್ನು ಹಾಕಿವೆ. ಇದು ಒಂದು ಪಕ್ಷದಲ್ಲಿ ಹೊಸ ನಾಯಕತ್ವವನ್ನು ಬೆಳೆಸುತ್ತಾ, ಏಕವ್ಯಕ್ತಿ ಅಧಿಕಾರವನ್ನು ತಡೆಯಲು ಅನುಕೂಲವಾಗುತ್ತದೆ. ಕಮ್ಯುನಿಸ್ಟ್‌ ಪಕ್ಷಗಳಲ್ಲೂ ದಶಕಗಳವರೆಗೆ ನಾಯಕರಾಗಿ, ಮುಖ್ಯಮಂತ್ರಿ, ಮಂತ್ರಿ, ಶಾಸಕರಾದವರಿದ್ದಾರೆ. ಆದರೆ ಈಗ ಪಕ್ಷದ ಸಂವಿಧಾನದಲ್ಲಿಯೇ ತಿದ್ದುಪಡಿ ತಂದು, ಹೊಸ ನೀತಿಗಳನ್ನು ಅಳವಡಿಸಲಾಗಿದೆ. ಬಹುತೇಕ ವ್ಯಕ್ತಿ ಪ್ರಧಾನ ಮತ್ತು ಕುಟುಂಬಾಧಾರಿತ ಪಕ್ಷಗಳು ‘ನೇಮಕಾತಿ’ ನೀತಿಯನ್ನು ಇಟ್ಟುಕೊಂಡಿವೆ. ಇದು ಪ್ರಜಾಸತ್ತಾತ್ಮಕ ನೀತಿಗೆ ವಿರುದ್ಧವಾದುದು. ಈ ನೀತಿಗಳು ಚುನಾವಣಾ ನೀತಿ ಸಂಹಿತೆ, ರಾಜಕೀಯ ಪಕ್ಷಗಳ ಸಂವಿಧಾನಗಳಲ್ಲಿ ಇರುತ್ತವೆಯಾದರೂ ಬಹುತೇಕ ಪಕ್ಷಗಳು ಅದನ್ನು ಜಾರಿಮಾಡುವುದಿಲ್ಲ. ಪಕ್ಷದ ಕಾರ್ಯಕರ್ತರು ಇದನ್ನು ಪ್ರಶ್ನೆ ಮಾಡುವ, ಪ್ರತಿಭಟಿಸುವ ಶಕ್ತಿಯನ್ನು ಹೊಂದಿರುವುದಿಲ್ಲ.

ಚುನಾವಣೆ ಸುಧಾರಣೆ ಕುರಿತು ಹಲವಾರು ಸಮಿತಿಗಳು ಮಾಡಿದ ಕೆಲವಾರು ಶಿಫಾರಸುಗಳನ್ನು ಅಳವಡಿಸಲಾಗಿದೆ. ಆದರೂ ಇಂದು ಚುನಾವಣಾ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿ ಉಳಿದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ಸಂದರ್ಭದಲ್ಲಿ ಸಂವಿಧಾನವು ಜಾತಿ, ಧರ್ಮಗಳನ್ನು ಮೀರಿ ಜಾರಿಯಾಗಲಿ ಎಂದು ಆಶಿಸಿದ್ದರು. ಆದರೆ ಇಂದು ಕೋಮು, ಜಾತಿಗಳು ಸಂವಿಧಾನವನ್ನು ಮೀರಿ ಬೆಳೆದಿವೆ.

1998ರಲ್ಲಿ ಚುನಾವಣೆಗಾಗಿ ‘ಪ್ರಭುತ್ವ ಹಣಕಾಸಿನ ನೀತಿ’ಗೆ ಸಂಬಂಧ‍ಪಟ್ಟಂತೆ ಒಂದು ಸಮಿತಿ ರಚಿಸಲಾಯಿತು. ಆ ಸಮಿತಿಯ ಅಧ್ಯಕ್ಷರಾಗಿದ್ದ ಇಂದ್ರಜಿತ್ ಗುಪ್ತಾ ಅವರು ಚುನಾವಣೆಗಳನ್ನು ನಡೆಸಲು ರಾಷ್ಟ್ರೀಯ ಮತ್ತು ರಾಜ್ಯ ನೋಂದಾಯಿತ ಪಕ್ಷಗಳಿಗೆ ವಸ್ತು, ಸೇವೆಯ ರೂಪದಲ್ಲಿ ಹಣಕಾಸಿನ ನೆರವು ಕೊಡಬೇಕೆಂದು, ಕಾರ್ಪೊರೇಟ್‌ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಕೊಡುವ ದೇಣಿಗೆಯನ್ನು ನಿಷೇಧಿಸಬೇಕು ಎಂದು ಹೇಳಿದ್ದರು. ಇದು ರಾಷ್ಟ್ರೀಯ, ರಾಜ್ಯ ಮತ್ತು ವ್ಯಕ್ತಿ ಪ್ರಧಾನ, ಕುಟುಂಬಾಧಾರಿತ ಪಕ್ಷಗಳಿಗೆ ಮೊದಲು ಅನ್ವಯವಾಗಬೇಕು. ವ್ಯಕ್ತಿ ಪ್ರಧಾನ ಪಕ್ಷಗಳು ಜಾತಿ ಅಸ್ಮಿತೆ, ಹಣಕಾಸು ವ್ಯವಹಾರದಿಂದ ತಮ್ಮ ಪಕ್ಷಗಳ ಮೇಲೆ ನಿಯಂತ್ರಣ ಹೊಂದಿರುತ್ತವೆ. ಆ ಪಕ್ಷಗಳ ಸಾಮಾನ್ಯ ಕಾರ್ಯಕರ್ತರು ಅದೇ ಕಾರಣಕ್ಕೇ ‘ವ್ಯಕ್ತಿ’ ನಿಯಂತ್ರಣದಲ್ಲಿರುತ್ತಾರೆ.

ಡಾ. ಸಿದ್ದನಗೌಡ ಪಾಟೀಲ
ಡಾ. ಸಿದ್ದನಗೌಡ ಪಾಟೀಲ

ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೂ, ಪ್ರಾದೇಶಿಕ ಪಕ್ಷಗಳಿಗೂ ನಾಯಕತ್ವ ಬೆಳೆಸುವ ವಿಧಾನ ಬದಲಾಗಬೇಕಿದೆ. ನಾಯಕರಿಗೆ ಕಾರ್ಯಕರ್ತರಿರಬೇಕೇ ಹೊರತು ಭಕ್ತರಿರಬಾರದು. ಪ್ರಜ್ಞಾವಂತ ಕಾರ್ಯಕರ್ತರು ಮಾತ್ರ ವ್ಯಕ್ತಿ ಪ್ರಧಾನ, ಕುಟುಂಬಾಧಾರಿತ ಪಕ್ಷಗಳನ್ನು ಬದಲಿಸಿ ಪ್ರಜಾಸತ್ತಾತ್ಮಕ ನೀತಿಗೊಳಪಡಿಸಬಲ್ಲರು. ಅಂಥ ಕಾರ್ಯಕರ್ತರ ಸಂಖ್ಯೆ ಬೆಳೆಯಲಿ. ನಾಯಕರ ಮಕ್ಕಳೇ, ಕುಟುಂಬದವರೇ ನಾಯಕರಾಗುವ ದುಃಸ್ಥಿತಿ ಕೊನೆಯಾಗಲಿ. ‘ನಿರಂಕುಶ’ ಮನೋಭಾವ ತೊಲಗಲಿ.

ಲೇಖಕ: ಸಿಪಿಐ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT