ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಮುಖಂಡನಾಗಿದ್ದ ರಾಜ ಕೊನೆಗೆ ನಿರಂಕುಶ ಪ್ರಭುವಾದ...

Last Updated 26 ನವೆಂಬರ್ 2021, 20:27 IST
ಅಕ್ಷರ ಗಾತ್ರ

ಕೃಷಿ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ, ಪ್ರಧಾನಿಯವರು ಸಚಿವ ಸಂಪುಟದಲ್ಲಿ ಚರ್ಚೆಯನ್ನೇ ನಡೆಸದೆ ಘೋಷಿಸಿದ್ದಾರೆ‌. ಜನಾಗ್ರಹಕ್ಕೆ ಮಣಿದು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದು ಸ್ವಾಗತಾರ್ಹ ನಿರ್ಧಾರ. ಆದರೆ, ಸಂವಿಧಾನ ಆಧಾರಿತ, ಸಂಸದೀಯ ಪ್ರಜಾಸತ್ತೆಯ ನೀತಿ ನಿಯಮಗಳನ್ನೆಲ್ಲ ಗಾಳಿಗೆ ತೂರಿರುವುದು ಸರ್ವಾಧಿಕಾರಿ ಧೋರಣೆ. ನಿರಂಕುಶಾಧಿಪತ್ಯದಿಂದ ಪ್ರಜಾಪ್ರಭುತ್ವ, ಸಂವಿಧಾನ ಆಧಾರಿತ ವ್ಯವಸ್ಥೆ ಹೇಗೆ ಜಾರಿಗೆ ಬಂತು ಎಂಬುದನ್ನು ಆಳುವ ವರ್ಗಕ್ಕೆ ಈ ಸನ್ನಿವೇಶದಲ್ಲಿ ನೆನಪಿಸಿಕೊಡಬೇಕಾದುದು ಅನಿವಾರ್ಯವಾಗಿದೆ.

ಮೃಗೀಯ ಬದುಕನ್ನು ನಡೆಸುತ್ತಿದ್ದ ಮನುಷ್ಯ ಸ್ವೇಚ್ಛಾಜೀವಿಯಾಗಿದ್ದ. ತನ್ನ ಸ್ವೇಚ್ಛೆಯನ್ನು ಕಳೆದುಕೊಂಡು ಕ್ರಮೇಣ ಬಲಾಢ್ಯನೊಬ್ಬನ ಮುಖಂಡತ್ವಕ್ಕೆ ಒಳಪಡುತ್ತಾನೆ. ಕೇವಲ ಮಾಂಸಖಂಡಗಳ ಬಲದಿಂದಲೇ ಮುಖಂಡನಾದವನು ರಾಜನೂ ಆಗುತ್ತಾನೆ, ಚಕ್ರವರ್ತಿಯೂ ಆಗುತ್ತಾನೆ. ರಾಜನಿಗೆ ಎದುರಿಲ್ಲ, ಇದರ ಪರಿಣಾಮವಾಗಿ ರಾಜ ನಿರಂಕುಶ ಪ್ರಭು ಆಗುತ್ತಾನೆ. ಹಾಗಾಗಿ ಇವನ ಎದುರು ಬಲಹೀನನಿಗೆ ಇಷ್ಟಾನಿಷ್ಟಗಳ ವಿಚಾರದಲ್ಲಿ ಸ್ವಾತಂತ್ರ್ಯ ಇರುವುದಿಲ್ಲ. ಇದರ ಪರಿಣಾಮ ರಾಜ ಮದಗಜವಾಗುತ್ತಾನೆ.

ರಾಜಾಜ್ಞೆ ಅಂದರೆ ಕಟ್ಟಪ್ಪಣೆಯು ಮಾತ್ರ. ಮೇಲ್ಮನವಿಗೆ ಅವಕಾಶವೇ ಇರುವುದಿಲ್ಲ. ವಿವೇಕದ ಮಾತೂ ಇರುವುದಿಲ್ಲ. ಈ ಕಾರಣದಿಂದಾಗಿಯೇ, ರಾಜನೆಂಬ ಮದಗಜದ ತುಳಿತಕ್ಕೆ ಸಿಕ್ಕಿ ನಲುಗಿದ ಮನು‍ಷ್ಯ ನಿರಂತರ ಹೋರಾಟದ ಮುಖೇನ ಪಡೆದುಕೊಂಡ ಅಂಕುಶವೇ ಪ್ರಜಾಪ್ರಭುತ್ವ. ನಮ್ಮ ದೇಶದಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಂಡಿದೆ. ಸಂವಿಧಾನ ರಚನಾ ಸಮಿತಿಯು ತಮ್ಮ ನೇತೃತ್ವದ ಉಪಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಡಾ. ಬಿ.ಆರ್‌. ಅಂಬೇಡ್ಕರ್ ಅವರು ಅತ್ಯಂತ ಸಂವೇದನಾಶೀಲರಾಗಿ ನಿರ್ವಹಿಸಿ, ಉತ್ಕೃಷ್ಟವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಬಹುಶಃ, ಜಗತ್ತಿನ ಅತ್ಯಂತ ಶ್ರೇಷ್ಠವಾದ ಸಂವಿಧಾನಗಳಲ್ಲಿ ಭಾರತದ ಸಂವಿಧಾನವೂ ಒಂದು. ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿಯ ಅಧ್ಯಕ್ಷರಾಗಿ, ಪ್ರಪಂಚದ ಎಲ್ಲ ಸಂವಿಧಾನಗಳನ್ನು ಅಧ್ಯಯನ ಮಾಡಿ ಅರಗಿಸಿಕೊಂಡ ವ್ಯಕ್ತಿತ್ವ ಅಂಬೇಡ್ಕರ್‌ ಅವರದ್ದು.

1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬರುವುದರೊಂದಿಗೆ ನಿರಂಕುಶ ಪ್ರಭುತ್ವ ಅಂತ್ಯಗೊಂಡು ರಾಜನ ಸ್ಥಾನಕ್ಕೆ ಪ್ರಜೆ ಬಂದು ನಿಲ್ಲುತ್ತಾನೆ.ಯಾವುದೇ ಶಾಸನ ರೂಪಿಸುವ, ತಿದ್ದುಪಡಿ ಮಾಡುವ ಅಥವಾ ಅನೂರ್ಜಿತಗೊಳಿಸುವ ಅಧಿಕಾರವನ್ನು ಸಂವಿಧಾನವು ಸಂಸತ್ತಿಗೆ ವಹಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ತೀರ್ಪಿನಂತೆ ರಚಿತಗೊಂಡ ಸಂಸತ್ತುಗಳು ನಂತರ ರಾಜಕೀಯ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಸರ್ಕಾರ ಸ್ಥಾಪಿಸುತ್ತವೆ. ಎಲ್ಲವೂ ಪ್ರಜಾಬಲದಿಂದಲೇ ನಿಶ್ಚಿತವಾಗಿ ನಡೆಯಬೇಕು ಎಂಬುದು ನಮ್ಮ ಸಂವಿಧಾನದ ಆಶಯ.

ಸರ್ಕಾರಗಳು ಉದಯಿಸಿದ್ದು ಸಂಸತ್ತಿನಿಂದಲೇ ಆದರೂ ಸರ್ಕಾರಗಳು ಸಂಸತ್ತನ್ನು ಸರ್ಕಾರಗಳು ಅಲಕ್ಷಿಸುತ್ತಿರುವುದು ನಮಗೆ ವೇದ್ಯವಾಗಿರುವ ಸಂಗತಿ. ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಸಂಚು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಇರುತ್ತದೆ. ಇದು ಮನುಷ್ಯನ ಅಂತರಾತ್ಮದಲ್ಲಿ ಇರುವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಪಾಳೇಗಾರಿಕೆ ಮನಸ್ಥಿತಿಯ ಸೂಚಕ. ಇಂಥ ಸನ್ನಿವೇಶದಲ್ಲಿ, ಸರ್ಕಾರದ ಮುಂದಾಳತ್ವ ವಹಿಸಿದವರು ತಮ್ಮ ಮೇಲಿರುವ ಸಾಮೂಹಿಕ ಜವಾಬ್ದಾರಿಯನ್ನು ಮರೆತವರಂತೆ ಜನರಿಗೆ ಅನಿಸಬಾರದು. ಹಾಗೆ ಅನಿಸಿದರೆ ಮತ್ತೆ ಎಲ್ಲೋ ನಿರಂಕುಶ ಪ್ರಭು ತಲೆ ಎತ್ತಿದಂತೆ ಆಗುತ್ತದೆ.

ಜನಹಿತಕ್ಕಾಗಿ ಸರ್ಕಾರವು ರೂಪಿಸಬಹುದಾದ ಒಂದು ಶಾಸನವು ಪ್ರಥಮ ಹಂತದಲ್ಲಿ ತಜ್ಞರ ಅಭಿಪ್ರಾಯವನ್ನು ಪಡೆದು, ಸಚಿವ ಸಂಪುಟದಲ್ಲಿ ಚರ್ಚೆಯಾಗಿ, ನಂತರ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿ ಪರಿಶೀಲನೆಗೆ ಒಳಗಾಗಿ, ಅಂಗೀಕಾರ ಪಡೆದು ರಾಷ್ಟ್ರಪತಿಯವರ ಒಪ್ಪಿಗೆಗೆ ಹೋಗಬೇಕು. ಯಾವುದೇ ಮಸೂದೆಯನ್ನು ಸದನದಲ್ಲಿ ಮಂಡಿಸುವಾಗ, ಆ ಶಾಸನದ ಅಗತ್ಯ ಮತ್ತು ಅನಿವಾರ್ಯವನ್ನು (ಉದ್ದೇಶ ಮತ್ತು ಕಾರಣಗಳು) ಸ್ಪಷ್ಟವಾಗಿ ಉಲ್ಲೇಖಿಸಬೇಕು.

ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಕಾಯ್ದೆಗಳು ದೇಶವ್ಯಾಪಿಯಾಗಿ, ರೈತ ಸಮೂಹದಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಮೂಡಿಸಿತ್ತು. ದೇಶದಾದ್ಯಂತ ಚರ್ಚೆಗೆ ಆಸ್ಪದ ಒದಗಿಸಿತು. ಈ ಮಸೂದೆಗಳಿಗೆ ಸಂಸತ್ತಿನಲ್ಲಿ ದೊರೆತ ಮಾನ್ಯತೆ ಬಹುಮತ ಆಧಾರಿತವಾಗಿತ್ತೇ ಹೊರತು ಸರ್ವಾನುಮತದ್ದು ಆಗಿರಲಿಲ್ಲ. ಕಾಯ್ದೆಗಳಿಂದ ಕೆರಳಿದ ರೈತರು, ವಿಶೇಷವಾಗಿ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು 2020ರ ನವೆಂಬರ್‌ 26ರಂದು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಆರಂಭಿಸಿದರು.

ಚಳವಳಿಗಾರರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಸಂಧಾನಗಳು ಕೇವಲ ಸಾಂಪ್ರದಾಯಿಕವಾಗಿದ್ದವು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯವರು ಪ್ರತಿಟನಕಾರರನ್ನು ಕಾಣುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಅಹಿಂಸಾತ್ಮಾಕ ಚಳವಳಿಯನ್ನು ದಲ್ಲಾಳಿಗಳ ಪ್ರಾಯೋಜಿತ ಚಳವಳಿ ಎಂದೂ ವಿದೇಶಿ ಪ್ರೋತ್ಸಾಹದ ಚಳವಳಿ ಎಂದೂ ಚಳವಳಿ ನಡೆಸುವವರು ದೇಶದ್ರೋಹಿ ಗಳು ಎಂದೂ ಆರೋಪಿಸಲಾಯಿತು. ರೈತರು ಇದಾವುದಕ್ಕೂ ಬಗ್ಗಲೂ ಇಲ್ಲ ಜಗ್ಗಲೂ ಇಲ್ಲ.

ರೈತ ಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ನಂತರ, ಗಾಂಧಿ ಮಾರ್ಗವನ್ನು ಹಿಡಿದು ಚಳವಳಿಗೆ ಇಳಿದ ರೈತರ ಚಾರಿತ್ರ್ಯವಧೆ ಮಾಡಲಾಯಿತು. ಇದಾದ ನಂತರ, ವಿಧಿ ಇಲ್ಲದೆ, ಪುನಃ, ಏಕಾಏಕಿ ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಘೋಷಿಸಿದ್ದು ಸ್ಪಷ್ಟವಾಗಿ ಆತಂಕಕ್ಕೆ ಒಳಗಾದ ಒಬ್ಬ ಸರ್ವಾಧಿಕಾರಿಯ ಲಕ್ಷಣವನ್ನು ತೋರಿಸುತ್ತದೆ.

ಪ‍್ರಧಾನಿಯವರು ಒಮ್ಮಿಂದೊಮ್ಮೆಲೆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಘೋಷಿಸಿರುವುದು ತೀವ್ರ ಚರ್ಚೆಗೆ ಒಳಗಾಗಿದೆ.ಯಾವುದೇ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕಾದರೆ ಅದು ಸಂವಿಧಾನಾತ್ಮಕವಾಗಿಯೇ ಆಗಬೇಕು ಹೊರತು ಪ್ರಧಾನಿಯವರ ಘೋಷಣೆಯಿಂದ ಸಾಧ್ಯವಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಭಾರತದ ಶ್ರೇಷ್ಠ ಸಂವಿಧಾನವನ್ನು, ಸಂವಿಧಾನಾತ್ಮಕವಾಗಿಯೇ ಒಳಗೆ ನುಸುಳಿಕೊಂಡು ವಿಕೃತಗೊಳಿಸುವ ಸಂಚು ನಡೆಯುತ್ತಿದೆ ಎಂಬ ಸಂಶಯ ಸಹಜವಾಗಿಯೇ ಮೂಡುತ್ತದೆ.

ಮಾನವ ಇತಿಹಾಸದಿಂದ ಪಡೆದುಕೊಂಡ ಅನುಭವಗಳ ಆಧಾರದಲ್ಲಿ ನಿರಂಕುಶ ಪ್ರಭುತ್ವವನ್ನು ಶಾಶ್ವತವಾಗಿ ನಿರ್ಮೂಲನಗೊಳಿಸಿ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ಸಂವಿಧಾನಾತ್ಮಕ ನಿರ್ಬಂಧಗಳನ್ನು ಸ್ವಯಂಪ್ರೇರಣೆಯಿಂದ ರಚಿಸಿಕೊಂಡಿದ್ದೇವೆ. ಆದರೆ, ಪ್ರಧಾನಿಯವರು ಮಾಡಿದ ಘೋಷಣೆ ನಿರಂಕುಶ ಪ್ರಭುವಿನ ಮನೋಭಾವವನ್ನು ನಿಸ್ಸಂಶಯವಾಗಿ ಸಾರಿ ಹೇಳುತ್ತಿದೆ. ಇದು ಅಪೇಕ್ಷಣೀಯವಲ್ಲ.

ದೃಢ ಸಂಕಲ್ಪಿತ ರೈತ ಹೋರಾಟಕ್ಕೆ ಅಭಿನಂದನೆಗಳು. 73 ವರ್ಷ ಹಿಂದೆ ಒಬ್ಬ ಮತಾಂಧನ ಅವಿವೇಕದ ಗುಂಡಿಗೆ ಬಲಿಯಾದ ಗಾಂಧಿ ಸತ್ತಿಲ್ಲ, ಜೀವಂತ ಇದ್ದಾರೆ ಎಂಬುದು ಈ ಹೋರಾಟದ ಮೂಲಕ ಸಾಬೀತಾಗಿದೆ. ಇದು ಗಾಂಧಿ ಮಾರ್ಗಕ್ಕೆ ದೊರೆತ ಜಯ.

ಲೇಖಕ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT