ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ಸಮಸ್ಯೆ ಹೇಳಿದರೆ ನಂಬುವವರಿಲ್ಲ: ಎನ್.ರವಿಕುಮಾರ್

Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಜೀವನದಲ್ಲಿ ನಮ್ಮ ಶಾಸಕರುಗಳಿಗಿಂತಲೂ ಹೆಚ್ಚಿನ ಸಂಬಳ ಪಡೆಯುವ ದೊಡ್ಡ ಅಧಿಕಾರಿ ವರ್ಗವಿದೆ. ನಾವು ಪ್ರಶ್ನೆ ಮಾಡುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಗೊಳಿಸಿದ್ದೇವೆ. ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಹೆಚ್ಚಳಗೊಳಿಸಿದ್ದೇವೆ. ಶಾಸಕರು ಅನ್ನುವುದು ಸೇವೆ ಮಾಡುವ ಜವಾಬ್ದಾರಿಯುತ ಸ್ಥಾನವಾಗಿದೆ ವಿನಃ ಲಾಭದಾಯಕ ಹುದ್ದೆ ಅಲ್ಲ

ಶಾಸಕರ ವೇತನ ಮತ್ತು ಭತ್ಯೆಯನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರ ಹಾಗೂ ಮಸೂದೆಗೆ ಅನುಮೋದನೆ ಕೊಟ್ಟಿರುವ ವಿಧಾನಮಂಡಲದ ಉಭಯಸದನಗಳ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. ‘ಶಾಸಕರಿಗೇನು ಕಡಿಮೆ; ಬೇಕಾದಷ್ಟು ಗಂಟು ಸಿಗುತ್ತದೆ’ ಎಂಬ ತಪ್ಪು ಅಭಿಪ್ರಾಯವೂ ಇದರ ಹಿಂದೆ ಇದ್ದೀತು. ವಾಸ್ತವ ಮಾತ್ರ ಹಾಗಿಲ್ಲ. ಬೆರಳೆಣಿಕೆಯ ಮಂದಿಯ ‘ಶ್ರೀಮಂತಿಕೆ’ಯನ್ನು ಕಂಡು, ಎಲ್ಲ ಜನಪ್ರತಿನಿಧಿಗಳನ್ನೂ ಅದೇ ತಕ್ಕಡಿಯಲ್ಲಿ ತೂಗುವುದು ಸಮಂಜಸವೂ ಅಲ್ಲ, ನ್ಯಾಯಯುತವೂ ಅಲ್ಲ.

ಕೋವಿಡ್ ಸಂಕಷ್ಟ ಕಾಲದಲ್ಲಿ ಏರಿಕೆ ಬೇಕಿತ್ತೇ ಎಂಬ ಮತ್ತೊಂದು ಆಯಾಮದ ಚರ್ಚೆಯೂ ಇದೆ. ಕೋವಿಡ್‌ನಿಂದ ಜೀವನವೇ ನಲುಗಿ, ಬಸವಳಿದು ಹೋದ ಜನರ ಬಾಳಿನ ಗೋಳು ಶಾಸಕರಿಗೆ ಅರ್ಥವಾಗದ್ದಲ್ಲ. ಸದನಕ್ಕೆ ಬಂದಾಗಷ್ಟೇ ಶಾಸನ ರೂಪಿಸುವ, ಜನರ ಕಷ್ಟಗಳಿಗೆ ಧ್ವನಿಯಾಗುವ ಅಧಿಕಾರ ಹೊಂದಿರುವ ಶಾಸಕರು ಕೂಡ ಸಮಾಜದಲ್ಲಿ ಮಾಮೂಲು ಮನುಷ್ಯರು. ಕೋವಿಡ್ ಸಂಕಷ್ಟಕ್ಕೆ ಸಿಕ್ಕಿಬಿದ್ದು ತೊಂದರೆ ಅನುಭವಿಸಿದವರಲ್ಲಿ ಶಾಸಕರೂ ಇದ್ದಾರೆ ಎಂಬುದನ್ನು ಮರೆಯಬಾರದು.

ಮೂಳೆ–ಮಾಂಸಗಳಿಂದ ರೂಪುಗೊಂಡಿರುವ ಮನುಷ್ಯರಿಗೆ ಇರುವ ಸಂಕಟಗಳು, ಯಾತನೆಗಳು, ಗೋಳುಗಳು ಶಾಸಕರಿಗೂ ಇವೆ. ಅವರಿಗೂ ವೈಯಕ್ತಿಕ ಕುಟುಂಬದ ಜತೆಗೆ, ಸಮಾಜವೆಂಬ, ಮತ ಹಾಕಿ ಗೆಲ್ಲಿಸಿದ ಜಾತಿ–ಭೇದವಿಲ್ಲದ– ಧರ್ಮದ ಹಂಗಿಲ್ಲದ ಬೃಹತ್ ಕುಟುಂಬವೂ ಇವೆ. ಅವರ ನೋವುಗಳಿಗೆ ಧ್ವನಿಯಾಗಬೇಕಾದ, ಕಷ್ಟಕಾಲದಲ್ಲಿ ನೆರವಿಗೆ ನಿಲ್ಲಬೇಕಾದ ಅನಿವಾರ್ಯವೂ ಶಾಸಕರ ಹೆಗಲಿನಲ್ಲಿ ಇರುತ್ತದೆ. ನಿತ್ಯದ ವೆಚ್ಚಗಳಿಗೆ ವೇತನ–ಭತ್ಯೆಯನ್ನೇ ನೆಚ್ಚಿಕೊಂಡ ಶಾಸಕರ ಸಂಖ್ಯೆಯೂ ದೊಡ್ಡದಿದೆ. ₹2.37 ಲಕ್ಷ ಕೋಟಿ ಆಯವ್ಯಯ ಹೊಂದಿರುವ ಕರ್ನಾಟಕದಂತಹ ದೊಡ್ಡ ರಾಜ್ಯದಲ್ಲಿ ವೇತನ ಹೆಚ್ಚಳದಿಂದ ಆಗುವ ಹೆಚ್ಚುವರಿ ಹೊರೆ ವರ್ಷಕ್ಕೆ ₹92.40 ಕೋಟಿಯಷ್ಟಿದೆ. ಬೃಹತ್ ಮೊತ್ತದ ಬಜೆಟ್‌ನಲ್ಲಿ ಇದೊಂದು ಮರಳಿನ ಕಣವಷ್ಟೇ ಎಂದರೆ ಅದೇನೂ ಅತಿಶಯೋಕ್ತಿಯಾಗಲಾರದು.

ಈ ಹಿನ್ನೆಲೆಯನ್ನಿಟ್ಟುಕೊಂಡು ಪರ್ಯಾಲೋಚಿಸಿ ದರೆ, ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನ ಮತ್ತು ಭತ್ಯೆಗಳ ಮಸೂದೆ-2022 ಕ್ಕೆ ಅನುಮೋದನೆ ನೀಡಿರುವುದು ಅಪರಾಧವೇನಲ್ಲ. ವೇತನವನ್ನೇ ನೆಚ್ಚಿಕೊಂಡ ಶಾಸಕರ ಪರವಾಗಿ ಸರ್ಕಾರಕ್ಕೆ, ಸದನಕ್ಕೆ ಧನ್ಯವಾದಗಳನ್ನು ಹೇಳಲೇಬೇಕು.

ಉಭಯ ಸದನಗಳ ಸದಸ್ಯರಿಗೆ ತಮ್ಮದೇ ಆದ ಖರ್ಚು-ವೆಚ್ಚ ಇದ್ದೇ ಇರುತ್ತದೆ. ಶಾಸಕರೆಂದರೆ ಅವರಿಗೆಲ್ಲ ಸಂಬಳ ಜಾಸ್ತಿ, ಸಾಕಷ್ಟು ದುಡ್ಡು-ಆಸ್ತಿ ಇರುತ್ತದೆ ಎಂಬ ಭಾವನೆಯನ್ನು ಬಿತ್ತಲಾಗಿದೆ. ಜನರಿಗೂ ಇದೇ ಅಭಿಪ್ರಾಯ ಇದ್ದೀತು.

ಆದರೆ ನಿಜವಾಗಿಯೂ ಸರ್ಕಾರ ನೀಡುವ ವೇತನ, ಗೌರವಧನ, ಇತರೆ ಭತ್ಯೆಗಳು ನಮ್ಮೆಲ್ಲ ಶಾಸಕರಿಗೆ ಸಾಕಾಗುವುದಿಲ್ಲ.

ಉದಾಹರಣೆಗೆ ಮನೆ ಬಾಡಿಗೆ ಸೇರಿದಂತೆ ಅನೇಕ ಖರ್ಚುಗಳು ಇವೆ. ಚುನಾವಣೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ಲೋಕಸಭೆಯ ಜತೆಗೆ ಇತರೆ ಸಂಘ-ಸಂಸ್ಥೆಗಳ, ರೋಟರಿ, ಕ್ಲಬ್ ಚುನಾವಣೆಗಳ ನಿರ್ವಹಣೆಯ ಹೊಣೆಯೂ ಶಾಸಕರ ಹೆಗಲಿಗೇರುವುದು ಉಂಟು. ರಾಜಕೀಯದಲ್ಲಿ ಉಳಿಯಬೇಕಾದರೆ ಈ ಚುನಾವಣೆಗಳ ಮೇಲೆ ನಿಗಾ ಇರಿಸಿ, ತಮ್ಮ ಹಿತೈಷಿಗಳ ಹಿತ ಕಾಪಾಡುವುದು, ಪಕ್ಷದ ಸಂಘಟನೆಯನ್ನು ಬಲಪಡಿಸುವ ಕಾಯಕದಲ್ಲೂ ನಿರತರಾಗಬೇಕಾಗುತ್ತದೆ. ನಾವು ನಂಬಿಕೊಂಡು ಪಾಲಿಸುತ್ತಿರುವ ಸಂಸದೀಯ ಪ್ರಜಾಸತ್ತೆಯಲ್ಲಿ ಚುನಾವಣೆಗಳಲ್ಲಿ ಭಾಗೀದಾರರಾಗುವುದು ಅನಿವಾರ್ಯ ಕೂಡ.

ಇದರ ಜತೆಗೇ, ಪ್ರತಿವರ್ಷ ಕ್ಷೇತ್ರದಾದ್ಯಂತ ಗಣಪತಿ ಪ್ರತಿಷ್ಠಾಪನೆಗೆ, ಅನೇಕ ಉತ್ಸವಗಳಿಗೆ, ದೇವರ ಜಾತ್ರೆಗಳು, ರಾಜ್ಯೋತ್ಸವ, ವಿವಿಧ ಸಮುದಾಯ, ಧರ್ಮೀಯರ ಸಾಂಸ್ಕೃತಿಕ ಆಚರಣೆಗಳು, ಎಲ್ಲ ಹಬ್ಬಗಳಿಗೆ ದೇಣಿಗೆ ನೀಡುವ ಖರ್ಚನ್ನೂ ಭರಿಸಬೇಕಾಗುತ್ತದೆ. ಅಲ್ಲದೇ ಸಂಘ-ಸಂಸ್ಥೆಗಳು ಆಯೋಜಿಸುವ ಕ್ರೀಡಾಕೂಟಗಳಿಗೆ ಪ್ರಾಯೋಜಕತ್ವ ನೀಡುವ ಖರ್ಚಿದೆ. ಇವೆಲ್ಲವನ್ನೂ ನಿಭಾಯಿಸಿಕೊಂಡು, ಜನರ ಪ್ರೀತಿಯನ್ನೂ ಉಳಿಸಿಕೊಂಡು, ರಾಜಕಾರಣದಲ್ಲೂ ಮುಂದುವರಿಯಬೇಕಾದರೆ ವೇತನವನ್ನೇ ನಂಬಿಕೊಂಡವರಿಗೆ ಈಗ ನೀಡುತ್ತಿರುವ ವೇತನ ಹಾಸಲು–ಹೊದಿಯಲು ಕೂಡ ಸಾಕಾಗದು.

ನಮ್ಮ ಕ್ಷೇತ್ರದ ರಾಜಕೀಯ ಸಮಾರಂಭ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಖರ್ಚು, ಅನೇಕ ಸಾಮಾಜಿಕ ಹೋರಾಟಗಳು, ಕುಟುಂಬದ ವೈದ್ಯಕೀಯ ಚಿಕಿತ್ಸೆ, ನಮ್ಮ ಕಚೇರಿ ನಿರ್ವಹಣೆಗೆ, ರಾಜ್ಯದಾದ್ಯಂತ ಪಕ್ಷದ ಪ್ರವಾಸಗಳು ಹಾಗೂ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮಗಳ ಪ್ರವಾಸಗಳನ್ನು ಕೈಗೊಳ್ಳುವುದು, ಪ್ರವಾಸದ ಸಂದರ್ಭದಲ್ಲಿ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುವುದು ಸೇರಿದಂತೆ ಇತರೆ ಖರ್ಚುಗಳನ್ನು ಯಾರಿಗೂ ಹೊರೆ ಮಾಡಲಾಗದು. ಇವೆಲ್ಲವನ್ನೂ ನಾವೇ ಭರಿಸುತ್ತೇವೆ.

ಅಲ್ಲದೇ ಕ್ಷೇತ್ರದ ಜನರ ಸಾವು-ನೋವುಗಳಿಗೆ ಭೇಟಿ, ಸಾಂತ್ವನ, ಜನರ ಮದುವೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮ, ಜಾತ್ರೆಗಳಲ್ಲಿ ಭಾಗವಹಿಸುವಿಕೆ, ಜನರ ಕಷ್ಟಕ್ಕೆ ಆರ್ಥಿಕ ಸಹಾಯ ಹೀಗೆ ಅನೇಕ ರೀತಿಯಲ್ಲಿ ಖರ್ಚು-ವೆಚ್ಚಗಳಿರುತ್ತದೆ.

ಅಲ್ಲದೇ ಒಂದೆಡೆ ಕೊರೊನಾ ಸೋಂಕಿನ ಹಾವಳಿ, ಬೆಲೆ ಏರಿಕೆ ಮತ್ತು ತೈಲ ಬೆಲೆ ಏರಿಕೆಯು ತಂದಿಟ್ಟ ಅನೇಕ ಸಮಸ್ಯೆಗಳು ಶಾಸಕರಾದ ನಮಗೂ ಇವೆ. ಆದರೆ ನಾವು ಏನೂ ಹೇಳುವ ಹಾಗಿಲ್ಲ, ಹೇಳಿದರೂ ಅದನ್ನು ನಂಬುವ ಸ್ಥಿತಿ ಜನರಿಗಿಲ್ಲ.

ಸಾರ್ವಜನಿಕ ಜೀವನದಲ್ಲಿ ನಮ್ಮ ಶಾಸಕರುಗಳಿಗಿಂತಲೂ ಹೆಚ್ಚಿನ ಸಂಬಳ ಪಡೆಯುವ ದೊಡ್ಡ ಅಧಿಕಾರಿ ವರ್ಗವಿದೆ. ನಾವು ಪ್ರಶ್ನೆ ಮಾಡುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಗೊಳಿಸಿದ್ದೇವೆ. ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಹೆಚ್ಚಳಗೊಳಿಸಿದ್ದೇವೆ. ಶಾಸಕರು ಅನ್ನುವುದು ಸೇವೆ ಮಾಡುವ ಜವಾಬ್ದಾರಿಯುತ ಸ್ಥಾನವಾಗಿದೆ ವಿನಃ ಲಾಭದಾಯಕ ಹುದ್ದೆ ಅಲ್ಲ.

ಇಂದಿನ ದಿನಮಾನಗಳಲ್ಲಿ ಚುನಾವಣೆ ಹಾಗೂ ಸಾರ್ವಜನಿಕ ವೆಚ್ಚವು ವಿಪರೀತವಿದೆ. ಹೀಗಾಗಿ ನಮ್ಮ ಸರ್ಕಾರ ಉಭಯ ಮಂಡಲಗಳಲ್ಲಿ ಚರ್ಚೆ ಮಾಡದೇ ಈ ವಿಧೇಯಕ ಅಂಗೀಕಾರ ಪಡೆದಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲೂ ನಮ್ಮ ಶಾಸಕರುಗಳ ವೇತನ ಶೇ 25ರಷ್ಟು ಕಡಿತಗೊಳಿಸಿತ್ತು ಹಾಗೂ ಅನುದಾನವನ್ನು ಕೂಡ ಕೋವಿಡ್ ನಿರ್ವಹಣೆ ಕೆಲಸಕ್ಕೆ ಬಳಕೆಗೆ ಅವಕಾಶ ನೀಡಿದ್ದೆವು. ವೇತನವನ್ನು ಹೆಚ್ಚಿಸಿರುವ ಸರ್ಕಾರದ ನಡೆಯನ್ನು ಸಾರ್ವಜನಿಕರು ಅನ್ಯಥಾ ಭಾವಿಸಬಾರದು. ನಮ್ಮ ಕಷ್ಟವನ್ನೂ ಅರಿಯಬೇಕೆಂದು ವಿನಮ್ರವಾಗಿ ಕೇಳಿಕೊಳ್ಳುವೆ.

ಲೇಖಕ: ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ

ಕಷ್ಟದಲ್ಲಿರುವ ಶಾಸಕರೂ ಇದ್ದಾರೆ

2015 ರಿಂದ ಶಾಸಕರ ವೇತನ ಮತ್ತು ಭತ್ಯೆಗಳು ಪರಿಷ್ಕರಣೆ ಆಗಿರಲಿಲ್ಲ. ಪರಿಷ್ಕರಣೆ ಮಾಡುವಂತೆ ಬಹಳ ಸಮಯದಿಂದಲೂ ಶಾಸಕರ ಒತ್ತಡವೂ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ವೇತನ ಹೆಚ್ಚಳ ಮಾಡುವ ಮಸೂದೆಗೆ ಒಪ್ಪಿಗೆ ಪಡೆದಿದೆ. ಇದರ ಬಗ್ಗೆ ಚರ್ಚೆ ನಡೆದೇ ಮಸೂದೆ ಅಂಗೀಕಾರ ಆಗಬೇಕಿತ್ತು. ಆದರೆ, ಕಾಂಗ್ರೆಸ್‌ ಪಕ್ಷದವರು ಧರಣಿ ನಡೆಸಿದ್ದರಿಂದ ಮತ್ತು ಗದ್ದಲ ಇದ್ದ ಕಾರಣ ಚರ್ಚೆ ಸಾಧ್ಯವಾಗಿರಲಿಲ್ಲ. ಎಲ್ಲ ಶಾಸಕರನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ. ಕಷ್ಟದಲ್ಲಿರುವ ಸಾಕಷ್ಟು ಶಾಸಕರು ಇದ್ದಾರೆ. ಅವರು ಸಾರ್ವಜನಿಕರ ಕೆಲಸಗಳಿಗಾಗಿ ಪ್ರವಾಸ ಮಾಡುತ್ತಾರೆ. ಪೆಟ್ರೊಲ್‌ ಮತ್ತು ಡೀಸೆಲ್‌ ದರವೂ ಹೆಚ್ಚಾಗಿದೆ. ಇದಲ್ಲದೇ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ವಿವಿಧ ರೀತಿ ಖರ್ಚುಗಳೂ ಬರುತ್ತವೆ. ಬೆಲೆ ಏರಿಕೆಯ ಸೂಚ್ಯಂಕಕ್ಕೆ ತಕ್ಕಂತೆ ಆಗಿಂದಾಗ್ಗೆ ಪರಿಷ್ಕರಣೆ ಆಗಬೇಕು. ಬಹಳಷ್ಟು ಮಾಜಿ ಶಾಸಕರು ಸಂಕಷ್ಟದಲ್ಲಿದ್ದಾರೆ. ಕೆಲವರಿಗೆ ಎರಡು ಮೂರು ಕಾಯಿಲೆಗಳು ಇರುತ್ತವೆ. ಅವರ ಔಷಧಿ ಖರ್ಚು ವಿಪರೀತ ಇರುತ್ತದೆ. ಇದರಿಂದ ಅವರಿಗೆ ಅನುಕೂಲವಾಗುತ್ತದೆ.

-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT