ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ದೆಹಲಿಯ ರೈತ ಚಳವಳಿ ದಿಕ್ಕು ತಪ್ಪುತ್ತಿದೆಯೇ?

Last Updated 7 ಅಕ್ಟೋಬರ್ 2021, 20:12 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ 11 ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರಿಗೆ ನಾಲ್ವರು ರೈತರು ಬಲಿಯಾಗಿದ್ದಾರೆ. ಅದರ ವಿರುದ್ದ ಸ್ಪೋಟಗೊಂಡ ಆಕ್ರೋಶ ಹಿಂಸಾಚಾರಕ್ಕೆ ತಿರುಗಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ದೆಹಲಿಯ ರೈತ ಚಳವಳಿ ದಿಕ್ಕು ತಪ್ಪುತ್ತಿದ್ದೆಯೇ?’ ವಿಷಯದ ಮೇಲೆ ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

***

‘ಫ್ಯಾಸಿಸ್ಟ್‌ ಧೋರಣೆ ನಿಲ್ಲಿಸಲಿ’

ರೈತರ ಚಳವಳಿ ದಾರಿ ತಪ್ಪುತ್ತಿಲ್ಲ. ಮುಂದೆಯೂ ತಪ್ಪುವುದಿಲ್ಲ. ಆದರೆ, ದಿಕ್ಕು ತಪ್ಪಿಸುವ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಮೂರು ಪ್ರಧಾನ ಶಕ್ತಿಗಳು ಈ ಚಳವಳಿಯ ದಾರಿ ತಪ್ಪಿಸಲು ಶಕ್ತಿ ಮೀರಿ ಯತ್ನಿಸುತ್ತಿವೆ. ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳು (ಗೋಧಿ ಮೀಡಿಯಾ ಎನ್ನುವ) ಚಳವಳಿಯ ದಾರಿ ತಪ್ಪಿಸಲು ಯತ್ನಿಸುತ್ತಿವೆ. ಎರಡನೆಯುದಾಗಿ, ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಇದನ್ನು ನಿಯಂತ್ರಿಸುವ ಯತ್ನವನ್ನು ಯಾರೂ ಮಾಡುತ್ತಿಲ್ಲ. ಮೂರನೆಯದಾಗಿ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹಿಂಸೆಯನ್ನು ಪ್ರಚೋದಿಸುವವರು ದೇಶದ ನಾಯಕರಾಗುತ್ತಿದ್ದಾರೆ. ಸರ್ಕಾರವೇ ಹಿಂಸೆಯನ್ನು ಪ್ರಚೋದಿಸುತ್ತಿದೆ.

ಕೇಂದ್ರ ಸರ್ಕಾರ ಫ್ಯಾಸಿಸ್ಟ್‌ ಧೋರಣೆ ಬಿಟ್ಟು ಪ್ರಜಾಸತ್ತಾತ್ಮಕ ರೀತಿಯಲ್ಲಿ ಎಲ್ಲರ ಜತೆ ಚರ್ಚೆಗಳನ್ನು ನಡೆಸಬೇಕು. ಈ ಚಳವಳಿ ರಾಜಕೀಯ ಪ್ರೇರಿತವಾಗಿರಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಇಂದು ಮಂಡಲ್‌ ಪಂಚಾಯ್ತಿ ಗೆಲ್ಲುವ ಶಕ್ತಿ ಇಲ್ಲ. ದುರ್ಬಲವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಒಂದು ವರ್ಷದವರೆಗೆ ರೈತರ ಚಳವಳಿಯನ್ನು ಹಿಡಿದುಕೊಟ್ಟುಕೊಳ್ಳುವ ಶಕ್ತಿ ಇದೆಯೇ? ಒಂದು ವೇಳೆ, ಚಳವಳಿಯಲ್ಲಿ ಖಾಲಿಸ್ತಾನಿಗಳು, ದೇಶದ್ರೋಹಿಗಳು ಭಾಗಿಯಾಗಿದ್ದರೆ ನಮ್ಮ ಸಶಕ್ತವಾದ ಮತ್ತು ಬಲಿಷ್ಠವಾಗಿರುವ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಅವರೆಲ್ಲರನ್ನೂ ಬಂಧಿಸಬಹುದಾಗಿತ್ತು.

-ಪುರುಷೋತ್ತಮ ಬಿಳಿಮಲೆ,ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ

***

‘ರಾಜಕೀಯ ಪ್ರೇರಿತ ಪ್ರತಿಭಟನೆ’

ರೈತರದ್ದು ರಾಜಕೀಯ ಪ್ರೇರಿತ ಪ್ರತಿಭಟನೆ. ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಪ್ರತಿಭಟನೆ ಮುಂದುವರಿಸಲಾಗಿದೆ. ಹೀಗಾಗಿ, ಇದು ದಲ್ಲಾಳಿಗಳು ಮತ್ತು ಕೆಲ ರಾಜಕೀಯ ಪಕ್ಷಗಳ ಕುಮ್ಮಕ್ಕಿನ ಪ್ರತಿಭಟನೆ.

ಕೇಂದ್ರ ಸರ್ಕಾರ ಹಲವು ಬಾರಿ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ. ಆದರೆ, ಸರ್ಕಾರದ ಯಾವುದೇ ಪ್ರಸ್ತಾವಗಳನ್ನು ರೈತರು ಒಪ್ಪುತ್ತಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್‌ ಹೊಣೆಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಟ್ಟುಕೊಂಡು ಬಿಜೆಪಿ ಸರ್ಕಾರಕ್ಕೆ ಕೆಟ್ಟು ಹೆಸರು ತರಲು ಈ ಹಿಂಸಾಚಾರ ನಡೆಸಲಾಗಿದೆ.

ಖಾಲಿಸ್ತಾನಿ ಹೋರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಇದಕ್ಕೆ ರೈತ ಚಳವಳಿ ಎಂದು ಹೇಗೆ ಕರೆಯುವುದು? ಸಂಸತ್‌ನಲ್ಲಿ ವಿರೋಧ ಪಕ್ಷಗಳು ಚರ್ಚೆ ನಡೆಸಲಿಲ್ಲ. ಕಾಯ್ದೆಯಲ್ಲಿನ ಲೋಪಗಳ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಬಹುದಿತ್ತು. ಕನಿಷ್ಠ ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ವಿರೋಧ ಪಕ್ಷಗಳು ಹುಯಿಲೆಬ್ಬಿಸಿವೆ. ಆದರೆ, ಅಕ್ಕಿ ಮತ್ತು ಗೋಧಿಗೆ ಅತಿ ಹೆಚ್ಚು ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ.

-ಅಶ್ವತ್ಥನಾರಾಯಣಗೌಡ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

***

‘ಕೇಂದ್ರ ಸರ್ಕಾರದ್ದು ದುರಹಂಕಾರದ ನಿಲುವು’

ರೈತ ಚಳವಳಿಯನ್ನು ಹತ್ತಿಕ್ಕುವ ಕಾರ್ಯವನ್ನು ಸರ್ಕಾರವೇ ಮಾಡುತ್ತಿದೆ. ರೈತ ಚಳವಳಿ ದಿಕ್ಕು ತಪ್ಪುತ್ತಿಲ್ಲ. ಆದರೆ, ದಿಕ್ಕು ತಪ್ಪಿಸಲು ಸರ್ಕಾರವೇ ನಿರಂತರವಾಗಿ ಷಡ್ಯಂತ್ರ ನಡೆಸುತ್ತಿದೆ. ಕೃಷಿ ಕಾಯ್ದೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ದುರಹಂಕಾರದ ನಿಲುವು ಕೈಗೊಂಡಿದೆ.

ಕೃಷಿ ಕಾಯ್ದೆಯನ್ನು ರಾತ್ರೋ ರಾತ್ರಿ ಜಾರಿಗೊಳಿಸಲಾಗಿದೆ. ಸ್ಥಾಯಿ ಸಮಿತಿ ಮಾಡಿದ ಶಿಫಾರಸುಗಳ ಆಧಾರದ ಮೇಲೆ ಕಾಯ್ದೆಯನ್ನು ಜಾರಿಗೊಳಿಸಬೇಕಾಗಿತ್ತು. ಆದರೆ, ಸಂಸತ್‌ನಲ್ಲಿ ಬಹುಮತ ಹೊಂದಿರುವುದನ್ನೇ ಮಾನದಂಡವಾಗಿರಿಸಿಕೊಂಡು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆ ರೈತರ ಪರವಾಗಿದ್ದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಎಲ್ಲ ವಿರೋಧ ಪಕ್ಷಗಳು ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ.

ನ್ಯಾಯಾಂಗವು ಸಹ ಕುರುಡನಂತೆ ವರ್ತಿಸುತ್ತಿದೆ. ಯಾವುದೇ ಘಟನೆ ನಡೆದಾಗ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತಾರೆ. ಇದು ಮಾನವೀಯತೆ. ಇದರ ಹಿಂದೆ ರಾಜಕೀಯ ಲಾಭ ಪಡೆಯುವ ಉದ್ದೇಶವಿಲ್ಲ. ಆದರೆ, ಇವರನ್ನು ತಡೆಯುವ ಕೆಲಸವನ್ನು ಉತ್ತರ ಪ್ರದೇಶ ಸರ್ಕಾರ ಮಾಡಿದೆ.

-ಬೃಜೇಶ್‌ ಕಾಳಪ್ಪ,ಎಐಸಿಸಿ ವಕ್ತಾರ

***

‘ಪ್ರತಿಭಟನೆ ಮೂರು ರಾಜ್ಯಗಳಿಗೆ ಸೀಮಿತವಾಗಿರುವುದೇಕೆ’

ಕೃಷಿ ವಲಯದಲ್ಲಿ ರಚನಾತ್ಮಕ ಸುಧಾರಣೆಗಳಾಗುವುದು ಅಗತ್ಯವಿದೆ. ಆದರೆ, ಒಂದು ವರ್ಷದಿಂದ ನಡೆಯುತ್ತಿರುವ ಚಳವಳಿಯಲ್ಲಿ ನಿಜವಾಗಿಯೂ ರೈತರು ಇದ್ದಾರೆಯೇ? ರೈತರು ತಮ್ಮ ಜಮೀನಿನ ಕೆಲಸವನ್ನು ಬಿಟ್ಟು ಇಷ್ಟು ಸುದೀರ್ಘಾವಧಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ?

ಮೂರು ರಾಜ್ಯಗಳನ್ನು ಹೊರತು ಪಡಿಸಿದರೆ ಬೇರೆ ರಾಜ್ಯಗಳಲ್ಲಿ ಪ್ರತಿಭಟನೆಗಳು ಏಕೆ ನಡೆಯುತ್ತಿಲ್ಲ. ಈ ಬಗ್ಗೆ ಚರ್ಚಿಸಿದಾಗ ಮಾತ್ರ ರೈತರ ಪ್ರತಿಭಟನೆ ಹಿಂದೆ ಯಾವ ಶಕ್ತಿಗಳಿವೆ ಅಥವಾ ಸರ್ಕಾರಕ್ಕೆ ಯಾವ ರೀತಿಯ ಪಟ್ಟಭದ್ರ ಹಿತಾಸಕ್ತಿ ಇದೆ ಎನ್ನುವುದು ಗೊತ್ತಾಗುತ್ತದೆ. ಪ್ರತಿಭಟನೆಯಲ್ಲಿರುವವರು ರೈತರು ಅಥವಾ ಇಲ್ಲವೋ ಎನ್ನುವುದು ಸಹ ಗೊತ್ತಾಗಬೇಕಾಗಿದೆ.

ಪ್ರತಿಭಟನೆ ಎಂದರೆ ರಸ್ತೆ ತಡೆ ಮಾಡುವುದು ಸರಿ ಅಲ್ಲ. ಉತ್ತರ ಪ್ರದೇಶದ ಘಟನೆಗೆ ಸಂಬಂಧಿ
ಸಿದಂತೆ ಪೊಲೀಸರು ಕ್ರಮಕೈಗೊಳ್ಳಬೇಕಾಗಿತ್ತು. ರಾಜಕಾರಣಿಗಳು ಸಹ ಅಲ್ಲಿಗೆ ಹೋಗುವ ಅಗತ್ಯ ಇಲ್ಲ. ಪೊಲೀಸರು ಸಮರ್ಪಕವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು.

-ಆಶಾ ಕೃಷ್ಣಸ್ವಾಮಿ,ಪತ್ರಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT