ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ | ಯಾರನ್ನೋ ಆಹ್ವಾನಿಸದಂತೆ ನಿರ್ಬಂಧ ಎಷ್ಟು ಸರಿ?

Last Updated 17 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇರುತ್ತದೆ. ಎರಡು ದಶಕಗಳ ಇತಿಹಾಸವಿರುವ ‘ಬಹುರೂಪಿ’ಯಲ್ಲಿ ಅನೇಕ ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅವರನ್ನೆಲ್ಲ, ಅವರು ಎಡ– ಇವರು ಬಲ ಎಂದು ಪಟ್ಟಿ ಮಾಡಿಕೊಂಡು ಕೂರುವುದಕ್ಕೆ ಆಗುತ್ತದೆಯೇ? ಉತ್ಸವದ ವಸ್ತುವಿಷಯಕ್ಕೆ ತಕ್ಕಂತೆ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.

**

ನಮ್ಮ ರಸ್ತೆಗೆ ಅಡ್ಡವಾಗಿ ವಾಹನವೊಂದು ನಿಂತಿರುತ್ತದೆ. ‘ಪಕ್ಕಕ್ಕೆ ಹೋಗಪ್ಪ’ ಎಂದು ಸಾವಧಾನವಾಗಿ ಹೇಳುತ್ತೇವೆಯೇ? ಜೋರಾಗಿಯೇ ಗದರುತ್ತೇವೆ. ಅವರೇನು ಕಡಿಮೆ? ಗಟ್ಟಿದನಿಯಲ್ಲಿಯೇ ಗಲಾಟೆ ಎಬ್ಬಿಸುತ್ತಾರೆ. ಆಗ ಇನ್ಯಾರಾದರೂ ಬಂದು ‘ಹೋಗ್ರಿ ಗಲಾಟೆ ಮಾಡಬೇಡಿ’ ಎಂದಾಗ ಇಬ್ಬರೂ ತಮ್ಮ ಪಾಡಿಗೆ ತಮ್ಮ ತಮ್ಮ ದಾರಿ ಹಿಡಿಯುತ್ತಾರೆ. ಮೈಸೂರಿನ ರಂಗಾಯಣ ಪ್ರತಿವರ್ಷ ಆಯೋಜಿಸುವ ‘ಬಹುರೂಪಿ’ ಸಾಂಸ್ಕೃತಿಕ ಉತ್ಸವಕ್ಕೆ ಈ ಬಾರಿ ಅತಿಥಿಗಳನ್ನು ಆಹ್ವಾನಿಸುವ ವಿಷಯದಲ್ಲಿ ಉದ್ಭವವಾಗಿರುವ ವಿವಾದವೂ ಇದೇ ಮಾದರಿಯದು.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ‘ಬಹುರೂಪಿ’ಗೆ ಚಕ್ರವರ್ತಿ ಸೂಲಿಬೆಲೆ ಮತ್ತು ಮಾಳವಿಕಾ ಅವಿನಾಶ್‌ ಅವರನ್ನು ಅತಿಥಿಗಳನ್ನಾಗಿ ಆಯ್ಕೆ ಮಾಡಿರುವುದಕ್ಕೆ ರಂಗಭೂಮಿಯ ಕೆಲವು ಸ್ನೇಹಿತರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಕರೆಯಬಾರದು ಎಂದು ಪಟ್ಟುಹಿಡಿದಿದ್ದಾರೆ. ಆದರೆ, ಯಾಕೆ ಕರೆಯಬಾರದು ಎನ್ನುವುದು ಇಲ್ಲಿ ಪ್ರಶ್ನೆ. ಅವರೇನು ಅಪರಾಧಿಗಳೇ? ಇಬ್ಬರೂ ‌ನಮ್ಮವರೇ ಆದ ಕಲಾವಿದರು, ಸಾಹಿತ್ಯ ಚಿಂತಕರು. ಅಂತಹವರನ್ನು ಕರೆಯಲೇಬಾರದು ಎನ್ನುವುದಾದರೆ ನೀವು ಅವರನ್ನು ನಿರ್ಬಂಧಿಸಿದಂತೆ ಆಗುತ್ತದೆ. ಹೀಗೆ ಮಾಡುವುದು ಎಷ್ಟು ಸರಿ?

ಪ್ರಸನ್ನ, ಲಿಂಗದೇವರು ಹಳೆಮನೆ, ಬಸವಲಿಂಗಯ್ಯ, ಜನ್ನಿ ಇವರೆಲ್ಲ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದವರು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಕಲಿತು ಬಂದವರು. ‘ಸಮುದಾಯ’ ತಂಡದ ಹೊಣೆ ಹೊತ್ತು ರಂಗಭೂಮಿಯಲ್ಲಿ ದುಡಿದವರು. ಅದು ಎಡಪಂಥೀಯ ನಿಲುವನ್ನು ಹೊಂದಿದ್ದಂತಹ ಒಂದು ರಂಗತಂಡ ಎನ್ನುವುದು ರಾಜ್ಯದ ರಂಗಕರ್ಮಿಗಳಿಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅದರಿಂದ ನಮಗೆ ಯಾರಿಗೂ ಏನೂ ತೊಂದರೆ ಆಗಲಿಲ್ಲ, ನಾವ್ಯಾರೂ ಅದಕ್ಕೆ ತಗಾದೆಯನ್ನೂ ತೆಗೆಯಲಿಲ್ಲ. ನಮ್ಮ ನಮ್ಮ ಪಾಡಿಗೆ ನಾವು ನಾಟಕಗಳನ್ನು ಮಾಡುತ್ತಾ ಬಂದೆವು. ಒಗ್ಗೂಡಿಯೂ ಕೆಲಸ ಮಾಡಿದೆವು.

ಅವರೆಲ್ಲರೂ ನಿರ್ದೇಶಕರಾಗಿದ್ದಾಗಿನ ಅವಧಿಯಲ್ಲಿ ತಮಗೆ ಗೊತ್ತಾದಂತೆ ಕೆಲಸಗಳನ್ನು ಮಾಡಿದ್ದಾರೆ. ಬೇಕಾದವರನ್ನು ‘ಬಹುರೂಪಿ’ಗೆ ಅತಿಥಿಗಳನ್ನಾಗಿ ಕರೆಸಿದ್ದಾರೆ. ಆಗೆಲ್ಲಾ ಈಗಿನಂತೆ ಎಡಪಂಥೀಯ, ಬಲಪಂಥೀಯ ಎಂಬಂಥ ಸಂದರ್ಭಗಳೇ ಸೃಷ್ಟಿಯಾಗಿದ್ದಿಲ್ಲ. ಅವರನ್ನು ಕರೆಸಿದ್ಯಾಕೆ,ಇವರನ್ನು ಕರೆಸುವುದಿಲ್ಲವೇಕೆ ಎಂದೆಲ್ಲ ಬಲಪಂಥೀಯರು ಯಾರೂ ಅವರಿಗೆ ತಾಕೀತು ಮಾಡಲಿಲ್ಲ. ಕರೆಸಿದವರನ್ನು ಒಪ್ಪಿಕೊಂಡು ಅವರ ಮಾತನ್ನು ಕೇಳಿದ್ದಾರೆ. ಈಗ ಮಾತ್ರ ಯಾಕೆ ಇಂತಹ ವಿರೋಧ?

ಅಡ್ಡಂಡ ಕಾರ್ಯಪ್ಪ ಅವರ ನೇತೃತ್ವದಲ್ಲಿ ಕಳೆದ ವರ್ಷ ‘ಗಾಂಧಿ’ ವಸ್ತುವಿಷಯವನ್ನಿಟ್ಟು ನಡೆಸಿದ ‘ಬಹುರೂಪಿ’ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು. ಆದರೆ ಈ ವರ್ಷ ಕಾರ್ಯಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಂತೆಯೇ ವಿವಾದದ ಕಿಡಿ ಹೊತ್ತಿದೆ. ಅವರನ್ನು ಕರೆಸಿದ ಮಾತ್ರಕ್ಕೆ ರಂಗಾಯಣವೇನೂ ಮುಳುಗಿಹೋಗುವುದಿಲ್ಲ, ಕಾರ್ಯಕ್ರಮಗಳು ನಿಲ್ಲುವುದಿಲ್ಲ, ಚಟುವಟಿಕೆಗಳು ಎಂದಿನಂತೆ ಸಾಗುವುದು ತಪ್ಪುವುದಿಲ್ಲ.

ಇಂತಹವರನ್ನೆಲ್ಲ ಕರೆಸಬೇಡಿ ಎಂದು ಈಗ ನೀವು ಹೇಳುತ್ತಾ ಹೋದರೆ, ಮುಂದೆ ಯಾರನ್ನು ಕರೆಸಬೇಕು ಎಂಬುದನ್ನೂ ಹೇಳುತ್ತೀರಿ. ಆಗ ನಿಮ್ಮನ್ನೆಲ್ಲಾ ಕರೆದೇ ಎಲ್ಲವನ್ನೂ ತೀರ್ಮಾನಿಸಬೇಕಾಗುತ್ತದೆ. ಅದರ ಅಗತ್ಯ ಇದೆಯೇ?

ಹೇಳಿಕೇಳಿ ರಂಗಭೂಮಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುವಂತಹ ಕ್ಷೇತ್ರ. ಎಲ್ಲರನ್ನೂ ಸಮರ್ಥಿಸಿಕೊಂಡು, ಒಗ್ಗೂಡಿಸಿಕೊಂಡು ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುವಂಥವರು ನಾವು. ನಮ್ಮ ‘ಕಲಾಗಂಗೋತ್ರಿ’ ತಂಡವನ್ನೇ ಉದಾಹರಿಸುವುದಾದರೆ, 50 ವರ್ಷಗಳಿಂದಲೂ ನಾಟಕಗಳನ್ನು ಮಾಡುತ್ತಾ ಬಂದಿದ್ದೇವೆ, ‘ಸಮುದಾಯ’ದ ಜೊತೆಗೂಡಿಯೂ ಕೆಲಸ ಮಾಡಿದ್ದೇವೆ. ಆ ಸ್ನೇಹಿತರೆಲ್ಲ ನಮ್ಮ ತಂಡದಲ್ಲಿ ಅಭಿನಯ ಮಾಡಿದ್ದಾರೆ, ನಮ್ಮ ಕಲಾವಿದರು ಅವರ ತಂಡದಲ್ಲಿ ಅಭಿನಯಿಸಿದ್ದಾರೆ. ಆದರೆ ಈಗ ಮಾತ್ರ ಇಷ್ಟೊಂದು ಅಸಹನೆ ವ್ಯಕ್ತಪಡಿಸುವ, ಸಿಟ್ಟಿಗೇಳುವ ಅಗತ್ಯವೇನಿದೆ ಎಂಬುದೇ ಅರ್ಥವಾಗದ ಸಂಗತಿ.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇರುತ್ತದೆ. ಎರಡು ದಶಕಗಳ ಇತಿಹಾಸವಿರುವ ‘ಬಹುರೂಪಿ’ಯಲ್ಲಿ ಅನೇಕ ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅವರನ್ನೆಲ್ಲ, ಅವರು ಎಡ– ಇವರು ಬಲ ಎಂದು ಪಟ್ಟಿ ಮಾಡಿಕೊಂಡು ಕೂರುವುದಕ್ಕೆ ಆಗುತ್ತದೆಯೇ? ಉತ್ಸವದ ವಸ್ತುವಿಷಯಕ್ಕೆ ತಕ್ಕಂತೆ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.

ಮಾಳವಿಕಾ ಕಲಾವಿದರು, ವಕೀಲರು. ಕರ್ನಾಟಕ ಮಾತ್ರವಲ್ಲದೆ ದೇಶದ ವಿಷಯಗಳೆಲ್ಲವನ್ನೂ ಅರಿತವರು. ಕಲಾವಿದರೆಂದರೆ ರಂಗಭೂಮಿಯವರೇ ಆಗಿರಬೇಕು ಎಂದೇನಿಲ್ಲ. ಸೂಲಿಬೆಲೆ ಅವರು ಸಾಂಸ್ಕೃತಿಕ ಚಿಂತಕರು. ಅವರ ಮಾತಿನ ಧಾಟಿ, ವಸ್ತುವಿಷಯ ಬೇರೆ ಇರಬಹುದು. ಆದರೆ ಅವರು ಏನು ಹೇಳುತ್ತಾರೆ ಎನ್ನುವುದನ್ನು ನೀವು ಇನ್ನೂ ಕೇಳಿಯೇ ಇಲ್ಲವಲ್ಲ? ಅವರ ಅಭಿಪ್ರಾಯ ಮಂಡನೆಗೆ ಅವಕಾಶವನ್ನೇ ಕೊಡದೆ, ಬರಲೇಬೇಡಿ, ಸೇರಿಸಲೇಬೇಡಿ, ಕರೆಯಲೇಬೇಡಿ ಎನ್ನುವುದೇಕೆ?

ನಮ್ಮವರೇ ಆಗಿ ನಮ್ಮ ನಡುವೆಯೇ ಕೆಲಸ ಮಾಡುತ್ತಿರುವ ಅವರು, ಮಹತ್ವದ ಸ್ಥಾನಗಳಲ್ಲಿ ಇರುವಂಥವರು. ಅವರ ಪಾಡಿಗೆ ಅವರು ಬಂದು ಸಾಂಸ್ಕೃತಿಕ ಉತ್ಸವಕ್ಕೆ ಏನು ಬೇಕೋ ಅದನ್ನು ಹೇಳುತ್ತಾರೆ. ಕೇಳಿಸಿಕೊಳ್ಳಿ. ಕೇಳುವ ಒಂದು ಸಹನೆಯೂ ನಿಮಗೆ ಇಲ್ಲ ಎಂದರೆ ಕಷ್ಟವಾಗುತ್ತದೆ. ಯಾರ ಮೇಲೂ ಯಾರೂ ಯಾವುದೇ ರೀತಿಯ ಒತ್ತಾಯವನ್ನಂತೂ ಹೇರುವುದಿಲ್ಲ. ಕೇಳಲು ಇಷ್ಟವಿರುವವರು ಕೇಳಬಹುದು ಅಥವಾ ಅವರ ಪಾಡಿಗೆ ಉತ್ಸವದಲ್ಲಿ ಪಾಲ್ಗೊಂಡು ಹೋಗಬಹುದು. ಗಲಾಟೆ ಮಾಡುವ ಅವಶ್ಯಕತೆ ಇಲ್ಲ.

ರಂಗಭೂಮಿ ಎಲ್ಲ ಬಗೆಯ ಜನರಿಗೂ ಮುಕ್ತವಾದ ಕ್ಷೇತ್ರ. ಒಂದು ರಂಗತಂಡದಲ್ಲಿ ಇಂತಹವರೇ ಇರಬೇಕು, ನಿರ್ದಿಷ್ಟವಾಗಿ ಇಂತಹುದೇ ಕೆಲಸ ಮಾಡಬೇಕು ಎಂಬ ಯಾವ ನಿರ್ಬಂಧವೂಇರುವುದಿಲ್ಲ. ಒಂದು ತಂಡವಾಗಿ ನಾಟಕ ಮಾಡುವುದೊಂದೇ ನಮ್ಮ ಪರಮೋದ್ದೇಶ. ಉದಾಹರಣೆಗೆ, ‘ಮುಖ್ಯಮಂತ್ರಿ’ ನಾಟಕವನ್ನು ಸುಮಾರು 42 ವರ್ಷಗಳಿಂದಲೂ ಆಡುತ್ತಲೇ ಬಂದಿದ್ದೇವೆ. 750ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಅದರಲ್ಲಿ ಎಲ್ಲ ಬಗೆಯ ಕಲಾವಿದರೂ ಭಾಗವಹಿಸುತ್ತಾರೆ. ಎಲ್ಲೆಡೆ ಪ್ರದರ್ಶನಗಳು ನಡೆಯುತ್ತವೆ.

ಇನ್ನು ‘ಬಹುರೂಪಿ’ಯಂತೂ ಮೂರ್ನಾಲ್ಕು ತಂಡಗಳಿಗೆ ಸೀಮಿತವಾದ ಭೂಮಿಕೆ ಅಲ್ಲವೇ ಅಲ್ಲ. ದೇಶದಾದ್ಯಂತ ನಾನಾ ಭಾಷೆಗಳ ಬಹಳಷ್ಟು ತಂಡಗಳು ಬಂದು ನಾಟಕ ಪ್ರದರ್ಶಿಸುತ್ತವೆ. ಬಹಳ ಉತ್ತಮವಾಗಿ ನಡೆಯುವಂತಹ ಈ ಬಹುದೊಡ್ಡ ಉತ್ಸವದಲ್ಲಿ ಯಾವ ಪಂಥದ ಮುಲಾಜಿಗೂ ಒಳಗಾಗದೆ ಇಡೀ ಮೈಸೂರಿನ ಜನ ಪಾಲ್ಗೊಳ್ಳುತ್ತಾರೆ. ಅವರೆಲ್ಲಾ ಸ್ವತಂತ್ರ ಆಲೋಚನೆಯುಳ್ಳ ನಾಗರಿಕರು. ಹೀಗಾಗಿ ಯಾರ ಮೇಲೆ ಯಾರೂ ಸಿದ್ಧಾಂತಗಳನ್ನು ಹೇರಲು ಸಾಧ್ಯವಿಲ್ಲ. ಅಂತಹ ಪ್ರಯತ್ನಕ್ಕೆ ಮುಂದಾದರೆ ಅವರು ಬರುವುದನ್ನೇ ನಿಲ್ಲಿಸುತ್ತಾರೆ. ಅತಿಥಿಗಳನ್ನು ಕರೆಯುವುದು ಸಿದ್ಧಾಂತಗಳನ್ನು ಹೇರಲು ಅಲ್ಲ ಮತ್ತು ಅದಕ್ಕಾಗಿ ನಾವು ಜಗಳ ಮಾಡಿಕೊಳ್ಳಬೇಕಾಗಿಯೂ ಇಲ್ಲ.

ಮಾವೊವಾದಿಗಳ ಬಗ್ಗೆ ಮಾತನಾಡುವಂತಹ ಸಂದರ್ಭ ಸಹ ಈಗ ಸೃಷ್ಟಿಯಾಗಿಲ್ಲ. ಮಾವೊ ಸಿದ್ಧಾಂತ ಹಳೆಯ ದಾಯಿತು. ಅಂತಹ ಸಿದ್ಧಾಂತಗಳೆಲ್ಲಾ ಬದಲಾಗಿ ಈಗ ಕಾರ್ಪೊರೇಟ್‌ ಸಿದ್ಧಾಂತ ಬಂದಿದೆ. ಬಹಳಷ್ಟು ಬದಲಾವಣೆ ಆಗಿದೆ. ಇಂಥ ಸಂದರ್ಭದಲ್ಲಿ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾದುದು ನಮ್ಮ ಕರ್ತವ್ಯ.

ಉತ್ತಮ ವ್ಯವಸ್ಥೆಯ ನಡುವೆ ಆದ ಸಣ್ಣ ಫಜೀತಿಯು ಮಾತಿಗೆ ಮಾತು ಬೆಳೆದು ದೊಡ್ಡ ವಿವಾದವನ್ನು ಸೃಷ್ಟಿಸಿದೆ. ‘ಓಮೈಕ್ರಾನ್‌’ ಸಾಂಕ್ರಾಮಿಕದ ಕಾರಣದಿಂದ ಜನವರಿ ನಂತರ ಉತ್ಸವವನ್ನು ಆಯೋಜಿಸುವಂತೆ ಸರ್ಕಾರ ಸೂಚಿಸಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ, ಅಡ್ಡಂಡ ಕಾರ್ಯಪ್ಪ ಅವರು ಮೈಸೂರಿನ ಎಲ್ಲ ರಂಗತಂಡಗಳನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು, ಕೂತು ಚರ್ಚಿಸಿ, ಸಮಾಧಾನಕರವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು.

ರಂಗಭೂಮಿ ಅಂದರೆ ಮೊದಲೇ ಗಟ್ಟಿದನಿ. ಕಿರುಚಾಡುತ್ತೇವೆ, ಕೂಗಾಡುತ್ತೇವೆ, ಹಾರಾಡುತ್ತೇವೆ. ಇದೆಲ್ಲ ಇದ್ದದ್ದೇ ನಮ್ಮ ಹಣೆಬರಹ. ರಂಗಭೂಮಿಯಲ್ಲಿ ಸಂಘರ್ಷ ಬಹಳ ಮುಖ್ಯ. ಆದರೆ ಅದೇನಿದ್ದರೂ ನಮ್ಮ ನಾಟಕಗಳಿಗೆ ಸೀಮಿತ. ಸಮಾರಂಭ ನಡೆಸುವಾಗ ಸಂಘರ್ಷದ ಅಗತ್ಯ ಇಲ್ಲ. ಇಲ್ಲಿ ಬೇಕಾಗಿರುವುದು ಸಮನ್ವಯ ಮಾತ್ರ. ಎಲ್ಲರ ಪ್ರಯತ್ನದಿಂದಷ್ಟೇ ಅದು ಕೈಗೂಡಲು ಸಾಧ್ಯ.

ಲೇಖಕ:ರಂಗಕಲಾವಿದ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ
ನಿರೂಪಣೆ: ನೀಳಾ ಎಂ.ಎಚ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT