ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ | ಅತಿಥಿಗಳ ಆಹ್ವಾನ: ಹಟಮಾರಿತನ ಸಲ್ಲದು

ಬಹುರೂಪಿ ರಂಗಾಯಣವನ್ನು ಏಕರೂಪಕ್ಕೆ ಇಳಿಸುವ ಪ್ರಯತ್ನ ಆಗುತ್ತಿದೆಯೇ?
Last Updated 17 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ರಂಗಭೂಮಿಯ ಬೆಳವಣಿಗೆಯ ದಿಸೆಯಲ್ಲಿ ಕಾರ್ಯಪ್ಪನವರು ಮಾಡುತ್ತಿರುವ ಎಲ್ಲ ವಿವಾದಗಳನ್ನೂ, ಎದುರಿಸುತ್ತಿರುವ ಆರೋಪಗಳನ್ನೂ, ಗಮನಿಸಿ ಸರ್ಕಾರ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು. ಅದಕ್ಕಿಂತ ಮೊದಲು ತಾವಾಗಿಯೇ ರಾಜೀನಾಮೆ ನೀಡಿ ಇನಿತಾದರೂ ರಂಗಭೂಮಿಯ ಗೌರವವನ್ನು ಉಳಿಸಿಕೊಳ್ಳುವುದು ಲೇಸು.

**

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಗಳ ಮೂಟೆಗಳನ್ನು ಮೈಮೇಲೆ ಬೀಳಿಸಿಕೊಂಡು ಅದರಿಂದ ಹೊರ ಬರುವ ಪ್ರಯತ್ನದಲ್ಲಿ ಇನ್ನಷ್ಟು ತಪ್ಪು ತಪ್ಪಾದ ಹೇಳಿಕೆ ಗಳನ್ನು ನೀಡುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಅವರುನಿರ್ದೇಶಕರಾಗಿ ಬಂದ ಬಳಿಕ ಎಲ್ಲ ನೀತಿ ನಿಯಮಗಳನ್ನು ದೂರತಳ್ಳಿ ತಮ್ಮಿಚ್ಛೆಯಂತೆ ಅಧಿಕಾರ ಚಲಾಯಿಸತೊಡಗಿದ್ದಾರೆ. ತಾವು ಇಂತಹ ಸಂಘಟನೆ, ಇಂತಹ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಲೇ ಉಳಿದ ಎಲ್ಲರನ್ನೂ ನಿಂದಿಸುವ ರಭಸದಲ್ಲಿ ತಪ್ಪುಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಲೇ ಹೋಗಿದ್ದಾರೆ.

ಕಾರ್ಯಪ್ಪರಕಾರ್ಯವೈಖರಿಯನ್ನು ಅವಲೋಕಿಸುವ ಮೊದಲು ರಂಗಾಯಣ ಮೈಸೂರು ನಡೆದು ಬಂದ ದಾರಿ ಮತ್ತು ರಂಗಭೂಮಿಯ ಅಭಿವೃದ್ಧಿಗೆ ರಂಗಾಯಣದಈ ಹಿಂದಣ ನಿರ್ದೇಶಕರು ಕೈಗೊಂಡ ಕ್ರಮಗಳನ್ನೂ ಗಮನಿಸಬೇಕು.ಆಧುನಿಕ ರಂಗಭೂಮಿಗೆ ರೆಪರ್ಟರಿ ನೀಡಬಹುದಾದ ಬಹುಮುಖಿ ಸಾಧ್ಯತೆಗಳ ಬಗ್ಗೆ ಅಪಾರ ಅರಿವಿದ್ದ ಬಿ.ವಿ. ಕಾರಂತರು ಕರ್ನಾಟಕದಾದ್ಯಂತ ಸುತ್ತಾಟ ನಡೆಸಿ 25 ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಅವರಿಗೆ ನಿರಂತರ ತರಬೇತಿ ಕೊಡುವುದರ ಮೂಲಕ ಅವರೆ ಲ್ಲರನ್ನೂ ಅತ್ಯುತ್ತಮ ಕಲಾವಿದರನ್ನಾಗಿ ಮಾಡುತ್ತಾರೆ.

ಬಿ.ವಿ. ಕಾರಂತರ ನಂಬುಗೆಯಂತೆ ಈ ರಂಗ ಕಲಾವಿದರು ಯಾವತ್ತೂ ರಂಗಭೂಮಿಯ ಬೆಳವಣಿಗೆಗೆ ನಿಷ್ಠೆಯಿಂದ ಕೆಲಸ ಮಾಡಬೇಕೇ ಹೊರತು ಸಂಬಳದ ಹಣಕ್ಕಾಗಿ ಅಲ್ಲ ಎಂದು ಪ್ರತಿಪಾದಿಸುತ್ತಾರೆ. ರಂಗಾಯಣದ ಕಲಾವಿದರನ್ನು ಜಗದಗಲದ ಅರಿವು ಮೂಡಿಸುವುದಕ್ಕಾಗಿ ವಿದೇಶಗಳಿಗೂ ಕರೆದೊಯ್ಯುತ್ತಾರೆ.ಕೆಲಸ, ಸಂಬಳ ಏರಿಕೆ, ಭದ್ರತೆ ಇತ್ಯಾದಿ ವಿಚಾರಗಳಲ್ಲಿ ಕಾರಂತರಿಗೂ ನಟ, ನಟಿಯರಿಗೂ ಮನಸ್ತಾಪ ಉಂಟಾಗುತ್ತದೆ. ಕಾರಂತರುಬೇಸರದಿಂದಲೇ ರಂಗಾಯಣ ತೊರೆದು ಹೊರ ಬರುತ್ತಾರೆ.

ಕಾರಂತರು ರಂಗಾಯಣ ತೊರೆದರು ಎಂದು ರಂಗಾಯಣ ತನ್ನ ಚಟುವಟಿಕೆ ನಿಲ್ಲಿಸುವುದಿಲ್ಲ. ನಂತರ, ಸಿ. ಬಸವಲಿಂಗಯ್ಯ ನಿರ್ದೇಶಕರಾಗುತ್ತಾರೆ. ಹೊಸಬಗೆಯ ರಂಗ ಪ್ರಯೋಗಗಳನ್ನು ನಡೆಸುತ್ತಾರೆ. ಇವರ ಅವಧಿಯಲ್ಲಿ ನಡೆಸಿದ ಚಿಣ್ಣರ ಮೇಳಗಳು, ಮಲೆಗಳಲ್ಲಿ ಮದುಮಗಳು ಅಂತಹ ದೀರ್ಘಾವಧಿ ರಂಗ ಪ್ರಯೋಗಗಳು ಜನ ಮೆಚ್ಚುಗೆ ಗಳಿಸುತ್ತವೆ. ರಾಷ್ಟ್ರದಾದ್ಯಂತ ಹೆಸರಾಗುತ್ತದೆ.

ನಂತರ ಬಂದ ಪ್ರಸನ್ನ ತನ್ನದೇ ಆದ ರೀತಿಯ ಕೆಲಸ ಕಾರ್ಯಗಳ ಮೂಲಕ ರಂಗಾಯಣವನ್ನು ಇನ್ನಷ್ಟು ಆಕರ್ಷಕಗೊಳಿಸಿದರು. ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗುವುದಕ್ಕೆ ಪ್ರಸನ್ನರೇ ಕಾರಣವೆಂದು ಹೇಳಬಹುದು. ಹೀಗಾಗಿ ಕನ್ನಡದ ಪ್ರೇಕ್ಷಕರಿಗೆ ಅದರಲ್ಲಿಯೂ ಮುಖ್ಯವಾಗಿ ಮೈಸೂರಿನ ಪ್ರೇಕ್ಷಕರಿಗೆ ರಾಷ್ಟ್ರದ ಅತ್ಯುತ್ತಮ ರಂಗಪ್ರಯೋಗಗಳನ್ನು ನೋಡುವ ಅವಕಾಶ ಉಂಟಾಗಿದೆ. ಭಾರತೀಯ ರಂಗಭೂಮಿಯ ನಿರ್ದೇಶಕರನ್ನು, ನಾಟಕಕಾರರನ್ನು ರಂಗಾಯಣಕ್ಕೆ ಆಹ್ವಾನಿಸಿ ಮೈಸೂರಿಗರು ಅವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸುವ ಹಾಗೆ ಮಾಡುತ್ತಾರೆ. ಈ ಎಲ್ಲ ಚಟುವಟಿಕೆಗಳಿಗೆ ರಂಗಸಮಾಜ ಮತ್ತು ಸರ್ಕಾರಬೆಂಬಲ ನೀಡಿದೆ ಎನ್ನುವುದನ್ನು ಮರೆಯಬಾರದು. ಪ್ರಸನ್ನ ಅವಧಿಯ ಬಳಿಕ ಬಂದ ಚಿದಂಬರರಾವ್ ಜಂಬೆ,ಬಿ.ವಿ. ರಾಜಾರಾಂ, ಲಿಂಗದೇವರು ಹಳೆಮನೆ, ಕಾ.ತ.ಚಿಕ್ಕಣ್ಣ,ಜನಾರ್ದನ (ಜನ್ನಿ)ಭಾಗೀರಥಿ ಬಾಯಿ ಕದಂ ತಮ್ಮ ಆಡಳಿತಾವಧಿಯಲ್ಲಿ ತಮ್ಮದೇ ಆದ ಬಗೆಯಲ್ಲಿ ಎಲ್ಲರೊಡನೆಯೂ ಮಾತನಾಡುತ್ತಾ ಹೊಸಬಗೆಯ ರಂಗಪ್ರಯೋಗಗಳನ್ನು ನಡೆಸಿದ್ದಾರೆ.

ಈ ನಿರ್ದೇಶಕರೆಲ್ಲರೂ ತಮ್ಮ ಆಡಳಿತಾವಧಿಯಲ್ಲಿ ತಾವೂ ರಂಗಾಯಣಕ್ಕೆ ನಾಟಕ ನಿರ್ದೇಶಿಸಿದ್ದಲ್ಲದೇ ಪ್ರಸಿದ್ಧ ರಂಗ ನಿರ್ದೇಶಕರನ್ನು ಕರೆಸಿ ರಂಗ ಚಟುವಟಕೆಗಳನ್ನು ಮುನ್ನಡೆಸಿದ್ದರು. ಎಲ್ಲರಿಗೂ ತಮ್ಮದೇ ಆದ ರಾಜಕೀಯ ಚಿಂತನೆಗಳು, ಒಲವುಗಳು ಇದ್ದರೂ, ರಂಗಭೂಮಿ ಇವೆಲ್ಲವನ್ನೂ ಮೀರಿದ್ದು ಅಥವಾ ಇವೆಲ್ಲವನ್ನೂ ಒಳಗೊಂಡದ್ದು ಎಂಬ ದೃಢ ನಂಬಿಕೆಯಿಂದ ಪಂಥರಹಿತವಾದ ಚಟುವಟಿಕೆಗಳನ್ನೇ ನಡೆಸಿದ್ದರು.

ಮುಖ್ಯವಾಗಿ, ಈ ಬಾರಿಯ ಬಹುರೂಪಿ ನಾಟಕೋತ್ಸವಕ್ಕೆ ರಂಗಭೂಮಿಯ ಜೊತೆಗೆ ಯಾವತ್ತೂ ಸಂಬಂಧ ಇರಿಸಿಕೊಂಡಿರದ ಚಕ್ರವರ್ತಿ ಸೂಲಿಬೆಲೆ, ಸಿನಿಮಾ ನಟಿ ಮಾಳವಿಕ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಈ ಕುರಿತು ಸಾರ್ವಜನಿಕರು ಎತ್ತಿರುವ ಆಕ್ಷೇಪಗಳಿಗೆ ಕಾರ್ಯಪ್ಪ ಅವರು ಸಮರ್ಪಕ ಸ್ಪ‍ಷ್ಟನೆ ನೀಡಿಲ್ಲ. ಬದಲಿಗೆ, ತಮ್ಮ ನಡೆಯ ಬಗ್ಗೆ ಉದ್ವೇಗಭರಿತರಾಗಿ ಮಾತನಾಡಿದ್ದಾರೆ. ‘ನಾನು ಮಾಡುವುದು ಹಾಗೆಯೇ ಬೇಕಿದ್ದರೆ ಬನ್ನಿ, ಇಲ್ಲದಿದ್ದರೆ ಬರಬೇಡಿ’ ಎಂದೆಲ್ಲ ಹೇಳುವುದು ನಿಜವಾಗಿಯೂ ಸರಿಯಲ್ಲ. ರಂಗಭೂಮಿ ಎಂದರೆ ದೇಶದ ರಾಜಕೀಯವನ್ನು ಸಾರ್ವಜನಿಕವಾಗಿ ಮಾತನಾಡುವ ಸ್ಥಳ. ಸಂಭಾಷಣೆ ಮೂಲಕ ಕಟ್ಟಲ್ಪಟ್ಟ ನಾಟಕವು ಚಿಂತನೆಗಳನ್ನು ವಿಸ್ತರಿಸುವ ಹಾಗೆ ಮಾಡುತ್ತದೆಯೇ ಹೊರತು ಕೋಪಾವೇಶಗಳನ್ನು ಹೆಚ್ಚಿಸುವುದಿಲ್ಲ. ರಂಗಭೂಮಿಯಲ್ಲಿ ಖಳನಾಯಕ ಪಾತ್ರಧಾರಿಗಳು ಮಾತ್ರ ಭಾವಾವೇಶಕ್ಕೆ ಒಳಗಾಗಿ ಅತಿಅಭಿನಯದ ನಟನೆ ಮಾಡುತ್ತಾರೆ. ನಾಟಕದ ಕೊನೆಯಲ್ಲಿ ಸೋಲನ್ನೋ ಸಾವನ್ನೋ ಪಡೆಯುತ್ತಾರೆ. ಇದು ನಿಜ ಜೀವನದಲ್ಲಿ ಉಂಟಾಗಬಾರದು.

ಬಹುರೂಪಿಯ ಹಿಂದಣ ಉತ್ಸವಗಳಲ್ಲಿ ದೇಶದ ಖ್ಯಾತ ರಂಗ ವಿದ್ವಾಂಸರಲ್ಲದೆ ಜನಪ್ರತಿನಿಧಿಗಳು ಎಂಬ ನೆಲೆಯಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಮುಂತಾದವರು ಭಾಗವಹಿಸಿದ ಉದಾಹರಣೆಗಳಿವೆ. ಅವರನ್ನು ಒಂದು ಪಕ್ಷಕ್ಕೆ ಸೀಮಿತವಾಗಿ ನೋಡದೆ ಎಲ್ಲ ಜನರ ಚುನಾಯಿತ ಪ್ರತಿನಿಧಿಗಳು ಎಂದು ಒಪ್ಪಿಕೊಳ್ಳಬೇಕು.

ಭೈರಪ್ಪನವರ ಪರ್ವ ಕಾದಂಬರಿಯನ್ನು ರಂಗಕೃತಿಯಾಗಿಸಿದಾಗ, ಪ್ರಕಾಶ್‌ ಬೆಳವಾಡಿ ಅವರು ಎಡಪಂಥೀಯ ಧೋರಣೆಯಲ್ಲಿಯೇ ಕಟ್ಟಿ ಕೊಟ್ಟಿದ್ದಾರೆ.

ಅವರು ಒಪ್ಪಿಕೊಳ್ಳಲಿ ಅಥವಾ ಬಿಡಲಿ. ಪರ್ವ ಕಾದಂಬರಿ, ಅದರ ರಂಗಪ್ರಯೋಗ ಹಾಗೂ ನಿರ್ದೇಶಕರ ವಿಚಾರಗಳು ಎಡಪಂಥೀಯ ಚಿಂತನೆಯನ್ನೇ ಒಳಗೊಂಡಿದೆ ಎಂಬುದನ್ನು ಕಾರ್ಯಪ್ಪ ಮನಗಾಣಬೇಕು. ಪ್ರಕಾಶ್ ಬೆಳವಾಡಿಯವರು ರಂಗಾಯಣಕ್ಕೆ ನಿರ್ದೇಶಿಸಿದ ಅತ್ಯುತ್ತಮವಾದ ರಂಗ ಪ್ರಯೋಗಗಳಾದ ರವೀಂದ್ರನಾಥ ಟ್ಯಾಗೋರರ ಗೋರಾ ಮತ್ತು ಯಶವಂತ ಚಿತ್ತಾಲರ ಶಿಕಾರಿಯ ನಾಟಕ ರೂಪಗಳನ್ನು ಬಲಪಂಥೀಯ ಎಂದು ಪರಿಗಣಿಸುತ್ತಾರೆಯೇ? ರಂಗಾಯಣದಲ್ಲಿ ಪ್ರದರ್ಶಿತವಾದ ಬಸವಲಿಂಗಯ್ಯನವರು ನಿರ್ದೇಶಿಸಿದ ಕುಸುಮಬಾಲೆ, ಪ್ರಸನ್ನ ನಿರ್ದೇಶನದ ಪುಗಲೇಂದಿ ಪ್ರಹಸನ, ಹ್ಯಾಮ್ಲೆಟ್‌, ಜಂಬೆಯವರ ತುಘಲಕ್‌, ಕಿಂಗ್ ಲಿಯರ್, ಜೆನ್ನಿಯವರ ಸಂಸ್ಕಾರ,ಬಿ. ವಿ. ರಾಜಾರಾಂ ಅವರಶಿಖರಸೂರ್ಯ ನಾಟಕಗಳನ್ನು ಯಾವ ಪಂಥಕ್ಕೆ ಸೇರ್ಪಡೆ ಮಾಡಬೇಕು?ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಗಿಯಾಗಲು ಪ್ರಸಿದ್ಧ ನಿರ್ದೇಶಕರನ್ನು, ಆ ವರ್ಷದ ‘ಥೀಮ್’ಗೆ ಸಂಬಂಧಪಟ್ಟ ನಾಟಕಗಳನ್ನು ಆಹ್ವಾನಿಸುವುದು ಒಂದು ಪದ್ಧತಿ.ಇಲ್ಲೊಂದು ಅಲಿಖಿತ ಒಪ್ಪಂದವಿರುತ್ತದೆ. ನಾಟಕೋತ್ಸವದಲ್ಲಿ ಒಬ್ಬ ನಾಟಕಕಾರರ ಒಂದು ನಾಟಕ, ಓರ್ವ ನಿರ್ದೇಶಕರ ಒಂದು ನಾಟಕ, ಒಂದು ಸಂಸ್ಥೆಯ ಒಂದು ನಾಟಕ ಇತ್ಯಾದಿ. ಇದು ಹೆಚ್ಚಿನವರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಮಾಡಿಕೊಳ್ಳುವ ಒಂದು ಸರಳ ಒಪ್ಪಂದ.

ಆದರೆ, ಈ ಬಾರಿ ಈ ನಿಯಮವನ್ನು ಪಾಲಿಸಲಾಗಿಲ್ಲ. ಒಬ್ಬರಿಗೇ ಒಂದಕ್ಕಿಂತ ಹೆಚ್ಚು ನಾಟಕಗಳನ್ನು ಪ್ರದರ್ಶಿ ಸಲು ಅವಕಾಶ ನೀಡಲಾಗಿದೆ. ರಾಷ್ಟ್ರೀಯ ನಾಟಕೋತ್ಸವದಲ್ಲಿ ಬೇರೆಬೇರೆ ಭಾಷೆಗಳ ನಾಟಕಗಳನ್ನು ಪ್ರದರ್ಶಿಸುವ ಕ್ರಮವಿದೆ. ಆದರೆ, ಈ ಬಾರಿ ಮಹಾರಾಷ್ಟ್ರ ರಾಜ್ಯದವರಿಗೆ ತುಳುವಿನಲ್ಲಿ, ದೆಹಲಿ ತಂಡದವರಿಗೆ ಗುಜರಾತಿ ಭಾಷೆಯಲ್ಲಿ ಮತ್ತು ಕೇರಳದ ತಂಡದವರಿಂದ ಕೊಂಕಣಿಯಲ್ಲಿ ನಾಟಕ ಪ್ರದರ್ಶನ ಮಾಡಲು ಆಹ್ವಾನಿಸಿದ ಸೋಜಿಗವೂ ನಡೆದು ಹೋಗಿದೆ.

2018ರ ಬಹುರೂಪಿ ಉತ್ಸವದ ಸಂದರ್ಭದಲ್ಲಿ ‘ಥೀಮ್’ ಆಗಿ ‘ವಲಸೆ’ಯನ್ನು ಆಯ್ಕೆ ಮಾಡಲಾಗಿತ್ತು. ವಲಸೆಯ ವಿಚಾರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವೂ ನಡೆದಿತ್ತು. ಅದರ ಮುಖ್ಯ ನಿರ್ವಹಣಕಾರರು ಪ್ರಕಾಶ್ ಬೆಳವಾಡಿಯವರೇ ಆಗಿದ್ದರು. ಆದರೆ ಇದನ್ನು ಮರೆತಿರುವ ಕಾರ್ಯಪ್ಪನವರು ಭಾಗೀರಥಿ ಬಾಯಿಯವರನ್ನು ಅವಮಾನಿಸುವ ಉತ್ಸಾಹದಲ್ಲಿ ಅವರು ಮುಸ್ಲಿಮನನ್ನು ಮದುವೆಯಾಗಿರುವುದು, ಆತ ಅಸ್ಸಾಂ ನಾಡಿನವನಾಗಿರುವುದರ ಕುರಿತು ಮಾತನಾಡಿದ್ದಾರೆ. ರೋಹಿಂಗ್ಯಾ ಸಮುದಾಯಕ್ಕೆ, ಅವರ ಅಕ್ರಮಗಳಿಗೆ ಇವರೆಲ್ಲ ಬೆಂಬಲ ನೀಡಿದ್ದಾರೆ ಎಂದೆಲ್ಲ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಕಾರ್ಯಪ್ಪನವರ ಚಿಂತನೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಬಾರಿ ‘ತಾಯಿ’ ಶೀರ್ಷಿಕೆಯಲ್ಲಿ ನಾಟಕೋತ್ಸವ ನಡೆಯುತ್ತದೆ. ಆದರೆ ಎಲ್ಲರೂ ಗೌರವದಿಂದ ಕಾಣಬಯಸುವ ತಾಯಿ ಶೀರ್ಷಿಕೆಗೆ ಪೂರಕವಾದ ಎಷ್ಟು ನಾಟಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರೆ ಸರಿಯಾದ ಉತ್ತರ ಸಿಗಲಾರದು.

ಒಟ್ಟಿನಲ್ಲಿ ರಂಗಭೂಮಿಯ ಬೆಳವಣಿಗೆಯ ದಿಸೆಯಲ್ಲಿ ಕಾರ್ಯಪ್ಪನವರು ಮಾಡುತ್ತಿರುವ ಎಲ್ಲ ವಿವಾದಗಳನ್ನೂ, ಎದುರಿಸುತ್ತಿರುವ ಆರೋಪಗಳನ್ನೂ, ಗಮನಿಸಿ ಸರ್ಕಾರ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು. ಅದಕ್ಕೆ ಮೊದಲು ತಾವಾಗಿಯೇ ರಾಜೀನಾಮೆ ನೀಡಿ ಇನಿತಾದರೂ ರಂಗಭೂಮಿಯ ಗೌರವವನ್ನು ಉಳಿಸಿಕೊಳ್ಳುವುದು ಲೇಸು.

ಲೇಖಕ:ರಂಗ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT