ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಗುಜರಾತ್‌ ಸರ್ಕಾರದ ಕ್ರಮ ಕಾನೂನು ಉಲ್ಲಂಘನೆ ಅಲ್ಲ

Last Updated 19 ಆಗಸ್ಟ್ 2022, 21:53 IST
ಅಕ್ಷರ ಗಾತ್ರ

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳ ಗಾಗಿದ್ದ 11 ಜನ ಅಪರಾಧಿಗಳನ್ನು ಜೀವಾವಧಿ ಶಿಕ್ಷೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ತೀರ್ಮಾನವನ್ನು ವಿರೋಧಿಸಲು ಮೂರು ಪ್ರಮುಖ ಕಾರಣಗಳನ್ನು ಮುಂದಿಡಲಾಗುತ್ತಿದೆ.

ಮೊದಲ ಕಾರಣ: ಕೇಂದ್ರ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭಕ್ಕೆ2022ರ ಜೂನ್ 10ರಂದು ಜಾರಿಗೊಳಿಸಿದ ವಿಶೇಷ ನಿಯಮಾವಳಿಗಳ ಪ್ರಕಾರ ಅತ್ಯಾಚಾರ, ಪೋಕ್ಸೊ ಮುಂತಾದ ಅಪರಾಧಗಳಲ್ಲಿ ಶಿಕ್ಷೆಯಾಗಿರುವ ಕೈದಿಗಳ ಶಿಕ್ಷಾವಧಿ ಮೊಟಕುಗೊಳಿಸುವಂತಿಲ್ಲ.

ಎರಡನೆಯದು: ಗುಜರಾತ್ ಸರ್ಕಾರ ಅಪರಾಧಿಗಳ ಪರ ನಿಂತಿದೆ.

ಮೂರನೆಯದು: ಸ್ವಾತಂತ್ರ್ಯದ ಅಮೃತ ಗಳಿಗೆಯಲ್ಲಿ ಕೈಗೊಂಡ ಈ ತೀರ್ಮಾನ ಭಾರತದ ಗೌರವಾನ್ವಿತ ಸ್ಥಾನಕ್ಕೆ ಚ್ಯುತಿ ತಂದಿದೆ ಎಂಬ ಟೀಕೆ.

ನಮ್ಮ ಸಂವಿಧಾನದ (ಏಳನೇ ಪರಿಚ್ಛೇದದ ಎರಡನೇ ಪಟ್ಟಿ) ಪ್ರಕಾರ ಕಾನೂನು ಸುವ್ಯವಸ್ಥೆ, ಜೈಲು ಮತ್ತು ಕೈದಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತ್ರವೇ ಕಾನೂನನ್ನು ರೂಪಿಸಬಹುದು. 1992ರಲ್ಲೇ ಗುಜರಾತ್ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ಈ ನಿಯಮಾವಳಿಗಳ‌ ಅಡಿಯಲ್ಲಿ ತಮ್ಮ ಶಿಕ್ಷಾವಧಿಯನ್ನು ಮೊಟಕುಗೊಳಿಸಬೇಕೆಂದು ಕೋರಿ ರಾಧೇಶ್ಯಾಮ್ ಮತ್ತಿತರರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ 2022ರ ಮೇ 13 ರಂದು ವಿಚಾರಣೆಗೆ ಪರಿಗಣಿಸಿತು. ಗುಜರಾತ್ ಸರ್ಕಾರದ 1992ರ ನಿಯಮಾವಳಿಗಳಡಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿತು.

ಈ ಮೊದಲು 2019ರಲ್ಲಿ ತಮ್ಮ ಶಿಕ್ಷೆಯನ್ನು ಮೊಟಕುಗೊಳಿಸಬೇಕೆಂದು ಕೋರಿ ಬಿಲ್ಕಿಸ್ ಪ್ರಕರಣ ದಲ್ಲಿ ಶಿಕ್ಷೆಗೊಳಗಾದ ರಾಧೇಶ್ಯಾಮ್ ಮತ್ತಿತರ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳು ಗುಜರಾತ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಗುಜರಾತ್ ಹೈಕೋರ್ಟ್‌ ಅವರ ಅರ್ಜಿಯನ್ನು ತಿರಸ್ಕರಿಸಿ, ಬಿಲ್ಕಿಸ್ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ವಿಶೇಷ ನಿರ್ದೇಶನದಡಿ ಮಹಾರಾಷ್ಟ್ರದಲ್ಲಿ ನಡೆದಿದ್ದರಿಂದ, ಮುಂಬೈ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿತ್ತು. ಗುಜರಾತ್ ಹೈಕೋರ್ಟಿನ ತೀರ್ಮಾನವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರದ 1992ರ ಮಾರ್ಗದರ್ಶಿ ಸೂತ್ರಗಳ ಪ್ರಕಾರವೇ ಕೈದಿಗಳ ಅರ್ಜಿಯನ್ನು ಪರಿಗಣಿಸುವಂತೆ ಹೇಳಿತ್ತು.

ಗುಜರಾತ್ ಸರ್ಕಾರ ಯಾವ ನೀತಿ ನಿಯಮವನ್ನೂ ಮೀರಿಲ್ಲ; ಅಷ್ಟೇ ಅಲ್ಲ ಪ್ರಾರಂಭದಿಂದಲೂ ಬಿಲ್ಕಿಸ್ ಪ್ರಕರಣದ ಕೈದಿಗಳ ಶಿಕ್ಷಾವಧಿಯ ಮೊಟಕುಗೊಳಿಸುವಿಕೆಯನ್ನು ವಿರೋಧಿಸುತ್ತಲೇ ಬಂದಿದೆ.

ಗುಜರಾತ್ ಸರ್ಕಾರದ ನಿಷ್ಠುರ ನೀತಿಗಳಿಂದಾಗಿಯೇ, ಕೈದಿಗಳ ಅರ್ಜಿಗಳ ಪರಿಗಣನೆ ಯಲ್ಲಿ ಮೂರ್ನಾಲ್ಕು ವರ್ಷಗಳ ವಿಳಂಬವಾಯಿತು. ಈಗಲೂ ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಪಾಲಿಸಿದೆಯೇ ಹೊರತು ಬೇರೇನೂ ಮಾಡಿಲ್ಲ. ಒಂದು ವೇಳೆ ತನ್ನ ನಿಯಮಾವಳಿಗಳನ್ನು ನಿರ್ಲಕ್ಷಿಸಿ, ಬೇರೆ ನಿಯಮಗಳ ಮೊರೆ ಹೋಗಿದ್ದರೆ, ಸುಪ್ರೀಂ ಕೋರ್ಟಿನ ತೀರ್ಮಾನವನ್ನು ಅವಗಣನೆ ಮಾಡಿದ ಆರೋಪ ಗುಜರಾತ್ ಸರ್ಕಾರದ ಹೆಗಲೇರುತ್ತಿತ್ತು.

ಕೇಂದ್ರ ಸರ್ಕಾರದ ನಿಯಮಾವಳಿಗಳು ಜಾರಿಗೆ ಬಂದದ್ದು ಜೂನ್ 2020ರಲ್ಲಿ. ಬಿಲ್ಕಿಸ್ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು 2008ರಲ್ಲಿ. ಒಬ್ಬ ಕೈದಿಗೆ ಶಿಕ್ಷೆಯಾದ ಸಂದರ್ಭದಲ್ಲಿ ಯಾವೆಲ್ಲ ನಿಯಮಾವಳಿಗಳು ಜಾರಿಯಲ್ಲಿದ್ದವೋ, ಅದೇ ನಿಯಮಾವಳಿಗಳ ಪ್ರಕಾರವೇ ಅಪರಾಧಿಯ ಶಿಕ್ಷಾವಧಿಯ ಅರ್ಜಿಯನ್ನು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್‌ 2010ರಲ್ಲಿ ಹರಿಯಾಣ ರಾಜ್ಯ ಸರ್ಕಾರ ಮತ್ತು ಜಗದೀಶ್ ಪ್ರಕರಣ ದಲ್ಲಿ ತೀರ್ಪು ನೀಡಿದೆ. ನಿರ್ದಿಷ್ಟವಾಗಿ, ಜಗದೀಶ್ ಪ್ರಕರಣ ವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, 1992ರ ನಿಯಮಾವಳಿಗಳ ಅಡಿ ಕೈದಿಗಳ ಅರ್ಜಿಯನ್ನು ತೀರ್ಮಾನಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶಿ ಸಿತು. ಹೀಗಿರುವಾಗ, ತನ್ನದೇ ನಿಯಮಾವಳಿಗಳನ್ನು ಪಾಲಿಸದೇ ಗುಜರಾತ್ ಸರಕಾರಕ್ಕೆ ಗತ್ಯಂತರವಿರಲಿಲ್ಲ.

ಬಿಲ್ಕಿಸ್ ಪ್ರಕರಣ ಜರುಗಿದ್ದು ಗುಜರಾತಿನಲ್ಲಿ. ಈಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನೂ ಇರಲಿಲ್ಲ. ಹಾಗಾಗಿ ಭಾರತೀಯ ದಂಡ ಸಂಹಿತೆ, 1973ರ ಕಲಂ 432 ಮತ್ತು 433ರಡಿ ಶಿಕ್ಷೆಯ ಅವಧಿಯನ್ನು ಪರಿಷ್ಕರಿಸುವ ಅಧಿಕಾರವಿರುವುದು ರಾಜ್ಯ ಸರ್ಕಾರಕ್ಕೆ ಮಾತ್ರ. ಈ ಕಾರಣಕ್ಕೂ ಕೇಂದ್ರ ಅಥವಾ ಕೇಂದ್ರದ ನಿಯಮಗಳ ಪ್ರಸ್ತುತತೆ ಈ ಪ್ರಕರಣದಲ್ಲಿ ಇರಲಿಲ್ಲ.

ನಿರ್ಭಯಾ ಪ್ರಕರಣಗಳ ನಂತರದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗಗಳು ಅತ್ಯಾಚಾರ ಪ್ರಕರಣಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಿವೆ. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಅಚರಿಸುತ್ತಿದ್ದಾಗ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಶಿಕ್ಷಾವಧಿಯನ್ನು ಮೊಟಕುಗೊಳಿಸಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕುಂದು ತಂದಿದೆಯೆಂದು ವಾದಿಸಲಾಗುತ್ತದೆ.

ಕಾನೂನು, ಅಪರಾಧ ಮತ್ತು ಶಿಕ್ಷೆಗಳ ವಿಚಾರದಲ್ಲಿ ವರ್ಚಸ್ಸನ್ನು ಪರಿಗಣಿಸಿ ನಿರ್ಧರಿಸಲಾಗದು. ಕೈದಿಯೊಬ್ಬನ ಶಿಕ್ಷಾವಧಿಯನ್ನು ಪರಿಷ್ಕರಿಸು ವಾಗ, ಶಿಕ್ಷೆಯಾದಾಗ ಯಾವ ನಿಯಮಗಳಿದ್ದವೋ ಅವುಗಳನ್ನೇ ಪಾಲಿಸಬೇಕಾಗುತ್ತದೆ. ಇದು ಜಾಗತಿಕ ನಿಯಮ.

ತ್ರಿವಳಿ ಕೃಷಿ ಕಾಯ್ದೆ ಮುಂತಾದ ನಿದರ್ಶನಗಳನ್ನು ಇಟ್ಟುಕೊಂಡು, ಕೇಂದ್ರ ಸರ್ಕಾರವು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಮೂಗು ತೂರಿಸಿದೆಯೆಂದು ವಾದಿಸಿದವರೇ ಇಂದು ರಾಜ್ಯ ಸರ್ಕಾರ ತನ್ನ ನಿಯಮಗಳನ್ನು ನಿರ್ಲಕ್ಷಿಸಿ ಕೇಂದ್ರದ ನಿಯಮಗಳನ್ನು ಪಾಲಿಸಬೇಕೆಂದು ವಾದಿಸುತ್ತಿದ್ದಾರೆ.

ಯಾವಾಗ ಯಾವುದು ಲಾಭದಾಯಕವೊ ಅಂಥದ್ದನ್ನು ರಾಜಕೀಯದಲ್ಲಿ ಬಳಸಬಹುದೇ ಹೊರತು ಕಾನೂನು ವಿಚಾರದಲ್ಲಿ ಅಲ್ಲ. 1992ರಲ್ಲಿ ಶಿಕ್ಷಾವಧಿ ನಿಯಮಗಳನ್ನು ರೂಪಿಸಿದ್ದು ಗುಜರಾತಿನ ಅಂದಿನ ಕಾಂಗ್ರೆಸ್ ಸರ್ಕಾರ, ಕೇಂದ್ರದಲ್ಲಿ ಸಹ ಅದೇ ಪಕ್ಷದ ಸರ್ಕಾರ ಇತ್ತು. ನಂತರದಲ್ಲಿ ಅನೇಕ ರಾಜಕೀಯ ಪಲ್ಲಟ ಗಳಾದರೂ ರಾಜ್ಯ ಸರ್ಕಾರ ತನ್ನ ನಿಯಮಗಳನ್ನು ಬದಲಿಸಿಲ್ಲ.

ಸಾಮಾನ್ಯವಾಗಿ ಪ್ರತಿ ಬಾರಿ ಸರ್ಕಾರ ಬದಲಾವಣೆ ಯಾದಾಗ ರಾಜ್ಯದ ಅಡ್ವೊಕೇಟ್ ಜನರಲ್ ಬದಲಾಗುತ್ತಾರೆ. ಅನೇಕರಿಗೆ ಆಶ್ಚರ್ಯ ಆಗಬಹುದು, ಗುಜರಾತ್ ರಾಜ್ಯ ಉದಯವಾಗಿದ್ದು 1960ರಲ್ಲಿ. ಅಂದಿನಿಂದ ಇವತ್ತಿನವರೆಗೂ 17 ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದಾರೆ, ಆದರೆ, ಮೂರೇ ಬಾರಿ ತಮ್ಮ ಅಡ್ವೊಕೇಟ್ ಜನರಲ್‌ಗಳನ್ನು ಬದಲಿಸಿದ್ದಾರೆ! ಕಾನೂನು ಮತ್ತು ನಿಯಮಗಳು ಸಮರ್ಪಕವಾಗಿದ್ದರೂ, ಬೇಕೆಂದೇ ಬದಲಿಸುವ ಸಂಪ್ರದಾಯವನ್ನು ಗುಜರಾತಿನ ಯಾವುದೇ ಸರ್ಕಾರವೂ ಪಾಲಿಸಿಕೊಂಡು ಬಂದಿಲ್ಲ. ಕೈದಿಗಳ ವಿಚಾರದಲ್ಲೂ ಇದನ್ನೇ ಪಾಲಿಸಲಾಗಿದೆ.

ಗುಜರಾತಿನ ವಿರೋಧ ಪಕ್ಷಕ್ಕೂ ಇದು ತಿಳಿದಿದೆ. ಹೀಗಾಗಿ, ಅಲ್ಲಿ ಚುನಾವಣಾ ವರ್ಷವಾಗಿದ್ದರೂ ಈ ಪ್ರಕರಣ ಅನಗತ್ಯ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿಲ್ಲ.

ಪ್ರಕರಣಗಳ ತೀರ್ಪುಗಳು ಹೇಗೇ ಬರಲಿ, ರಾಜಕೀಯ ಪಕ್ಷಗಳು ತಮ್ಮ ಲಾಭವನ್ನು ಲೆಕ್ಕಿಸಿಕೊಂಡೇ ವ್ಯಾಖ್ಯಾನಿಸುತ್ತವೆ. ಸಾಮಾನ್ಯ ಜನರಿಗೆ, ಪ್ರಕರಣಗಳ ಸಂಪೂರ್ಣ ಹಿನ್ನೆಲೆಯಾಗಲಿ, ಭಾರತದ ದಂಡ ಸಂಹಿತೆ ಅಥವಾ ಅಪರಾಧ ಪ್ರಕ್ರಿಯಾ ಸಂಹಿತೆಯ ಸೂಕ್ಷ್ಮಗಳಾಗಲಿ, ರಾಜಕೀಯ ಪಕ್ಷಗಳ ಹುನ್ನಾರಗಳಾಗಲಿ ಅರ್ಥವಾಗುವುದಿಲ್ಲ. ಹೀಗಾಗಿ, ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಪ್ರಾಜ್ಞರಾದವರು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಬೇಕಿದೆ.

[object Object]

ಲೇಖಕ: ವಕೀಲರು, ಕರ್ನಾಟಕ ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT