ಶನಿವಾರ, ಜುಲೈ 2, 2022
25 °C

ಪಠ್ಯಪುಸ್ತಕಗಳ ಚರ್ಚೆ: ಸ್ವಾತಂತ್ರ್ಯ ಹೋರಾಟಗಾರ ಹೆಡಗೇವಾರ್ ಪಾಠವಿದ್ದರೆ ತಪ್ಪೇನು?

ಬಿ.ಸಿ. ನಾಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮೊದಲ ಬಾರಿ ರಾಜ್ಯದ ಪಠ್ಯ ಪುಸ್ತಕದಲ್ಲಿ ಡಾ.ಹೆಡಗೇವಾರ್ ಅವರ ಉತ್ತಮವಾದ ವಿಚಾರಧಾರೆಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತು ಸೋ ಕಾಲ್ಡ್ ಬುದ್ದಿಜೀವಿಗಳ ಕಣ್ಣುಗಳು ಕೆಂಪಗಾಗಿವೆ. ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದಿದ್ದೇ ಇತಿಹಾಸ; ಅದೇ ಸರಿ ಎನ್ನುವಂತಾಗಿದೆ.

ಪಠ್ಯಪುಸ್ತಕಗಳು ನಮ್ಮ ದೇಶ, ನೆಲ, ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅಭಿಮಾನ ಮೂಡಿಸುವಂತಿರಬೇಕು. ನಮ್ಮ ದೇಶದಲ್ಲಿ ಆಗಿ ಹೋದ ಪುಣ್ಯಪುರುಷರು, ದಾರ್ಶನಿಕರು, ರಾಷ್ಟ್ರಭಕ್ತರು, ಸ್ವಾತಂತ್ರ ಯೋಧರ ಕಥೆ/ ವಿಚಾರಗಳನ್ನು ಪಠ್ಯಪುಸ್ತಕಗಳು ಒಳಗೊಂಡಿರಬೇಕು. ಇತಿಹಾಸದಲ್ಲಿ ಗತಿಸಿದ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಿರಬೇಕು.

ಈ ಹಿಂದೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಆಶಯದಂತೆ ಪಠ್ಯಪುಸ್ತಕಗಳನ್ನು ಮುಖ್ಯ ಸಂಯೋಜಕರಾದ ಪ್ರೊ. ಜಿ.ಎಸ್.‌ ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಲಾಗಿತ್ತು. ಮೊದಲ ಬಾರಿ ರಾಜ್ಯದ ಪಠ್ಯ ಪುಸ್ತಕದಲ್ಲಿ ಡಾ. ಹೆಡಗೇವಾರ್ ಅವರ ಉತ್ತಮವಾದ ವಿಚಾರಧಾರೆಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತು ಸೋ ಕಾಲ್ಡ್ ಬುದ್ದಿಜೀವಿಗಳ ಕಣ್ಣುಗಳು ಕೆಂಪಗಾಗಿವೆ. ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದಿದ್ದೇ ಇತಿಹಾಸ; ಅದೇ ಸರಿ ಎನ್ನುವಂತಾಗಿದೆ. ಸಾಮಾನ್ಯವಾಗಿ ಹೊಸ ಪಠ್ಯಪುಸ್ತಕಗಳು ರಚನೆಯಾಗಿ, ಜಾರಿಗೆ ಬಂದ ನಂತರ ಸುಮಾರು 8 ರಿಂದ 10 ವರ್ಷಗಳ ಕಾಲ ಅವು ಚಾಲ್ತಿಯಲ್ಲಿರುತ್ತವೆ. ಮುಡಂಬಡಿತ್ತಾಯರ ಸಮಿತಿಯು ಅನೇಕ ಸಭೆ, ಕಾರ್ಯಾಗಾರಗಳಲ್ಲಿ ಚರ್ಚೆಗಳನ್ನು ನಡೆಸಿ, ಉತ್ತಮ ಮತ್ತು ಸಮತೋಲಿತ ಪಠ್ಯಪುಸ್ತಕಗಳನ್ನು ರಚಿಸಿತ್ತು. ಇಂತಹ ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳು ಅನಿವಾರ್ಯವಾದಲ್ಲಿ ಮಾತ್ರ ಆಯಾ ಸಾಲಿನ ಪಠ್ಯಪುಸ್ತಕಗಳಲ್ಲಿನ ಮಾಹಿತಿ ಪರಿಷ್ಕರಿಸಲಾಗುತ್ತದೆ. ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರವು, ಸಮತೋಲಿತವಾಗಿ ಮತ್ತು ಉತ್ತಮವಾಗಿ ರಚಿಸಲ್ಪಟ್ಟ ಪಠ್ಯಪುಸ್ತಕಗಳಲ್ಲಿ ‘ಕೇಸರಿಕರಣ’ವಾಗಿದೆ ಎಂಬ ಮಿಥ್ಯಾರೋಪ ಮಾಡಿದ್ದಲ್ಲದೇ, ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ 27 ಸಮಿತಿಗಳನ್ನು ರಚಿಸಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿತ್ತು.

ಹೀಗೆ ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳು 2017-18ನೇ ಸಾಲಿನಿಂದ ಜಾರಿಗೆ ಬಂದವು. ಪಠ್ಯಪುಸ್ತಕಗಳಲ್ಲಿ ಇದ್ದ ಭಾರತೀಯ ಮತ್ತು ರಾಷ್ಟ್ರಪ್ರೇಮದ ಅನೇಕ ಅಂಶಗಳನ್ನು ಪರಿಷ್ಕರಣೆಯ ನೆಪದಲ್ಲಿ ತೆಗೆದುಹಾಕಲಾಗಿತ್ತು. ಪಠ್ಯಪುಸ್ತಕಗಳಲ್ಲಿ ಭಾರತ, ಹಿಂದೂ ಧರ್ಮದ ಬಗ್ಗೆ ಇದ್ದ ವಿಷಯಗಳನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಮಹತ್ವದ್ದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಅನೇಕ ಪದಗಳನ್ನು ಬದಲಾಯಿಸಲಾಯಿತು. ‘ಹಿಂದೂ ಮಹಾಸಾಗರ’ ಎಂದು ಇದ್ದುದನ್ನು ‘ಇಂಡಿಯನ್‌ ಓಷಿಯನ್‌’ ಎಂಬುದಾಗಿ, ‘ಮಾತೃಭೂಮಿ’ ಪದವನ್ನು ‘ಭಾರತೀಯತೆ’ ಎಂದು ಮಾರ್ಪಾಡು ಮಾಡಿದ್ದರು. ಈ ತಪ್ಪುಗಳನ್ನು ಸರಿಪಡಿಸಲು ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 

ಮೂಲವನ್ನು ಅರಿತುಕೊಳ್ಳದೇ ಹೊಸತನ್ನು ಕಟ್ಟಲಾಗದು. ಇತಿಹಾಸದ ಅರ್ಧ ಮಾತ್ರ ತೋರಿಸಿ, ಇನ್ನರ್ಧವನ್ನು ಮುಚ್ಚಿಡಬಾರದು. ಸಮಾಜ, ದೇಶ, ಭವಿಷ್ಯಕ್ಕೆ ಒಳಿತಾಗಬೇಕೆಂದರೆ ಒಬ್ಬರು, ಇನ್ನೊಬ್ಬರನ್ನು ದ್ವೇಷಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಬಾರದು. ಚಿಕ್ಕ ವಯಸ್ಸಿನ ಮಕ್ಕಳಿಗೆ ಜ್ಞಾನಾಧಾರಿತ ಶಿಕ್ಷಣವನ್ನು ನೀಡಬೇಕು. ವಯಸ್ಕರಾದ ಬಳಿಕ ಅವರಿಗೆ ಸರಿ ಎನಿಸುವುದನ್ನು ಓದಲು ಅವಕಾಶ ಇದ್ದೇ ಇರುತ್ತದೆ. ಆಗ ಅವರು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಒಂದು ದಶಕದ ಹಿಂದಿನವರೆಗೂ ಜ್ಞಾನ ಸಂಪಾದನೆಗೆ ಹೆಚ್ಚಾಗಿ ಪಠ್ಯ ಪುಸ್ತಕಗಳೇ ಆಧಾರವಾಗಿದ್ದವು. ಆದರೆ, ಇಂದು ಜ್ಞಾನ ಸಂಪಾದನೆ ಮತ್ತು ವಿಷಯ ತಿಳಿಯಲು ನೂರಾರು ಮಾರ್ಗಗಳಿವೆ. ಹೀಗಾಗಿ, ಸತ್ಯ ಮುಚ್ಚಿಡಲಾಗದು.

ಭಾರತದ ಸಂವಿಧಾನವನ್ನು ಭಾರತದ ಪ್ರಜೆಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಪರಿಪೂರ್ಣವಾಗಿ ರಚಿಸಲಾಗಿದೆ. ಆದರೆ, ದೀರ್ಘ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಹಲವು ದಶಕಗಳಿಂದ ನೈಜ ಇತಿಹಾಸವನ್ನು ತಿರುಚಿ ಸಮಾಜ ಒಡೆಯುವ ಅಂಶಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಿದೆ.

ದೇಶದ ಭವಿಷ್ಯ ಭದ್ರವಾಗಿರಬೇಕೆಂದರೆ ಮಕ್ಕಳಿಗೆ ದೇಶಪ್ರೇಮ, ರಾಷ್ಟ್ರೀಯತೆಯನ್ನು ಬೆಳೆಸಬೇಕು. ಮಹಾತ್ಮ ಗಾಂಧೀಜಿ ಕಂಡ ಕನಸಿನಂತೆ ಸ್ವಾಭಿಮಾನಿ, ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಮತ್ತು ಅದನ್ನು ಮಕ್ಕಳಿಗೆ ಪಠ್ಯದ ಮೂಲಕ ತಿಳಿಸುವ ಪ್ರಯತ್ನಗಳು ಆಗಬೇಕಿದೆ. ಆ ಕೆಲಸವನ್ನೇ ಸರ್ಕಾರ ಮಾಡಿದೆ.

ರೋಹಿತ್ ಸಮಿತಿಯ ಸಲಹೆ ಆಧರಿಸಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಏಳಿಗೆಯೇ ಪರಮೋಚ್ಚವೆಂದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣದ ಪಾಠವನ್ನು 10ನೇ ತರಗತಿಯ ಕನ್ನಡ ಭಾಷಾ ಪುಸ್ತಕದಲ್ಲಿ ಸೇರಿಸಲಾಗಿದೆ. ಹೆಡಗೇವಾರ್ ಅವರು ದೇಶದ ಅಭಿವೃದ್ಧಿಯ ಕನಸು ಕಂಡು ಅದನ್ನು ನನಸು ಮಾಡಲು ತನ್ನ ಜೀವನವನ್ನೇ ಮುಡುಪಾಗಿಟ್ಟವರು. ತಮ್ಮ ಹೋರಾಟ, ಅಭಿವೃದ್ಧಿ ಪರ ಚಿಂತನೆಗಳಿಂದ ಭಾರತದ ಕೋಟ್ಯಂತರ ಯುವ ಜನತೆಯಲ್ಲಿ ಭಾರತೀಯತೆಯ ಜಾಗೃತಿ ಮೂಡಿಸಿದರು. ತಮ್ಮ ಭಾಷಣಗಳಲ್ಲಿ ಭಾರತೀಯ ವಿಚಾರಧಾರೆಗಳನ್ನು ಹೇಳುತ್ತಿದ್ದರು. ಕನ್ನಡ ಭಾಷಾ ಪುಸ್ತಕದಲ್ಲಿ ಅಳವಡಿಸಲಾಗಿರುವ ಅವರ ಭಾಷಣದ ಭಾಗ ಕೂಡ ಭಾರತ ದೇಶ, ನಾವು ಪಾಲಿಸಬೇಕಿರುವ ಒಳ್ಳೆಯ ಸಿದ್ದಾಂತದ ಕುರಿತಾಗಿದೆ. ಪಾಠ ಓದುವ ಪ್ರತಿಯೊಬ್ಬರಿಗೂ ತನ್ನ ಆದ್ಯತೆ ಏನಾಗಬೇಕು ಎಂಬ ಆಲೋಚನೆ ಮೂಡುತ್ತದೆ.

ವೈದ್ಯಕೀಯ ಪದವಿ ಪಡೆದ ಹೆಡಗೇವಾರ್ ಅವರು ವೈದ್ಯಕೀಯ ವೃತ್ತಿಯನ್ನು ಮಾಡಿಕೊಂಡು ಆರಾಮದಾಯಕ ಜೀವನ ಸಾಗಿಸಬಹುದಿತ್ತು. ಆದರೆ, ಅವರಿಗೆ ದೇಶದ ಬಗ್ಗೆ ಚಿಂತೆ ಇತ್ತು. ಹೀಗಾಗಿ, ಬದಲಾವಣೆ ತರಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ತಮ್ಮ ಸಮಾಜ ಸೇವೆ ಆರಂಭಿಸಿದರು. ಕೆಲ ಕಾಲದಲ್ಲೇ ಪಕ್ಷದಿಂದ ಹೊರಬಂದು ಜಗತ್ತಿನ ಅತಿ ದೊಡ್ಡ ದೇಶಪ್ರೇಮಿಗಳ ಸಂಘಟನೆಯಾದ ಆರ್‌ಎಸ್‌ಎಸ್ ಸ್ಥಾಪಿಸಿದರು. ಇಂದು ಕೋಟ್ಯಂತರ ಕಾರ್ಯಕರ್ತರು ದೇಶದ ಅಭಿವೃದ್ಧಿ ಪರ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಭಾರತವನ್ನು ಸ್ವಾವಲಂಬಿ, ಸ್ವಾಭಿಮಾನಿ, ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಯಶಸ್ಸೂ ಸಿಗುತ್ತಿದೆ.

ಮೊದಲ ಬಾರಿ ರಾಜ್ಯದ ಪಠ್ಯ ಪುಸ್ತಕದಲ್ಲಿ ಡಾ. ಹೆಡಗೇವಾರ್ ಅವರ ಉತ್ತಮವಾದ ವಿಚಾರಧಾರೆಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತು ಸೋ ಕಾಲ್ಡ್ ಬುದ್ದಿಜೀವಿಗಳ ಕಣ್ಣುಗಳು ಕೆಂಪಗಾಗಿವೆ. ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದಿದ್ದೇ ಇತಿಹಾಸ; ಅದೇ ಸರಿ ಎನ್ನುವಂತಾಗಿದೆ. ಆರಂಭದಲ್ಲಿದ್ದ ಪುಸ್ತಕಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಏಕೆಂದರೆ, ಭಾರತದ ಭವಿಷ್ಯಕ್ಕಿಂತ ಕಾಂಗ್ರೆಸ್ ನಾಯಕರಿಗೆ ಸ್ವಂತ ಏಳಿಗೆ ಬೇಕಾಗಿತ್ತು. ಹೀಗಾಗಿ, ಅವರೆಂದಿಗೂ ಶಿಕ್ಷಣದಲ್ಲಿ ಮಕ್ಕಳಿಗೆ ನಾವೇನು ನೀಡುತ್ತಿದ್ದೇವೆ. ಅದರಿಂದ ಸಮಾಜಕ್ಕೆ ಮತ್ತು ಭಾರತಕ್ಕೆ ಆಗುವ ಅನುಕೂಲ ಏನು ಎಂಬುದನ್ನು ಅರಿಯುವ ಪ್ರಯತ್ನವನ್ನೇ ಮಾಡಲಿಲ್ಲ.

ಮಕ್ಕಳ ವಯೋಮಾನಕ್ಕೆ ತಕ್ಕಂತೆ ಪಠ್ಯ ವಿಷಯಗಳು ಇರಬೇಕು. ಆಯಾ ವಯಸ್ಸಿನಲ್ಲಿ ಇರಬಹುದಾದ ವೈಜ್ಞಾನಿಕ ಬುದ್ಧಿಮತ್ತೆ, ಮಕ್ಕಳ ವಯೋಮಾನಕ್ಕೆ ತಕ್ಕಂತೆ, ವೈಜ್ಞಾನಿಕವಾಗಿ ಪರಿಶೀಲಿಸಿದ ವಿಷಯ, ಅಂಶಗಳನ್ನು ಮಕ್ಕಳಿಗೆ ಕಲಿಸಬೇಕು. ಅನಗತ್ಯ ವಿಚಾರಗಳನ್ನು ತಲೆಯಲ್ಲಿ ತುಂಬುವ ಪ್ರಯತ್ನ ಮಾಡಬಾರದು. ಆರೋಗ್ಯಕರ ಚಿಂತನೆಗಳೊಂದಿಗೆ ಸಮಾಜದ ವಿವಿಧ ವರ್ಗ, ಸಮುದಾಯಗಳ ಜನರ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಮೂಡಿಸಬೇಕು. ಅನಗತ್ಯ ಪುನರಾವರ್ತಿತ ಭಾಗಗಳನ್ನು ಕೈಬಿಟ್ಟು ವಿದ್ಯಾರ್ಥಿಗಳಿಗೆ ಕಲಿಕಾ ಹೊರೆಯನ್ನು ತಗ್ಗಿಸಿ ಪರಿಪೂರ್ಣ ಶಿಕ್ಷಣ ನೀಡುವ ಅಗತ್ಯತೆ ಮನಗಂಡು ಸಮಾಜ ವಿಜ್ಞಾನ ಮತ್ತು ಕನ್ನಡ ಪುಸ್ತಕಗಳನ್ನು ಪರಿಷ್ಕರಿಸಲಾಗಿದೆ.

ಪರಿಷ್ಕರಣೆಗೊಂಡಿರುವ ಪಠ್ಯಾಂಶಗಳನ್ನು ಆಯಾ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಸರಿಹೊಂದುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ನುರಿತ ಶಿಕ್ಷಕರ ಮೂಲಕ ಪರಿಶೀಲಿಸಲಾಗಿದೆ. ಇಲಾಖೆ ನೀಡಿದ ಸಲಹೆಗಳನ್ನು ಪರಿಶೀಲಿಸಿ ಪರಿಷ್ಕೃತ ಪಠ್ಯ ಪುಸ್ತಕ ಅಂತಿಮಗೊಳಿಸಲಾಗಿದೆ. 

ಪಠ್ಯಪುಸ್ತಕದಿಂದ ಭಗತ್ ಸಿಂಗ್, ಶ್ರೀ ನಾರಾಯಣ ಗುರುಗಳು, ಬಸವಣ್ಣನವರ ಪಾಠವನ್ನು ತೆಗೆದಿಲ್ಲ. ರಾಜಕೀಯ ಕಾರಣಕ್ಕೆ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಬಾರದು.

ಲೇಖಕ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು