ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತ ತನ್ನ ಬದ್ಧತೆಯನ್ನು ಢಾಳಾಗಿ ಪ್ರದರ್ಶಿಸಿರುವ ರಾಜ್ಯ ಸರ್ಕಾರವು ತಂಬಾಕು ಬಳಕೆಯ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲು ಅನುವಾಗಿಸುವ ‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ–2024’ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿದ್ದ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 23ರಂದು ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಯವರಿಂದ ಒಪ್ಪಿಗೆ ಸಿಕ್ಕ ಬೆನ್ನಹಿಂದೆಯೇ ಅಧಿಸೂಚನೆ ಹೊರಬಿದ್ದಿದೆ. ಕಾಯ್ದೆಯಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳನ್ನು ಇದರಿಂದ ತಗ್ಗಿಸಲು ಸಾಧ್ಯವಾಗಲಿದೆ ಎಂದು ಆಶಿಸಲಾಗಿದೆ.

21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ– ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ಈ ಕಾಯ್ದೆಯು ನಿಷೇಧಿಸುತ್ತದೆ. ಅಪ್ರಾಪ್ತ ವಯಸ್ಸಿನವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ದಂಡದ ಪ್ರಮಾಣವನ್ನು ₹200ರಿಂದ ₹1,000ಕ್ಕೆ ಹೆಚ್ಚಿಸಲಾಗಿದೆ. ಹದಿಹರೆಯದವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಹಾವಳಿಯನ್ನು ತಗ್ಗಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆ. ಉಪಾಹಾರ ಗೃಹ, ಪಬ್, ಬಾರ್ ಅಥವಾ ರೆಸ್ಟೊರೆಂಟ್ಗಳಲ್ಲಿ ಹುಕ್ಕಾ ಸೇವನೆಗೆ ಅವಕಾಶ ನೀಡುವುದನ್ನೂ ಈ ಕಾಯ್ದೆ ನಿಷೇಧಿಸುತ್ತದೆ. ಈ ನಿಯಮ ಉಲ್ಲಂಘಿಸಿದವರಿಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮಾತ್ರವಲ್ಲ, ತಂಬಾಕು–ಗುಟ್ಕಾ ಉಗುಳುವುದನ್ನು ಸಹ ನಿಷೇಧಿಸಲಾಗಿದೆ. ದೊಡ್ಡ ಹೋಟೆಲ್ಗಳು, ರೆಸ್ಟೊರೆಂಟ್ಗಳು, ವಿಮಾನ ನಿಲ್ದಾಣಗಳ ‘ಧೂಮ ವಲಯ’ಗಳಲ್ಲಿ ಮಾತ್ರ ತಂಬಾಕು ಉತ್ಪನ್ನಗಳ ಬಳಕೆಗೆ ಅವಕಾಶ ನೀಡಲಾಗಿದೆ. ಸಂದೇಶ ತುಂಬಾ ಸ್ಪಷ್ಟ. ‘ತಂಬಾಕಿನ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಬೇಕು ಮತ್ತು ಯಾರೋ ಮಾಡುವ ಧೂಮಪಾನದಿಂದ ಅಮಾಯಕರು ತೊಂದರೆ ಅನುಭವಿಸುವಂತೆ ಆಗಬಾರದು’ ಎನ್ನುವುದೇ ಆ ಸಂದೇಶ.

ಸಿಗರೇಟಿಗಿಂತ ಹುಕ್ಕಾ ಸೇವನೆ ಸುರಕ್ಷಿತ ಎನ್ನುವ ತಪ್ಪು ಕಲ್ಪನೆ ಬೇರೂರಿರುವಾಗ ಹುಕ್ಕಾ ಬಾರ್ಗಳ ಮೇಲೆ ನಿಷೇಧ ಹೇರಿರುವುದು ಮಹತ್ವದ ಹೆಜ್ಜೆ. ವಾಸ್ತವವಾಗಿ ಸಿಗರೇಟು ಸೇವನೆ ಮಾಡುವವರಿಗಿಂತ ಹುಕ್ಕಾ ಸೇವನೆ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳ ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಅಂಥವರು ನಿಕೋಟಿನ್ನ ವ್ಯಸನಕ್ಕೆ ಒಳಗಾಗುವ ಅಪಾಯ ಹೆಚ್ಚಿದೆ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗೂ ಅವರು ತುತ್ತಾಗುತ್ತಾರೆ ಎಂದು ವೈದ್ಯಲೋಕ ಎಚ್ಚರಿಸುತ್ತಲೇ ಇದೆ. ಹುಕ್ಕಾವನ್ನು ಸಾಮೂಹಿಕವಾಗಿ ಸೇವನೆ ಮಾಡುವುದರಿಂದ ಕಾಯಿಲೆಯ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಹೀಗಾಗಿ, ಆರೋಗ್ಯದ ಅವಘಡಗಳಿಗೆ ಕಾರಣವಾಗುವ ಹುಕ್ಕಾ ಬಾರ್ಗಳ ಮೇಲೆ ನಿಷೇಧ ವಿಧಿಸುವ ರಾಜ್ಯ ಸರ್ಕಾರದ ನಿರ್ಧಾರ ಸಾರ್ವಜನಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂಥದ್ದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಾಯಿಲೆ ಬರದಂತೆ ಮಾಡುವ ದಿಸೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸ್ತುತ್ಯರ್ಹ. ತಂಬಾಕು ಬಳಕೆ ನಿಯಂತ್ರಣ ಮಾತ್ರವಲ್ಲ, ಆಹಾರದಲ್ಲಿ ಕೃತಕ ಬಣ್ಣಗಳ ಬಳಕೆಗೆ ನಿಷೇಧ, ಕಳಪೆ ಗುಣಮಟ್ಟದ ನೀರು ಹಾಗೂ ಪನೀರ್ ಮಾರಾಟದ ಮೇಲೆ ನಿರ್ಬಂಧದಂತಹ ಕ್ರಮಗಳಿಗೂ ಅವರು ಕಾರಣರಾಗಿದ್ದಾರೆ. ಕಾಯ್ದೆ ಎಷ್ಟೇ ಬಿಗುವಾಗಿದ್ದರೂ ಅದರ ಯಶಸ್ಸು, ಆ ಕಾಯ್ದೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದರ ಮೇಲೆ ಅವಲಂಬನೆಯಾಗಿದೆ. ಪ್ರತ್ಯೇಕ ‘ಧೂಮ ವಲಯ’ದ ವ್ಯವಸ್ಥೆ ಮಾಡಬೇಕೆಂಬ ನಿಯಮವನ್ನು ಬಹುಪಾಲು ಹೋಟೆಲ್ಗಳಲ್ಲಿ ಅನುಷ್ಠಾನಕ್ಕೆ ತರಲಾಗಿಲ್ಲ. ಎಲ್ಲೆಂದರಲ್ಲಿ ಸಿಗರೇಟುಗಳ ಮಾರಾಟವೂ ಎಗ್ಗಿಲ್ಲದೆ ನಡೆದಿದೆ. ಇದು, ಕಾಯ್ದೆಯೇ ಇಲ್ಲದಿರುವ ಸಮಸ್ಯೆ ಅಲ್ಲ, ಕಾಯ್ದೆ ಅನುಷ್ಠಾನದ ಹಂತದಲ್ಲಿ ಆಗಿರುವ ಲೋಪಗಳ ಸಮಸ್ಯೆ. ಹರಿತಗೊಂಡ ಕಾಯ್ದೆಯು ಸಮರ್ಪಕವಾಗಿ ಅನುಷ್ಠಾನಗೊಂಡಿದೆ ಎಂಬುದನ್ನು ಸರ್ಕಾರವು ಪ್ರತಿ ಹಂತದಲ್ಲೂ ಖಾತರಿಪಡಿಸಿಕೊಳ್ಳಬೇಕು. ತಪ್ಪು ಮಾಡಿದವರನ್ನು ದಂಡನೆಗೆ ಗುರಿ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕು. ಸಮುದಾಯದ ಹಂತದಲ್ಲಿ, ಶಾಲಾ– ಕಾಲೇಜುಗಳಲ್ಲಿ ಜಾಗೃತಿ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಬೇಕು. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.