ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದೆಹಲಿಯಲ್ಲಿ ಎಎಪಿ ಗೆಲುವು ಮತದಾರನ ಪಕ್ವತೆಯ ಪ್ರತಿಬಿಂಬ

Last Updated 12 ಫೆಬ್ರುವರಿ 2020, 3:57 IST
ಅಕ್ಷರ ಗಾತ್ರ

ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ) ಭಾರಿ ಬಹುಮತದಿಂದ ಪುನರಾಯ್ಕೆ ಆಗಿದೆ. ಕೇಜ್ರಿವಾಲ್‌ ಅವರು ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿ ಗದ್ದುಗೆಗೆ ಏರಲು ವೇದಿಕೆ ಸಜ್ಜಾಗಿದೆ.

ಇಲ್ಲಿನ 70 ಸ್ಥಾನಗಳ ಪೈಕಿ 67ರಲ್ಲಿ ಎಎಪಿ ಕಳೆದ ಚುನಾವಣೆಯಲ್ಲಿ ಜಯ ಗಳಿಸಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಎಲ್ಲ ಏಳು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್‌ ಪಕ್ಷವು ತನ್ನ ಮತ ಪ‍್ರಮಾಣವನ್ನು ಹೆಚ್ಚಿಸಿಕೊಂಡು ಎರಡನೇ ಸ್ಥಾನಕ್ಕೆ ಬಂದಿತ್ತು. ಹಾಗಾಗಿಯೇ, ವಿಧಾನಸಭೆ ಚುನಾವಣೆಯ ಬಗ್ಗೆ ಕುತೂಹಲ ಕೆರಳಿತ್ತು. ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಹೇಳಿಕೊಟ್ಟ ಪಾಠವನ್ನು ದೆಹಲಿಯ ಫಲಿತಾಂಶ ಪುನರುಚ್ಚರಿಸಿದೆ. ಕೆಲವು ಹೊಸ ಪಾಠಗಳನ್ನೂ ಕಲಿಸಿಕೊಟ್ಟಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾನದ ಪ್ರವೃತ್ತಿ ಭಿನ್ನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾತಂತ್ರದ ರಾಜಕಾರಣವು ಏಕಮುಖವಾದ ಸಂಕುಚಿತ ಸಂಕಥನಕ್ಕೆ ಯಾವಾಗಲೂ ಬಲಿ ಬೀಳುವುದಿಲ್ಲ ಎಂಬುದನ್ನೂ ಈ ಫಲಿತಾಂಶವು ಸಾರಿದೆ.

ಈ ಬಾರಿಯ ಚುನಾವಣೆಯು ಎಎಪಿ ಮತ್ತು ಬಿಜೆಪಿ ನಡುವಣ ನೇರ ಸ್ಪರ್ಧೆ ಎಂಬಂತೆ ಆಗಿತ್ತು. ಎರಡು ದಶಕಕ್ಕೂ ಹೆಚ್ಚು ಅವಧಿಯಿಂದ ದೆಹಲಿಯ ಅಧಿಕಾರದಿಂದ ದೂರ ಇರುವ ಬಿಜೆಪಿಗೆ ಗೆಲ್ಲಲೇಬೇಕಾದ ಹಟವಿತ್ತು. ಅದಲ್ಲದೆ, ಬಿಜೆಪಿ ವರಿಷ್ಠರಾದ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಹಾಗಾಗಿಯೇ, ಏನು ಮಾಡಬಹುದು, ಏನು ಮಾಡಬಾರದು ಎಂಬ ವಿವೇಚನೆಯನ್ನು ಬದಿಗಿಟ್ಟು ಚುನಾವಣೆ ಗೆಲ್ಲುವುದೇ ಏಕೈಕ ಗುರಿ ಎಂಬ ಹುಮ್ಮಸ್ಸಿನಲ್ಲಿ ಬಿಜೆಪಿಯು ಪ್ರಚಾರ ಕಣಕ್ಕೆ ಇಳಿಯಿತು ಎಂಬ ಆರೋಪದಲ್ಲಿ ಸತ್ಯ ಇಲ್ಲದೇ ಇಲ್ಲ.

ಕೇಜ್ರಿವಾಲ್‌ ‘ಭಯೋತ್ಪಾದಕ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದರು. ‘ನಾನು ಭಯೋತ್ಪಾದಕನೇ ಅಥವಾ ದೆಹಲಿಯ ಮಗನೇ ಎಂಬುದನ್ನು ಮತದಾರರು ತೀರ್ಮಾನಿಸಲಿ’ ಎಂದು ಕೇಜ್ರಿವಾಲ್‌ ಹೇಳಿದ್ದು ವಿನಮ್ರವಾದ ತಿರುಗೇಟು ಆಗಿತ್ತು. ಪಾಕಿಸ್ತಾನವನ್ನು ಶಾಶ್ವತವಾಗಿ ಶತ್ರು ಸ್ಥಾನದಲ್ಲಿ ಇರಿಸುವುದು ಮತ್ತು ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಸುವುದು ಸದಾ ಲಾಭದಾಯಕ ಎಂಬುದು ಬಿಜೆಪಿಯ ರಾಜಕೀಯ ಸೂತ್ರ ಇದ್ದಂತಿದೆ. ಇತ್ತೀಚೆಗೆ ನಡೆದ ಜಾರ್ಖಂಡ್‌ ಚುನಾವಣೆಯಲ್ಲಿ ಬಿಜೆಪಿ ಇದನ್ನೇ ಮುಂದಿಟ್ಟುಕೊಂಡು, ದೊಡ್ಡ ಮಟ್ಟದಲ್ಲಿ ಕೈಸುಟ್ಟುಕೊಂಡಿತ್ತು. ಹಾಗಿದ್ದರೂ, ದೆಹಲಿ ಚುನಾವಣೆಯಲ್ಲಿಯೂ ಈ ಕಾರ್ಯತಂತ್ರವನ್ನೇ ನೆಚ್ಚಿಕೊಂಡಿತು.

ಚುನಾವಣೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ಹೋರಾಟ ಎಂದು ಬಿಜೆಪಿಯ ಅಭ್ಯರ್ಥಿಯೊಬ್ಬರು ಹೇಳಿದರೆ, ‘ದೇಶದ್ರೋಹಿ’ಗಳಿಗೆ ಗುಂಡಿಕ್ಕಿ ಎಂದು ಸಭಿಕರು ಘೋಷಣೆ ಕೂಗುವಂತೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ಸಭೆಯೊಂದರಲ್ಲಿ ಕುಮ್ಮಕ್ಕು ನೀಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಸುಮಾರು ಎರಡು ತಿಂಗಳಿಂದ ನಡೆಯುತ್ತಿರುವಪ್ರತಿಭಟನೆಯನ್ನು ಚುನಾವಣೆಯ ಕೇಂದ್ರಬಿಂದುವಾಗಿಸಲು ಬಿಜೆಪಿ ನಾಯಕರು ಯತ್ನಿಸಿದ್ದರು. ಹೊಡಿ, ಬಡಿ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಯತ್ನವೂ ನಡೆಯಿತು. ಬಿಜೆಪಿ ಪ್ರತಿಪಾದಿಸುವ ಉಗ್ರ ರಾಷ್ಟ್ರೀಯತೆಯ ಸಂಕಥನದ ಚರ್ಚೆಯ ಬಲೆಯಲ್ಲಿ ಕೇಜ್ರಿವಾಲ್‌ ಸಿಲುಕಲಿ ಎಂಬ ಬಿಜೆಪಿಯ ಬಯಕೆ ಈಡೇರಲಿಲ್ಲ. ಸ್ವಲ್ಪ ಹೆಚ್ಚೇ ಮಾತನಾಡುವ ಕೇಜ್ರಿವಾಲ್‌ ತಮ್ಮ ಸ್ವಭಾವಕ್ಕೆ ವ್ಯತಿರಿಕ್ತವಾದ ಸಂಯಮ ಕಾಯ್ದುಕೊಂಡರು. ಐದು ವರ್ಷದ ತಮ್ಮ ಆಳ್ವಿಕೆಯ ಮೌಲ್ಯಮಾಪನವನ್ನು ಮತದಾನದ ಮೂಲಕ ಜನರು ಮಾಡಲಿ ಎಂಬ ನಿಲುವನ್ನು ಗಟ್ಟಿಯಾಗಿ ಹಿಡಿದುಕೊಂಡರು.

ನಾಯಕರ ಸಂಖ್ಯೆ, ಸಂಪನ್ಮೂಲ ಯಾವುದರಲ್ಲಿಯೂ ಬಿಜೆಪಿಯ ಹತ್ತಿರಕ್ಕೂ ಬರಲಾರದ ಎಎಪಿ, ಅಭಿವೃದ್ಧಿಯ ಹೊರತಾಗಿ ಏನನ್ನೂ ಮಾತನಾಡದೆ ಜನರನ್ನು ಸೆಳೆಯಿತು. ಪ್ರಜಾಪ್ರಭುತ್ವದ ರಾಜಕಾರಣವು ಜನಕೇಂದ್ರಿತವೇ ವಿನಾ ನಾಯಕಕೇಂದ್ರಿತ ಅಲ್ಲ ಎಂಬ ಅರ್ಥವನ್ನೂ ಈ ಫಲಿತಾಂಶವು ಧ್ವನಿಸುತ್ತದೆ. ರಾಷ್ಟ್ರೀಯತೆ ಎಂಬುದು ಜನರನ್ನು ಕೆರಳಿಸುವುದಲ್ಲ, ಅದು ಜನರ ಬದುಕಿನ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ವಿಚಾರ ಎಂಬ ಸ್ಪಷ್ಟ ತೀರ್ಪನ್ನು ದೆಹಲಿಯ ಜನರು ನೀಡಿದ್ದಾರೆ. ಈ ತೀರ್ಮಾನದ ಬೆಳಕಿನಲ್ಲಿ ನಮ್ಮ ರಾಜಕೀಯ ಪಕ್ಷಗಳು ಇನ್ನಷ್ಟು ಪಕ್ವಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT